ನಾಳೆ ಹೋಳಿ ಹಬ್ಬ ಆಚರಣೆ ಹಿನ್ನೆಲೆ: ಪೊಲೀಸ್ ಆಯುಕ್ತರಿಂದ ಸಾರ್ವಜನಿಕರಿಗೆ ಸೂಚನೆಗಳು

Kannada News, Regional No Comments on ನಾಳೆ ಹೋಳಿ ಹಬ್ಬ ಆಚರಣೆ ಹಿನ್ನೆಲೆ: ಪೊಲೀಸ್ ಆಯುಕ್ತರಿಂದ ಸಾರ್ವಜನಿಕರಿಗೆ ಸೂಚನೆಗಳು 84

ಮೈಸೂರು: ನಾಳೆ ನಗರದಾದ್ಯಂತ “ಹೋಳಿಹಬ್ಬ” ವನ್ನು ಆಚರಿಸಲಿದ್ದು, ಈ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸುಸೂತ್ರವಾಗಿ ಆಚರಣೆ ಮಾಡುವ ಸಲುವಾಗಿ ಮೈಸೂರು ನಗರದ ಪೊಲೀಸ್ ಆಯುಕ್ತರು ಸೂಚನೆಗಳನ್ನು ನೀಡಿದ್ದಾರೆ.

  1. ಬಲವಂತವಾಗಿ ಯಾವುದೇ ರೀತಿಯ ಚಂದಾ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆ ಮಾಡುವುದು ಸುಲಿಗೆ ಮಾಡಿದಂತೆ ಅಗುವುದರಿಂದ ಸದರಿ ಕೃತ್ಯವು ಕಲಂ: 384 ಐಪಿಸಿ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
  2. ಮಹಿಳೆಯರು ಹಾಗೂ ಯಾವುದೇ ವ್ಯಕ್ತಿಗಳಿಗೆ ಬಲವಂತವಾಗಿ ಬಣ್ಣವನ್ನು ಹಾಕಬಾರದು. ಮತ್ತು ಹೆಣ್ಣು ಮಕ್ಕಳನ್ನು ಚುಡಾಯಿಸಬಾರದು.
  3. ಬಣ್ಣ ಎರಚುವ ನೆಪದಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ/ ಮಹಿಳಾ ಕಾಲೇಜುಗಳಿಗೆ ಅಕ್ರಮವಾಗಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
  4. ಕಾಮ ದಹನದ ಸ್ಥಳವನ್ನು ಆಯ್ಕೆ ಮಾಡುವಾಗ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಸ್ಥಳವನ್ನು ಆಯ್ಕೆ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ರಸ್ತೆಯ ಮಧ್ಯದಲ್ಲಿ ಕಾಮ ದಹನ ಮಾಡಬಾರದು ಮತ್ತು ಕಾಮದಹನದ ಸಂಬಂಧ ಯಾವುದೇ ಬೆಂಕಿ ಹೊತ್ತಿಸುವ ವಸ್ತುಗಳಾದ ಕಟ್ಟಿಗೆ, ಸೌದೆ, ಬೆರಣಿ, ಹಾಗೂ ಇತರೇ ಉರುವಲು ವಸ್ತುಗಳನ್ನು ಸಾರ್ವಜನಿಕರಿಂದ ಬಲವಂತವಾಗಿ ವಸೂಲು ಮಾಡಬಾರದು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಮುಂಚಿತವಾಗಿ ಕಾಮದಹನ ಮಾಡುವ ಸ್ಥಳ ತೋರಿಸಿ ಅನುಮತಿ ಪಡೆಯಬೇಕು.
  5. ಕಾರ್ಯಕ್ರಮ ಹಮ್ಮಿಕೊಳ್ಳುವ ಸ್ಥಳ / ಕಾಮ ದಹನದ ಸ್ಥಳದಲ್ಲಿ ವಿದ್ಯುಚ್ಚಕ್ತಿ ಅಳವಡಿಸುವ ಬಗ್ಗೆ ಚೆಸ್ಕಾಂ ನಿಂದ ಅನುಮತಿ ಪಡೆದಿರಬೇಕು ಹಾಗೂ ಯಾವುದೇ ಕಾರಣಕ್ಕೂ ಅನಧಿಕೃತವಾಗಿ / ನೇರವಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ಪಡೆಯಬಾರದು.
  6. ಹೋಳಿ ಹಬ್ಬದ ಸಮಯದಲ್ಲಿ ಧ್ವನಿವರ್ಧಕವನ್ನು ಅಳವಡಿಸುವವರು ಘನ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಾಕ್ಸ್ ಮಾದರಿ ಧ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಧ್ವನಿಯಲ್ಲಿ ಉಪಯೋಗಿಸಬೇಕು. ಧ್ವನಿವರ್ಧಕದಲ್ಲಿ ಆಶ್ಲೀಲ ಸಾಹಿತ್ಯವುಳ್ಳ ಗೀತೆಗಳನ್ನು ಪ್ರಸಾರ ಮಾಡಬಾರದು. ಮನರಂಜನಾ ಕಾರ್ಯಕ್ರಮಗಳನ್ನು ರಾತ್ರಿ 10-00 ಘಂಟೆ ಒಳಗೆ ಮುಕ್ತಾಯಗೊಳಿಸುವುದು.
  7. ಹೋಳಿ ಹಬ್ಬದ ಮೆರವಣಿಗೆ ಮತ್ತು ಕಾಮ ದಹನ ಸ್ಥಳದಲ್ಲಿ ರಕ್ಷಣೆಗಾಗಿ ಪ್ರಾಯೋಜಕರು/ವ್ಯವಸ್ಥಾಪಕರು ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವುದಲ್ಲದೇ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಯಾವುದೇ ಬೆಂಕಿ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವುದು ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ, ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳತಕ್ಕದ್ದು.
  8. ಹೋಳಿ ಹಬ್ಬದ ಆಚರಣೆಯ ಬಗ್ಗೆ ಮತ್ತು ಮೆರವಣಿಗೆಗಳು ನಡೆಯುವ ಬಗ್ಗೆ ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
  9. ಹೋಳಿ ಹಬ್ಬದ ಮೆರವಣಿಗೆಗಳು ಪ್ರಾರ್ಥನಾ ಸ್ಥಳ/ಚರ್ಚ್/ಮಸೀದಿಗಳ ಬಳಿ ಬಂದಾಗ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಘೋಷಣೆಗಳನ್ನು ಕೂಗಬಾರದು ಮತ್ತು ವಾದ್ಯಗಳನ್ನು ನುಡಿಸಬಾರದು.

ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ.100, 2418139, 2418339 ಗೆ ಮಾಹಿತಿ ನೀಡುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಎ. ಸುಬ್ರಮಣ್ಯೇಶ್ವರ ರಾವ್, ಅವರು ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.