ನಮ್ಮ ಸರ್ಕಾರದ ಲೆಕ್ಕ ಕೇಳಲು ಷಾ ಯಾರು: ಸಿಎಂ ಸಿದ್ದರಾಮಯ್ಯ

Kannada News, Regional No Comments on ನಮ್ಮ ಸರ್ಕಾರದ ಲೆಕ್ಕ ಕೇಳಲು ಷಾ ಯಾರು: ಸಿಎಂ ಸಿದ್ದರಾಮಯ್ಯ 21

ಹೆಚ್.ಡಿ ಕೋಟೆ/ಮೈಸೂರು: ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ ಎಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು ‘ನಮ್ಮ ಸರ್ಕಾರದ ಲೆಕ್ಕ ಕೇಳಲು ಷಾ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಸರಗೂರು ಎಲಿಪ್ಯಾಡ್ ನಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯದ ಲೆಕ್ಕ ಕೇಳಲು ಅವರು ಯಾರು. ಮನಮೋಹನ್ ಸಿಂಗ್ ಕಾಲದಲ್ಲಿ ಗುಜರಾತ್ ಗೆ ಕೊಟ್ಟ ಹಣದ ಬಗ್ಗೆ ಲೆಕ್ಕ ಕೊಟ್ಟಿದ್ದರಾ. ‘ಕೇಂದ್ರ ಸರಕಾರ ಕಾನೂನಾತ್ಮಕವಾಗಿ ನಮಗೆ ನೀಡಬೇಕಾಗಿದ್ದ ನಮ್ಮ ತೆರಿಗೆ ಪಾಲನ್ನು ಕೊಟ್ಟಿದ್ದಾರೆ. ನಾವು ಖರ್ಚು ಮಾಡಿದ ಲೆಕ್ಕವನ್ನು ರಾಜ್ಯದ ಜನರಿಗೆ ನೀಡಬೇಕೆ ಹೊರತು ಷಾ ಗೆ ಅಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

‘ಈ ಬಾರಿ ನಮಗೆ ಕೇಂದ್ರದಿಂದ ಬರಬೇಕಾಗಿದ್ದ ಅನುದಾನದಲ್ಲಿ ಕಡಿತವಾಗಿದೆ, ಅಮಿತ್‌ ಶಾ ಕಾಮನ್‌ ಸೆನ್ಸ್‌ ಇಟ್ಟುಕೊಂಡು ಮಾತಾಡಲಿ. ಎನೇನೋ ಮಾತನಾಡಿ ಜನರ ದಿಕ್ಕು ತಪ್ಪಿಸುವುದು ಬೇಡ’ ಎಂದು ಕಿಡಿಕಾರಿದ್ದಾರೆ.

‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ 14ನೇ ಹಣಕಾಸು ಆಯೋಗದ ಮೂಲಕ ಕರ್ನಾಟಕಕ್ಕೆ 2,19,506 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೆ, ಇತರೆ ಯೋಜನೆಗಳ ಮೂಲಕ ಹೆಚ್ಚುವರಿಯಾಗಿ ನೀಡಿರುವ 79 ಸಾವಿರ ಕೋಟಿ ರೂ. ಸೇರಿ ಒಟ್ಟಾರೆ 3 ಲಕ್ಷ ಕೋಟಿ ರೂ. ಬಂದಿದೆ. ಆದರೆ, ಈ ಹಣದಲ್ಲಿ ಬಹುಪಾಲನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡ ರಾಜ್ಯ ಸರ್ಕಾರ ಜನರಿಗೆ ಯೋಜನೆಗಳನ್ನು ತಲುಪಿಸಲಿಲ್ಲ’ ಎಂದು ಚಿತ್ರದುರ್ಗದಲ್ಲಿ ಷಾ ಆರೋಪ ಮಾಡಿದ್ದರು.

ಉಗ್ರಗಾಮಿ ಹೇಳಿಕೆಗೆ ಸ್ಪಷ್ಟೀಕರಣ

ಬಿಜೆಪಿಯವರು ಉಗ್ರಗಾಮಿಗಳು ಎಂದು ನಿನ್ನೆ ಆರೋಪ ಮಾಡಿದ್ದ ಸಿಎಂ ಸಿದ್ದರಾಮಯ್ಯ ಇಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಿನ್ನೆ ನಾನು ಹಿಂದುತ್ವದ ಉಗ್ರಗಾಮಿಗಳು ಎಂದಿದ್ದೆ ಎಂದು ತನ್ನ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ.

‘ನಾನಂದಿದ್ದು ಹಿಂದುತ್ವದ ಉಗ್ರಗ್ರಾಮಿಗಳು ಅಂತ, ಅದಕ್ಕೆ ಬಿಜೆಪಿಯವರು ಯಾಕೆ ಸಿಟ್ಟಾಗಬೇಕು..? ಕುಂಬಳಕಾಯಿ ಕಳ್ಳ ಅಂದ್ರೆ ಇವರೇಕೆ ಹೆಗಲು ಮುಟ್ಟಿ ನೋಡ್ತಾರೆ..?ಎಂದು ಪ್ರಶ್ನಿಸಿದ್ದಾರೆ. ‘ನಾನು ಹಿಂದೂನೇ, ಆದರೆ ನನಗೆ ಮನುಷ್ಯತ್ವ ಇದೆ. ಮನುಷ್ಯತ್ವ ಇಲ್ಲದವರನ್ನ ಹಿಂದುತ್ವದ ಉಗ್ರಗಾಮಿಗಳು ಅಂದಿದ್ದೇನೆ’ ಎಂದು ತಿಳಿಸಿದರು.

Related Articles

Leave a comment

Back to Top

© 2015 - 2017. All Rights Reserved.