113 ಸ್ಥಾನವನ್ನು ಗೆಲ್ಲಲು ಹೊರಟಿದ್ದೇನೆ ಸ್ವತಂತ್ರವಾಗಿ ಯಾರ ಹಂಗಿಲ್ಲದೇ ಅಧಿಕಾರ ನಡೆಸುವಂತಾಗಬೇಕು: ಹೆಚ್.ಡಿ ಕುಮಾರಸ್ವಾಮಿ

BREAKING NEWS, Kannada News, Regional No Comments on 113 ಸ್ಥಾನವನ್ನು ಗೆಲ್ಲಲು ಹೊರಟಿದ್ದೇನೆ ಸ್ವತಂತ್ರವಾಗಿ ಯಾರ ಹಂಗಿಲ್ಲದೇ ಅಧಿಕಾರ ನಡೆಸುವಂತಾಗಬೇಕು: ಹೆಚ್.ಡಿ ಕುಮಾರಸ್ವಾಮಿ 36

ಬೆಂಗಳೂರು: 113 ಸ್ಥಾನವನ್ನು ಗೆಲ್ಲಲು ನಾನು ಹೊರಟಿದ್ದೇನೆ. ಸ್ವತಂತ್ರವಾಗಿ ಯಾರ ಹಂಗಿಲ್ಲದೇ ಅಧಿಕಾರ ನಡೆಸುವಂತಾಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇಂದು ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ‘ಹಿರಿಯ ನಾಗರೊಡನೆ ನಮ್ಮ ಹೆಚ್.ಡಿ.ಕೆ ಸಂವಾದ’ ಕಾರ್ಯಕ್ರಮದಲ್ಲಿ ಹಿರಿಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು ನಾನು ಅಧಿಕಾರಕ್ಕೆ ಬಂದರೆ 24 ತಾಸು ವಿಧಾನಸೌಧ ತೆರೆಯುತ್ತೇನೆ. ವಿಧಾನಸೌಧದ ಸುತ್ತ ಇರುವ ಬ್ಯಾರಿಕೇಡ್ ತಗೆಯುತ್ತೇನೆ. ನಾನು ಮುಖ್ಯಮಂತ್ರಿಯಾದರೆ ಯಾರೂ ಬೇಕಾದರೂ ಶರ್ಟ್ ಎಳೆದು ಪ್ರಶ್ನೆ ಮಾಡಬಹುದು ಎಂದು ಭರವಸೆ ನೀಡಿದರು.

ನಾನು ರಾಜಕೀಯಕ್ಕೆ ಬಂದದ್ದು ಆಕಸ್ಮಿಕ: ಸರ್ವಸಂಘ ಪರಿತ್ಯಾಗಿ ಆದವರು ಆಧಿಕಾರ ನಡೆಸಬೇಕು. ಆಗ ಮಾತ್ರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಸಾಧ್ಯ. ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ದೇವೇಗೌಡರ ಮಗ ಅನ್ನೋದು ಬಿಟ್ಟರೆ ನನಗೆ ಬೇರೆ ಯಾವುದೇ ಅರ್ಹತೆ ಇರಲಿಲ್ಲ. ಐಎಎಸ್ ಅಧಿಕಾರಿಗಳನ್ನು ನಂಬಿ ಆಡಳಿತ ಸಾಧ್ಯವಿಲ್ಲ. ಜನರ ಬಳಿ ಹೋದಾಗಲೇ ಸಮಸ್ಯೆ ಅರಿವಾಗುತ್ತದೆ ಎಂದು ಹೇಳಿದರು.

ಇಸ್ರೇಲ್ ಕೃಷಿಗೆ ಒತ್ತು: ಹಿರಿಯ ವ್ಯಕ್ತಿಯೊಬ್ಬರು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಸಾಲ ಮನ್ನಾ ಮಾಡಿದ ತಕ್ಷಣ ರೈತರು ಉದ್ಧಾರ ಆಗುವುದಿಲ್ಲ. ರೈತರಿಗೆ ಅನುಕೂಲ ಆಗುವಂತಹ ಕಾರ್ಯಕ್ರಮ ತಂದರೆ ಮಾತ್ರ ಅವರು ಉದ್ಧಾರ ಆಗುತ್ತಾರೆ. ಇಸ್ರೇಲಿನಲ್ಲಿ ಸಮುದ್ರದ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲಿ ರೈತ ಮಾರುಕಟ್ಟೆ ದರದಲ್ಲಿ ನೀರು ಖರೀದಿಸಿ ಉತ್ತಮ ಕೃಷಿ ಮಾಡುತ್ತಿದ್ದಾನೆ. ನಮ್ಮಲ್ಲಿ ಉಚಿತ ನೀರು ಉಚಿತ ವಿದ್ಯುತ್ ಕೊಟ್ಟರೂ ರೈತರು ಯಾಕೆ ಅಭಿವೃದ್ಧಿ ಹೊಂದುತ್ತಿಲ್ಲ? ಅನಾರೋಗ್ಯದ ನಡುವೆಯೂ ನಾನು ಇಸ್ರೇಲ್ ಕೃಷಿ ಪದ್ಧತಿ ಅಧ್ಯಯನ ಮಾಡಿದ್ದೇನೆ. ನಮ್ಮ ಸರ್ಕಾರ ಬಂದಲ್ಲಿ ಇಸ್ರೇಲ್ ಮಾದರಿಯ ಕೃಷಿಗೆ ಆದ್ಯತೆ ನೀಡಲಾಗುವುದು ಎಂದು ಹೆಚ್‍ಡಿಕೆ ಉತ್ತರಿಸಿದರು. 

ಮಾಧ್ಯಮಗಳ ವಿರುದ್ಧ ಆಕ್ರೋಶ: ಮಾದ್ಯಮಗಳ ಸಮೀಕ್ಷೆಗಳು ಏನಾದರೂ ಬರಲಿ. ಜ್ಯೋತಿಷಿಗಳು ಏನಾದರೂ ಹೇಳಿಕೊಳ್ಳಲಿ. ಆದರೆ ನನಗೆ ನಮ್ಮ ಸರ್ಕಾರ ಬಂದೇ ಬರುತ್ತದೆ ಎನ್ನುವ ವಿಶ್ವಾಸವಿದೆ. ಸಮೀಕ್ಷೆ ಗಳು ಎಲ್ಲೋ ಕೆಲವು ಸಲ ನಿಜವಾಗಿರಬಹುದು. ಮಾಧ್ಯಮಗಳ ಸಮೀಕ್ಷೆ ಬಗ್ಗೆ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಪದೇ ಪದೇ ಕಾಂಗ್ರೆಸ್ 100 ಸ್ಥಾನ, ಬಿಜೆಪಿ 80 ಅಂತೆಲ್ಲಾ ಮಾಧ್ಯಮದವರು ತೋರಿಸುತ್ತಾರೆ. ಯಾಕೆ ನಾವು ಏನೂ ಕೆಲಸ ಮಾಡಿಲ್ಲವಾ ಎಂದು ಮಾಧ್ಯಮಗಳ ಸಮೀಕ್ಷೆ ಬಗ್ಗೆ ಪ್ರಶ್ನಿಸಿ ಪರೋಕ್ಷವಾಗಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Related Articles

Leave a comment

Back to Top

© 2015 - 2017. All Rights Reserved.