ಎಲೆಕ್ಟ್ರಿಕ್‌ ವಾಹನಗಳಿಗೆ ಅಗ್ಗದ ವಿದ್ಯುತ್‌?

Automobile, BREAKING NEWS, Featured No Comments on ಎಲೆಕ್ಟ್ರಿಕ್‌ ವಾಹನಗಳಿಗೆ ಅಗ್ಗದ ವಿದ್ಯುತ್‌? 33
ಬೆಂಗಳೂರು: ಎಲೆಕ್ಟ್ರಿಕ್‌ ವಾಹನ ಬಳಕೆ ಉತ್ತೇಜಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಡುವೆಯೇ ಈ ಮಾದರಿಯ ವಾಹನಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸಲು ಬೆಸ್ಕಾಂ ಮುಂದಾಗಿದೆ.
ವಾಣಿಜ್ಯ ಬಳಕೆಗೆ ವಿದ್ಯುತ್‌ ದರ ಪ್ರತಿ ಯೂನಿಟ್‌ಗೆ 7.50 ರೂ. ಇದೆ. ಆದರೆ, ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿ ಚಾರ್ಜ್‌ ಮಾಡಲು ಕಡಿಮೆ ದರದಲ್ಲಿ ವಿದ್ಯುತ್‌ ಒದಗಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ತೀರ್ಮಾನಿಸಿದೆ. ಈ ಸಂಬಂಧ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಲ್ಲೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿದೆ.
ಆದರೆ, ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸ್ವಂತ ಬಳಕೆಗೆ 3 ಘಟಕಗಳನ್ನು ಸ್ಥಾಪಿಸಿರುವುದು ಬಿಟ್ಟರೆ ನಗರದಲ್ಲಿ ವಿದ್ಯುತ್‌ ಚಾರ್ಜಿಂಗ್‌ ಸ್ಟೇಷನ್‌ಗಳೇ ಇಲ್ಲ. ಇನ್ನೂ 11 ಕಡೆಗಳಲ್ಲಿ ಚಾಜಿಂಗ್‌ ಸ್ಟೇಷನ್‌ ತೆರೆಯಲು ಯೋಜನೆ ರೂಪಿಸಲಾಗಿದೆ.
ಮೆಟ್ರೋಗಿಂತ ಕಡಿಮೆ ದರ!: “ನಮ್ಮ ಮೆಟ್ರೋ’ಗೆ ಪ್ರತಿ ಯೂನಿಟ್‌ಗೆ 6 ರೂ. ದರದಲ್ಲಿ ಬೆಸ್ಕಾಂ ವಿದ್ಯುತ್‌ ಪೂರೈಕೆ ಮಾಡುತ್ತಿದ್ದು, ವಿದ್ಯುತ್‌ಚಾಲಿತ ವಾಹನಗಳಿಗೆ ಇದಕ್ಕಿಂತಲೂ ಅಗ್ಗದ ದರದಲ್ಲಿ ನೀಡಲು ಉದ್ದೇಶಿಸಲಾಗಿದೆ. ಹಗಲು, ರಾತ್ರಿ ಮತ್ತು “ಪೀಕ್‌ ಅವರ್‌’ ಸೇರಿದಂತೆ ನಾಲ್ಕು ಪ್ರಕಾರಗಳಲ್ಲಿ ದರ ವಿಂಗಡಣೆ ಮಾಡಲಾಗಿದೆ.
ಆಯಾ ಸಮಯಕ್ಕೆ ತಕ್ಕಂತೆ ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿ ದರ ವಿಧಿಸಲಾಗುವುದು. ಆದರೆ, ಚುನಾವಣೆ ಇರುವುದರಿಂದ ಸದ್ಯಕ್ಕೆ ಈ ರಿಯಾಯ್ತಿ ದರ ಜಾರಿಯಾಗುವುದು ಅನುಮಾನ. ಚುನಾವಣೆ ಮುಗಿಯುತ್ತಿದ್ದಂತೆ ಜಾರಿಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಪ್ರೋತ್ಸಾಹಿಸಲು ಸರ್ಕಾರ ಈಗಾಗಲೇ “ಕರ್ನಾಟಕ ಸ್ಟೇಟ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಆಂಡ್‌ ಎನರ್ಜಿ ಸ್ಟೋರೇಜ್‌ ಪಾಲಿಸಿ’ ರೂಪಿಸಿದೆ. ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನಾ ಘಟಕಗಳ ಸ್ಥಾಪನೆಗೆ ರಿಯಾಯ್ತಿ, ವಾಹನಗಳ ಪ್ರದರ್ಶನ ವ್ಯವಸ್ಥೆ ಸೇರಿ ಹಲವು ಕ್ರಮ ಕೈಗೊಂಡಿದೆ.
ಈಗ ಇದಕ್ಕೆ ಪೂರಕವಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಅಗತ್ಯವಿರುವ ವಿದ್ಯುತ್‌ಗೆ ರಿಯಾಯ್ತಿ ನೀಡಲು ಉದ್ದೇಶಿಸಿದೆ. ಈ ಸಂಬಂಧ ಕೆಇಆರ್‌ಸಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಬೆಸ್ಕಾಂನ ಉಪ ಪ್ರಧಾನ ವ್ಯವಸ್ಥಾಪಕ (ಸ್ಮಾರ್ಟ್‌ಗ್ರಿಡ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳು) ಸಿ.ಕೆ. ಶ್ರೀನಾಥ್‌ ತಿಳಿಸಿದರು. 
ಬಿಎಂಟಿಸಿಯಿಂದಲೂ ಪ್ರಸ್ತಾವನೆ: ಈ ಮಧ್ಯೆ ಮೆಟ್ರೋ ರೈಲುಗಳಿಗೆ ನೀಡುವಂತೆ ಎಲೆಕ್ಟ್ರಿಕ್‌ ಬಸ್‌ಗಳಿಗೂ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸಬೇಕು ಎಂದು ಬಿಎಂಟಿಸಿ ಕೂಡ ಮನವಿ ಸಲ್ಲಿಸಿದೆ. ಈಗಾಗಲೇ 80 ವಿದ್ಯುತ್‌ ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ನಿರ್ಧರಿಸಿದೆ.
ಇದಕ್ಕೆ ಉತ್ತಮ ಸ್ಪಂದನೆ ದೊರೆತರೆ, ಮತ್ತೆ ಇದೇ ಮಾದರಿಯ 500 ಬಸ್‌ಗಳ ಗುತ್ತಿಗೆ ಪಡೆಯಲು ಉದ್ದೇಶಿಸಿದೆ. ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡ. ಹಾಗಾಗಿ, ರಿಯಾಯ್ತಿ ದರದಲ್ಲಿ ವಿದ್ಯುತ್‌ ಒದಗಿಸಬೇಕು ಎಂದು ಕೋರಿದೆ. ಇದಕ್ಕೆ ಬೆಸ್ಕಾಂ ಕೂಡ ಪೂರಕವಾಗಿ ಸ್ಪಂದಿಸಿದೆ ಎಂದು ಬಿಎಂಟಿಸಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಂಟಿಸಿಗೆ ಏನು ಲಾಭ?: ಪ್ರಸ್ತುತ ಡೀಸೆಲ್‌ ದರ ದಿನೇ ದಿನೆ ಏರುತ್ತಿರುವ ಕಾರಣ ನಿಗಮಕ್ಕೆ ಹೊರೆಯಾಗುತ್ತಿದೆ. ಪ್ರತಿ ದಿನ ಪ್ರಯಾಣ ದರ ಏರಿಸಲು ಸಾಧ್ಯವಿಲ್ಲ. ಕಡಿಮೆ ನಿರ್ವಹಣಾ ವೆಚ್ಚ ಬಯಸುವ ಎಲೆಕ್ಟ್ರಿಕ್‌ ಬಸ್‌ಗಳು ಒಂದು ಯೂನಿಟ್‌ಗೆ ಒಂದು ಕಿ.ಮೀ. ಸಂಚರಿಸುತ್ತವೆ. ಮಾಲಿನ್ಯ ಇರುವುದಿಲ್ಲ. ಈ ನಡುವೆ ದೇಶದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಕಲ್ಪಿಸಲು ಕಂಪನಿಯೊಂದು ಮುಂದೆಬಂದಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಲೆಕ್ಟ್ರಿಕ್‌ ಬಸ್‌ಗಳತ್ತ ಲವು ತೋರಿದೆ.
ದೆಹಲಿ ಮಾದರಿ?: ದೆಹಲಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ರಿಯಾಯ್ತಿ ದರದಲ್ಲಿ ವಿದ್ಯುತ್‌ ನೀಡಲಾಗುತ್ತಿದೆ. ಇದೇ ಮಾದರಿಯನ್ನು ನಗರದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ದೆಹಲಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರತಿ ಯೂನಿಟ್‌ಗೆ 5 ರೂ. ನಿದಗಿಪಡಿಸಲಾಗಿದೆ. ವಾಣಿಜ್ಯ ಉದ್ದೇಶಗಳಿಗೆ 7.50ರಿಂದ 8 ರೂ. ಇದೆ. ಬೆಂಗಳೂರಿನಲ್ಲಿ ವಾಣಿಜ್ಯ ಉದ್ದೇಶಕ್ಕೆ 50 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 7.5 ರೂ. ಹಾಗೂ ನಂತರದಲ್ಲಿ 8.5 ರೂ. ನಿಗದಿಪಡಿಸಲಾಗಿದೆ.
ಪ್ರಸ್ತಾವನೆಯಲ್ಲಿನ ದರದ ವಿವರ (ಪ್ರತಿ ಯೂನಿಟ್‌ಗೆ)
-ಚಾಜಿಂಗ್‌ ವಿಧ    ಬೆಳಗ್ಗೆ 6ರಿಂದ ರಾತ್ರಿ 10ರವರೆಗಿನ ದರ    ರಾತ್ರಿ 10ರಿಂದ ಬೆಳಗ್ಗೆ 6ರವರೆಗಿನ ದರ
-ಎಸಿ ಚಾರ್ಜಿಂಗ್‌ (ಪರ್ಯಾಯ ವಿದ್ಯುತ್‌)    4.85 ರೂ.    3.85 ರೂ.
-ಡಿಸಿ ಚಾರ್ಜಿಂಗ್‌ (ನೇರ ವಿದ್ಯುತ್‌)    5 ರೂ.    4.40 ರೂ.
-ನಾಲ್ಕು ಚಕ್ರದ ವಾಹನಗಳು    5.50 ರೂ.    3.85 ರೂ.

Related Articles

Leave a comment

Back to Top

© 2015 - 2017. All Rights Reserved.