ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ; ಹೇಗೆ ನಡೆಯುತ್ತೆ ಗೊತ್ತಾ ಈ ಪರೀಕ್ಷೆ..?

BREAKING NEWS, Crime, Kannada News, Regional, Top News No Comments on ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ; ಹೇಗೆ ನಡೆಯುತ್ತೆ ಗೊತ್ತಾ ಈ ಪರೀಕ್ಷೆ..? 63

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಎಸ್​ಐಟಿ ವಶದಲ್ಲಿರುವ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನ ಮಂಪರು ಪರೀಕ್ಷೆಗೆ ಒಳಪಡಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ.

ಹೊಟ್ಟೆ ಮಂಜ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆ ನಡೆಸಲು ಮನವಿ ಮಾಡಿತ್ತು. ಇದೇ ವೇಳೆ, ಮಾರ್ಚ್ 26ರವರೆಗೂ ಹೊಟ್ಟೆ ಮಂಜನನ್ನ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಎಸ್​ಐಟಿ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಹೊಟ್ಟೆ ಮಂಜನನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅಹಮದಾಬಾದ್​ನಲ್ಲಿ ಮಂಪರು ಪರೀಕ್ಷೆ ನಡೆಸುವುದಾಗಿ ನ್ಯಾಯಾಧೀಶರಿಗೆ ಎಸ್ ಐ ಟಿ ಪೊಲೀಸರು ತಿಳಿಸಿದರು. ಈ ಸಂದರ್ಭ ಮಂಪರು ಪರೀಕ್ಷೆಗೆ ಒಳಗಾಗುವುದಾಗಿ ನ್ಯಾಯಾಧೀಶರ ಮುಂದೆ ಹೊಟ್ಟೆ ಮಂಜ ಒಪ್ಪಿಗೆ ಸೂಚಿಸಿದ್ದಾನೆ. ಹೀಗಾಗಿ, ಹೊಟ್ಟೆಮಂಜ ಮತ್ತು ಆತನ ವಕೀಲರ ಸಮ್ಮುಖದಲ್ಲೇ ಮಂಪರು ಪರೀಕ್ಷೆಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಮಂಪರು ಪರೀಕ್ಷೆ ಹೇಗೆ ನಡೆಯುತ್ತೆ..?

ಯಾವುದೇ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಅನುಮತಿ ದೊರೆತ ಬಳಿಕ ಆರೋಪಿಗೆ ಕೇಳ ಬೇಕಾದ ಪ್ರಶ್ನೆಗಳ ಕುರಿತು ಪಟ್ಟಿ ಮಾಡಿಕೊಳ್ಳಲಾಗುತ್ತದೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಎರಡು ವಿಧಗಳಿದ್ದು ಮೊದಲಿಗೆ ಆತನ ಹೆಸರು, ಊರು ಎಂಬ ಸಾಮಾನ್ಯ ಮಾಹಿತಿ ಪಡೆಯಲಾಗುತ್ತದೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕುರಿತು ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತದೆ.

ಮಂಪರು ಪರೀಕ್ಷೆಯನ್ನು ವೈದ್ಯರು, ಮನಶಾಸ್ತ್ರಜ್ಞರು ಸಮ್ಮುಖದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಇದಕ್ಕೂ ಮುನ್ನ ಆರೋಪಿಯ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಆತನ ದೇಹದ ಆರೋಗ್ಯದ ಸಾಮರ್ಥ್ಯದ ಮೇಲೆ ವೈದ್ಯರು ಸೋಡಿಯಂ ಪೆಂಟೋಥಲ್ ಇಂಜೆಕ್ಷನ್ ಮೂಲಕ ನೀಡುತ್ತಾರೆ. ಆರೋಪಿಯ ಲಿಂಗ, ವಯಸ್ಸು, ದೇಹ ಸಾಮರ್ಥ್ಯ, ಆರೋಗ್ಯ ಇವುಗಳನ್ನು ನೋಡಿಕೊಂಡು ನಿಗಧಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಸರಿಯಾಗಿ ಪರೀಕ್ಷೆ ನಡೆಸದೇ ಜಾಸ್ತಿ ಪ್ರಮಾಣದಲ್ಲಿ ಸೋಡಿಯಂ ಪೆಂಟೋಥಲ್ ನೀಡಿದರೆ ರೋಗಿ ಕೋಮಾಕ್ಕೆ ಜಾರುವ ಸಾಧ್ಯತೆ ಇರುತ್ತದೆ.

ಈ ಡೋಸ್ ನೀಡಿದ ಬಳಿಕ ಆರೋಪಿ ನಿದ್ರಾವಸ್ಥೆಗೆ ಜಾರುವ ಹಂತದ ಮೊದಲಿನ ಹಂತಕ್ಕೆ ಬಂದಾಗ ನಿಧಾನವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾಧಾರಣವಾಗಿ ನಿದ್ದೆಯ ಮಂಪರಿನಲ್ಲಿದ್ದ ವ್ಯಕ್ತಿಗೆ ಏನು ಕೇಳಿದರೂ ಆತ ಸತ್ಯ ಹೇಳುತ್ತಾನೆ. ಹೀಗಾಗಿ ಈ ಹಂತದಲ್ಲಿದ್ದ ಆರೋಪಿ ನಿದ್ದೆಗೆ ಜಾರದಂತೆ ಮೊದಲೇ ನಿಗದಿ ಪಡಿಸಿದ ಪ್ರಮಾಣದಲ್ಲಿ ಸೋಡಿಯಂ ಪೆಂಟೋಥಲ್ ಡೋಸ್ ಅನ್ನು ನಿಮಿಷ, ನಿಮಿಷ ಗಳ ಅಂತರದಲ್ಲಿ ಸ್ವಲ್ಪ ಸ್ವಲ್ಪ ನೀಡಲಾಗುತ್ತದೆ.

ಯಾವುದೇ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ಬಿಪಿ ಇರುವಂತಹ ವ್ಯಕ್ತಿಗಳಿಗೂ ಪರೀಕ್ಷೆ ನಡೆಸಬಹುದು. ಈ ವೇಳೆ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಪೂರ್ಣ ಮಾಹಿತಿಯನ್ನು ತಿಳಿಸುತ್ತಾನೆ. ಯಾವುದೇ ಮಾಹಿತಿಯನ್ನು ಹೇಳದಿರಲು ಈ ಸ್ಥಿತಿಯಲ್ಲಿ ಆತನಿಗೆ ಸಾಧ್ಯವಿರುವುದಿಲ್ಲ. ಆತನಿಂದ ಮಾಹಿತಿ ಪಡೆಯುವ ಪ್ರತಿಯೊಂದು ಅಂಶವನ್ನು ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುತ್ತದೆ.

Related Articles

Leave a comment

Back to Top

© 2015 - 2017. All Rights Reserved.