ಸರ್ವಜನ ಹಿತದೊಂದಿಗಿನ ನಡೆಯೇ ನಿಜಧರ್ಮ

Kannada News, Regional No Comments on ಸರ್ವಜನ ಹಿತದೊಂದಿಗಿನ ನಡೆಯೇ ನಿಜಧರ್ಮ 24
ಉಜಿರೆ: ಸರ್ವಜನರಿಗೂ ಹಿತವಾಗುವ ನಡೆಯೊಂದಿಗೆ ಗುರುತಿಸಿಕೊಳ್ಳುವುದೇ ನಿಜವಾದ ಧರ್ಮದ ಗುಣಲಕ್ಷಣ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ೮೫ನೇ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. 
ಧರ್ಮವು ದುರ್ಬಲ ಮತ್ತು ಪ್ರಬಲ ವರ್ಗದ ಜನರಿಗೆ ಸಮಾನ ಬದುಕನ್ನು ನೀಡಿದೆ. ಪ್ರಜಾ ರಕ್ಷಣೆಯ ಉದ್ದೇಶದೊಂದಿಗೆ ಧರ್ಮ ಅನುಷ್ಠಾನಗೊಂಡಿದೆ. ಧರ್ಮಕ್ಕಿಂತ ರಕ್ಷಣೀಯ ಸಾಧನವಿಲ್ಲ. ದುಷ್ಟ ಸಂಹಾರಕ್ಕಾಗಿ ಮಾತ್ರ ಭಗವಂತ ಅವತಾರವೆತ್ತುತ್ತಾನೆ. ಆದರೆ ಧರ್ಮ ನೆಲೆಸಿದಲ್ಲಿ ದಂಡನೆಯ ಅಗತ್ಯವಿಲ್ಲ ಎಂದರು.
ಮಾತಿನಲ್ಲಿ ಒಂದು, ಮನಸ್ಸಿನಲ್ಲಿ ಇನ್ನೊಂದು, ಕೃತಿಯಲ್ಲಿ ಮತ್ತೊಂದು ಇರುವುದು ಮಹಾತ್ಮರ ಲಕ್ಷಣವಲ್ಲ. ನುಡಿದಂತೆ ನಡೆಯುವುದೇ ನಿಜವಾದ ಧರ್ಮ. ಧರ್ಮದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ.  ಪರಂಪರೆಯಿಂದ ಬಂದ ಆಚರಣೆಗಳ ರಕ್ಷಣೆಯಾಗಬೇಕು. ಧರ್ಮವನ್ನು ರಕ್ಷಿಸಬೇಕಾದ ಹೊಣೆ ನಮಗಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮ ಎನ್ನುವುದು ಸಾಮಾಜಿಕ ವ್ಯವಸ್ಥೆಯಾಗಿದ್ದು ಇದರ ಹಿಂದೆ ದೈವೀಶಕ್ತಿ ಬೇಕಾಗುತ್ತದೆ. ಧರ್ಮಜಾಗೃತಿ, ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ. ದೈವೀಶಕ್ತಿಯ ಕಲ್ಪನೆ ಇದ್ದಾಗ ಮಾತ್ರ ಧರ್ಮ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಮನುಷ್ಯ ಮತ್ತು ಧರ್ಮದ ನಡುವಿನ ಸಂಬಂಧ ಎಲೆ-ಮರದ ಹಾಗೆ. ಒಂದನ್ನೊಂದು ಬಿಟ್ಟಿರುವುದು ಸಾಧ್ಯವಿಲ್ಲ. ಧರ್ಮದ ಕಾರಣಕ್ಕೆ ಮನುಕುಲ ಇಷ್ಟು ಕಾಲ ಉಳಿದಿದೆ. ಧರ್ಮ ಎಂದರೆ ಶಾಂತಿಯನ್ನು ಕಾಪಾಡಲು ಇರುವ ಅಸ್ತ್ರ ಎಂದರು.
 
ಸಮಗ್ರ ಕರ್ನಾಟಕದಲ್ಲಿ ವ್ಯಕ್ತಿಗೆ ಅಪಚಾರವಾದಾಗ ಧಾರ್ಮಿಕ ನಂಬಿಕೆಯಾಗಿ ಕೊನೆಯ ಆಶಯ ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆಣೆ ಪ್ರಮಾಣಗಳ ಸಂದರ್ಭದಲ್ಲಿ ರಾಜಕಾರಣಿಗಳು ಸೇರಿದಂತೆ ಎಲ್ಲರಿಗೂ ಧರ್ಮಸ್ಥಳ ಮಂಜುನಾಥನೇ ಕಟ್ಟಕಡೆಯ ನಂಬಿಕೆ. ಮುಳುಗಡೆಯಾಗುವ ವ್ಯಕ್ತಿ ತರಗೆಲೆ ಸಿಕ್ಕರೆ ಬದುಕುತ್ತಾನೆ. ಆಗ ಹಡಗು ಸಿಕ್ಕರೂ ಜೀವನ ಸುಭದ್ರ ಎಂದೆನ್ನಿಸುತ್ತದೆ. ಅದೆಷ್ಟೋ ಮುಳುಗಡೆಯಾಗುವ ಸಂಸಾರದ ಹಡಗು ಮಂಜುನಾಥನ ಕಾರಣಕ್ಕೆ ಉಳಿದಿದೆ ಎಂದು ಶ್ಲಾಘಿಸಿದರು. 
ವೀರೇಂದ್ರ ಹೆಗ್ಗಡೆಯವರು ಮಾತನಾಡುವ ಮಂಜುನಾಥ. ಭಕ್ತ ಮತ್ತು ದೇವರ ಮಧ್ಯೆ ಕೊಂಡಿಯಾಗಿದ್ದಾರೆ. ರಣರಂಗದಲ್ಲಿ ಅರ್ಜುನ ಕರ್ಣನೆದುರು ಗೆಲ್ಲಲಾಗದೆ ಇನ್ನೇನು ಸೋಲುತ್ತೇನೆ ಎಂದು ದೃತಿಗೆಟ್ಟು ನಿಂತಾಗ ಕೃಷ್ಣ ಅವನಿಗೆ ಆತ್ಮಸ್ಥೈರ್ಯ ತುಂಬುತ್ತಾನೆ. ಮಾನಸಿಕ ಚಿಕಿತ್ಸೆಯನ್ನು ನೀಡುತ್ತಾನೆ. ಹಾಗೆಯೇ ಹೆಗ್ಗಡೆಯವರು ನೊಂದವರ ಪಾಲಿನ ದೇವರು ಎಂದರು. 
ವರದಿ: ಪವಿತ್ರ ದೇರ್ಲಕ್ಕಿ
ಚಿತ್ರಗಳು: ಪೌಲೋಸ್ ಬಿ.
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಂ ಕಾಲೇಜು, ಉಜಿರೆ

Related Articles

Leave a comment

Back to Top

© 2015 - 2017. All Rights Reserved.