ಸ್ವಚ್ಛ ಮಂಗಳೂರಿಗಾಗಿ ರಾಮಕೃಷ್ಣ ಮಿಷನ್’ನಿಂದ ಸ್ವಚ್ಛತಾ ಅಭಿಯಾನ

Kannada News, Regional No Comments on ಸ್ವಚ್ಛ ಮಂಗಳೂರಿಗಾಗಿ ರಾಮಕೃಷ್ಣ ಮಿಷನ್’ನಿಂದ ಸ್ವಚ್ಛತಾ ಅಭಿಯಾನ 15

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಸ್ವಚ್ಛ ಮಂಗಳೂರಿಗಾಗಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ದಿನಾಂಕ 16-2-2018 ರಿಂದ 2-3-2018 ರವರೆಗೆ ಮಂಗಳೂರಿನ ವಿವಿಧೆಡೆ ಕೈಗೊಳ್ಳಲಾಯಿತು.

ಮುಳಿಹಿತ್ಲು: ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರು ಮುಳಿಹಿತ್ಲುವಿನಲ್ಲಿ 65ನೇ ದಿನದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಉಮಾನಾಥ ಕೋಟೆಕಾರ್ ನೇತೃತ್ವದಲ್ಲಿ ಎರಡು ಗುಂಪುಗಳಲ್ಲಿ ಮನೆ ಮತ್ತು ಅಂಗಡಿಗಳನ್ನು ಸಂದರ್ಶಿಸಿ ಸ್ವಚ್ಛತಾ ಜಾಗೃತಿ ಕರಪತ್ರವನ್ನು ವಿತರಿಸಿ ಜನರಲ್ಲಿ ಸ್ವಚ್ಛತೆ ಕಾಯ್ದಿರಿಸುವಂತೆ ಮನವಿ ಮಾಡಿಕೊಂಡರು. ಜೊತೆಗೆ ಕಾರ್ಯಪ್ರವೃತ್ತ ಕಟ್ಟಡಗಳಿಗೆ ತೆರಳಿ ಶುಚಿತ್ವ ಕಾಯ್ದಿರಿಸುವಂತೆ ಸಿಬ್ಬಂದಿಯಲ್ಲಿ ಒತ್ತಾಯಿಸಿದರು.

ಕೋಟಿಚೆನ್ನಯ್ಯ ವೃತ್ತ: ಕೋಟಿಚೆನ್ನಯ್ಯ ವೃತ್ತದಿಂದ ಮಂಗಳಾದೇವಿ ಸಾಗುವ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ಕಸದ ರಾಶಿ ಬೀಳುತ್ತಿದ್ದದ್ದನ್ನು ನಿಲ್ಲಿಸುವ ಸಲುವಾಗಿ ವಿವೇಕಾನಂದ ಯುಥ್ ಫೋರಂ ಒಟ್ಟು ಅರವತ್ತು ಸದಸ್ಯರು ಐದು ಗುಂಪುಗಳಲ್ಲಿ ಸುತ್ತಮುತ್ತಲಿನ ಒಟ್ಟು 200 ಅಂಗಡಿ,ಮನೆಗಳಿಗೆ ತೆರಳಿ ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಸ್ಥಳಿಯರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ ಸ್ವಚ್ಛತಾ ಸಂಕಲ್ಪ ಕರಪತ್ರ ವಿತರಿಸಿದರು. 66ನೇ ಸ್ವಚ್ಛತಾ ಕಾರ್ಯಕ್ರಮವನ್ನು ನಲ್ಲೂರ ಸಚಿನ ಶೆಟ್ಟಿ ಹಾಗೂ ಅಭಿಷೇಕ ವಿ ಎಸ್ ಸಂಯೋಜಿಸಿದರು.

ಅಳಕೆ: ಅಳಕೆ ಮುಖ್ಯರಸ್ತೆಯಲ್ಲಿನ ವ್ಯಾಪಾರ ಮಳಿಗೆಗಳಿಗೆ ತೆರಳಿದ ಸ್ವಚ್ಛ ಅಳಕೆಯ ಯುವಕರು ವರ್ತಕರನ್ನು ಭೇಟಿ ಮಾಡಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಕೇಳಿಕೊಂಡರು. 67ನೇ ಈ ಕಾರ್ಯಕ್ರಮವನ್ನು ಕೃಷ್ಣ ಪ್ರಸಾದ್ ಶೆಟ್ಟಿ ಸಂಯೋಜಿಸಿದರು.

ಒಲ್ಡ್ ಕೆಂಟ್ ರೋಡ್: 68ನೇ ನಿತ್ಯ ಜಾಗೃತಿ ಕಾರ್ಯದಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ನ ಸುಮಾರು 50 ಜನ ಸಿಬ್ಬಂದಿಯವರು ಡಿಜಿಎಂ ಶರತ್ ಚಂದ್ರ ನೇತೃತ್ವದಲ್ಲಿ ಪೊಲೀಸ್ ಕ್ವಾಟರ್ಸ್, ಆರ್‍ಟಿಒ, ಅಗ್ನಿಶಾಮಕದಳದ ಕಛೇರಿ ಸುತ್ತಮುತ್ತಲಿನ ಹಲವು ಕಛೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಳಿಕೊಂಡರು. ಜೊತೆಗೆ ಅಕ್ಕಪಕ್ಕದ ಮನೆಗಳಿಗೆ ತೆರಳಿ ಸ್ವಚ್ಛತಾ ಮಾಹಿತಿ ಪತ್ರವನ್ನು ನೀಡಿ ಜಾಗೃತಿ ಮೂಡಿಸಿದರು.

ಅತ್ತಾವರ: ಕಳೆದ ಬಾರಿ ಸ್ವಚ್ಛತಾ ಶ್ರಮದಾನದ ಮೂಲಕ ಶುಚಿಗೊಳಿಸಿದ ಅತ್ತಾವರ ಸೆಂಟರ್ ಮತ್ತು ಅತ್ತಾವರ ಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛ ಅತ್ತಾವರ ತಂಡದ ಸದಸ್ಯರಿಂದ 69ನೇ ನಿತ್ಯಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸದಸ್ಯರು ಅಕ್ಷಿತ್ ಅತ್ತಾವರ ಮತ್ತು ಮೊಹ್ಮದ್ ಶಮೀಮ್ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಕರಪತ್ರಗಳನ್ನು ಮನೆಮನೆಗೆ ತೆರಳಿ ವಿತರಿಸಿದರು. ಸಿಟಿ ಪ್ರೆಂಡ್ಸ್ ಸದಸ್ಯರು ಮತ್ತು ಎಸ್ ಎಂ ಕುಶೆ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು ಸಾಥ್ ನೀಡಿದರು.

ಭವಂತಿ ಸ್ಟ್ರೀಟ್: ಶ್ರೀ ಗೋಕರ್ಣ ಮಠದ ಅನುಯಾಯಿಗಳು ಹಾಗೂ ಸ್ಥಳಿಯರು ನಂದಾದೀಪ ರಸ್ತೆಯಲ್ಲಿ 70ನೇ ನಿತ್ಯಜಾಗೃತಿ ಅಭಿಯಾನವನ್ನು ಹಮ್ಮಿಕೊಂಡರು. ಈ ಸಂದರ್ಭದಲ್ಲಿ ಪುಣೆಯ ನಿವೃತ್ತ ಶಿಕ್ಷಕ ಹಾಗೂ ಪ್ರಧಾನಿಯವರಿಂದ ಪ್ರಶಂಸೆ ಪಡೆದ ಶ್ರೀ ಚಂದ್ರಕಾಂತ ಕುಲಕರ್ಣಿ ಈ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪ್ರೇರೆಪಿಸಿದರು. ದಾಮೋದರ ಭಟ್, ದಿನಕರ್ ಕಾಮತ್ ಸೇರಿದಂತೆ ಅನೇಕ ಕಾರ್ಯಕರ್ತರು ಸುಮಾರು ನೂರೈವತ್ತಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಕರಪತ್ರ ವಿತರಿಸಿದರು.

ಉರ್ವ ಮಾರ್ಕೆಟ್: ಓಬಿಸಿ ಹಾಸ್ಟೆಲ್‍ನ ವಿದ್ಯಾರ್ಥಿನಿಯರು ಉರ್ವ ಮಾರುಕಟ್ಟೆ ಆವರಣದಲ್ಲಿ 71ನೇ ಅಭಿಯಾನವನ್ನು ಏರ್ಪಡಿಸಿದ್ದರು. ವ್ಯಾಪಾರಿಗಳನ್ನು ಸಂಪರ್ಕಿಸಿ ತಮ್ಮ ತಮ್ಮ ಸ್ಥಳದ ಶುಚಿತ್ವಕ್ಕೆ ಆದ್ಯತೆ ನೀಡಲು ಮನವಿ ಮಾಡಿದರು ಮತ್ತು ಕಸದ ಬುಟ್ಟಿಗಳನ್ನಿಡುವಂತೆ ಸ್ವಚ್ಛತಾ ಮಾಹಿತಿ ಪತ್ರ ನೀಡಿ ವಿನಂತಿಸಿಕೊಂಡರು. ಇದಲ್ಲದೆ ಗಾಂಧಿ ನಗರದ ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು. ಒಟ್ಟು 50 ವಿದ್ಯಾರ್ಥಿನಿಯರು ವಿಠ್ಠಲದಾಸ ಪ್ರಭು ಮಾರ್ಗದರ್ಶನದಲ್ಲಿ ನಾಲ್ಕು ಗುಂಪುಗಳಲ್ಲಿ ಈ ಕಾರ್ಯ ಕೈಗೊಂಡರು. ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಶ್ರೀಮತಿ ಮಹಾಲಕ್ಷ್ಮೀ ಬೋಳಾರ ಕಾರ್ಯಕ್ರಮಕ್ಕೆ ಸಹಕರಿಸಿದರು.

ಮಲ್ಲಿಕಟ್ಟೆ: ಲಯನ್ಸ್ ಕ್ಲಬ್ ಸದಸ್ಯರು ಮಲ್ಲಿಕಟ್ಟೆ ವೃತ್ತದಿಂದ ಕೆಎಸ್‍ಅರ್‍ಟಿಸಿ ಸಾಗುವ ರಸ್ತೆಯಲ್ಲಿ ಮನೆಮನೆಗಳಿಗೆ ಭೇಟಿನೀಡಿ ಕಸದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಿ ಸ್ವಚ್ಛತೆಗೆ ಸಂಬಂಧಿಸಿದ ಮಾಹಿತಿಪತ್ರವನ್ನು ನೀಡಿದರು. 72ನೇ ದಿನದ ಈ ಅಭಿಯಾನದಲ್ಲಿ ಶ್ರೀ ಲ್ಯಾನ್ಸಿ ಮಸ್ಕರೆಂಜಸ್, ಉಮಾ ರಾವ್ ಸೇರಿದಂತೆ ಅನೇಕ ಆಸಕ್ತರು ಭಾಗವಹಿಸಿದ್ದರು.

ಜ್ಯೋತಿ ವೃತ್ತ: ಹಿಂದೂ ವಾರಿಯರ್ಸ್ ತಂಡದ ಸದಸ್ಯರು ಜ್ಯೋತಿ ವೃತ್ತದಿಂದ ಬಲ್ಮಠ ಸಾಗುವ ರಸ್ತೆ ಯಲ್ಲಿ 73ನೇ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸ್ವಯಂ ಸೇವಕರು ಶಶಿಕಾಂತ ಬೆಳ್ತಂಗಡಿ, ಸೌಮ್ಯ ಕೋಡಿಕಲ್ ಜೊತೆಗೂಡಿ ವ್ಯಾಪಾರ ಮಳಿಗೆಗಳಿಗೆ ತೆರಳಿ ಜಾಗೃತಿ ಪತ್ರ ನೀಡಿ ಸ್ವಚ್ಛತೆಗೆ ಆದ್ಯತೆಯನ್ನು ನೀಡುವಂತೆ ವಿನಂತಿಸಿದರು. ಅಲ್ಲದೆ ರಸ್ತೆಯ ಬೀದಿದೀಪಗಳಿಗೆ ಕಟ್ಟಿದ್ದ ಬ್ಯಾನರ್‍ಗಳನ್ನು ಸೌರಜ್ ಮಂಗಳೂರು ಹಾಗೂ ಕಾರ್ಯಕರ್ತರು ತೆರವು ಗೊಳಿಸಿದರು.

ಮಣ್ಣಗುಡ್ಡ: ಅರ್ಟ್ ಅಫ್ ಲಿವಿಂಗ್ ನ ಸದಸ್ಯರು ಸದಾಶಿವ ಕಾಮತ್ ನೇತೃತ್ವದಲ್ಲಿ ಮಣ್ಣಗುಡ್ದ ಗುರ್ಜಿ ಪರಿಸರದ ಮನೆಗಳಿಗೆ ಭೇಟಿಕೊಟ್ಟು , ಸ್ವಚ್ಛತಾ ಸಂಕಲ್ಪ ಕರಪತ್ರ ನೀಡುವುದರೊಂದಿಗೆ, ಮಾರ್ಗದಲ್ಲಿ ಕಸ ಎಸೆಯದಂತೆ ಮತ್ತು ಎಸೆಯುವವರಿಗೆ ತಿಳಿಹೇಳುವಂತೆ ಕೇಳಿಕೊಳ್ಳಲಾಯಿತು. 74ನೇ ದಿನದ ಅಭಿಯಾನದಲ್ಲಿ ಮಧುರಾಜ್, ಜಯಸಾಧನಾ ಪ್ರಸಾದ್ ಮತ್ತಿತರರು ಪಾಲ್ಗೊಂಡರು.

ದಿನಂಪ್ರತಿ ಸಾಯಂಕಾಲ ನಡೆಯುತಿರುವ ಸ್ವಚ್ಛತಾ ಜಾಗೃತಿ ಅಭಿಯಾನದ ನೇತೃತ್ವವನ್ನು ಬ್ರಹ್ಮಚಾರಿ ಶಿವಕುಮಾರ ಮಹರಾಜ್ ವಹಿಸಿದ್ದರು. ಮುಖ್ಯ ಸಂಯೋಜಕರಾದ ಶ್ರೀಉಮಾನಾಥ ಕೋಟೆಕಾರ್ ಕಾರ್ಯಕ್ರಮಗಳನ್ನು ಸಂಘಟಿಸಿದರು. ಎಂಆರ್‍ಪಿಎಲ್ ಸಂಸ್ಥೆ ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡಿ ಪೋತ್ಸಾಹಿಸುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.