ಸಿದ್ದು ಸರಕಾರದ ವಿರುದ್ಧ 5 ಸಾವಿರ ಕೋಟಿ ಅದಿರು ಬಾಂಬ್ ಸಿಡಿಸಿದ ಹೆಚ್.ಡಿ.ಕೆ

BREAKING NEWS, Kannada News, Regional No Comments on ಸಿದ್ದು ಸರಕಾರದ ವಿರುದ್ಧ 5 ಸಾವಿರ ಕೋಟಿ ಅದಿರು ಬಾಂಬ್ ಸಿಡಿಸಿದ ಹೆಚ್.ಡಿ.ಕೆ 11

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಅವಧಿಯಲ್ಲಿ ಒಟ್ಟು 5 ಸಾವಿರ ಕೋಟಿ ರೂ. ಅಕ್ರಮ ಅದಿರು ಹಗರಣ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದ ಹೆಚ್​ಡಿಕೆ ಅಕ್ರಮ ಅದಿರು ಸಾಗಣೆ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಬಳಿ ಸುಬ್ಬರಾಯನ ಹಳ್ಳಿ, ತಿಮ್ಮಪ್ಪನ ಗುಡಿ ಬಳಿ ಎಂ.ಎಂ. ಹಿಲ್ಸ್ ಗೆ ಗಣಿ ಗುತ್ತಿಗೆ ನೀಡಲಾಗಿದೆ. ಮುಚ್ಚಂಡಿ ಎಂಟರ್ ಪ್ರೈಸಸ್‍ನಿಂದ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರ ಸರ್ಕಾರ ಮೂರು ಕಂಪನಿಗಳಿಗೆ ರೈಸಿಂಗ್ ಕಾಂಟ್ರಾಕ್ಟ್ ನೀಡಿದ್ದಾರೆ. ಸುಬ್ಬರಾಯನ ಹಳ್ಳಿ ಬಳಿ 30 ಲಕ್ಷ ಮೆಟ್ರಿಕ್ ಟನ್ ಉತ್ಖನನ ಮಾಡಲು ಅವಕಾಶ ನೀಡಲಿದೆ. ಟೆಂಡರ್ ಕೊಡುವುದಕ್ಕೆ, ಅಗ್ರಿಮೆಂಟ್ ಮಾಡಿಕೊಳ್ಳುವುದಕ್ಕೆ ಮುಂಚೆ ಆ ಕಂಪನಿ ಮೈನಿಂಗ್ ಶುರು ಮಾಡಿದ್ದಾರೆ.

2014-15 ನೇ ಸಾಲಿನಲ್ಲೇ 2062 ಕೋಟಿ ರೂಪಾಯಿ ಅಕ್ರಮ ನಡೆದಿದೆ. ಈವರೆಗಿನ ಲೆಕ್ಕ ತೆಗೆದರೆ ಇದು ಇನ್ನೂ ದೊಡ್ಡ ಮೊತ್ತವಾಗಲಿದೆ. ಹೇಮಲತಾ ಎಂಬ ಅಧಿಕಾರಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದರು. ಆದರೆ ತಕ್ಷಣ ಅವರನ್ನು ಎತ್ತಂಗಡಿ ಮಾಡಿದರು. ಮೂರು ವರ್ಷಗಳಲ್ಲಿ 8 ಜನ ಅಧಿಕಾರಿಗಳು ಬದಲಾಗಿದ್ದಾರೆ. ತುಷಾರ್ ಗಿರಿನಾಥ್ ಅವರ ಅವಧಿಯಲ್ಲೇ ಇಷ್ಟೆಲ್ಲ ಅಕ್ರಮ ನಡೆದಿದೆ. ಈ ಕಾರಣಕ್ಕಾಗಿಯೇ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿ ಉಳಿಸಿಕೊಂಡಿದ್ದಾರೆ. ತೋರಿಕೆಗೆ ಅಕ್ರಮದ ತನಿಖೆಗೆ ಸಮಿತಿ ರಚಿಸುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಅಕ್ರಮ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೇ ಬಿಎಸ್‍ವೈ ಗೊತ್ತಾಗದೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬೇರೆ ಮಾರ್ಗದ ಮುಖಾಂತರ ವ್ಯವಹಾರ ನಡೆಸಿದ್ದರು ಎಂದು ಹೇಳಿದರು.

ಮುಚ್ಚಂಡಿ ಕಂಪನಿಯಿಂದ ಭಾರಿ ಅಕ್ರಮ ನಡೆದಿದ್ದು, 2014-15 ರಲ್ಲಿ ಅದಿರು ಉತ್ಪಾದನೆ ಮಾಡಿರುವುದು 22,90,715 ಮೆಟ್ರಿಕ್ ಟನ್. ಆದರೆ ವರದಿ ಮಾಡಿರುವುದು  13,94,715 ಮೆ. ಟನ್. ಇವುಗಳ ಬಗ್ಗೆ ಮಾಡಿದ ಮೈನ್ಸ್ ಪ್ರೊಡಕ್ಷನ್ ರಿಜಿಸ್ಟರ್ ದಾಖಲೆಗಳೇ ಮಾಯವಾಗಿದೆ. 2015-16 ರಲ್ಲಿ ರೈಸಿಂಗ್ ಕಾಂಟ್ರಾಕ್ಟರ್ ಕೂಡಾ ರಿಜಿಸ್ಟರ್ ಗೆ ಸಹಿ ಮಾಡಿಲ್ಲ. ಉಸ್ತುವಾರಿ ಅಧಿಕಾರಿ ಕೂಡಾ ಸಹಿ ಮಾಡಿಲ್ಲ. 2015-16 ರಲ್ಲಿ ಕೂಡಾ ಇಷ್ಟೇ ಪ್ರಮಾಣದ ಅಕ್ರಮ ನಡೆದಿದೆ. 2014 ರಿಂದ 17 ರವರೆಗೆ ಅಧಿಕೃತವಾಗಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಗೆ 60,56,440 ಮೆ. ಟನ್ ಅದಿರನ್ನು ಗಣಿಗಾರಿಕೆ ಮಾಡಿದ ಬಗ್ಗೆ ವರದಿ ನೀಡಲಾಗಿದೆ. ಇದರ ಮೌಲ್ಯ ಟನ್‍ಗೆ ಮೂರು ಸಾವಿರದಂತೆ ಲೆಕ್ಕ ಹಾಕಿದರೂ 5,450 ಕೋಟಿ ಆಗುತ್ತದೆ. ಆದರೆ ಇದರ ಎರಡು ಪಟ್ಟು ಅಕ್ರಮ ನಡೆದಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

Related Articles

Leave a comment

Back to Top

© 2015 - 2017. All Rights Reserved.