ಕಾಂಗ್ರೆಸ್ ತೆಕ್ಕೆಗೆ ಜಯನಗರ

BREAKING NEWS, News, Regional, Top News No Comments on ಕಾಂಗ್ರೆಸ್ ತೆಕ್ಕೆಗೆ ಜಯನಗರ 16

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯನಗರವನ್ನು ತನ್ನ ತೆಕ್ಕೆಗೆ ತಗೆದುಕೊಂಡಿದೆ.

2008ರ ಕೇತ್ರದ ವಿಭಜನೆ ಬಳಿಕ ಬಿಜೆಪಿಯ ಭದ್ರಕೋಟೆ ಆಗಿದ್ದ ಜಯನಗರ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 54,457 ಮತಪಡೆದು ಬಿಜೆಪಿಯ ಬಿ.ಎನ್ ಪ್ರಹ್ಲಾದ ವಿರುದ್ಧ 2,889 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರಹ್ಲಾದ 51,568 ಮತಗಳಿಸಿದ್ದಾರೆ.

ಮೊದಲ ಐದು ಸುತ್ತುಗಳ ಎಣಿಕೆ ಮುಗಿಯುವ ವರೆಗೆ ಸೌಮ್ಯಾ ರೆಡ್ಡಿ ಮತಗಳ ಮುನ್ನಡೆ ಅಂತರ ಹೆಚ್ಚುತ್ತಲೇ ಹೋಯಿತು. 6ನೇ ಸುತ್ತಿನ ಎಣಿಕೆ ಮುಗಿಯುವಾಗ ಬಿಜೆಪಿ ಅಭ್ಯರ್ಥಿಗಿಂತ 15,000ಕ್ಕೂ ಅಧಿಕ ಮತಗಳ ಮುನ್ನಡೆ ದಾಖಲಿಸಿದರು. ಬಳಿಕ ಮುನ್ನಡೆ ಅಂತರ ಕಡಿಮೆಯಾಗುತ್ತ ಬಂತು. 15ನೇ ಸುತ್ತು ಮುಗಿದಾಗ ಮುನ್ನಡೆ ಅಂತರ 4650 ಮತಗಳಿಗೆ ಕುಸಿಯಿತು. ಅಂತಿಮವಾಗಿ 54,457 ಮತ ಪಡೆದು ಪ್ರಯಾಸದ ಗೆಲುವಿನ ನಗೆ ಬೀರಿದರು. ತೀವ್ರ ಸ್ಪರ್ಧೆಯೊಡ್ಡಿದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ 51,568 ಮತ ಪಡೆದು ಸೋಲೊಪ್ಪಿಕೊಂಡರು. ಅಬ್ಬರದ ಪ್ರಚಾರ ನಡೆಸಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿಯೂ ಉಳಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದ್ದಾರೆ.

ಜಯನಗರ 4ನೇ ‘ಟಿ’ ಬ್ಲಾಕ್‍ನಲ್ಲಿರುವ ಎಸ್‍ಎಸ್‍ಎಂಆರ್‍ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಮತ ಎಣಿಕೆಗಾಗಿ 14 ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. 216 ಮತಗಟ್ಟೆಗಳ ಮತ ಎಣಿಕೆ 16 ಸುತ್ತುಗಳಲ್ಲಿ ನಡೆಯಿತು. ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಚುನಾವಣೆ ಜೂ.11ಕ್ಕೆ ಮುಂದೂಡಿದ್ದು, ಒಟ್ಟು ಶೇಕಡಾ 55 ಮತದಾನವಾಗಿತ್ತು. ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು.

ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಅಖಾಡದಲ್ಲಿದ್ದರು. ಅಂತಿಮ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರ ವರಿಷ್ಠರ ಸೂಚನೆಯಂತೆ ಕಣದಿಂದ ಹಿಂದೆ ಸರಿದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರೂ ಗೆಲುವಿನ ಅಂತರ 2,889 ಮತಗಳಿಗೆ ಸೀಮಿತವಾಗಿದೆ.

ಅಭ್ಯರ್ಥಿ ಪಕ್ಷ ಪಡೆದಮತಗಳು
ಸೌಮ್ಯಾ ರೆಡ್ಡಿ ಕಾಂಗ್ರೆಸ್ 54,457
ಬಿ.ಎನ್. ಪ್ರಹ್ಲಾದ್ ಬಿಜೆಪಿ 51,568
ರವಿಕೃಷ್ಣ ರೆಡ್ಡಿ ಪಕ್ಷೇತರ 1,861

Related Articles

Leave a comment

Back to Top

© 2015 - 2017. All Rights Reserved.