ಹೆಚ್.ಡಿ ಕೋಟೆ ಕ್ಷೇತ್ರದ ಟಿಕೆಟ್’ಗಾಗಿ ಜೆಡಿಎಸ್’ನಲ್ಲಿ ಜಿದ್ದಾಜಿದ್ದಿ

Kannada News, Regional No Comments on ಹೆಚ್.ಡಿ ಕೋಟೆ ಕ್ಷೇತ್ರದ ಟಿಕೆಟ್’ಗಾಗಿ ಜೆಡಿಎಸ್’ನಲ್ಲಿ ಜಿದ್ದಾಜಿದ್ದಿ 56

ಮೈಸೂರು: ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ ಹೆಚ್.ಡಿ ಕೋಟೆ ಕ್ಷೇತ್ರದ ಟಿಕೆಟ್ಗಾಗಿ ಜೆಡಿಎಸ್’ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಕ್ಷೇತ್ರದ ಶಾಸಕ ಎಸ್.ಚಿಕ್ಕಮಾದು ಅವರ ನಿಧನದ ಹಿನ್ನೆಲೆಯಲ್ಲಿ ಟಿಕೆಟ್ಗಾಗಿ ಬೀಚನಹಳ್ಳಿ ಚಿಕ್ಕಣ್ಣ ಹಾಗೂ ಅನಿಲ್ ಚಿಕ್ಕಮಾದು ನಡುವೆ ತೀವ್ರ ಜಿದ್ದಾಜಿದ್ದಿ ನಡೆಯುತ್ತಿದೆ.

ಚಿಕ್ಕಮಾದು ಅವರ ನಿಧನದ ನಂತರ ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಟಿಕೆಟ್ ತರಲು ತನ್ನದೇ ಆದ ಮಾರ್ಗದಲ್ಲಿ ಪ್ರಯತ್ನ ನಡೆಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಜೆಡಿಎಸ್ ಸೇರಿದ ಚಿಕ್ಕಣ್ಣ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಿದ್ದಾರೆ.

ಕ್ಷೇತ್ರದ ಜೆಡಿಎಸ್ ಚುನಾವಣಾ ಉಸ್ತುವಾರಿಯಾಗಿರುವ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು ಅವರು ಚಿಕ್ಕಣ್ಣ ಬೆಂಬಲಕ್ಕೆ ನಿಂತಿದ್ದರೆ, ಜಿಲ್ಲೆಯ ಜೆಡಿಎಸ್ ಶಾಸಕರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಅವರುಗಳು ಬಹಿರಂಗವಾಗಿ ಅನಿಲ್ ಚಿಕ್ಕಮಾದುಗೆ ಬೆಂಬಲ ಘೋಷಿಸಿದ್ದಾರೆ. ಹೆಚ್.ಡಿ ಕೋಟೆ ತಾಲೂಕು ಜೆಡಿಎಸ್ ಘಟಕ ಕೂಡ ಅನಿಲ್ ಬೆನ್ನಿಗೆ ನಿಂತಿದೆ.

ಅನಿಲ್’ಗೆ ಟಿಕೆಟ್ ಭರವಸೆ: ಈ ಮಧ್ಯೆ ಪ್ರಣಾಳಿಕೆ ರೂಪಿಸಲು ಶಿಕ್ಷಣ ಕ್ಷೇತ್ರದ ತಜ್ಞರ ಜತೆಗೆ ಸಂವಾದ ನಡೆಸಲು ಸೋಮವಾರ ಮೈಸೂರಿಗೆ ಭೇಟಿ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿರುವ ಚಿಕ್ಕಮಾದು ಅವರ ಮನೆಗೆ ಮಾಜಿ ಸಂಸದ ಎಚ್.ವಿಶ್ವನಾಥ್, ಶಾಸಕ ಸಾ.ರಾ.ಮಹೇಶ್, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಮೇಯರ್ ಎಂ.ಜೆ.ರವಿಕುಮಾರ್, ಪಕ್ಷದ ಮುಖಂಡರಾದ ಫಾರೂಕ್ ಮೊದಲಾದವರೊಂದಿಗೆ ಭೇಟಿ ಕೊಟ್ಟು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿ ಅನಿಲ್ ಚಿಕ್ಕಮಾದು ಅವರಿಗೇ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಚಿಕ್ಕಮಾದು ಅವರು, ಅನೇಕ ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದಿದ್ದಾರೆ. ಅವರ ಬಗ್ಗೆ ನನಗೆ ಅಭಿಮಾನ ಇದೆ. ಅವರ ನಿಧನದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಚಿಕ್ಕಮಾದು ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂಬ ಉದ್ದೇಶ ತಮಗೂ ಇದೆ.

ಮೂವರು ಆಕಾಂಕ್ಷಿಗಳ ಪರ ಸಮೀಕ್ಷೆ: ಟಿಕೆಟ್ ನೀಡುವ ಸಂಬಂಧ ಮಾಜಿ ಶಾಸಕ ಚಿಕ್ಕಣ್ಣ, ಪಕ್ಷದ ಮುಖಂಡರಾದ ದೊಡ್ಡನಾಯಕ ಹಾಗೂ ಅನಿಲ್ ಚಿಕ್ಕಮಾದು ಈ ಮೂವರ ಬಗ್ಗೆ ತನ್ನದೇ ಆದ ರೀತಿಯಲ್ಲಿ ಸಮೀಕ್ಷೆ ಮಾಡಿಸಿದ್ದು, ಅದರಲ್ಲಿ ಶೇ.70ರಷ್ಟು ಮಂದಿ ಅನಿಲ್ ಪರ ಒಲವು ತೋರಿದ್ದಾರೆ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರ ಗಮನಕ್ಕೆ ತಂದು ಟಿಕೆಟ್ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಕಿವಿಗೊಡಬೇಡಿ, ಸಂಕ್ರಾಂತಿ ನಂತರ ಜ.16 ಅಥವಾ 18ರಂದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅದರಲ್ಲಿ ನಿಮ್ಮ ಹೆಸರೂ ಇರುತ್ತೆ. ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿ ಎಂದು ಹೇಳಿದ್ದಾರೆ ಎಂದು ಅನಿಲ್ ಚಿಕ್ಕಮಾದು ಹೇಳುತ್ತಾರೆ.

ನಾಯಕರ ಮತಗಳ ಮೇಲೆ ಕಣ್ಣು: ಜಿಲ್ಲೆಯ ಜೆಡಿಎಸ್ ಶಾಸಕರು ಅನಿಲ್ ಚಿಕ್ಕಮಾದು ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಲು ಅವರ ತಂದೆ ಈ ಭಾಗದಲ್ಲಿ ನಾಯಕ ಸಮುದಾಯದ ಪ್ರಭಾವಿ ಮುಖಂಡರಾಗಿದ್ದುದು ಕಾರಣ ಎನ್ನಲಾಗುತ್ತಿದೆ. ಚಿಕ್ಕಮಾದು ಅವರು ನಿಧನರಾಗಿರುವುದರಿಂದ ಅವರ ಕುಟುಂಬಕ್ಕೆ ಬೆಂಬಲ ಸೂಚಿಸದಿದ್ದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಯಕ ಸಮುದಾಯದ ಮತಗಳು ಕೈತಪ್ಪಬಹುದು ಎಂಬ ಭೀತಿ ಜೆಡಿಎಸ್ ಶಾಸಕರುಗಳಿಗಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ಗಾಳಕ್ಕೂ ಸಿದ್ಧತೆ: ಒಂದು ವೇಳೆ ಅನಿಲ್ ಚಿಕ್ಕಮಾದು ಅವರಿಗೆ ಜೆಡಿಎಸ್ ಟಿಕೆಟ್ ನೀಡದಿದ್ದಲ್ಲಿ ಅವರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿಸುವ ಮೂಲಕ ಈ ಭಾಗದ ನಾಯಕ ಸಮುದಾಯದ ಮತಗಳಿಸಬಹುದು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಲೆಕ್ಕಾಚಾರ ಹಾಕಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ಚಿಕ್ಕಣ್ಣ ಅವರು, ಚುನಾವಣೆ ಸಂದರ್ಭದಲ್ಲಿ ಆ ಬಗ್ಗೆ ಎಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ. ಸೋಮವಾರ ಮೈಸೂರಿನ ಕಲಾಮಂದಿರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವಿಶ್ ಮಾಡಿ ಬಂದೆ, ಅವರು ಬ್ಯುಸಿ ಇದ್ದುದರಿಂದ ಮಾತನಾಡಲಾಗಲಿಲ್ಲ. ಎಚ್.ಡಿ.ದೇವೇಗೌಡರು, ಎಚ್.ಡಿ.ರೇವಣ್ಣ ಅವರು ನಮಗೆ ಟಿಕೆಟ್ ನೀಡುವ ಬಗ್ಗೆ ಪೂರ್ಣ ಪ್ರಮಾಣದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇನ್ನು ಟಿಕೆಟ್ ನೀಡುವುದಾಗಿ ಭರವಸೆ ನೀಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸುವಂತೆ ಸೂಚನೆ ಕೊಟ್ಟಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸಂಕ್ರಾಂತಿ ನಂತರ ಪ್ರಚಾರ ಕಾರ್ಯ ಶುರು ಮಾಡುತ್ತೇನೆ ಎಂದು ಜಿಪಂ ಸದಸ್ಯ ಅನಿಲ್ ಚಿಕ್ಕಮಾದು ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.