ಸುಸ್ಥಿತಿಯಲ್ಲಿರುವ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವುವ ವ್ಯವಸ್ಥಿತ ಹುನ್ನಾರವನ್ನ ಆರೋಗ್ಯ ಸಚಿವರು ಹೊಂದಿರುವಂತೆ ಕಾಣುತ್ತದೆ: ಡಾ| ಮಂಜುನಾಥ್ ಬಿ‌ ಹೆಚ್

Featured, Kannada News, Regional, Top News No Comments on ಸುಸ್ಥಿತಿಯಲ್ಲಿರುವ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವುವ ವ್ಯವಸ್ಥಿತ ಹುನ್ನಾರವನ್ನ ಆರೋಗ್ಯ ಸಚಿವರು ಹೊಂದಿರುವಂತೆ ಕಾಣುತ್ತದೆ: ಡಾ| ಮಂಜುನಾಥ್ ಬಿ‌ ಹೆಚ್ 35

ಕರ್ನಾಟಕ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ವಿರುದ್ಧ ಖಾಸಗಿ ಆಸ್ಪತ್ರೆಗಳ‌ ವೈದ್ಯರು ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವೈದ್ಯರ ಅಭಾವದಿಂದಾಗಿ ರಾಜ್ಯದಲ್ಲಿ ಮೂವರು ರೋಗಿಗಳು ಮೃತಪಟ್ಟಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ರೋಗಿಗಳ ಸಾವು ಅವರ ಕುಟುಂಬಸ್ತರಷ್ಟೇ ವೈದ್ಯರಿಗೂ ನೋವುಂಟು ಮಾಡುವ ವಿಚಾರ.

ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರು ಕೆಪಿಎಂಇ ಕಾಯ್ದೆ ಜಾರಿಗೆ ತರುವ ಮಾತುಗಳನ್ನಾಡುತ್ತಿದ್ದಂತೆ ವೈದ್ಯ ಸಮುದಾಯ ಅದನ್ನು ವಿರೋಧಿಸಿತ್ತು. ಅದರಿಂದಾಗಬಹುದಾದ ಅನಾಹುತಗಳ ಕುರಿತು ಸಚಿವರನ್ನು ಎಚ್ಚರಿಸಿತ್ತು. ಹಾಗಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಹಿಡಿದ ಹಠವನ್ನು ಸಚಿವರು ಮುಂದುವರಿಸಿದರು. ಈಗ ಮೃತಪಟ್ಟಿರುವ ಮೂವರು ಅಮಾಯಕರ ಸಾವಿನ‌ ಹೊಣೆಯನ್ನು ಸ್ವತಃ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೇ ಹೊರಬೇಕು. ಓರ್ವ ವ್ಯಕ್ತಿಯನ್ನು ತನಗೆ ಮಾಹಿತಿಯಿಲ್ಲದ ಕ್ಷೇತ್ರದ ಜವಾಬ್ದಾರಿ ನೀಡಿದರೆ ಎಂತಹ ಅಪಸವ್ಯಗಳಾಗುತ್ತವೆ‌ ಎಂಬುದಕ್ಕೆ ಆರೋಗ್ಯ ಖಾತೆಯ ಹೊಣೆ ಹೊತ್ತಿರುವ ರಮೇಶ್ ಕುಮಾರ್ ಅವರೇ ಸ್ಪಷ್ಟ ನಿದರ್ಶನ.

ಅತ್ಯಂತ ಸುಸ್ಥಿತಿಯಲ್ಲಿರುವ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವುವ ವ್ಯವಸ್ಥಿತ ಹುನ್ನಾರ ಆರೋಗ್ಯ ಸಚಿವರು ಹೊಂದಿರುವಂತೆ ಕಾಣುತ್ತದೆ. ಈಗ ಆಗಿರುವ ಅನಾಹುತಕ್ಕೂ, ಇದೇ ಹಠಮಾರಿ ಧೋರಣೆ ಮುಂದುವರಿಸಿದರೆ ಮುಂದಾಗಬಹುದಾದ ತೊಂದರೆಗಳಿಗೂ ಸರ್ಕಾರ ಹಾಗೂ ಆರೋಗ್ಯ ಸಚಿವರೇ ನೇರ ಹೊಣೆಗಾರರಾಗುತ್ತಾರೆ. ಒಂದಷ್ಟು ನೈತಿಕ ಮೌಲ್ಯಗಳಿದ್ದರೆ ರಮೇಶ್ ಕುಮಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು.

ಕೆಪಿಎಂಇ ಕಾಯ್ದೆ ಜಾರಿಗೆ ತರದಿದ್ದರೆ ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಮೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರಂತೆ. ಯಾವುದೇ ಕಾರಣಕ್ಕೂ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವುವ ಈ ಕಾಯ್ದೆ ಜಾರಿಯಾಗಬಾರದು.‌ ಹಾಗೊಂದು ವೇಳೆ ರಮೇಶ್ ಕುಮಾರ್ ರಾಜೀನಾಮೆ ನೀಡಿದರೆ, ಅದು‌ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಸಿಗುವ ಉತ್ತಮ‌ ಅವಕಾಶವೇ ಹೊರತು ಮತ್ತೇನೂ ಅಲ್ಲ. ಅವರ ರಾಜೀನಾಮೆ ರಾಜ್ಯಕ್ಕೆ ಲಾಭವೇ ಹೊರತು ನಷ್ಟವಲ್ಲ.

ಡಾ| ಮಂಜುನಾಥ್ ಬಿ‌ ಹೆಚ್
ಎಂಬಿಬಿಎಸ್, ಎಂಎಸ್ (ಆರ್ಥೋ)

Related Articles

Leave a comment

Back to Top

© 2015 - 2017. All Rights Reserved.