ಜೆಡಿಎಸ್ – ಬಿಜೆಪಿ ಒಪ್ಪಂದ; ಕೊನೆ ಕ್ಷಣದಲ್ಲಿ ಬದಲಾದ ಬಿಜೆಪಿ ಟಿಕೆಟ್ಗಳು?

BREAKING NEWS, News, Regional, Top News No Comments on ಜೆಡಿಎಸ್ – ಬಿಜೆಪಿ ಒಪ್ಪಂದ; ಕೊನೆ ಕ್ಷಣದಲ್ಲಿ ಬದಲಾದ ಬಿಜೆಪಿ ಟಿಕೆಟ್ಗಳು? 243

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈಗಾಗಲೇ ಸಾಕಷ್ಟು ಚುನಾವಣಾ ಪೂರ್ವ ಸಮೀಕ್ಷೆಳು ನಡೆದಿದ್ದರೂ, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸುವ ಸಾಧ್ಯತೆಗಳು ಕಂಡುಬಂದಿಲ್ಲ. 

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಾಗಿ‌ ಹೇಳಿದರೂ ಆ ಭರವಸೆ ಯಾವ ಪಕ್ಷಕ್ಕೂ ಇಲ್ಲ.

ಯಾವ ಕಾರಣಕ್ಕೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂದು ಯೋಚಿಸಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಒಳ ಒಪ್ಪಂದ ಮಾಡಿಕೊಂಡಿವೆ ಎನ್ನುತ್ತವೆ ನಂಬಲರ್ಹ ಮೂಲಗಳು. ಇದರಂತೆ ಉತ್ತರ ಕರ್ನಾಟಕ ಭಾಗದಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಹಾಕಿ ಜೆಡಿಎಸ್ ಬಿಜೆಪಿಗೆ ಸಹಕರಿಸುವುದು ಹಾಗೂ ಮೈಸೂರು ಭಾಗದಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಹಾಕಿ ಪರಸ್ಪರರ ಗೆಲುವಿಗೆ ಸಹಕರಿಸಲು ನಿರ್ಧರಿಸಿವೆ ಎನ್ನಲಾಗಿದೆ.

ಇದರಂತೆ ಮಂಡ್ಯ, ಚಾಮುಂಡೇಶ್ವರಿ, ಹುಣಸೂರು, ಚಾಮರಾಜ, ಕೆ ಆರ್ ನಗರ, ಹೊಳೆನರಸೀಪುರ ಸೇರಿದಂತೆ ಹಳೆ ಮೈಸೂರು ಪ್ರಾಂತ್ಯದಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಹಾಕುವ ಮೂಲಕ ಬಿಜೆಪಿ ಜೆಡಿಎಸ್ ಗೆ ಸಹಕರಿಸುತ್ತಿದೆ. ಈ ಕಾರಣಕ್ಕಾಗೇ ಬಿಜೆಪಿ ಟಿಕೆಟ್ ಗಳು ಕೊನೆ ಕ್ಷಣದಲ್ಲಿ ಬದಲಾಗಿವೆ ಎನ್ನಲಾಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ನಗರಾಧ್ಯಕ್ಷರಾದ ಡಾ| ಮಂಜುನಾಥ್ ಬಿ ಹೆಚ್ ಅಭ್ಯರ್ಥಿ ಎಂದು ಕೊನೆ ಕ್ಷಣದ ತನಕವೂ ಹೇಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ, ಪ್ರೊ. ಕೆ ಎಸ್ ರಂಗಪ್ಪಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾಗೇಂದ್ರಗೆ ಟಿಕೆಟ್ ನೀಡಲಾಗಿದೆ. ಇದರಿಂದ ಸಾಕಷ್ಟು ವಿದ್ಯಾವಂತ ನವ ಮತದಾರರ ಮತಗಳು ರಂಗಪ್ಪಗೆ ಲಭಿಸಲಿವೆ ಎನ್ನಲಾಗುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ ಟಿ ದೇವೇಗೌಡ ಗೆಲ್ಲಬೇಕು‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಬೇಕೆಂದು ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಗೌಡ ಬದಲಿಗೆ ಗೋಪಾಲ್ ರಾವ್ ಅವರನ್ನು ಅಚ್ಚರಿಯ ಅಭ್ಯರ್ಥಿಯಾಗಿ ಘೋಷಿಸಿದೆ. ಇನ್ನು ಕೆ ಆರ್ ನಗರದಲ್ಲಿ ಹೊಸಳ್ಳಿ ವೆಂಕಟೇಶ್ ಬದಲು ಅಚ್ಚರಿಯ ರೂಪದಲ್ಲಿ ಶ್ವೇತಾ ಗೋಪಾಲ್ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಇನ್ನು ಮಾಜಿ ಸಂಸದ ಹೆಚ್ ವಿಶ್ವನಾಥ್ ಗೆಲುವಿಗೆ ಸಹಕರಿಸುವ ಸಲುವಾಗಿ ಬಿಜೆಪಿ ಪ್ರಬಲ ಅಭ್ಯರ್ಥಿ ವಸಂತ್ ಕುಮಾರ್ ಗೌಡ ಅವರ ಬದಲಿಗೆ ರಮೇಶ್ ಕುಮಾರ್ ಅವರಿಗೆ ಟಿಕೆಟ್ ಘೋಷಿಸಿದೆ.

ಈಗಾಗಲೇ ಪಕ್ಷದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿಯ ಹಲವು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷ ತಾನು ಗೆಲ್ಲಬಹುದಾಗಿದ್ದ ಸ್ಥಾನಗಳನ್ನು ಕಳೆದುಕೊಳ್ಳುವಂತೆ ಅಂತಿಮ‌ ಹಂತದಲ್ಲಿ ಅಭ್ಯರ್ಥಿಗಳನ್ನು ಬದಲಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಸಮಾಧಾನದ ಹೊರತಾಗಿಯೂ ಅಂತಿಮ ಹಂತದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬದಲಿಸಿದೆ ಎನ್ನಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.