ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

Kannada News, Regional No Comments on ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ 18

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಇಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಮಲೈಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಬಳಿಕ ಮಲೈಮಹದೇಶ್ವರ ಸ್ವಾಮಿ ಕ್ಷೇತ್ರಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು.

ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಲುವಾಗಿ ಬುಧವಾರ ಮುಖ್ಯಮಂತ್ರಿಯವರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಚಾಮರಾಜನಗರ ತಾಲೂಕಿನ ನಾಗವಳ್ಳಿ, ಕೊಳ್ಳೇಗಾಲ ಹಾಗೂ ಹನೂರು ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಬುಧವಾರ ರಾತ್ರಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮುಖ್ಯಮಂತ್ರಿಯವರು ವಾಸ್ತವ್ಯ ಹೂಡಿದ್ದರು.

ಇಂದು ಬೆಳಿಗ್ಗೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿದ ಮುಖ್ಯಮಂತ್ರಿಯವರು ದೇವರ ದರ್ಶನ ಪಡೆದರು. ಬಳಿಕ ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಂತರಗಂಗೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟರು. ಅಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರಾಧಿಕಾರದ ವತಿಯಿಂದಲೇ ನಿರ್ಮಾಣ ಮಾಡುತ್ತಿರುವ ಅಂಗಡಿ ಮಳಿಗೆಗಳ ಕಾಮಗಾರಿಯನ್ನು ಸಹ ಪರಿಶೀಲಿಸಿದರು.

ದೇವಾಲಯದ ಬಳಿ ಜನರ ನೆರಳಿಗಾಗಿ ನಿರ್ಮಾಣ ಮಾಡಲಾಗಿರುವ ಬೃಹತ್ ರಂಗಮಂದಿರವನ್ನು ಕೆಲಹೊತ್ತು ನಿಂತು ಮುಖ್ಯಮಂತ್ರಿಯವರು ವೀಕ್ಷಿಸಿದರು. ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿಯವರು ಸೂಚಿಸಿದರು.

ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಯವರು ಪ್ರಾಧಿಕಾರದ ಸಭೆಯನ್ನು ನಡೆಸಿದರು. ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್), ಶಾಸಕರಾದ ಆರ್. ನರೇಂದ್ರ, ಸಿ.ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೊಪ್ಪಾಳಿ ಮಹದೇವನಾಯ್ಕ, ಜವರೇಗೌಡ, ಕೀಳನಪುರದ ಮಹದೇವಪ್ಪ, ಕಾವೇರಿ ಶಿವಕುಮರ್, ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ. ರೂಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗಣೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರ್, ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.