ಕಾಮನ್ ವೆಲ್ತ್ ರಾಷ್ಟ್ರಗಳ ಶೃಂಗಸಭೆಗೆ ತೆರೆಸಾ ಮೇ ಚಾಲನೆ

International, News, Top News No Comments on ಕಾಮನ್ ವೆಲ್ತ್ ರಾಷ್ಟ್ರಗಳ ಶೃಂಗಸಭೆಗೆ ತೆರೆಸಾ ಮೇ ಚಾಲನೆ 39
ಲಂಡನ್‌: ಕಾಮನ್‌ವೆಲ್ತ್‌ ವ್ಯಾಪಾರ ವೇದಿಕೆಯನ್ನು (ಸಿಬಿಎಫ್‌) ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಸೋಮವಾರ ಉದ್ಘಾಟಿಸಿದರು. ಇದರೊಂದಿಗೆ ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆಗೂ (ಸಿಎಚ್‌ಒಜಿಎಂ)ಚಾಲನೆ ದೊರಕಿದೆ.
ಲಂಡನ್‌ನಲ್ಲಿ ಬ್ರಿಟನ್‌ ಆಯೋಜಿಸುತ್ತಿರುವ ಶೃಂಗಸಭೆಯಲ್ಲಿ ಭಾರತ ಸೇರಿದಂತೆ 52 ಸದಸ್ಯ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ‘ಸಮಾನ ಭವಿಷ್ಯದೆಡೆಗೆ’ ಎಂಬುದು ಶೃಂಗಸಭೆಯ ಆಶಯ. ಭಾರತೀಯ ಉದ್ದಿಮೆ ಒಕ್ಕೂಟದ ಅಧ್ಯಕ್ಷ ರಾಕೇಶ್‌ ಭಾರ್ತಿ ಮಿತ್ತಲ್‌ ನೇತೃತ್ವದಲ್ಲಿ ಭಾರತದಿಂದ 40 ಸದಸ್ಯರ ನಿಯೋಗವು ಸಿಬಿಎಫ್‌ನಲ್ಲಿ ಭಾಗವಹಿಸುತ್ತಿದೆ.
ಮೋದಿ ಪ್ರವಾಸ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಡನ್‌, ಜರ್ಮನಿ ಮತ್ತು ಬ್ರಿಟನ್‌ಗೆ ಐದು ದಿನಗಳ ಪ್ರವಾಸಕ್ಕಾಗಿ ಸೋಮವಾರ ನವದೆಹಲಿಯಿಂದ ಹೊರಟರು.
ಮಂಗಳವಾರ ಅವರು ಸ್ಟಾಕ್‌ಹೋಂನಲ್ಲಿ ಸ್ವೀಡನ್‌ ಪ್ರಧಾನಿ ಸ್ಟೆಫನ್‌ ಲೊವೆನ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಸ್ವೀಡನ್‌ ಮತ್ತು ಭಾರತ ಜಂಟಿಯಾಗಿ ಆಯೋಜಿಸಿರುವ ಶೃಂಗಸಭೆಯಲ್ಲೂ ಪಾಲ್ಗೊಳ್ಳುವರು. ನಾರ್ವೆ, ಡೆನ್ಮಾರ್ಕ್‌, ಫಿನ್‌ಲೆಂಡ್‌, ಐಸ್‌ಲೆಂಡ್‌ ರಾಷ್ಟ್ರಗಳ ಪ್ರಧಾನಿಗಳೂ ಇದರಲ್ಲಿ ಭಾಗವಹಿಸುವರು.
ಸ್ವೀಡನ್‌ನಿಂದ ಲಂಡನ್‌ಗೆ ತೆರಳುವ ಮೋದಿ ಅವರು ಕಾಮನ್‌ವೆಲ್ತ್‌ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಅವರನ್ನು ಬರ್ಲಿನ್‌ನಲ್ಲಿ ಈ ತಿಂಗಳ 20ರಂದು ಭೇಟಿ ಮಾಡಿ ಮಾತುಕತೆ ನಡೆಸುವರು.

Related Articles

Leave a comment

Back to Top

© 2015 - 2017. All Rights Reserved.