ಜೀವನಾನುಭದಿಂದ ಸಾಹಿತ್ಯ ಸಮೃದ್ಧಿ: ಸುಧಾಮೂರ್ತಿ

Kannada News, Regional No Comments on ಜೀವನಾನುಭದಿಂದ ಸಾಹಿತ್ಯ ಸಮೃದ್ಧಿ: ಸುಧಾಮೂರ್ತಿ 13

ಉಜಿರೆ: ಜೀವನಾನುಭವದ ವಿಭಿನ್ನ ಗ್ರಹಿಕೆಯ ನೆರವಿನೊಂದಿಗೆ ಸಾಹಿತ್ಯ ಸಮೃದ್ಧವಾಗುತ್ತದೆ ಎಂದು ಸಾಹಿತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ೮೫ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನಾನುಭವವೇ ನಿಜವಾದ ಸಾಹಿತ್ಯ. ಅನುಭವ ಮತ್ತು ಗ್ರಹಿಕೆಗೆಟುಕಿದ ಸಂಗತಿಗಳನ್ನು ತಕ್ಷಣ ಬರೆದಿಡುವ ಅಭ್ಯಾಸವಿರಬೇಕು. ಆ ಮೂಲಕ ಸಂಗ್ರಹಿತವಾಗುವ ವಿವರಗಳನ್ನು ಸಾಹಿತ್ಯಕವಾಗಿ ಅಭಿವ್ಯಕ್ತಿಸಬೇಕು. ಈ ಪ್ರಕ್ರಿಯೆ ಮುಂದುವರಿದಾಗ ಸಾಹಿತ್ಯ ಸಮೃದ್ಧವಾಗುತ್ತದೆ. ಅಲ್ಲದೇ ಅದು ಗುಣಾತ್ಮಕವಾಗುತ್ತದೆ ಎಂದು ನುಡಿದರು.

ಪ್ರತಿಯೊಂದು ಹೂವಿನಲ್ಲೂ ಸೌಂದರ್ಯವಿರುವಂತೆ ಪ್ರತಿಯೊಂದು ಮನುಷ್ಯನಲ್ಲೂ ವಿಶೇಷತೆ ಇರುತ್ತದೆ. ಜೀವಾನುಭವ ಸಾಹಿತ್ಯವನ್ನು ಸೃಷ್ಟಿಸುತ್ತದೆ. ಜನ ಕೃತಿಯನ್ನು ಓದಿ ಆನಂದಿಸುತ್ತಾರೆ. ಆಗ ಸಾಹಿತಿಗೆ ನಿಜವಾದ ಖುಷಿ ಸಿಗುತ್ತದೆ ಎಂದರು.

ಚಿಕ್ಕಂದಿನಲ್ಲಿ ದೇವಸ್ಥಾನ, ಪ್ರವಾಸ ಅಥವಾ ಇನ್ನೆಲ್ಲೋ ಹೋಗಿ ಬಂದಾಗ ನನ್ನ ತಾಯಿ ನನಗೆ ಆ ದಿನದ ಅನುಭವವನ್ನು ಬರೆದಿಡುವಂತೆ ಒತ್ತಾಯ ಮಾಡುತ್ತಿದ್ದರು. ಮೊದಮೊದಲ ದಿನಗಳಲ್ಲಿ ನನಗೆ ಕೋಪ ಬರುತ್ತಿತ್ತು. ಮುಂದೆ ಅದೇ ಹವ್ಯಾಸವಾಗಿ ಅದೇ ನನ್ನ ಬರವಣಿಗೆ, ಸಾಹಿತ್ಯ ಪ್ರೀತಿಗೆ ಅಡಿಪಾಯವಾಯಿತು. ಇನ್ಫೋಸಿಸ್ ಸಂಸ್ಥೆಯಲ್ಲಿ ಪಡೆದ ಅನುಭವಗಳು ಸಾಹಿತ್ಯ ಸೃಷ್ಟಿಗೆ ನೆರವಾದವು ಎಂದು ತಿಳಿಸಿದರು.

ಸಾಹಿತ್ಯ, ಸಂಗೀತ, ಕಲೆಯಿಂದ ಜೀವನ ಪರಿಪೂರ್ಣವಾಗುತ್ತದೆ. ಸಾಧನೆಗೆ ಭಾಷೆ, ಅಂತಸ್ತಿನ ಹಂಗಿಲ್ಲ. ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಅಂದುಕೊಂಡಿದನ್ನು ಸಾಧಿಸಬಹುದು ಎಂದು ನುಡಿದರು.

ಇಂದಿನ ದಿನಗಳಲ್ಲಿ ನಾವೆಲ್ಲ ಮಾನವೀಯತೆಯನ್ನು ಮರೆಯುತ್ತಿದ್ದೇವೆ. ದುಡ್ಡಿಗಷ್ಟೇ ಆದ್ಯತೆ ನೀಡುವ ಜೀವನ ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ಕುಟುಂಬ, ನೆರೆಹೊರೆ, ಸಮಾಜದ ಮೇಲಿನ ಪ್ರೀತಿಯಲ್ಲಿ ನಿಜವಾದ ಸಂತೋಷವಿದೆ. ವ್ಯವಹಾರ, ಕಂಪನಿ, ಕೆಲಸದ ನಡುವೆ ನಮ್ಮವರಿಗಾಗಿ ಸಮಯ ಮೀಸಲಿಡಬೇಕು. ಇಲ್ಲದಿದ್ದಲ್ಲಿ ಬದುಕು ಅರ್ಥ ಕಳೆದುಕೊಳ್ಳುತ್ತದೆ. ಜೀವಂತ ಯಂತ್ರಗಳಾಗುವ ಅಪಾಯವಿರುತ್ತದೆ ಎಂದು ಅಭಿಪ್ರಾಯಪಟ್ಟರು.

ವರದಿ: ಪವಿತ್ರ ದೇರ್ಲಕ್ಕಿ
ಚಿತ್ರಗಳು : ಪೌಲೋಸ್ ಬಿ.
ಎಸ್.ಡಿ.ಎಂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಉಜಿರೆ.

Related Articles

Leave a comment

Back to Top

© 2015 - 2017. All Rights Reserved.