ಜನರನ್ನು ಹೆದರಿಸಿಕೊಂಡು ದುಡ್ಡು ವಸೂಲಿ ಮಾಡುವವರ ಆರೋಪಗಳಿಗೆ ಉತ್ತರಿಸುವುದಿಲ್ಲ: ಪ್ರೊ. ಕೆ.ಎಸ್ ರಂಗಪ್ಪ

BREAKING NEWS, Kannada News, Regional No Comments on ಜನರನ್ನು ಹೆದರಿಸಿಕೊಂಡು ದುಡ್ಡು ವಸೂಲಿ ಮಾಡುವವರ ಆರೋಪಗಳಿಗೆ ಉತ್ತರಿಸುವುದಿಲ್ಲ: ಪ್ರೊ. ಕೆ.ಎಸ್ ರಂಗಪ್ಪ 32

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ಹಗರಣ ಮತ್ತು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಮಾನ್ಯತೆಯ ಗೊಂದಲ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಆರೋಪ-ಪ್ರತ್ಯಾರೋಪದ ಅಸ್ತ್ರವಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿವಿ ಮತ್ತು ಮೈಸೂರು ವಿವಿಗಳ ವಿಶ್ರಾಂತ ಕುಲಪತಿ ಪ್ರೊ. ಕೆ ಎಸ್‌ ರಂಗಪ್ಪ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿರುವುದೇ ಇದಕ್ಕೆ ಕಾರಣ. ರಂಗಪ್ಪ ಅವರ ಬೀಗರೂ ಆದ ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡರು ಮತ್ತವರ ಕುಟುಂಬ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯನ್ನಾಗಿಸಿಕೊಂಡಿದೆ.

ಆದರೆ. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರು, ಮೈಸೂರು ವಿವಿ ಉಳಿಸಿ ಹೋರಾಟ ಸಮಿತಿ ವಿಶ್ರಾಂತ ಕುಲಪತಿ ರಂಗಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ. KSOU ಮಾನ್ಯತೆ ರದ್ದಾಗಲು ಅವರೇ ಕಾರಣ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಆಳು ಮಾಡಿದ್ದಾರೆ. ಹೀಗಾಗಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಪಕ್ಷಕ್ಕೇ ಅವರಿಂದ ಹಿನ್ನಡೆಯಾಗುತ್ತೆ ಎಂದು ಸುದ್ದಿಗೋಷ್ಠಿಗಳನ್ನ ನಡೆಸಿ ಆಗ್ರಹಿಸಿದ್ದರು.

ಈ ಪ್ರಸಂಗ ನಡೆದ ನಂತರ ಮೈಸೂರು ವಿವಿಯಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರು ಸಹ ಹೇಳಿಕೆ ನೀಡಿದ್ದರು. ಆದರೆ, ಆ ರೀತಿ ಏನಾದ್ರೂ ಅಕ್ರಮ ನಡೆದದ್ದೇ ಆದಲ್ಲಿ ಮೋಯ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ರಂಗಪ್ಪ ಅವರು ಸವಾಲು ಹಾಕಿದ್ದರು.

ಈ ಬೆಳವಣಿಗೆಗಳ ಬಗ್ಗೆ ಪ್ರೊ ಕೆ ಎಸ್ ರಂಗಪ್ಪ ಅವರು ನ್ಯೂಸ್ ನಿರಂತರದೊಂದಿಗೆ ಮಾತನಾಡಿ, “ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಟಿಕೆಟ್ ಕೊಡಬೇಡಿ ಅನ್ನುತ್ತಿರುವವರೇನು ಪಕ್ಷದ ಹೈಕಮಾಂಡಾ? ಅವರೆಲ್ಲ ಕ್ರಿಮಿನಲ್ ಹಿನ್ನಲೆಯುಳ್ಳವರು, ಬೇಲ್ ಮೇಲೆ ಹೊರ ಬಂದವರು, ನೀವು ಅವರ ಹಿನ್ನಲೆ ನೋಡಿದರೆ ತಿಳಿಯುತ್ತದೆ. ಟಿಕೆಟ್ ಕೊಡಬೇಡಿ ಎಂದು ಹೇಳುವವರು ಸರಿಯಾದ ದಾಖಲೆ ಕೊಡಬೇಕು. ರೋಲ್ ಕಾಲ್ ಮಾಡಿಕೊಂಡು, ಎಲ್ಲರನ್ನೂ ಹೆದರಿಸಿಕೊಂಡು ದುಡ್ಡು ವಸೂಲಿ ಮಾಡುವವರ ಆರೋಪಗಳಿಗೆ ಬೆಲೆಯಿಲ್ಲ. ಯಾರಾದರು ಒಳ್ಳೆಯವರು ಆರೋಪ ಮಾಡಿದ್ರೆ ಹೇಳಿ,” ಎಂದರು.

ಒಟ್ಟಾರೆ ಯುಜಿಸಿ ಹಗರಣದ ವಿಷಯದಲ್ಲಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದು, ಚುನಾವಣಾ ಕಣದಲ್ಲಿ ಮುಂದೇನಾಗಲಿದೆ ಎಂದು‌‌ ಕಾದು ನೋಡಬೇಕಿದೆ.

Related Articles

Leave a comment

Back to Top

© 2015 - 2017. All Rights Reserved.