ಗಾಂಧೀಜಿಯವರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು: ತಿಪ್ಪೇರುದ್ರಪ್ಪ

Kannada News, Regional No Comments on ಗಾಂಧೀಜಿಯವರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು: ತಿಪ್ಪೇರುದ್ರಪ್ಪ 9

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅಶಾಂತಿಯು ತಲೆದೋರಿದ್ದು, ಇದನ್ನು ಹೋಗಲಾಡಿಸಲು ಗಾಂದೀಜಿಯವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಧ್ಯಪಕ ಬಿ. ತಿಪ್ಪೇರುದ್ರಪ್ಪ ಕಿವಿ ಮಾತು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ಮಹಾತ್ಮ ಗಾಂಧೀಜಿಯವರ ೧೫೦ ನೇ ಜಯಂತಿಯ ಅಂಗವಾಗಿ ಗಾಂಧಿ ಧ್ವನಿ ಮತ್ತು ಬೆಳಕಿನ ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಆದಿಚುಂಚನಗಿರಿ  ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಇಂದು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಜನತೆಯು ಭಯಪಡುವ ಪರಿಸ್ಥಿತಿ ಎದುರಾಗಿದೆ. ಇದನ್ನು ಹೋಗಲಾಡಿಸಲು ಗಾಂಧೀಜಿಯವರ ಸರಳ ಜೀವನ ಹಾಗೂ ಅವರ ತತ್ವ ಆದರ್ಶಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡರೆ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ದೇಶವು ಅಭಿವೃದ್ಧಿ ಹೊಂದುತ್ತದೆ. ಇದರಿಂದ ಸಮಾಜವು ಬೆಳೆಯುತ್ತದೆ. ಇದರೊಂದಿಗೆ ಗಾಂಧೀಜಿಯವರು ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದ ಅವರು ನಾವು ಯಾವಾಗಲೂ ಗಾಂಧಿ ಮಂತ್ರವನ್ನು ಜಪಿಸಿದಲ್ಲಿ ನಮ್ಮಲ್ಲಿಯೂ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಸಿ.ಕೆ. ಸುಬ್ಬರಾಯ ಗಾಂಧೀಜಿಯವರು ನಡೆದ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಾವು ನಡೆದರೆ ನಾವೂ ಪ್ರಾಮಾಣಿಕತೆಯಿಂದ ಇರಲು ಸಾಧ್ಯ ಎಂದರು.

ದೇಶದಲ್ಲಿ ಯುವ ಶಕ್ತಿಯು ಮಹತ್ವದ್ದಗಿದ್ದು, ಯುವ ಜನತೆಗೆ ಚೈತನ್ಯ ತುಂಬಿದರೆ ಉತ್ತಮ ಸಮಾಜವನ್ನು ಕಟ್ಟುವಲ್ಲಿ ನಾವು ಸಫಲರಾಗಬಹುದು ಎಂದ ಅವರು ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಬದುಕಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುನಾಥ್ ಎಸ್.ಆರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ. ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.