ಲೋಕಸಭಾ ಚುನಾವಣೆ; ಬಿಜೆಪಿ ಕೈ ತಪ್ಪಲಿದೆಯೇ ಮೈಸೂರು – ಕೊಡಗು‌ ಕ್ಷೇತ್ರ?

BREAKING NEWS, News, Regional, Top News No Comments on ಲೋಕಸಭಾ ಚುನಾವಣೆ; ಬಿಜೆಪಿ ಕೈ ತಪ್ಪಲಿದೆಯೇ ಮೈಸೂರು – ಕೊಡಗು‌ ಕ್ಷೇತ್ರ? 81

ಮೈಸೂರು: ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಷ್ಟೇ ಉಳಿದಿದೆ. ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಎಲ್ಲಾ ಪಕ್ಷಗಳ ಪಡಸಾಲೆಯಲ್ಲೂ ಶುರುವಾಗಿದೆ. ತಡೆಯಿಲ್ಲದೆ ಓಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ನಿಲ್ಲಿಸುವುದು ಯಾವುದೇ ಪಕ್ಷಕ್ಕಾದರೂ ಏಕಾಂಗಿಯಾಗಿ ಅಸಾಧ್ಯ ಎಂಬ‌ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಈ ಮೊದಲು ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎಗಳ ಮಧ್ಯೆ ನೇರ ಹಣಾಹಣಿ ಇರುತ್ತಿದ್ದು, ಪ್ರಾದೇಶಿಕ ಪಕ್ಷಗಳು ಒಂದಾಗಿ ತೃತೀಯ ರಂಗದ ರಚನೆ ಮಾಡಿಕೊಂಡು ಕಣಕ್ಕಿಳಿಯುತ್ತಿದ್ದವು. ಆದರೆ ಈ‌ ಬಾರಿ ಕಾಂಗ್ರೆಸ್ ಕೂಡ ತೃತೀಯ ರಂಗದ ಭಾಗವಾಗುವ ಸ್ಪಷ್ಟ ಸೂಚನೆಗಳನ್ನು ನೀಡಿದೆ.

ಈ ಎಲ್ಲಾ ಲೆಕ್ಕಾಚಾರಗಳಿಗೆ ವೇದಿಕೆ ಸೃಷ್ಟಿಯಾಗಿದ್ದು ಕರ್ನಾಟಕ ವಿಧಾನಸಭಾ ಚುನಾವಣೆಯಿಂದ. 104 ಸ್ಥಾನಗಳನ್ನು ಪಡೆದರೂ, ಕೊನೆಯ ಕ್ಷಣದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷಗಳ ಮೈತ್ರಿಯಿಂದಾಗಿ ಬಿಜೆಪಿ ಅಧಿಕಾರ ವಂಚಿತವಾಯಿತು. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಸಂಭ್ರಮದಲ್ಲಿರುವ ಜೆಡಿಎಸ್ ಕಾಂಗ್ರೆಸ್ ಈ ಮೈತ್ರಿಯನ್ನು ಲೋಕಸಭಾ ಚುನಾವಣೆಯಲ್ಲೂ ಮುಂದುವರಿಸುವ ಕುರಿತು ಯಶಸ್ವಿಯಾಗಿ ಮಾತುಕತೆ ನಡೆಸಿವೆ. ಹಾಗೊಂದು ವೇಳೆ ಚುನಾವಣಾ ಪೂರ್ವ ಮೈತ್ರಿ‌ ನಡೆದರೆ, ಅದರ ನೇರ ಪರಿಣಾಮ ಆಡಳಿತಾರೂಢ ಬಿಜೆಪಿ ಮೇಲೆ ಆಗುವುದು ಸುಸ್ಪಷ್ಟ.

2014ರ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 17ನ್ನು ಮೋದಿ ಅಲೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಅದೇ ಪ್ರದರ್ಶನವನ್ನು ಮರಳಿ‌ ತೋರುವುದು ಕಷ್ಟಸಾಧ್ಯ.

ಈಗಾಗಲೇ ಜೆಡಿಎಸ್ ಹಾಗೂ ಬಹುಜನ ಸಮಾಜ ಪಾರ್ಟಿಗಳು‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕರ್ನಾಟಕದ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸಹ‌ ಸೇರ್ಪಡೆಯಾಗಲಿದೆ. ಒಂದು ವೇಳೆ ಈ ಮೈತ್ರಿಕೂಟ 2014ರ ಚುನಾವಣೆಗಿಂತ 10% ಹೆಚ್ಚು ಮತ ಗಳಿಸಿದರೂ ಬಿಜೆಪಿಯ ಸ್ಥಾನಗಳು 17 ರಿಂದ 6 ಕ್ಕೆ ಕುಸಿಯುವ ಸಾಧ್ಯತೆಗಳಿವೆ.

ಮೈಸೂರು ‌ಲೋಕಸಭಾ ಕ್ಷೇತ್ರದಲ್ಲಿ ನೇರ ಹೊಡೆತ:

ಈ ಮೈತ್ರಿಕೂಟದ ನೇರ ಹೊಡೆತವನ್ನು ಬಿಜೆಪಿ‌ ಎದುರಿಸುವುದು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ. ಕಳೆದ ಬಾರಿಯ ಚುನಾವಣಾ ಮತಗಳನ್ನು ಲೆಕ್ಕ ಹಾಕಿದರೆ, ಬಿಜೆಪಿಗಿಂತ ಜೆಡಿಎಸ್ – ಕಾಂಗ್ರೆಸ್ 10% ಹೆಚ್ಚು ಮತಗಳನ್ನು ಪಡೆದುಕೊಂಡಿದ್ದವು. ಈ‌ ಬಾರಿ ಅವೆರಡೂ ಪಕ್ಷಗಳು ಒಂದಾಗಿ,‌ ಮತ್ತದೇ ಮತಗಳನ್ನು ಪಡೆದರೂ ಬಿಜೆಪಿಯ ಪ್ರತಾಪ್‌ ಸಿಂಹ ಗೆಲ್ಲುವ ಸಾಧ್ಯತೆ ಕ್ಷೀಣಿಸುತ್ತದೆ.

ಪ್ರತಾಪ್ ಸಿಂಹ ನಾಯಕತ್ವದ ಮೇಲೆ‌ ಪಕ್ಷದ ಕಾರ್ಯಕರ್ತರು, ನಾಯಕರಲ್ಲೂ ಒಂದಷ್ಟು‌ ಅಸಮಾಧಾನ ಮಡುಗಟ್ಟಿದೆ. ಸಂಸದರು ಪಕ್ಷದ ಕುರಿತ ನಿರ್ಧಾರಗಳನ್ನು ಏಕಾಂಗಿಯಾಗಿ ತೆಗೆದುಕೊಳ್ಳುತ್ತಾರೆ, ಸಾಮೂಹಿಕ ನಾಯಕತ್ವಕ್ಕೆ ಬೆಲೆ ಇಲ್ಲ ಹಾಗೂ ಅವರ ನೇತೃತ್ವದ ಬಹುತೇಕ ಚುನಾವಣೆಗಳಲ್ಲಿ ಪಕ್ಷ‌ ಗಮನಾರ್ಹ ಸಾಧನೆಯನ್ನೇನೂ‌‌ ಮಾಡಿಲ್ಲ ಎಂಬುದಾಗಿ‌ ಬಿಜೆಪಿಯ ಮೂಲಗಳು ನ್ಯೂಸ್ ನಿರಂತರದೊಡನಿನ ‘ಆಫ್ ದ ರೆಕಾರ್ಡ್’ ಮಾತಿನಲ್ಲಿ ಸ್ಪಷ್ಟಪಡಿಸಿವೆ. ಒಂದು ವೇಳೆ ಈಗಿನ ಲೆಕ್ಕಾಚಾರಗಳು, ಆಡಳಿತ‌ ವಿರೋಧಿ ಅಲೆ ಒಂದುಗೂಡಿದರೆ, ಮೋದಿ ಅಲೆಯೂ ಪ್ರತಾಪ್ ಸಿಂಹರವರ ಗೆಲುವನ್ನು ಸಾಧ್ಯವಾಗಿಸಲಾರವು.

Related Articles

Leave a comment

Back to Top

© 2015 - 2017. All Rights Reserved.