‘ಎಲ್ಲೆಡೆಯೂ ಸರ್ವಧರ್ಮ ಸಮ್ಮೇಳನಗಳಾಗಲಿ’

Kannada News, Regional No Comments on ‘ಎಲ್ಲೆಡೆಯೂ ಸರ್ವಧರ್ಮ ಸಮ್ಮೇಳನಗಳಾಗಲಿ’ 32

ಉಜಿರೆ: ಭಾರತದ ವಿವಿಧ ಪ್ರದೇಶಗಳ ಪ್ರತಿಯೊಂದು ಓಣಿಯಲ್ಲೂ ಸರ್ವಧರ್ಮ ಸಮ್ಮೇಳನಗಳು ನಡೆದರೆ ಭಾವೈಕ್ಯತೆಯ ಬದುಕು ತಾನಾಗಿಯೇ ಅರಳಿಕೊಳ್ಳುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಕರಾವಳಿ ವಲಯ ಸಂಚಾಲಕ ಉಡುಪಿಯ ಅಕ್ಬರ್ ಅಲಿ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ೮೫ನೇ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ರಾಜಕೀಯದ ಕಾರಣಕ್ಕಾಗಿ ಭಾರತದ ಸೌಹಾರ್ದತೆಯ ಬದುಕಿಗೆ ಧಕ್ಕೆಯೊದಗಿದೆ. ಭಾರತದ ಪ್ರತಿಯೊಬ್ಬರೂ ಒಗ್ಗಟ್ಟಿನೊಂದಿಗಿರಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು. ಧರ್ಮ ಯಾವತ್ತೂ ಒಡೆಯುವುದಿಲ್ಲ. ಎಲ್ಲ ಜನರನ್ನೂ ಬೆಸೆಯುವುದು ಧರ್ಮದ ಮಹತ್ವದ ಗುಣಲಕ್ಷಣ. ಇದನ್ನು ಅರ್ಥೈಸಿಕೊಂಡು ಬದುಕಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಹಿಂದೆ ನಮ್ಮ ಮಂದಿರ ಮಸೀದಿಗಳು ಚಿಕ್ಕವಾಗಿದ್ದವು. ಆದರೆ ಹೃದಯಗಳು ವಿಶಾಲವಾಗಿದ್ದವು. ಪ್ರಸ್ತುತ ದಿನಗಳಲ್ಲಿ ಮಂದಿರ, ಮಸೀದಿಗಳ ಕಟ್ಟಡಗಳು ದೊಡ್ಡದಾಗಿವೆ. ಆಕರ್ಷಕವಾಗಿ ವಿಜೃಂಭಿಸುತ್ತಿವೆ. ಆದರೆ, ಮಾನವನ ಹೃದಯ ಸಂಕುಚಿತವಾಗುತ್ತಿದೆ. ಮಂದಿರ, ಮಸೀದಿ, ಚರ್ಚುಗಳ ಮೇಲೆ ಕಲ್ಲು ತೂರುವ ಸಂಕುಚಿತ ಪ್ರವೃತ್ತಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕಲ್ಲು ಹೊಡೆಯುವುದರಿಂದ ಧರ್ಮ ರಕ್ಷಣೆಯಾಗುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಸ್ಪಷ್ಟಪಡಿಸಿಕೊಳ್ಳಬೇಕಿದೆ ಎಂದರು.

ಧರ್ಮದ ಕರ್ತವ್ಯ ಎಲ್ಲರ ಹೃದಯಗಳನ್ನು ಜೋಡಿಸಿ ಪರಮಾತ್ಮನೊಂದಿಗೆ ಕೂಡಿಸುವುದು. ಒಂದು ಧರ್ಮಕ್ಕೆ ಮತ್ತೊಂದು ಧರ್ಮದಿಂದ ಅಪಾಯವಿದೆ ಎಂದುಕೊಳ್ಳುವುದು ಕೇವಲ ಭ್ರಮೆ ಮಾತ್ರ. ಇಂತಹ ಊಹೆಗಳಿಗೆ ಪುರಾಣದಲ್ಲೂ ಯಾವುದೇ ಪುರಾವೆಯಿಲ್ಲ. ಧರ್ಮಕ್ಕೆ ವಿಪತ್ತು ತರುವವರು ಅದೇ ಧರ್ಮದ ಮತಾಂಧರಾಗಿರುತ್ತಾರೆ. ಒಡೆದದ್ದನ್ನು ಕಟ್ಟುವುದರ ಮೂಲಕ ಧರ್ಮ ರಕ್ಷಣೆಯ ಕೆಲಸವಾಗಬೆಕು. ಆಗ ಮಾತ್ರ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಪ್ರತಿಪಾದಿಸಿದರು.

ಧರ್ಮಸ್ಥಳ ಯಾವುದೇ ಪ್ರತ್ಯೇಕ ಧರ್ಮದ ಸ್ಥಳವಲ್ಲ. ಎಲ್ಲಾ ಧರ್ಮಗಳಿಗೂ ಆದ್ಯತೆ ನೀಡಿ ಮನುಷ್ಯತ್ವದ ಮೌಲ್ಯ ಸಂದೇಶ ಸಾರುವ ಪುಣ್ಯಕ್ಷೇತ್ರ. ನಾಡಹಬ್ಬ, ರಾಷ್ಟ್ರೀಯ ಹಬ್ಬಗಳ ಹಾಗೆ ಲಕ್ಷದೀಪೋತ್ಸವು ಸರ್ವಧರ್ಮೀಯ ಹಬ್ಬವಾಗಿದೆ. ಇತಿಹಾಸದಲ್ಲಿ ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ದಾಸರು, ಸಂತರು, ಪ್ರವಾದಿಗಳ ಸಾಲಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸೇರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಧರ್ಮದ ಕಟುಸತ್ಯ ಮಂದಿರ ಮಸೀದಿಗಳಲ್ಲಿಲ್ಲ. ಬದಲಿಗೆ ಅದು  ಮಾನವನ  ಹೃದಯದಲ್ಲಿದೆ ಎಂಬ ನೈಜತೆಯನ್ನು ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು. ಪ್ರಕೃತಿ ಹಾಗೂ ಸೃಷ್ಟಿಕರ್ತ ಕೂಡ ಬಯಸುವುದು ಶಾಂತಿಯನ್ನು. ಕೇವಲ ಶೇ.ಐದರಷ್ಟು ಜನರಿಂದ ಮಾತ್ರ ದುಷ್ಕೃತ್ಯಗಳು ನಡೆಯುತ್ತವೆ. ಶೇ.೯೫ರಷ್ಟು ಒಳ್ಳೆಯ ವ್ಯಕ್ತಿತ್ವದವರ ನೆರವಿನಿಂದ ದೇಶಕಟ್ಟವ ಕೆಲಸವಾಗಬೇಕು ಎಂದು ಆಶಿಸಿದರು. 

ಇಂದು ನಾವು ಕೇವಲ ಸಾಮಾಜಿಕವಾಗಿ, ರಾಷ್ಟ್ರೀಯವಾಗಿ ಕೆಟ್ಟಿರುವುದು ಮಾತ್ರವಲ್ಲ. ಮನಸ್ಸುಗಳು ಸಂಕುಚಿತಕೊಂಡು ಕೆಟ್ಟಿವೆ. ಸಂಬಂಧಗಳು ಅರ್ಥಹೀನವಾಗಿವೆ, ಕುಟುಂಬಗಳು ಛಿದ್ರವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಸ್ಲಾಂ ಎಂದರೆ ಶಾಂತಿ ಎಂದರ್ಥ. ಪರಸ್ಪರ ಸಹೋದರತೆಯಿಂದ ತಬ್ಬಿಕೊಂಡು ’ಅಸ್ಸಲಾಂ ವಾಲಿಕುಂ’ ಎಂದು ನುಡಿದರೆ ನಿಮ್ಮಲ್ಲಿ ಶಾಂತಿ ಇರಲಿ ಎಂದು, ಅಂತೆಯೇ ’ವಾಲಿಕುಂ ಸಲಾಂ’ ಎಂದು ಪ್ರತಿನುಡಿದರೆ ನಿಮ್ಮಲ್ಲೂ ಶಾಂತಿ ನೆಲಸಲಿ ಎಂದು. ಇಸ್ಲಾಂ ಧರ್ಮದಲ್ಲಿ ಶಾಂತಿಗೆ ಮಹತ್ವವಾದ ಸ್ಥಾನವಿದೆ. ಹೊಡೆದಾಟ-ಬಡಿದಾಟ, ಗಲಭೆಗಳನ್ನೆಸುಗುವವನು ಎಂದಿಗೂ ಮುಸಲ್ಮಾನನೆನಿಸುವುದಿಲ್ಲ. ಮಾನವೀಯ ಮೌಲ್ಯಗಳಿಗೆ ಧಕ್ಕೆಯನ್ನುಂಟುಮಾಡುವ ಯಾವುದೇ ಧರ್ಮ ಧರ್ಮವೆನಿಸುವುದಿಲ್ಲ ಎಂದು ವ್ಯಕ್ತಪಡಿಸಿದರು.

ವರದಿ: ಶೀಲಾವತಿ ಶೆಟ್ಟಿ ಬಿಳಗುಳ

ಚಿತ್ರಗಳು: ಪೌಲೋಸ್ ಬಿ

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು, ಉಜಿರೆ

 

Related Articles

Leave a comment

Back to Top

© 2015 - 2017. All Rights Reserved.