ಏಕಕಾಲ ಚುನಾವಣೆ: ಕಾನೂನು ಆಯೋಗದ ಶಿಫಾರಸು

BREAKING NEWS, National, News, Top News No Comments on ಏಕಕಾಲ ಚುನಾವಣೆ: ಕಾನೂನು ಆಯೋಗದ ಶಿಫಾರಸು 17
ಹೊಸದಿಲ್ಲಿ: “ಒಂದು ದೇಶ, ಒಂದು ಚುನಾವಣೆ’ ವಾದದ ಸದ್ದು ಮತ್ತೆ ಎದ್ದಿದ್ದು, ಕಾನೂನು ಆಯೋಗ ಆಂತರಿಕ ಕರಡು ರೂಪಿಸಿ ಎರಡು ಹಂತಗಳಲ್ಲಿ ದೇಶಾದ್ಯಂತ ಚುನಾವಣೆ ನಡೆಸುವ ಬಗ್ಗೆ ರೂಪುರೇಷೆ ಹಾಕಿಕೊಟ್ಟಿದೆ. ಒಂದು ವೇಳೆ ಇದಕ್ಕೆ ಮಾನ್ಯತೆ ಸಿಕ್ಕಿದಲ್ಲಿ “ಕರ್ನಾಟಕಕ್ಕೆ ಒಂದು ವರ್ಷದ ಅಧಿಕಾರ ಬೋನಸ್‌’ ಸಿಗಬಹುದು.
ಕಾನೂನು ಆಯೋಗದ ಆಂತರಿಕ ಕರಡಿನ ಶಿಫಾರಸಿನಂತೆ ಲೋಕಸಭೆ ಚುನಾವಣೆ ಜತೆಗೆ 2019ಕ್ಕೆ 19 ರಾಜ್ಯಗಳಲ್ಲಿ ಚುನಾವಣೆ ನಡೆಸಬಹುದಾದರೆ, 2024ಕ್ಕೆ ಉಳಿದ 12 ರಾಜ್ಯ ಗಳ ವಿಧಾನಸಭೆ ಚುನಾವಣೆ ನಡೆಸಬಹುದು. ಈ ಕರಡು ಪ್ರಸ್ತಾವದ ಬಗ್ಗೆ ಎ. 17ರಂದು ಜರಗಲಿರುವ ಸಭೆಯಲ್ಲಿ ಪರಿಶೀಲನೆ ನಡೆಯಲಿದೆ.
ಮೊದಲ ಹಂತದಲ್ಲಿ 2019ರ ಮಾರ್ಚ್‌- ಎಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಲ, ತಮಿಳು ನಾಡು, ಕೇರಳ, ಅಸ್ಸಾಂ, ಜಮ್ಮು -ಕಾಶ್ಮೀರ ಸೇರಿವೆ. ಈ ರಾಜ್ಯಗಳ ಹಾಲಿ ವಿಧಾನಸಭೆಯ ಅವಧಿ 2021ರಲ್ಲಿ ಮುಕ್ತಾಯಗೊಳ್ಳಲಿದೆ.
ಎರಡನೇ ಹಂತದಲ್ಲಿ ಕರ್ನಾಟಕ, ತ್ರಿಪುರ ಸಹಿತ ಒಟ್ಟು 12 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶ ಕೂಡ ಇದೆ. ಏಕೆಂದರೆ ಆ ರಾಜ್ಯದಿಂದ 80 ಮಂದಿ ಸಂಸದರು ಲೋಕಸಭೆಗೆ ಆಯ್ಕೆ ಯಾಗುತ್ತಾರೆ. 2024ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆೆ. ಈ ಹಂತದಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕ ಮತ್ತು ಈಗಾಗಲೇ ವಿಧಾನಸಭೆ ಚುನಾವಣೆ ಪೂರ್ತಿಯಾಗಿರುವ ಮಿಜೋರಾಂ ಕೂಡ ಚುನಾವಣೆ ಎದುರಿಸಬೇಕಾಗುತ್ತದೆ.
ಕಾನೂನಿನ ಅನ್ವಯ ಹೇಗೆ ? 
ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕ ಸಭೆ ಚುನಾವಣೆ ನಡೆಸಲು ಸಂವಿಧಾನ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಅಗತ್ಯ. ನಿಗದಿತ ಅವಧಿಯ  ವಿಸ್ತರಣೆಗೆ ಕಾನೂನಿನ ತಿದ್ದುಪಡಿಬೇಕಾಗುತ್ತದೆ. ಅದಕ್ಕಾಗಿ 1951ರ ಜನಪ್ರಾತಿನಿಧ್ಯ ಕಾಯ್ದೆ ಮತ್ತು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸದ್ಯ ಅವಧಿ ಪೂರ್ಣಗೊಂಡ ಸರಕಾರವನ್ನು ಮುಂದುವರಿಸಲು ಅವಕಾಶ ಇಲ್ಲ. ನಿಗದಿತ ರಾಜ್ಯ ಸರಕಾರ ವಿಧಾನಸಭೆಯನ್ನು ವಿಸರ್ಜಿ ಸದ ಹೊರತಾಗಿ, ಒಂದು ವರ್ಷದ ಮೊದಲೇ ಚುನಾವಣೆ ನಡೆಸುವಂತೆ ಉಲ್ಲೇಖವಿಲ್ಲ.
30 ತಿಂಗಳ ಬಳಿಕ 
ಕಾನೂನು ಆಯೋಗದ ಕರಡು ಸಲಹೆ ಪ್ರಕಾರ ರಾಜ್ಯ ವಿಧಾನಸಭೆಗಳ ಅವಧಿ ವಿಸ್ತರಿಸಲು ಸಾಧ್ಯವಾಗದೇ ಇದ್ದರೆ ಎರಡನೇ ಹಂತದಲ್ಲಿನ ವಿಧಾನಸಭೆಗಳ ಚುನಾವಣೆ, ಮೊದಲ ಹಂತದಲ್ಲಿ ಲೋಕಸಭೆ ಮತ್ತು ಲೋಕಸಭೆ ಚುನಾವಣೆ ನಡೆದು 30 ತಿಂಗಳ ಬಳಿಕ ಉಳಿದ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲೂ ಅವಕಾಶ ಇದೆ.
ವಿಪಕ್ಷಗಳ “ವಿಶ್ವಾಸ’ ಮುಖ್ಯ: ಕರಡು ಶಿಫಾರಸಿನಲ್ಲಿ ಪ್ರಮುಖವಾಗಿ ಒಂದು ಅಂಶವನ್ನೂ ಸೇರಿಸಲಾಗಿದೆ. ಈ ತಿದ್ದುಪಡಿಯಾದ ಮೇಲೆ ಸರಕಾರಗಳನ್ನು ಉರುಳಿಸುವ ವಿಪಕ್ಷಗಳ ಕೆಲಸ ಕಷ್ಟವಾಗಲಿದೆ. ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನ, ವಿಪಕ್ಷಗಳು ಸರಕಾರ ರಚಿಸಲು ತಮ್ಮ ಬಳಿ ಸಾಕಷ್ಟು ಸದಸ್ಯರ ಬೆಂಬಲವಿದೆ ಎಂಬ “ವಿಶ್ವಾಸ’ವನ್ನು ಸಾಬೀತು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಆಡಳಿತ ನಡೆಸುತ್ತಿರುವ ಸರಕಾರವನ್ನು ಅಲುಗಾಡಿಸುವುದು ಅಸಾಧ್ಯವಾಗಲಿದೆ.
ಚುನಾವಣಾ ಆಯೋಗದ ನಿಲುವೇನು?: ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸುವ ಬಗ್ಗೆ ಇತ್ತೀಚೆಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದ ಮುಖ್ಯ ಚುನಾವಣಾ ಆಯುಕ್ತ ಓಮ್‌ ಪ್ರಕಾಶ್‌ ರಾವತ್‌, ಕಾನೂನಿನ ಚೌಕಟ್ಟಿನ ಮೂಲಕ ಸಿದ್ಧವಾದರೆ ಆಯೋಗ ಅದನ್ನು ಅನುಸರಿಸಲಿದೆ. ಕಾನೂನಿನ ಪ್ರಕಾರ ಪ್ರಕ್ರಿಯೆ ಪೂರ್ಣವಾಗದ ಹೊರತಾಗಿ ಏನನ್ನೂ ಮಾಡುವಂತಿಲ್ಲ. ಅದಕ್ಕೆ ಸಂವಿಧಾನದ ತಿದ್ದುಪಡಿಯೂ ಅಗತ್ಯವಿದೆ ಎಂದು ಹೇಳಿದ್ದರು.
ಕರಡು ಶಿಫಾರಸುಗಳು
ಕರ್ನಾಟಕ ವಿಧಾನಸಭೆಗೆ ಮೇ 12ರಂದು ಚುನಾವಣೆ ನಡೆಯಲಿದೆ. ತ್ರಿಪುರದಲ್ಲಿ ಈಗಾಗಲೇ ಚುನಾವಣೆ ಮುಕ್ತಾಯವಾಗಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದೆ. ಅಲ್ಲಿ 2023ರಲ್ಲಿ ಮುಂದಿನ ಚುನಾವಣೆ ಇದೆ. 2024ರಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯ ಬೇಕಾದರೆ ಆಯಾ ವಿಧಾನಸಭೆಗಳ ಅವಧಿ ವಿಸ್ತರಿಸಬೇಕು.
ಅದಕ್ಕಾಗಿ 1951ರ ಜನ ಪ್ರಾತಿನಿಧ್ಯ ಕಾಯ್ದೆಗೆ ಮತ್ತು ಸಂವಿಧಾನಕ್ಕೆ ತಿದ್ದುಪಡಿ ತರಬೇಕು.
ಒಂದು ವೇಳೆ ಯಾವುದೇ ಕಾರಣ ದಿಂದಲಾದರೂ ವಿಧಾನಸಭೆಗಳ ಅವಧಿ ವಿಸ್ತರಿಸಲು ಸಾಧ್ಯವಾಗದೆ ಇದ್ದರೆ 2019ರಲ್ಲಿ ಏಕಕಾಲಕ್ಕೆ ವಿಧಾನ ಸಭೆ, ಲೋಕಸಭೆ ಚುನಾವಣೆ ಮುಕ್ತಾಯವಾದ 30 ತಿಂಗಳ ಅನಂತರ ಉಳಿದ ರಾಜ್ಯಗಳಿಗೆ ಚುನಾವಣೆ ನಡೆಸಬಹುದು.
19: ಮೊದಲ ಹಂತ ಚುನಾವಣೆ ಎದುರಿಸುವ ರಾಜ್ಯಗಳು
12: ಎರಡನೇ ಹಂತ ಚುನಾವಣೆ ಎದುರಿಸುವ ರಾಜ್ಯಗಳು
2019 
ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಹರಿಯಾಣ, ಕೇರಳ, ಮಧ್ಯ
ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಲ, ದಿಲ್ಲಿ, ಪುದು ಚೇರಿ, ಜಮ್ಮು ಮತ್ತು ಕಾಶ್ಮೀರ, ಝಾರ್ಖಂಡ್‌ ಮತ್ತು ಒಡಿಶಾ.
2024 
ಮಿಜೋರಾಂ, ನಾಗಾಲ್ಯಾಂಡ್‌, ಮಣಿಪುರ, ಮೇಘಾಲಯ, ಕರ್ನಾ ಟಕ, ಗೋವಾ, ಗುಜರಾತ್‌, ಹಿಮಾ ಚಲ ಪ್ರದೇಶ, ಪಂಜಾಬ್‌, ತ್ರಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ
ಇದೊಂದು ಕರಡು ಪ್ರಸ್ತಾವ ಮಾತ್ರ. ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. 17ರ ಸಭೆಯಲ್ಲಿ ಸದಸ್ಯರು ಬದಲಾವಣೆ ಸೂಚಿಸಿದಲ್ಲಿ ಅದನ್ನು ಪರಿಗಣಿಸ ಲಾಗುತ್ತದೆ. ಕಾನೂನು ಸಚಿವಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ಮುನ್ನ ಅದನ್ನು ಸೇರ್ಪಡೆ ಮಾಡಲಾಗುತ್ತದೆ
-ಕಾನೂನು ಆಯೋಗದ ಸದಸ್ಯ

Related Articles

Leave a comment

Back to Top

© 2015 - 2017. All Rights Reserved.