ನೇರಳೆ ಮಾರ್ಗಕ್ಕೆ ಬಂದ ನಮ್ಮ ಮೆಟ್ರೋದ ಹಸಿರು ಮಾರ್ಗ

News, Regional, Top News No Comments on ನೇರಳೆ ಮಾರ್ಗಕ್ಕೆ ಬಂದ ನಮ್ಮ ಮೆಟ್ರೋದ ಹಸಿರು ಮಾರ್ಗ 10

ಬೆಂಗಳೂರು: ಮೆಟ್ರೊದಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ನೇರಳೆ ಮಾರ್ಗದಲ್ಲಿ ಹಸಿರು ರೈಲುಗಳ ಆಗಮನವಾಗಿದೆ!
ಬೆಳಗ್ಗೆ 8.30 ರಿಂದ 10.30 ಹಾಗೂ ಸಂಜೆ 4 ರಿಂದ 8 ಗಂಟೆಯ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಬೆಳಗ್ಗೆ ಪೀಕ್‌ ಅವಧಿಯಲ್ಲಿ ಕಚೇರಿಗೆ ತೆರಳುವವರ ಸಂಖ್ಯೆ ಹೆಚ್ಚಿರುವುದರಿಂದ ರೈಲುಗಳು ಜನರಿಂದ ತುಂಬಿಹೋಗುತ್ತಿವೆ. ಲಭ್ಯವಿರುವ 50 ರೈಲುಗಳಲ್ಲಿ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ (ನೇರಳೆ) ಮಾರ್ಗದಲ್ಲಿ 18 ಹಾಗೂ ನಾಗಸಂದ್ರ-ಯಲಚೇನಹಳ್ಳಿ (ಹಸಿರು) ಮಾರ್ಗದಲ್ಲಿ 11 ರೈಲುಗಳನ್ನು ಕಾರ್ಯಾಚರಿಸಲಾಗುತ್ತಿದೆ. ಪೀಕ್‌ ಅವಧಿಯಲ್ಲಿ ಇದಕ್ಕಿಂತ ಹೆಚ್ಚು ರೈಲುಗಳನ್ನು ಕಾರ್ಯಾಚರಣೆಗಿಳಿಸಲಾಗುತ್ತದೆ. ಆದರೂ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಹೆಚ್ಚು ಪ್ರಯಾಣಿಕರಿರುವುದರಿಂದ ಹಸಿರು ಮಾರ್ಗದಲ್ಲಿ ಚಲಿಸುವ ರೈಲುಗಳನ್ನು ನೇರಳೆ ಮಾರ್ಗದಲ್ಲಿ ಕಾರ್ಯಾಚರಿಸಲಾಗುತ್ತಿದೆ. ಪ್ರತಿ ದಿನ ಎರಡರಿಂದ ಮೂರು ರೈಲುಗಳನ್ನು ನೇರಳೆ ಮಾರ್ಗದಲ್ಲಿ ಚಲಾಯಿಸಲಾಗುತ್ತಿದೆ. ಇದರಿಂದ ದಟ್ಟಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ.

50 ರೈಲುಗಳ ಪೈಕಿ ಒಂದು ರೈಲನ್ನು ಹೊಸ ಮೂರು ಬೋಗಿಗೆ ಜೋಡಿಸಿ ಆರು ಬೋಗಿಗಳ ರೈಲಾಗಿ ಪರಿವರ್ತಿಸಲಾಗಿದೆ. ಈ ರೈಲು ಬೈಯ್ಯಪ್ಪನಹಳ್ಳಿ ಡಿಪೋದಲ್ಲಿ ಪರೀಕ್ಷಾರ್ಥ ಸಂಚಾರದಲ್ಲಿದೆ. ಹೀಗಾಗಿ ಪ್ರತಿ ದಿನ ಕಾರ್ಯಾಚರಿಸುವ ರೈಲುಗಳಲ್ಲಿ ಒಂದು ರೈಲಿನ ಕೊರತೆಯಾಗಿದೆ. ಒಂದು ಬೋಗಿಯಲ್ಲಿ 975 ಮಂದಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು ಎಂಬ ನಿಯಮವೇ ಇದೆ. ಆದರೆ ಪೀಕ್‌ ಅವಧಿಯಲ್ಲಿ ಒಂದು ಬೋಗಿಯಲ್ಲಿ ಸರಾಸರಿ ಒಂದು ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ದಟ್ಟಣೆಯಿಂದಾಗಿ ಅನೇಕರು ಪ್ಲಾಟ್‌ಫಾರಂಗೆ ಬಂದರೂ ರೈಲು ಹತ್ತಲಾರದೆ ಮತ್ತೊಂದು ರೈಲಿಗಾಗಿ ಕಾಯಬೇಕಾಗಿದೆ. ಆರು ಬೋಗಿಯ ರೈಲು ಬಂದ ಬಳಿಕ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ. ಅಲ್ಲಿಯವರೆಗೆ ಎರಡು ಮಾರ್ಗಗಳ ದಟ್ಟಣೆ ನೋಡಿಕೊಂಡು ರೈಲುಗಳನ್ನು ಬಳಸಲಾಗುತ್ತಿದೆ. ನೇರಳೆ ಮಾರ್ಗವು ಪ್ರಮುಖ ಕೈಗಾರಿಕಾ ಪ್ರದೇಶವಾದ ವೈಟ್‌ಫೀಲ್ಡ್‌ ಕಡೆ ಹೋಗುವುದರಿಂದ ಇಲ್ಲಿ ಪ್ರಯಾಣಿಕರು ಹೆಚ್ಚಿದ್ದಾರೆ. ಪ್ರತಿ ದಿನ ಸರಾಸರಿ 3 ಲಕ್ಷದಿಂದ 3.50 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ.

ಹಸಿರು ಮಾರ್ಗಕ್ಕಾಗಿ ಬದಲಾಯಿಸಿ!
ರೈಲುಗಳು ಮೆಜೆಸ್ಟಿಕ್‌ ಟರ್ಮಿನಲ್‌ ನಿಲ್ದಾಣಕ್ಕೆ ಬಂದಾಗ ‘ಹಸಿರು ಮಾರ್ಗಕ್ಕಾಗಿ ಇಲ್ಲಿ ಬದಲಾಯಿಸಿ’ ಅಥವಾ ‘ನೇರಳೆ ಮಾರ್ಗಕ್ಕಾಗಿ ಇಲ್ಲಿ ಬದಲಾಯಿಸಿ’ ಎಂಬ ಧ್ವನಿಮುದ್ರಣದ ಘೋಷಣೆ ಕೇಳಿ ಬರುತ್ತದೆ.
ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಚಲಿಸುವ ಹಸಿರು ಬಣ್ಣದ ರೈಲು ಮೆಜೆಸ್ಟಿಕ್‌ ಟರ್ಮಿನಲ್‌ ನಿಲ್ದಾಣಕ್ಕೆ ಬಂದಾಗ, ‘ಹಸಿರು ಮಾರ್ಗಕ್ಕಾಗಿ ಇಲ್ಲಿ ಬದಲಾಯಿಸಿ’ ಎಂಬ ಘೋಷಣೆ ಕೆಲ ಪ್ರಯಾಣಿಕರಿಗೆ ಗೊಂದಲ ಉಂಟು ಮಾಡಲಿದೆ.

Related Articles

Leave a comment

Back to Top

© 2015 - 2017. All Rights Reserved.