ಧರ್ಮಸ್ಥಳ: 15ನೇ ವರ್ಷಕ್ಕೆ ಸಂಪೂರ್ಣ ಸುರಕ್ಷಾ

News, Regional No Comments on ಧರ್ಮಸ್ಥಳ: 15ನೇ ವರ್ಷಕ್ಕೆ ಸಂಪೂರ್ಣ ಸುರಕ್ಷಾ 12

ಬೆಳ್ತಂಗಡಿ: ಸಂಪೂರ್ಣ ಸುರಕ್ಷಾ ಯೋಜನೆಯು ಜನರಲ್ಲಿ ವಿಶೇಷ ಚೈತನ್ಯ ಉಂಟು ಮಾಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಸದಸ್ಯರ ಸಹಭಾಗಿತ್ವದಲ್ಲಿ ಮಾಡಿಕೊಳ್ಳಲಾದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆ 2018-19ರ ಸಾಲಿನ ವಿಮಾ ಪ್ರೀಮಿಯಂ ಮೊತ್ತವನ್ನು ವಿವಿಧ ವಿಮಾ ಕಂಪೆನಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. 

ಧರ್ಮಸ್ಥಳ ಯೋಜನೆಯ ಅನುದಾನದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಈ ವಿಮಾ ಯೋಜನೆಯ 2018-19ನೇ ಸಾಲಿಗೆ ಸುಮಾರು 10 ಲಕ್ಷ ಸದಸ್ಯರು ನೋಂದಾವಣೆಗೊಂಡಿದ್ದು, ಇದರ 47 ಕೋ. ರೂ. ವಿಮಾ ಪ್ರೀಮಿಯಂ ಮೊತ್ತವನ್ನು ಡಾ| ಹೆಗ್ಗಡೆಯವರು ಹಸ್ತಾಂತರಿಸಿದರು.

ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಕಾರ್ಯಕ್ರಮವು 14 ವರ್ಷ ಸೇವೆಯನ್ನು ಪೂರೈಸಿ, 2018-19ರ ಸಾಲಿಗೆ ಮತ್ತೆ ಅನುಷ್ಠಾನಗೊಳ್ಳಲಿದೆ. ಈ ಅವಧಿಯಲ್ಲಿ ಸುಮಾರು 9 ಲಕ್ಷ ಸದಸ್ಯರಿಗೆ ಉಚಿತ ಚಿಕಿತ್ಸಾ ಸೌಲಭ್ಯ, 421 ಕೋಟಿ ರೂ. ಮೊತ್ತದ ಸೌಲಭ್ಯಗಳನ್ನು ಸಂಪೂರ್ಣ ಸುರಕ್ಷಾ ಕಾರ್ಯಕ್ರಮದನ್ವಯ ವಿತರಿಸಲಾಗಿದೆ. ಈ ಯೋಜನೆ ಕೇಂದ್ರ ಸರಕಾರದ ಯೂನಿವರ್ಸಲ್‌ ಆರೋಗ್ಯ ವಿಮಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಸುರಕ್ಷಾ ಬಿಮಾ ಯೋಜನೆಗಳಿಗೂ ಮಾರ್ಗದರ್ಶಿಯಾಗಿತ್ತು.

ಓರಿಯಂಟಲ್‌ ವಿಮಾ ಕಂಪೆನಿಯ ಉಪ ಮಹಾಪ್ರಬಂಧಕ ಜ್ಯೋತಿ ನಾಥನ್‌, ಪ್ರಾದೇಶಿಕ ಪ್ರಬಂಧಕರಾದ ಮೀರಾ ಪಾರ್ಥಸಾರಥಿ, ಮುಖ್ಯ ಪ್ರಬಂಧಕರಾದ ಸುರೇಶ್‌ ಬಲರಾಮ್‌, ನ್ಯಾಶನಲ್‌ ವಿಮಾ ಕಂಪೆನಿಯ ಮುಖ್ಯ ಪ್ರಬಂಧಕರಾದ ಪ್ರತಿಭಾ ಶೆಟ್ಟಿ, ನ್ಯೂ ಇಂಡಿಯಾ ವಿಮಾ ಕಂಪೆನಿಯ ಮುಖ್ಯ ಪ್ರಬಂಧಕರಾದ ಶೋಭಾ ರಾಜಗಿರಿ, ಎನ್‌. ಪ್ರಭು, ಸೇಸಪ್ಪ ನಾಯ್ಕ ಮೊದಲಾದವರು ವಿಮಾ ಪ್ರೀಮಿಯಂಗಳನ್ನು ಸ್ವೀಕರಿಸಿದರು. ಯೋಜನೆಯ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್‌.ಎಚ್‌. ಮಂಜುನಾಥ್‌, ಸಂಪೂರ್ಣ ಸುರಕ್ಷಾ ನಿರ್ದೇಶಕ ಅಬ್ರಹಾಂ, ಯೋಜನಾಧಿಕಾರಿ ಶಿವಪ್ರಸಾದ್‌ ಹಾಜರಿದ್ದರು.

Related Articles

Leave a comment

Back to Top

© 2015 - 2017. All Rights Reserved.