ಹತ್ತೂರ ಒಡೆಯ ಪುತ್ತೂರು ಸೀಮೆ ದೇವರು ಮಹಾಲಿಂಗೇಶ್ವರನ ರಾಜಗೋಪುರ ಉದ್ಘಾಟನೆಗೆ ಸಿದ್ಧ

Featured, Kannada News, Regional No Comments on ಹತ್ತೂರ ಒಡೆಯ ಪುತ್ತೂರು ಸೀಮೆ ದೇವರು ಮಹಾಲಿಂಗೇಶ್ವರನ ರಾಜಗೋಪುರ ಉದ್ಘಾಟನೆಗೆ ಸಿದ್ಧ 36

ಪುತ್ತೂರು: ಇತಿಹಾಸ ಪ್ರಸಿದ್ಧ ಹತ್ತೂರ ಒಡೆಯ ಪುತ್ತೂರು ಸೀಮೆ ದೇವರು ಮಹಾಲಿಂಗೇಶ್ವರನ ಸನ್ನಿಧಿಗೆ ಇದೀಗ ರಾಜಗೋಪುರ ನಿರ್ಮಾಣವಾಗಿದೆ. ಸುಮಾರು ಒಂದು ಕೋಟಿ ವೆಚ್ಚದ ಈ ಗೋಪುರವನ್ನು ಸಂಪೂರ್ಣವಾಗಿ ಭಕ್ತರ ದೇಣಿಗೆಯಿಂದಲೇ ರಚಿಸಲಾಗಿದೆ.

ಇತಿಹಾಸ ಪ್ರಸಿದ್ಧ ಹತ್ತೂರ ಒಡೆಯ ಪುತ್ತೂರು ಸೀಮೆ ದೇವರು ಮಹಾಲಿಂಗೇಶ್ವರನ ಸನ್ನಿಧಿಗೆ ಇದೀಗರಾಜಗೋಪುರ ನಿರ್ಮಾಣವಾಗಿದೆ. ಏಪ್ರಿಲ್ ತಿಂಗಳಲ್ಲಿ ನಡೆಯುವ ವರ್ಷಾವಧಿ ಜಾತ್ರೆಗೂ ಮೊದಲೇ ಈ ರಾಜಗೋಪುರ ಉದ್ಘಾಟನೆಗೊಳ್ಳಲಿದೆ. ಕಾಶಿಯನ್ನು ಬಿಟ್ಟರೆ ದೇವಾಲಯದ ಮುಂಭಾಗದಲ್ಲಿ ಸ್ಮಶಾನ ಇರುವ ಮತ್ತೊಂದು ದೇವಾಲಯ ಪುತ್ತೂರು ಮಹಾಲಿಂಗೇಶ್ವರ ಮಾತ್ರ. ದೇವಾಲಯದ ಮುಂಭಾಗದಲ್ಲಿ ದೇವಲಯದ್ದೇ ಆದ ವಿಶಾಲವಾದ ಗದ್ದೆಯಿದ್ದು, ಮಧ್ಯದಲ್ಲಿ ವಿಶಾಲವಾದ ರಥ ಬೀದಿ ಇದೆ. ಇವು ದೇವಾಲಯಕ್ಕೆ ರಾಜ ಕಳೆ ತಂದುಕೊಟ್ಟಿದೆ.

ಇಂತಹಾ ವಿಶೇಷ ದೇವಾಲಯಕ್ಕೆ 1000 ವರ್ಷಗಳಷ್ಟು ಹಳೆಯ ಇತಿಹಾಸವಿದೆ. ದೇವಾಲಯದ ಹಿಂಭಾಗದಲ್ಲಿ ಈ ಹಿಂದೆ ಮುತ್ತು ಬೆಳೆಯುತ್ತಿತ್ತು ಎಂಬ ಪ್ರತೀತಿ ಹೊಂದಿರುವ, ಪುತ್ತೂರು ಎಂಬ ಹೆಸರು ಬರಲು ಕಾರಣೀಭೂತವಾದ ಪುಷ್ಕರಣೀ ಕೆರೆ ಇದೆ. ನಾಲ್ಕು ವರ್ಷಗಳ ಹಿಂದೆ ಅಂದರೆ 2013 ರಲ್ಲಿ ಸುಮಾರು 13 ಕೋಟಿ ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣ ಗೊಂಡಿತ್ತು. ಕೇವಲ 11 ತಿಂಗಳಲ್ಲಿ ಈ ದೇವಾಲಯ ಪುನರ್ ನಿರ್ಮಾಣಕಾರ್ಯವಾಗಿ ಬ್ರಹ್ಮ ಕಲಶ ನಡೆದದ್ದು ವಿಶೇಷ. ದೇವಾಲಯದ ಗರ್ಭ ಗುಡಿ ಕಾಷ್ಠ ಶಿಲ್ಪದಿಂದ ರಚಿತವಾಗಿದ್ದು ದೇವರ ಮಹಿಮೆಗಳನ್ನು ಸಾರುವ ಆಕರ್ಷಕ ಕೆತ್ತನೆಯಿಂದ ಕೂಡಿದೆ.

ಮಹಾಲಿಂಗೇಶ್ವರನ ಪರಮ ಭಕ್ತರಾದ ಉದ್ಯಮಿ ಮುತ್ತಪ್ಪ ರೈ ಅವರು 2010 ರಲ್ಲಿ ಸುಮಾರು ಒಂದು ಕೋಟಿ ವೆಚ್ಚ ಮಾಡಿ ದೇವರಿಗೆ ಬ್ರಹ್ಮ ರಥ ಸಮರ್ಪಣೆ ಮಾಡಿದ್ದು ಅದೂ ಕೂಡಾ ಅತ್ಯಂತ ಸುಂದರ ಕೆತ್ತನೆ ಹೊಂದಿದ್ದು ವಿಶಿಷ್ಠವಾಗಿದೆ. ಇಂತಹಾ ಹಲವು ವೈಶಿಷ್ಟ್ಯತೆಗಳ ಮೇಲೆ ಕಿರೀಟವಿಟ್ಟಂತೆ ಇದೀಗ ದೇವಾಲಯದ ಮುಂಭಾಗದಲ್ಲಿ ರಾಜಗೋಪುರ ಸಿದ್ಧವಾಗಿದೆ. ಸುಮಾರು ಒಂದು ಕೋಟಿ ವೆಚ್ಚದಲ್ಲಿ 47 ಅಡಿ ಎತ್ತರದ ರಾಜಗೋಪುರ ಇದಾಗಿದ್ದು, ಗೋಪುರದ ತಳ ಭಾಗ 19 ಅಡಿ ಸುತ್ತಳತೆಹೊಂದಿದೆ. ಗೋಪುರದ ಮೇಲೆ ಐದು ಕಲಶಗಳನ್ನು ನಿರ್ಮಿಸಲಾಗಿದ್ದು ಗೋಪುರದಲ್ಲಿ ಧಾರ್ಮಿಕ ಮಹತ್ವದ ಕೆತ್ತನೆಗಳು, ನಾನಾ ವಿಧದ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ.

ಪುತ್ತೂರು ಮಹಾಲಿಂಗೇಶ್ವರನಿಗೆ ನಿಷಿದ್ಧವಾದ ಆನೆಯ ಮೂರ್ತಿಯನ್ನು ದೇವಾಲಯದಲ್ಲಿ ಮಾತ್ರವಲ್ಲ, ಇಲ್ಲೂ ಕೂಡಾ ವಿನ್ಯಾಸಗೊಳಿಸಿಲ್ಲ. ಈ ಗೋಪುರವು ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಸುಮಾರು ಹತ್ತು ತಿಂಗಳ ಹಿಂದೆ ಪ್ರಾರಂಭವಾದ ಗೋಪುರ ನಿರ್ಮಾಣದ ಕಾರ್ಯ ಇದೀಗ ಬಹುಪಾಲು ಮುಕ್ತಾಯವಾಗಿದ್ದು ಈಗಲೇ ಅತ್ಯಂತ ಭವ್ಯವೂ, ಸುಂದರವೂ ಆಗಿ ಕಂಗೊಳಿಸುತ್ತಿದ್ದು ಬಣ್ಣ ಹಚ್ಚುವ ಕಾರ್ಯ ಮಾತ್ರ ಬಾಕಿ ಉಳಿದಿದೆ.

ಗೋಪುರದ ಎರಡೂ ಪಾರ್ಶ್ವಗಳಲ್ಲಿ ಸುಂದರವಾದ ಸೋಬಾನೆ ಮಂಟಪ ನಿರ್ಮಾಣವಾಗಲಿದೆ. ಈ ಎಲ್ಲಾ ಕಾಮಗಾರಿ ಕಾರ್ಯ ಪೂರ್ಣಗೊಂಡ ಕೂಡಲೇ ಒಂದು ಶುಭ ಮುಹೂರ್ತದಲ್ಲಿ ಜಾತ್ರೆಗೂ ಮುನ್ನವೇ ರಾಜಗೋಪುರ ಉದ್ಘಾಟನೆಗೊಳ್ಳಲಿದೆ.ದೇವಾಲಯದ ಗರ್ಭಗೃಹವನ್ನು ಮೂಲದಲ್ಲಿ ಇದ್ದಂತೆಯೇ ಗಜ ಪೃಷ್ಠಾಕಾರ (ಆನೆಯ ಹಿಂಭಾಗ)ದಲ್ಲೇ ಪುನರ್ ನಿರ್ಮಿಸಲಾಗಿತ್ತು. ತುಳುನಾಡಿನಲ್ಲಿ ಹಿಂದೆ ರಚಿಸಲ್ಪಟ್ಟ ಹೆಚ್ಚಿನ ದೇವಾಲಯಗಳ ಗರ್ಭ ಗೃಹ ಗಜ ಪೃಷ್ಠ ಆಕಾರದಲ್ಲಿ ನಿರ್ಮಾಣವಾಗಿದೆ. ಕಾಸರಗೋಡಿನ ಮಧೂರು ಮದನ ಅನಂತೇಶ್ವರ ಮಹಾ ಗಣಪತಿ ದೇವಾಲಯ, ವಿಟ್ಲದ ಪಂಚಲಿಂಗೇಶ್ವರ, ಅಡೂರು ದೇವಾಲಯಗಳು ಇವಕ್ಕೆ ಸಾಕ್ಷಿ.

ಇದೀಗ ದೇವಾಲಯದ ಮುಂಭಾಗ ನಿರ್ಮಾಣಗೊಂಡ ಗೋಪುರವು ದ್ರಾವಿಡ ಶೈಲಿ ಹೊಂದಿದ್ದು, ಎರಡು ವಿಭಿನ್ನ ಶೈಲಿಗಳನ್ನು ಒಂದೇ ಕಡೆ ನೋಡಬಹುದಾಗಿದೆ.ಗೋಪುರ ರಚಿತವಾದ ಸ್ಥಳದಲ್ಲಿ ಈ ಹಿಂದೆ ಧ್ಯಾನ ಶಿವನ 15 ಅಡಿ ಎತ್ತರದ ಬೃಹತ್ ವಿಗ್ರಹವಿತ್ತು. ಅದನ್ನು ಸುಮಾರು 16 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಆದರೆ ದೇವಾಲಯ ಪುನರ್ ನಿರ್ಮಾಣಕ್ಕೂ ಮೊದಲು ನಡೆಸಲಾದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಧ್ಯಾನಶಿವನ ವಿಗ್ರಹ ತೆರವುಗೊಳಿಸಬೇಕು ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಆ ಬೃಹತ್ ವಿಗ್ರಹವನ್ನು ದೇವಳ ಗದ್ದೆಯ ಒಂದು ಬದಿಯಲ್ಲಿ ಇರಿಸಿ ಆ ಸ್ಥಳದಲ್ಲಿ ಸುಂದರ ಹೂ ತೋಟ ನಿರ್ಮಿಸಲಾಗಿದೆ. ಅದು ಕೂಡಾ ಭಕ್ತರ ಪಾಲಿನ ಆಕರ್ಷಣಾ ಕೇಂದ್ರವಾಗಿದೆ. ಈಗ ದೇವಾಲಯದ ಮುಂಭಾಗದಲ್ಲಿ ರಾಜ ಗೋಪುರ ನಿರ್ಮಾಣವಾಗಿದ್ದು ಈಗಾಗಲೇ ಭಕ್ತರ ಪಾಲಿಗೆ ಆಕರ್ಷಣೆಯ ಬಿಂದುವಾಗಿ ಕಂಗೊಳಿಸುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.