‘ಕವಿತೆ ಪ್ರತಿಭಾ ಪರಿಶ್ರಮದೊಂದಿಗೆ ಸಂಭವಿಸುವ ಮಾಧ್ಯಮ’: ಬಿ.ಆರ್.ಲಕ್ಷ್ಮಣರಾವ್

Kannada News, Regional No Comments on ‘ಕವಿತೆ ಪ್ರತಿಭಾ ಪರಿಶ್ರಮದೊಂದಿಗೆ ಸಂಭವಿಸುವ ಮಾಧ್ಯಮ’: ಬಿ.ಆರ್.ಲಕ್ಷ್ಮಣರಾವ್ 25

ಉಜಿರೆ: ಕವಿತೆಯನ್ನು ಖಚಿತವಾಗಿ ವ್ಯಾಖ್ಯಾನಿಸಲಾಗದು. ಕವಿತೆಗೆ ಯಾವುದೇ ಸಿದ್ಧಸೂತ್ರವಿಲ್ಲ. ಎಲ್ಲವನ್ನೂ ಮೀರಿದ ವಿಶೇಷಗುಣ ಕವಿತೆಗಿದೆ ಎಂದು ಹೆಸರಾಂತ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ವ್ಯಕ್ತಪಡಿಸಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಅಮೃತವರ್ಷಿಣಿ ಸಭಾಂಗಣದಲ್ಲಿ ಶುಕ್ರವಾರ ನಡೆದ ೮೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 

ಕವಿತೆ ಒಂದು ಅದ್ಭುತ ವಿಸ್ಮಯ. ಪದಗಳಿಗೆ ಮಾಂತ್ರಿಕ ಶಕ್ತಿ ದೊರೆತಾಗ ಅದು ಕವಿತೆಯಾಗುತ್ತದೆ. ಕವಿತೆಯ ವ್ಯಾಖ್ಯಾನ ಪ್ರತಿಯೊಬ್ಬ ಕವಿಯ ದೃಷ್ಟಿಯ ಮೇಲೆ ನಿಂತಿರುತ್ತದೆ. ನಿಜವಾದ ಕವಿತೆ ಕವಿಯ ಹೃದಯದಲ್ಲಿ ಹುಟ್ಟುತ್ತದೆ. ಕವಿತೆಗೆ ಪರಿಶ್ರಮ ಮತ್ತು ಪ್ರತಿಭೆ ಎರಡೂ ಬೇಕು. ಇವುಗಳ ಬೆಂಬಲದಲ್ಲಿ ಅದು ಸಂಭವಿಸುತ್ತದೆ. ಆಗ ಮಾತ್ರ ಅದಕ್ಕೆ ಕಾವ್ಯಗುಣ ದಕ್ಕುತ್ತದೆ ಎಂದು ಹೇಳಿದರು.

ತಮ್ಮ ಸಾಹಿತ್ಯ ಕೃಷಿಯ ಅನುಭವವನ್ನು ನಿವೇದಿಸಿದ ಅವರು ಕನ್ನಡ ಭಾಷೆಯ ವಿಶೇಷತೆಯನ್ನು ಭಿನ್ನವಾಗಿ ವಿಶ್ಲೇಷಿಸಿದರು. ಕನ್ನಡದ ಭಾಷೆಯ ಮೂಲಕ ಜಗತ್ತನ್ನು ಗ್ರಹಿಸುವ ಕ್ರಮ ವಿನೂತನವಾದುದು. ಇದೇ ಕನ್ನಡದ ಹೆಗ್ಗಳಿಕೆ. ಕನ್ನಡ ಎಂಬ ಭಾಷಿಕ ಕನ್ನಡಕವು ಕನ್ನಡಿಗರೆಲ್ಲರಿಗೆ ಹೊಸ ಪ್ರಜ್ಞೆ ಅಳವಡಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

ತಮ್ಮದೇ ಸ್ವರಚಿತ ಕವಿತೆಯನ್ನು ಹಾಡುವ ಮೂಲಕ ರಂಜಿಸಿದ ಅವರು ದೈವತ್ವ, ಮನುಷ್ಯ ಅಸ್ತಿತ್ವ ಮತ್ತು ಸಮಾಜದ ಸದ್ಯದ ವಿವಿಧ ಸಂಕಟಗಳ ವಿವರಗಳನ್ನು ಮುಖಾಮುಖಿಯಾಗಿಸಿ ಮೌಲಿಕ ಸಂದೇಶ ಸಾರಿದರು. ’ದೇವರೇ, ಅಗಾಧ ನಿನ್ನ ಕರುಣೆಯ ಕಡಲು, ನನಗೆ ಸಾಧ್ಯವೇ ಅದರ ಆಳವರಿಯಲು’ ಎಂಬ ಪ್ರಶಂಸಾತ್ಮಕ ಉದ್ಗಾರದೊಂದಿಗೆ ಹಾಡಲಾರಂಭಿಸಿದ ಅವರು ದೇವರೊಂದಿಗಿನ ಮನುಷ್ಯ ಸಂವಾದ ಯಾವ ಬಗೆಯ ಉದಾತ್ತತೆಯೊಂದಿಗೆ ಗುರುತಿಸಿಕೊಳ್ಳಬೇಕು ಎಂಬುದನ್ನು ಮನಗಾಣಿಸಿದರು.

’ತೋಳಕೊಂದು ಕುರಿಯ ಕೊಟ್ಟೆ, ಸಿಂಹಕೆಂದು ಜಿಂಕೆ ಇಟ್ಟೆ, ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು’ ಎಂಬ ಸಾಲುಗಳನ್ನು ಅವರು ಪ್ರಸ್ತುತಪಡಿಸಿದಾಗ ಇಡೀ ಸಭಾಂಗಣ ಚಪ್ಪಾಳೆಯ ಮೆಚ್ಚುಗೆ ಸೂಚಿಸಿತು. ಪ್ರಾಣಿಸಂಕುಲದೊಳಗೆ ಆಗುವ ಬೇಟೆಯ ಕ್ರಮವನ್ನು ಉಲ್ಲೇಖಿಸಿ ಮನುಷ್ಯರೊಳಗೇ ಇರುವ ಪರಸ್ಪರ ಹೊಡೆದಾಡುವ ಕ್ರೌರ್ಯಕ್ಕೆ ಕನ್ನಡಿ ಹಿಡಿದರು. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಬೇಟೆಯಾಡುವ ವಿಚಿತ್ರ ಪ್ರವೃತ್ತಿಯನ್ನು ಸೌಜನ್ಯಯುತ ಧಾಟಿಯಲ್ಲಿ ವ್ಯಂಗ್ಯವಾಡಿದರು.

ಕವಿ ಮತ್ತು ಕಾವ್ಯದ ಶಕ್ತಿಯನ್ನು ಪರಿಚಯಿಸುವ ಸಾಲುಗಳಂತೂ ಪ್ರೇಕ್ಷಕರನ್ನು ಹಿಡಿದಿಟ್ಟವು. ’ಕವಿಗೆ ನುಡಿಯ ಡಮರು ಕೊಟ್ಟೆ ನುಡಿದು ದಣಿಯಲು’ ಎಂದು ಹಾಡಿದಾಗ ಕವಿಯು ನಿರ್ವಹಿಸಲೇಬೇಕಾದ ನುಡಿಹೊಣೆಗಾರಿಕೆಯು ಮನದಟ್ಟಾಯಿತು. ನರನಿಗೆ ನಗೆಯ ಕೊಟ್ಟೆ, ಅದರೊಂದಿಗೆ ನೋವನೂ ಇಟ್ಟೆ’ ಎಂದು ದೇವರೊಂದಿಗೆ ಮಾತಿಗಿಳಿದ ಧಾಟಿಯು ಅವರ ದನಿಯ ಮೂಲಕ ವ್ಯಕ್ತವಾದಾಗ ಬದುಕು ನೋವುಗಳ ಜೊತೆಗೇ ಸಾಗುವ ವೈಚಿತ್ರ್ಯ ಅನಾವರಣಗೊಂಡಿತು.

ವರದಿ: ಚರಿತ ಬಿ.ಸಿ.
ಚಿತ್ರಗಳು: ಪೌಲೋಸ್ ಬಿ.
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು, ಉಜಿರೆ

Related Articles

Leave a comment

Back to Top

© 2015 - 2017. All Rights Reserved.