ಮಹಿಳಾ ಸಬಲೀಕರಣ ಹೋರಾಟದ ಫಲ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜು ಅಭಿಮತ

Kannada News, Regional No Comments on ಮಹಿಳಾ ಸಬಲೀಕರಣ ಹೋರಾಟದ ಫಲ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜು ಅಭಿಮತ 54

ಚಾಮರಾಜನಗರ: ಹೋರಾಟದ ಫಲವಾಗಿ ಮಹಿಳೆಯರು ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲರಾಗಿದ್ದಾರೆ ಎಂದು ಪ್ರಧಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜು ಅವರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಇಂದು ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಎಲ್ಲರಿಗೂ ಸಮಾನವಾದ ಹಕ್ಕುಗಳು ಹಾಗೂ ಸ್ವಾತಂತ್ರ್ಯ ನೀಡಿದೆ. ಮಹಿಳೆಯರು ಹೋರಾಟದಿಂದ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನೆಲೆ ಕಾಣುವಲ್ಲಿ ಸಫರಾಗಿದ್ದಾರೆ ಎಂದು ಅವರು ತಿಳಿಸಿದರು.

ಕಾನೂನಿನ ಮೂಲಕ ಜೀವನಾಂಶದ ಹಕ್ಕು, ಕೌಟುಂಬಿಕ ಹಿಂಸೆ ನಿಷೇಧ, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕುಗಳನ್ನು ಮಹಿಳೆಯರು ಪಡೆದು ಕೊಂಡಿದ್ದಾರೆ. ಸ್ವಂತ ಶಕ್ತಿ ಸಾಮರ್ಥ್ಯ, ಪರಿಶ್ರಮ, ಸಾಧನೆಯಿಂದ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಅವಕಾಶ ಪಡೆದಿದ್ದು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ಮಾತನಾಡಿ ಹೆಣ್ಣು ತಾಯಿ, ಮಗಳು, ಸಹೋದರಿ, ಪತ್ನಿ, ಸೇರಿದಂತೆ ಕುಟುಂಬದಲ್ಲಿ ನಾನಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಗೃಹ ಕೃತ್ಯದಿಂದ ಹಿಡಿದು ಉನ್ನತ ಸ್ಥಾನದ ಕೆಲಸಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಮಹಿಳೆ ಪ್ರಕೃತಿಯ ಹೆಮ್ಮೆಯ ಸೃಷ್ಠಿ ಎನ್ನಿಸಿಕೊಂಡಿದ್ದಾಳೆ ಎಂದು ತಿಳಿಸಿದರು.

ಹೆಣ್ಣು ಮಕ್ಕಳ ಮೇಲಿನ ಹಿಂಸೆ, ಅತ್ಯಚಾರದಂತಹ ಘಟನೆಗಳು ಅಕ್ಷಮ್ಯ ಅಪರಾಧ. ಮಹಿಳೆ ಹಿರಿಯ ಸ್ಥಾನದಲ್ಲಿ ನಿಂತು ಮಗುವನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆರ್.ಪಿ. ನಂದೀಶ್ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್.ಜೆ. ಭವಾನಿ ಅವರು ಮಹಿಳೆ ಪುರಷರಷ್ಟೇ ಸಮಾನಳು. ಶಕ್ತಿ ಸಾಮರ್ಥ್ಯ, ನಾಯಕತ್ವ, ವಿಚಾರ ಬದ್ಧತೆಯಿಂದ ಮಹಿಳೆಯರು ಮತ್ತಷ್ಟು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಲಿ ಎಂದು ಹಾರೈಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ಅವರು ಮಾತನಾಡಿ ಮಹಿಳೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ತನ್ನ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ ದೈವಿಸ್ವರೂಪದ ಮಹಿಳೆಯರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಾರ್ವಜನಿಕ ಅಭಿಯೋಜಕರಾದ ಲೋಲಾಕ್ಷಿ ಅವರು ಮಾತನಾಡಿ ಮಹಿಳೆಗೆ ಸಮಾನ ವೇತನ, ಶಿಕ್ಷಣ ನೀಡುವ ಮೂಲಕ ಪುರುಷ ಪ್ರಧಾನ ಸಮಾಜದ ಪರಿಸ್ಥಿತಿ ಬದಲಾಯಿಸಿ ಸಮಾನತೆಯ ಹಾದಿಯಲ್ಲಿ ನಡೆಯಬೇಕಾಗಿದೆ ಎಂದು ಅವರು ಆಶಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ವಿ. ಭಂಡಾರಿ ಅವರು ಮಾತನಾಡಿ ಭಾರತದ ಸಂಸ್ಕೃತಿ ಶ್ರೀಮಂತವಾಗಿದೆ. ಮಹಿಳೆಯರ ಸಾಧನೆ, ಪರಿಶ್ರಮ ಗುರುತಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆಯಲ್ಲಿ ಗೌರವಿಸುವಂತಾಗಬೇಕು ಎಂದರು.

ವಕೀಲರಾದ ವಿದ್ಯಾಲತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಡಿ.ಕೆ. ಮಧುಸೂದನ್, ಜಿಲ್ಲಾ ಸರ್ಕಾರಿ ವಕೀಲರಾದ ಎಚ್.ಎನ್. ಲೋಕೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.