ಜಿಲ್ಲಾಧಿಕಾರಿ ಡಿ ರಂದೀಪ್’ರಿಗೆ ಆತ್ಮೀಯ ಬೀಳ್ಕೊಡುಗೆ

Kannada News, Regional, Top News No Comments on ಜಿಲ್ಲಾಧಿಕಾರಿ ಡಿ ರಂದೀಪ್’ರಿಗೆ ಆತ್ಮೀಯ ಬೀಳ್ಕೊಡುಗೆ 25

ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿ ಒಂದೂವರೆ ವರ್ಷ ಕೆಲಸ ನಿರ್ವಹಿಸಿರುವುದು ತೃಪ್ತಿಕರವಾಗಿದ್ದು, ಮೈಸೂರಿನ ಜನತೆ ಹಾಗೂ ಅಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಇದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮೈಸೂರಿಂದ ವರ್ಗಾವಣೆಗೊಂಡಿರುವ ರಂದೀಪ್ ಡಿ. ಅವರು ಹೇಳಿದರು.

ವರ್ಗಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಚೇರಿಯಲ್ಲಿ ಗ್ರೂಪ್ ಡಿ ಸಿಬ್ಬಂದಿಯಿಂದ ಎ.ಡಿ.ಸಿ. ವರೆಗೆ ಎಲ್ಲರೂ ಸಹಕಾರ ನೀಡಿದ್ದರಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಮೈಸೂರಿನಲ್ಲಿ ಹಲವಾರು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಜಿಲ್ಲಾಮಟ್ಟದ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಿದರು. ನನ್ನ ಅವಧಿಯಲ್ಲಿ ಏನೇ ಉತ್ತಮ ಕೆಲಸವಾಗಿದ್ದರೂ ಅದರ ಶ್ರೇಯ ಎಲ್ಲರಿಗೂ ಸೇರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶಿವಶಂಕರ್ ಅವರು ಮಾತನಾಡಿ, ಅಭಿವೃದ್ಧಿ ವಿಷಯಗಳು ಜಿಲ್ಲಾ ಪಂಚಾಯಿತಿಗೆ ಹೆಚ್ಚು ಸೇರಿದ್ದರೂ ಸಹ ಜಿಲ್ಲಾಧಿಕಾರಿಗಳ ಆಸಕ್ತಿ, ಸಹಭಾಗಿತ್ವ ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ರಂದೀಪ್ ಸರ್ ಅವರ ಪ್ರೋತ್ಸಾಹದಿಂದ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪ ನಿರ್ದೇಶಕ ಡಾ. ಕಾ. ರಾಮೇಶ್ವರಪ್ಪ ಅವರು ಮಾತನಾಡಿ, ಜಿಲ್ಲಾಧಿಕಾರಿ ರಂದೀಪ್ ಅವರ ಪರಿಶ್ರಮದ ಫಲವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿಯೊಬ್ಬರೂ ಉತ್ತಮ ಆಹಾರ ಒದಗಿಸಲು ಸಾಧ್ಯವಾಯಿತು. ಓಪನ್ ಸ್ಟ್ರೀಟ್ ಫೆಸ್ಟಿವಲ್ ಮೂಲಕ ಮೈಸೂರಿಗೆ ಒಂದು ಬ್ರಾಂಡ್ ತಂದುಕೊಟ್ಟರು. ಚಿಕ್ಕ ವಯಸ್ಸಿನ ಅಧಿಕಾರಿಗಳಿಗೆ ಕೋಪ ಜಾಸ್ತಿ. ಆದರೆ ರಂದೀಪ್ ಸರ್ ಅವರು ಯಾವುದಕ್ಕೂ ಕೋಪ ಮಾಡಿಕೊಳ್ಳದೆ ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿದರು ಎಂದರು.

ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯನ್ನು ರಂದೀಪ್ ಸರ್ ಅವರು ಈ-ಆಫೀಸ್ ಮಾಡಿದರು. ಇದರಿಂದ ಕಡತಗಳನ್ನು ಬೇಗ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ. ಕೆಲವು ಕಡತಗಳಿಗೆ 2 ನಿಮಿಷಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಮಾತನಾಡಿ, ಜಿಲ್ಲಾಧಿಕಾರಿಗಳಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ಸ್ಪಂದಿಸುತ್ತಿದ್ದ ರೀತಿಯಿಂದ ಜಿಲ್ಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾಧ್ಯಮ ಸಮನ್ವಯ ತುಂಬಾ ಸರಾಗವಾಗಿ ನಡೆಯಿತು. ಮಾಧ್ಯಮದವರು ಯಾವುದೇ ಸಮಯದಲ್ಲಿ ಮಾಹಿತಿ ಕೇಳಿದರೂ ಖುದ್ದು ಆಸಕ್ತಿ ವಹಿಸಿ ಮಾಹಿತಿ ನೀಡುತ್ತಿದ್ದರು. ರಂದೀಪ್ ಸರ್ ಅವರು ಅತ್ಯುತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿಯಂತೆ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಹುಣಸೂರು ಉಪ ವಿಭಾಗಾಧಿಕಾರಿ ನಿತೀಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.