‘ತುಳು ಸಾಹಿತ್ಯದಿಂದ ಹಾಸ್ಯದ ಶ್ರೇಷ್ಠತೆ ಪರಿಚಯ’: ಪ್ರೊ.ಭುವನೇಶ್ವರಿ ಹೆಗ್ಗಡೆ

Kannada News, Regional No Comments on ‘ತುಳು ಸಾಹಿತ್ಯದಿಂದ ಹಾಸ್ಯದ ಶ್ರೇಷ್ಠತೆ ಪರಿಚಯ’: ಪ್ರೊ.ಭುವನೇಶ್ವರಿ ಹೆಗ್ಗಡೆ 22

ಉಜಿರೆ: ತುಳು ಸಾಹಿತ್ಯವು ಹಾಸ್ಯದ ಆರೋಗ್ಯಕರ ಗುಣಲಕ್ಷಣವನ್ನು ಎತ್ತಿ ಹಿಡಿದಿದೆ ಎಂದು ಮಂಗಳೂರಿನ ಖ್ಯಾತ ಸಾಹಿತಿ ಪ್ರೊ.ಭುವನೇಶ್ವರಿ ಹೆಗ್ಗಡೆ ತಿಳಿಸಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೮೫ನೇ ಸಾಹಿತ್ಯ ಸಮ್ಮೇಳನದಲ್ಲಿ ’ಜೀವನ ಮೌಲ್ಯಕ್ಕೆ ವಿನೋದ ಸಾಹಿತ್ಯ ಕೊಡುಗೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಹಾಸ್ಯವನ್ನು ಜಾಣ್ಮೆಯಿಂದ ಪ್ರಯೋಗಿಸಬೇಕು. ಜೀವನ ಮೌಲ್ಯಕ್ಕೆ ಸಾಹಿತ್ಯದ ಕೊಡುಗೆ ಅಪಾರ. ಅಂಗವಿಕಲ, ಬಡತನದದಲ್ಲಿರುವ ಜನರನ್ನು ಹಾಸ್ಯಕ್ಕೆ ಬಳಸಿದರೆ ಅದು ಹಾಸ್ಯವೆನ್ನಿಸುವುದಿಲ್ಲ. ಅದು ಅಮಾನವೀಯ ಎಂದೆನ್ನಿಸಿಕೊಳ್ಳುತ್ತದೆ ಎಂದರು.

ತುಳು ಸಾಹಿತ್ಯವು ಹಾಸ್ಯದ ಗುಣಾತ್ಮಕತೆಯನ್ನು ದಾಖಲಿಸಿದೆ. ಯಾವುದನ್ನು ಹಾಸ್ಯಕ್ಕೊಳಪಡಿಸಬೇಕು, ಯಾವುದನ್ನು ಹಾಸ್ಯದ ವ್ಯಂಗ್ಯಕ್ಕೆ ಗುರಿಪಡಿಸಬಾರದು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದೆ. ವ್ಯಕ್ತಿತ್ವಗಳು ಸಂಕುಚಿತತೆಯ ಕಾರಣಕ್ಕಾಗಿಯೇ ತಮಾಷೆಗೀಡಾಗುವ ಬಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತುಳು ಸಾಹಿತ್ಯವು ಹಾಸ್ಯದ ಮಾನದಂಡಗಳನ್ನು ರೂಪಿಸಿದೆ ಎಂದರು.

’ಸಾಹಿತ್ಯ ಮತ್ತು ಸಾಮಾಜಿಕ ಸಾಮರಸ್ಯ’ ವಿಷಯದ ಕುರಿತು ಮಾತನಾಡಿದ ಖ್ಯಾತ ಸಾಹಿತಿ ರಂಜಾನ್ ದರ್ಗಾ ಸಾಹಿತ್ಯ ಬಿಂಬಿಸಿದ ಮನುಷ್ಯತ್ವದ ಮಹತ್ವವನ್ನು ವಿಶ್ಲೇಷಿಸಿದರು. ಜಗತ್ತಿನ ಎಲ್ಲಾ ಜನಾಂಗಗಳು ಮನುಷ್ಯ ಜಾತಿಗೆ ಸೇರಿವೆ ಎನ್ನುವುದು ಜೈನ ಸಾಹಿತ್ಯ ಸಮಾಜಕ್ಕೆ ಕೊಟ್ಟ ಕಾಣಿಕೆ. ಮಾನವ ಏಕತೆಯನ್ನು ಸಾರುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ದಲಿತ ಹಾಗೂ ಬ್ರಾಹ್ಮಣ ಎನ್ನುವ ವ್ಯತ್ಯಾಸವನ್ನು ಅಳಿಸಿ, ಅದಕ್ಕೆ ಬೇಕಾದ ಚಳುವಳಿಯನ್ನು ಮಾಡಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ ಎಂದು ವಿವರಿಸಿದರು.

’ಸಾಹಿತ್ಯ ಮತ್ತು ತಲೆಮಾರು’ ವಿಷಯದ ಬಗ್ಗೆ ಖ್ಯಾತ ವಿಮರ್ಶಕ ಬೆಂಗಳೂರಿನ ಎಸ್.ಆರ್. ವಿಜಯಶಂಕರ್ ವಿಚಾರಗಳನ್ನು ಮಂಡಿಸಿದರು. ನವ್ಯ ಸಾಹಿತ್ಯ ಬಹಳ ಪುರಾತನ ಕಾಲದಿಂದಲೂ ಬಂದಿದೆ. ಹಳೆಗನ್ನಡದ ಕಾವ್ಯಗಳು ಕಥೆಗಳ ಕುರಿತು ಹೇಳುತ್ತವೆ. ಹೊಸಗನ್ನಡ ಕಾವ್ಯದಲ್ಲಿ ಭಾವನೆಯನ್ನು ತಿಳಿಸುವ ಕಾರ್ಯವನ್ನು ಸಾಹಿತಿಗಳು ಮಾಡಿದ್ದಾರೆ. ನವೋದಯ ಸಾಹಿತ್ಯದಲ್ಲಿ ಕಾವ್ಯದೊಳಗೆ ಸಂಭಾಷಣೆಯನ್ನು ಕಾಣಬಹುದು. ನಮ್ಮಲ್ಲಿ ಗೊಂದಲದ ತುಲನೆ ಇರಬಾರದು. ಆತ್ಮ ಸಾಕ್ಷಿ ಹಾಗೂ ಬೌದ್ಧಿಕ ಪ್ರಜ್ಞೆಯನ್ನು ನಮ್ಮಲ್ಲಿ ಚೇತರಿಸಿಕೊಳ್ಳಬೇಕು. ಮಾಹಿತಿ ಅನುಭವದ ನೆರವಿನೊಂದಿಗೆ ಜ್ಙಾನವಾಗಿ ಪರಿವರ್ತನೆಯಾಗಬೇಕು. ವೈಜ್ಞಾನಿಕ ಸತ್ಯದ ಎದುರು ಕಾವ್ಯ ಸತ್ಯತೆಯನ್ನು ಕಾರ‍್ಯಗತಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್. ಆರ್ ವಿಜಯಶಂಕರ್, ರಂಜನ್ ದರ್ಗಾ ಅವರಿಗೆ ಡಿ. ಹರ್ಷೇಂದ್ರ ಕುಮಾರ್ ಸನ್ಮಾನಿಸಿದರೆ, ಪ್ರೊ.ಭುವನೇಶ್ವರಿ ಹೆಗ್ಗಡೆಯವರಿಗೆ ಸುಪ್ರಿಯಾ ಹಷೇಂದ್ರ ಸನ್ಮಾನಿಸಿದರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ಬೆಂಗಳೂರಿನ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಜಿರೆ ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಎಂ ಜನಾರ್ದನ ವಂದಿಸಿ, ನಿವೃತ್ತ ಉಪನ್ಯಾಸಕ ಪ್ರೊ. ಎಂ ರಾಮಚಂದ್ರ ಕಾರ್ಕಳ ನಿರೂಪಿಸಿದರು.

ವರದಿ: ಚೇತನಾ.ಎಂ ಚಾರ್ಮಾಡಿ
ಚಿತ್ರ: ಪೌಲೋಸ್ ಬಿ, ಮಿಥುನ್
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ಎಸ್‌ಡಿಎಂ ಕಾಲೇಜು ಉಜಿರೆ

Related Articles

Leave a comment

Back to Top

© 2015 - 2017. All Rights Reserved.