ಮೈಸೂರಿಗೆ ಯೋಗ ಗಿನ್ನಿಸ್ ದಾಖಲೆಯ ಗರಿ

Kannada News, Regional, Top News No Comments on ಮೈಸೂರಿಗೆ ಯೋಗ ಗಿನ್ನಿಸ್ ದಾಖಲೆಯ ಗರಿ 25

ಮೈಸೂರು: ಕಳೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು(ಜೂ.21) ವಿಶ್ವ ದಾಖಲೆಗಾಗಿ ಜಿಲ್ಲಾಡಳಿತ ಮೈಸೂರಿನ ಒಂದೇ ವೇದಿಕೆಯಲ್ಲಿ ಆಯೋಜಿಸಿದ್ದ ಬೃಹತ್‌ ಯೋಗ ಪಾಠ ಕಲಿಸುವ ಪ್ರದರ್ಶನಕ್ಕೆ ವಿಶ್ವ ಮಾನ್ಯತೆ ಲಭಿಸಿದೆ. ಮೊದಲ ಬಾರಿಗೆ ಕೇವಲ ಅಂದಾಜು 500 ಸಂಖ್ಯೆಯ ಅಂತರದಿಂದ ವಿಶ್ವ ದಾಖಲೆಯ ಗರಿ ಕಳೆದುಕೊಂಡಿದ್ದ ಯೋಗ ನಗರಿ ಮೈಸೂರು, 2ನೇ ಹಂತದ ಪರಿಶೀಲನೆಯಲ್ಲಿ 55,506 ಮಂದಿ ಭಾಗವಹಿಸಿರುವುದು ಖಾತ್ರಿಯಾದ ಕಾರಣ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ವಿಶ್ವದಾದ್ಯಂತ ಕಳೆದ ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ವಿಶ್ವವನ್ನೆ ಮೈಸೂರಿನೆಡೆಗೆ ಸೆಳೆಯುವ ನಿಟ್ಟಿನಲ್ಲಿ , ರೇಸ್‌ ಕ್ಲಬ್‌ ಆವರಣದಲ್ಲಿ ಬೃಹತ್‌ ಯೋಗ ಪ್ರದರ್ಶಿಸಲಾಯಿತು. ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ನ ನಿಯಮಾವಳಿಯಂತೆ ನಡೆಯಿತು. ಈ ಸಂದರ್ಭದಲ್ಲಿ ನೀಡಿದ ಸಲ್ಲಿಸಿದ ದಾಖಲೆಗಳ ಪ್ರಕಾರ ಮೈಸೂರಿನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ 54,101 ಮಂದಿ ಭಾಗವಹಿಸಿದ್ದರು. ಆದರೆ ಇದೇ ವೇಳೆ ಗುಜರಾತ್‌ನಲ್ಲಿ ಬಾಬಾ ರಾಮ್‌ದೇವ್‌ ನೇತೃತ್ವದಲ್ಲಿ ನಡೆದ ಬೃಹತ್‌ ಯೋಗ ಪ್ರದರ್ಶನಲ್ಲಿ 54,522 ಮಂದಿ ಯೋಗ ಪ್ರದರ್ಶಿಸಿದ್ದರು. ಹಾಗಾಗಿ ಕೇವಲ 1016 ಸಂಖ್ಯೆಯ ಅಂತರದಲ್ಲಿ ಮೈಸೂರು ವಿಶ್ವ ದಾಖಲೆಯಿಂದ ದೂರ ಉಳಿಯುವಂತಾಯಿತು.

ಈ ಸಂದರ್ಭದಲ್ಲಿ ಸಣ್ಣ ದಾಖಲೆಯೊಂದನ್ನು ನೀಡಲು ಜಿಲ್ಲಾಡಳಿತ ಮರೆತಿತ್ತು. ಯೋಗ ಪ್ರದರ್ಶನಕ್ಕೆ ಆಗಮಿಸುವ ಯೋಗಪಟುಗಳನ್ನು ಅಧಿಕೃತವಾಗಿ ಎಣಿಸುವ ಮುನ್ನವೇ, ಅಂದರೆ ಯೋಗದ ಆರಂಭಕ್ಕೂ ಮುನ್ನವೇ ಸಾವಿರಾರು ಸಂಖ್ಯೆಯ ಯೋಗ ಪಟುಗಳು ರೇಸ್‌ ಕ್ಲಬ್‌ ಅಂಗಳವನ್ನು ಪ್ರವೇಶಿಸಿದ್ದರು. ಗಿನ್ನಿಸ್‌ ದಾಖಲೆಗೆ ಸಲ್ಲಿಸಿದ ಲೆಕ್ಕದಲ್ಲಿ ಅವರು ಇರಲಿಲ್ಲ. ಇದನ್ನು ಖಾತ್ರಿ ಪಡಿಸಿಕೊಂಡು ಮತ್ತೊಮ್ಮೆ ಈ ಮಾರ್ಗದರ್ಶಕರು ಒಳಗೆ ಪ್ರವೇಶಿಸಿದ್ದನ್ನು ಜಿಲ್ಲಾಧಿಕಾರಿ ಡಿ. ರಂದೀಪ್‌ ಅವರು ಮತ್ತೆ ಸೂಕ್ತ ದಾಖಲೆ ಸಮೇತ ಗಿನ್ನೆಸ್‌ ಬುಕ್‌ ಆಫ್‌ ವರ್ಡ್‌ ರೆಕಾರ್ಡ್‌ ಸಂಸ್ಥೆಗೆ ಸಲ್ಲಿಸಿ, ಮತ್ತೊಮ್ಮೆ ಪರಿಶೀಲಿಸಲು ಮನವಿ ಮಾಡಿದರು.

ಈ ದಾಖಲೆಗಳನ್ನು ಪರಿಶಿಲಿಸಿದ ಗಿನ್ನೆಸ್‌ ಬುಕ್‌ ಆಫ್‌ ವರ್ಡ್‌ ರೆಕಾರ್ಡ್‌ ಸಂಸ್ಥೆಯು ಕರಾರುವಕ್ಕಾಗಿ ಐದು ತಿಂಗಳ ನಂತರ ಯೋಗ ನಗರಿ ಮೈಸೂರು ಜಿಲ್ಲೆಯೆ ಬೃಹತ್‌ ಯೋಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಘೋಷಣೆ ಮಾಡಿದೆ. 2ನೇ ಹಂತದ ಪರಿಶೀಲನೆಯಲ್ಲಿ 55,506 ಮಂದಿ ಮೈಸೂರಿನ ಬೃಹತ್‌ ಯೋಗ ಪ್ರದರ್ಶನದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದೆ. ಹೀಗಾಗಿ ಮೊದಲ ಬಾರಿಗಿಂತ ಮೈಸೂರು ಹೆಚ್ಚುವರಿಯಾಗಿ 1,405 ಸಂಖ್ಯೆ ಪಡೆಯಿತು. ಮಾತ್ರವಲ್ಲದೆ ಕಳೆದ ಬಾರಿ ಈ ಪಟ್ಟವನ್ನು ತನ್ನದಾಗಿಸಿಕೊಂಡಿದ್ದ ಗುಜರಾತ್‌(54,522)ಗಿಂತ 984 ಸಂಖ್ಯೆ ಹೆಚ್ಚುವರಿಯಾಗಿ ಪಡೆದ ಮೈಸೂರು ವಿಶ್ವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

Related Articles

Leave a comment

Back to Top

© 2015 - 2017. All Rights Reserved.