ಐಪಿಎಲ್ ಹಬ್ಬ : ಮನೆಯಂಗಳದಲ್ಲಿ ಗೆಲ್ಲುವ ತವಕದಲ್ಲಿ ಕೊಹ್ಲಿ ಬಾಯ್ಸ್

News, Sports, Top News No Comments on ಐಪಿಎಲ್ ಹಬ್ಬ : ಮನೆಯಂಗಳದಲ್ಲಿ ಗೆಲ್ಲುವ ತವಕದಲ್ಲಿ ಕೊಹ್ಲಿ ಬಾಯ್ಸ್ 8

ಬೆಂಗಳೂರು : ಹನ್ನೊಂದನೇ ಐಪಿಎಲ್‌ನಲ್ಲಿ ಈಗಾಗಲೆ ಸೋಲು-ಗೆಲುವಿನ ರುಚಿ ಕಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸಲಿದ್ದು, ಮನೆಯಂಗಣ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸತತ 2ನೇ ಗೆಲುವನ್ನು ಎದುರು ನೋಡುತ್ತಿದೆ.

ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಏಳು ಬೀಳನ್ನು ನೋಡಿರುವ ಚಾಲೆಂಜರ್ಸ್‌, 11ನೇ ಆವೃತ್ತಿಯಲ್ಲಿ ಕಪ್‌ ಗೆಲ್ಲಲೇ ಬೇಕೆಂಬ ಹಠದಲ್ಲಿದೆ. ಅಂತೆಯೇ ಅಟಗಾರರ ಹರಾಜಿನಲ್ಲಿ ಬಲಿಷ್ಠರ ದಂಡನ್ನೇ ತನ್ನದಾಗಿಸಿಕೊಂಡಿದೆಯಾದರೂ, ಆಡುವ 11 ಮಂದಿ ಆಟಗಾರರ ಉತ್ತಮ ಸಂಯೋಜನೆ ಕಂಡುಕೊಳ್ಳಬೇಕಿದೆ.

ಮೊದಲ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ಅನುಭವಿಸಿದ ಸೋಲಿನಿಂದ ಸಾಕಷ್ಟು ಪಾಠ ಕಲಿತಿರುವ ಆರ್‌ಸಿಬಿ, ತವರು ನೆಲದಲ್ಲಿ ಅಪಾಯಕಾರಿ ಕಿಂಗ್ಸ್‌ ಇಲೆವೆನ್‌ ಎದುರು 4 ವಿಕೆಟ್‌ಗಳ ಜಯ ದಾಖಲಿಸಿ ಗೆಲುವಿನ ಹಾದಿ ಕಂಡುಕೊಂಡಿದೆ. ಇದೀಗ ಅದೇ ಆತ್ಮವಿಶ್ವಾಸದಲ್ಲಿ ರಾಯಲ್ಸ್‌ ಸವಾಲನ್ನು ಮೆಟ್ಟಿ ನಿಲ್ಲುವುದು ವಿರಾಟ್‌ ಕೊಹ್ಲಿ ಪಡೆಯ ಲೆಕ್ಕಾಚಾರ. ಜತೆಗೆ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ಚಿನ್ನಸ್ವಾಮಿಯ ಪಿಚ್‌ನಲ್ಲಿ ರನ್‌ ಚೇಸಿಂಗ್‌ ಕಡೆಗೆ ಆರ್‌ಸಿಬಿ ಹೆಚ್ಚಿನ ಒಲವು ಹೊಂದಿದ್ದು, ಟಾಸ್‌ ಗೆದ್ದರೆ ಮರಳಿ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಳ್ಳಲಿದೆ.

ಬ್ರೆಂಡನ್‌ ಮೆಕಲ್ಲಮ್‌, ಕ್ವಿಂಟನ್‌ ಡಿ’ಕಾಕ್‌, ಎಬಿ ಡಿ’ವಿಲಿಯರ್ಸ್‌ ಮತ್ತು ಕ್ರಿಸ್‌ ವೋಕ್ಸ್‌ ಸದ್ಯ ತಂಡದ ಆಡುವ 11ರಲ್ಲಿ ಕಾಣಿಸಿಕೊಂಡಿರುವ ವಿದೇಶಿ ಆಟಗಾರರು. ಈ ನಾಲ್ಕು ವಿದೇಶಿಗರ ಸಂಯೋಜನೆ ಉತ್ತಮವಾಗಿದ್ದು, ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮೆಕಲ್ಲಮ್‌ ಮತ್ತು ಡಿ’ಕಾಕ್‌ ಲಯ ಕಂಡುಕೊಂಡಲ್ಲಿ ತಂಡಕ್ಕೆ ಸ್ಫೋಟಕ ಆರಂಭ ಲಭ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಆರಂಭಿಕರ ಮೇಲೆ ತಂಡಕ್ಕೆ ಸಾಕಷ್ಟು ನಿರೀಕ್ಷೆ ಇದೆ.

ಸರ್ಫರಾಜ್‌ ಬದಲಿಗೆ ವೋರಾ?

ಆರ್‌ಸಿಬಿ ತಂಡ ಉಳಿಸಿಕೊಂಡ ಆಟಗಾರರಲ್ಲಿ ಯುವ ಆಟಗಾರ ಸರ್ಫರಾಜ್‌ ಖಾನ್‌ ಕೂಡ ಒಬ್ಬರು. ಆದರೆ ದೊಡ್ಡ ಹೊಡೆತಗಳನ್ನು ಆಡುವ ಸಾಮರ್ಥ್ಯ‌ ಹೊಂದಿರುವ ಸರ್ಫರಾಜ್‌, ಮೊದಲ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಕೋಲ್ಕೊತಾ ವಿರುದ್ಧ 6 ರನ್‌ ಗಳಿಸಿದರೆ, ಪಂಜಾಬ್‌ ವಿರುದ್ಧ ಶೂನ್ಯಕ್ಕೆ ಔಟಾದರು. ಹೀಗಾಗಿ ಅವರ ಸ್ಥಾನದಲ್ಲಿ ಪಂಜಾಬ್‌ನ ಪ್ರತಿಭೆ ಮನನ್‌ ವೋರಾ ಅವರನ್ನು ಕಣಕ್ಕಿಳಿಸಿದರೆ, ಚಾಲೆಂಜರ್ಸ್‌ಗೆ ಹೊರೆಯಾಗುತ್ತಿರುವ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೊಂಚ ಸುಧಾರಣೆ ಕಾಣಲಿದೆ. ಮನನ್‌, ಈ ಹಿಂದಿನ ಆವೃತ್ತಿಗಳಲ್ಲಿ ಪಂಜಾಬ್‌ ಪರ ಭರ್ಜರಿ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು.

ಪಂದ್ಯ ಆರಂಭ: ಸಂಜೆ 4:00ಕ್ಕೆ

ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1,3 ಮತ್ತು ಹಾಟ್‌ಸ್ಟಾರ್‌

ಮುಖಾಮುಖಿ: 16, ಆರ್‌ಸಿಬಿ ಗೆಲುವು: 08, ರಾಯಲ್ಸ್‌ ಗೆಲುವು: 07, ಫಲಿತಾಂಶ ಇಲ್ಲ: 01

ಗೆಲುವಿನ ಸರಾಸರಿ: ಆರ್‌ಸಿಬಿ: 53.33%, ರಾಯಲ್ಸ್‌: 46.67%

ಸ್ಟಾರ್‌ ಆಟಗಾರರು: ರಾಯಲ್‌ ಚಾಲೆಂಜರ್ಸ್‌, ವಿರಾಟ್‌ ಕೊಹ್ಲಿ, ಎಬಿ ಡಿ’ವಿಲಿಯರ್ಸ್‌, ವಾಷಿಂಗ್ಟನ್‌ ಸುಂದರ್‌

ರಾಜಸ್ಥಾನ್‌ ರಾಯಲ್ಸ್‌: ಅಜಿಂಕ್ಯ ರಹಾನೆ, ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌

Related Articles

Leave a comment

Back to Top

© 2015 - 2017. All Rights Reserved.