ಯಾರಿಸ್ ಎಂಬ ಮಧ್ಯಮ ವರ್ಗದ ಕಾರು ಎಲ್ಲರಿಗೂ ಪ್ರಿಯ

Technology No Comments on ಯಾರಿಸ್ ಎಂಬ ಮಧ್ಯಮ ವರ್ಗದ ಕಾರು ಎಲ್ಲರಿಗೂ ಪ್ರಿಯ 24

ಕಾರುಗಳಿಗೂ ಗ್ರೀಕ್ ದೇವತೆಗೂ ಏನು ಸಂಬಂಧವೋ ಗೊತ್ತಿಲ್ಲ, ಟೊಯೋಟಾ ತನ್ನ ಹೊಸ ಕಾರಿಗೆ ಯಾರಿಸ್ ಅಂತ ಹೆಸರಿಟ್ಟಿದೆ. ಯಾರಿಸ್ ಅಂದರೇನು ಅಂತ ಹುಡುಕಾಡಿದರೆ ಅದು ಸೌಂದರ್ಯ, ವಯ್ಯಾರಗಳ ಗ್ರೀಕ್ ದೇವತೆ ಹೆಸರೆಂಬುದು ಗೊತ್ತಾಯಿತು. ನಮ್ಮ ರಂಭೆ, ಊರ್ವಶಿಯ ಹೆಸರನ್ನೇ ಇಡಬಹುದಾಗಿತ್ತಲ್ಲ ಅಂತ ಪರಂಪರಾವೀರರು ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳಬಹುದು.

ಯಾರಿಸ್ ಸೆಡಾನ್ ಬಳಗದ ಕಾರು. ಟೊಯೋಟಾ ಮೂರು ವರ್ಷಗಳಿಂದ ಈ ಕಾರಿನ ಬಗ್ಗೆ ಮಾತಾಡುತ್ತಲೇ ಬಂದಿತ್ತು. ದೆಹಲಿಯಲ್ಲಿ ನಾಲ್ಕಾರು ತಿಂಗಳುಗಳ ಹಿಂದೆ ಇದನ್ನು ಬಿಡುಗಡೆ ಮಾಡಿಯೂ ಆಗಿತ್ತು. ಆಗ ಅರೆಕ್ಷಣ ಮಿಂಚಿ ಮರೆಯಾದ ಈ ಕಾರಿನ ವಿಶೇಷಗಳೇನು ಅನ್ನುವುದು ಗೊತ್ತಾದದ್ದು ಮೊನ್ನೆ ಮೊನ್ನೆ ಇದರ ಟೆಸ್ಟ್ ಡ್ರೈವ್ ಮಾಡಿದಾಗಲೇ. ಯಾರಿಸ್ ೧೭ ಹೊಸ ಫೀಚರ್‌ಗಳನ್ನು ಮೊದಲ ಬಾರಿಗೆ ಈ ಸೆಗ್’ಮೆಂಟ್ ಕಾರುಗಳಲ್ಲಿ ಬಿಡುಗಡೆ ಮಾಡಿದೆ ಅನ್ನುವುದು ವಿಶೇಷ.

ಅದೇನೇನು ಅಂತ ನೋಡುತ್ತಾ ಹೋದಾಗ ಏಳು ಏರ್‌ಬ್ಯಾಗುಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಟೆಬಿಲಿಟಿ ಕಂಟ್ರೋಲ್, ಹಿಂದೆ ಮತ್ತು ಮುಂದೆ ಪಾರ್ಕಿಂಗ್ ಸೆನ್ಸರ್, ಫೋರ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹೈ ಸೋಲಾರ್ ಎನರ್ಜಿ ಅಬ್ ಸಾರ್ಬಿಂಗ್, ಇನ್‌ಫ್ರಾ ರೆಡ್ ಕಿರಣಗಳಿಗೆ ತಡೆಯೊಡ್ಡುವ ತಂತ್ರಜ್ಞಾನ, ವೈಬ್ರೇಷನ್‌ ಮುಕ್ತ ಗ್ಲಾಸ್‌ಗಳಿಂದಾಗಿ ನಿಶ್ಯಬ್ಧ ಕ್ಯಾಬಿನ್- ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಟೊಯೋಟಾ ಹೊಸ ಕಾರು ಬಿಟ್ಟಾಗೆಲ್ಲ ಅದನ್ನು ಕೊಳ್ಳುವುದಕ್ಕೆ ಅನೇಕರು ಭಯಗೊಳ್ಳುವುದಕ್ಕೆ ಮುಖ್ಯ ಕಾರಣ ಒಂದೇ. ಎಲ್ಲಿ ಆ ಕಾರು ಟ್ರಾವೆಲ್ಸ್‌ನವರ ಅಚ್ಚುಮೆಚ್ಚಿನ ಕಾರಾಗಿಬಿಡುತ್ತದೆಯೋ ಎಂಬ ಗಾಬರಿ. ಇಟಿಯೋಸ್ ಅಂತೂ ಈಗ ಕೇವಲ ಟ್ರಾವೆಲ್ಸ್ ಸಂಸ್ಥೆಯ ಪಾಲಾಗಿದೆ.

ಟೊಯೋಟಾದ ಕತೆಯೂ ಅದೇ. ಕ್ರಿಸ್ಟಾ ಕೂಡ ಅದೇ ದಾರಿ ಹಿಡಿದಂತಿದೆ. ಹೀಗೆ ರಸ್ತೆಯಲ್ಲಿ ಎಲ್ಲರೂ ಅದೇ ಮಾಡೆಲ್ ಕಾರು ಓಡಿಸುತ್ತಿದ್ದರೆ ನಮ್ಮ ಕಾರೇ ಬೇರೆ ಎಂಬ ವೈಶಿಷ್ಟ್ಯ ಹೇಗೆ ಉಳಿಯಲಿಕ್ಕೆ ಸಾಧ್ಯ ಅಂತ ಅನೇಕರ ಪ್ರಶ್ನೆ.
ಅದೇ ಕಾರಣಕ್ಕೆ, ಬೆಲೆ ಕೊಂಚ ಜಾಸ್ತಿಯಾದರೂ ಪರವಾಗಿಲ್ಲ. ಕಾರುಗಳು ಟ್ರಾವೆಲ್ ವೆಹಿಕಲ್ ಆಗದಂತೆ ನೋಡಿಕೊಳ್ಳಿ ಅಂತ ಕೊಂಚ ಜಾಸ್ತಿ ದುಡ್ಡು ಮತ್ತು ಗರ್ವ ಇರುವವರು ಹೇಳುತ್ತಲೇ ಇರುತ್ತಾರೆ. ಆ ಮಟ್ಟಗೆ ಯಾರಿಸ್ ಅಂಥವರ ನಿರೀಕ್ಷೆಗಳನ್ನು ಪೂರ್ತಿಮಾಡಿದೆ ಎಂದೇ ಹೇಳಬೇಕು.

ಯಾರಿಸ್ ಡ್ರೈವಿಂಗ್ ಕಂಫರ್ಟ್ ಚೆನ್ನಾಗಿಯೇ ಇದೆ. ಇದರಲ್ಲಿ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಸಿಸ್ಟಮ್ ಎರಡೂ ಇದೆ. ಕಂಟಿನ್ಯೂಯಸ್ ವೇರಿಯಬಲ್ ಟ್ರಾನ್ಸ್‌ಮಿಷನ್ ಅರ್ಥಾತ್ ಆಟೋಗೇರ್ ಕಾರಿನ ಬೆಲೆ ಕೊಂಚ ಜಾಸ್ತಿ. ಮೈಲೇಜೂ ಜಾಸ್ತಿ ಅಂತ ಸಂಬಂಧಪಟ್ಟವರು ಹೇಳುತ್ತಾರಾದರೂ ನಮಗೆ ಅದಕ್ಕೆ ಸಾಕ್ಷಿ ಸಿಗಲಿಲ್ಲ. ನಾಲ್ಕು ವೇರಿಯಂಟ್‌ಗಳಲ್ಲಿ ಈ ಕಾರು ಲಭ್ಯ. ಜೆ, ಜಿ, ವಿ ಮತ್ತು ವಿಎಕ್ಸ್ ಎಂಬ ವೇರಿಯಂಟ್‌ಗಳೆಲ್ಲ ಪೆಟ್ರೋಲು ಕಾರುಗಳೇ. ಇನ್ನೂ ಡೀಸೆಲ್ ಚಾಲಿತ ಕಾರು ಬಂದಿಲ್ಲ. ಇದರ ಪೈಕಿ ಜೆ ವೇರಿಯಂಟ್ ಬೆಲೆ 8,75,000.00 ಅದೇ ಸಿವಿಟಿ ಬೇಕಿದ್ದರೆ 9,95,000 ಇದರ ಹೈಎಂಡ್ ಕಾರಿಗೆ ಇದೇ ಬೆಲೆ ಅನುಕ್ರಮವಾಗಿ 12.85 ಲಕ್ಷ ಮತ್ತು 14.07 ಲಕ್ಷ. ಮಿಡ್ ಸೈಜ್ ಸೆಡಾನ್ ಕಾರುಗಳು ಇವತ್ತಿನ ಕ್ರೇಜು. ಮುಖ್ಯವಾಗಿ

ಹೊಂಡಾ ಸಿಟಿ, ಹುಯಂಡೈ ವರ್ನಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರನ್ನು ಟೊಯೋಟಾ ಮಾರುಕಟ್ಟೆಗೆ ಬಿಟ್ಟಿದೆ. ಮೇಲಿನ ಎರಡು ಸಂಸ್ಥೆಗಳಿಗೆ ಹೋಲಿಸಿದರೆ ಟೊಯೋಟಾ ಕಾರುಗಳ ಮೇಂಟೆನೆನ್ಸು ತೀರಾ ಕಡಿಮೆ. ಹೀಗಾಗಿ ಯಾರಿಸ್ ಮಧ್ಯಮ ವರ್ಗದವರ ಡಾರ್ಲಿಂಗ್ ಆಗುವ ಎಲ್ಲಾ ಅಪಾಯವೂ ಇದೆ.

ಈಗೀಗ ಕಾರು ಓಡುವುದಕ್ಕಿಂತ ಕಾರಿನೊಳಗೆ ಏನೇನು ಓಡುತ್ತದೆ ಅನ್ನುವುದೂ ಮುಖ್ಯ. ಯಾರಿಸ್ ಕಾರಿಗೆ ಹಿಲ್ ಅಸಿಸ್ಟ್ ಕಂಟ್ರೋಲ್ ಇದೆಯಂತೆ. ಹಾಗಂತ ಇದೇನೂ ಆಫ್‌ರೋಡ್ ಕಾರಲ್ಲ. ದೊಡ್ಡ ಹಂಪು ಎದುರಾದರೆ ಬುಡಕ್ಕೆ ಏಟು ಖಾತ್ರಿ. ಅಲ್ಲಿ ಕೊಂಚ ನಿಧಾನವಾಗಿಯೇ ಓಡಿಸಬೇಕು. ಆದರೆ ಈ ಕಾರಿನ ಸಸ್ಪೆನ್ಶನ್ ಚೆನ್ನಾಗಿದೆ. ವೃದ್ಧರಿಗೂ, ಗರ್ಭಿಣಿಯರಿಗೂ ಇದು ಆರಾಮದಾಯಕ. ಬೆನ್ನುನೋವಿನ ಸಮಸ್ಯೆ ಇರುವವರು ಕೂಡ ಸುಖಪ್ರಯಾಣ ಮಾಡಬಹುದು.
ಇನ್ನೋವಾ ಥರ ಎಸಿ ವೆಂಟ್‌ಗಳು ರೂಫ್‌ನಲ್ಲಿವೆ. ಸ್ಮಾರ್ಟ್ ಎಂಟ್ರಿ, ಪುಷ್ ಸ್ಟಾರ್ಟ್, ಗೆಶ್ಚರ್ ಕಂಟ್ರೋಲ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಇರುತ್ತದೆ. ಟಚ್ ಸ್ಕ್ರೀನೂ ಇದೆ. ಪ್ಯಾಡಲ್ ಶಿಫ್ಟ್, ಕ್ರೂಸ್ ಕಂಟ್ರೋಲ್ ನಂಥ ದೊಡ್ಡ ಕಾರುಗಳ ಸಣ್ಣ ಸಣ್ಣ ಫೀಚರ್‌ಗಳೂ ಇಲ್ಲಿವೆ. ವೈಪರ್‌ಗೂ ಸೆನ್ಸರ್ ಅಳವಡಿಸಲಾಗಿದೆ. ನಾವು ಈ ಕಾರನ್ನು ಸುಮಾರು ಅರವತ್ತು ಕಿಲೋಮೀಟರ್ ಓಡಿಸಿದಾಗ ಅನ್ನಿಸಿದಂತೆ ಇದೊಂದು ಕಂಫರ್ಟಬಲ್ ಸಂಸಾರೀ ಕಾರು. ಹದವಾದ ವೇಗದಲ್ಲಿ ಸುಖವಾಗಿ ಪ್ರಯಾಣ ಮಾಡಬಹುದು. ಪಾರ್ಕಿಂಗ್ ಅಂಥ ಕಷ್ಟವೇನಲ್ಲ. ಸೀಟುಗಳನ್ನು ಬಟನ್ ಒತ್ತಿ ಹಿಂದು ಮುಂದು ಮಾಡಬಹುದು. ಸ್ಟಿಯರಿಂಗ್ ವೀಲ್ ಮೇಲೆ ಕೆಳಗೆ ಎತ್ತಿ ಇಳಿಸಬಹುದು. ವೇಗ ಭಯಪಡಿಸುವುದಿಲ್ಲ ಅನ್ನುವುದು ಮತ್ತೊಂದು ಹೆಗ್ಗಳಿಕೆ.

ಒಳಾಂಗಣ ವಿನ್ಯಾಸವೂ ಸೊಗಸಾಗಿದೆ. ಬೀಜ್ ಮತ್ತು ಕಪ್ಪು ಬಣ್ಣದ ವಿನ್ಯಾಸ ಮೆಚ್ಚುಗೆಯಾಗುತ್ತದೆ. ನಿಮ್ಮ ಬಳಿ ಹ್ಯಾಚ್‌ಬ್ಯಾಕ್ ಇದ್ದು, ಕೈಯಲ್ಲಿ ಕೊಂಚ ದುಡ್ಡಿದ್ದರೆ, ಆ ಕಾರು ಮಾರಿ ಈ ಕಾರು ತೆಗೆದುಕೊಂಡು ಸೆಡಾನ್ ಕಾರಿನ ಮಾಲಿಕರಾಗಿ ಬೀಗಬಹುದು.

Related Articles

Leave a comment

Back to Top

© 2015 - 2017. All Rights Reserved.