ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌

News, Regional No Comments on ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌ 30
ಹರಿಹರಪುರ : ಗುರುಕುಲ ಮಾದರಿ ಶಿಕ್ಷಣ ನೀಡುತ್ತಿರುವ ಹರಿಹರಪುರದ ಪ್ರಬೋಧಿನೀ ಗುರುಕುಲದ ವೆಬ್‌‌ಸೈಟ್‌ (prabodhinigurukula.org) ನ್ನು ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ, ಆಂಧ್ರ, ತೆಲಂಗಾಣಗಳನ್ನೊಳಗೊಂಡ ದಕ್ಷಿಣ ಮಧ್ಯಕ್ಷೇತ್ರದ ಸಂಘಚಾಲಕ ವಿ. ನಾಗರಾಜ್‌ ಉದ್ಘಾಟಿಸಿದರು.
ಗುರುಕುಲದಲ್ಲಿ ನಡೆದ ಸರಳ ಸಮಾರಂಭದಲ್ಲಿ ನವೀಕೃತ ವೆಬ್‌‌ಸೈಟನ್ನು ಉದ್ಘಾಟಿಸಿ ಅವರು ಮಾತನಾಡಿದರು. ಐದನೇ ತರಗತಿ ಪೂರ್ಣಗೊಂಡ ಬಳಿಕ ಇಲ್ಲಿ ಸೇರುವ ಮಕ್ಕಳು 12 ವರ್ಷಗಳ ಕಾಲ ಇಲ್ಲಿ ಅಧ್ಯಯನ ನಡೆಸಿ, ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಿ, ವೇದ, ಯೋಗ, ಸಂಸ್ಕೃತಗಳಲ್ಲಿ ವಿಷಯ ಪರಿಣತರಾಗಿ ಸಮಾಜದ ಬೇರೆ ಬೇರೆ ಸಂಸ್ಥೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ. ಇಂತಹ ವಿಷಯ ಪರಿಣತರಿಗೆ ಈಗ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲೂ ಅಪಾರ ಬೇಡಿಕೆಯಿದ್ದು, ಅಂತಹ ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಕೆಲಸವನ್ನು ಪ್ರಬೋಧಿನೀ ಗುರುಕುಲ ಯಶಸ್ವಿಯಾಗಿ ಮಾಡುತ್ತಿದೆ ಎಂದರು.
ಜೊತೆಗೆ ಇಂತಹ ಗುರುಕುಲಗಳ ಸಂಖ್ಯೆ ದೇಶಾದ್ಯಂತ ಹೆಚ್ಚಾಗಬೇಕಿದೆ. ಭಾರತೀಯ ಸಂಸ್ಕೃತಿಯ ಬೆಳಕನ್ನು ಜಗತ್ತಿನೆಲ್ಲೆಡೆ ಪಸರಿಸುವ ಕಾರ್ಯದಲ್ಲಿ ಇಂತಹ ಗುರುಕುಲದಲ್ಲಿ ಶಿಕ್ಷಣ ಪಡೆದವರ ಪಾತ್ರ ಬಹಳ ಮಹತ್ತ್ವದ್ದು ಎಂದು ಅವರು ಅಭಿಪ್ರಾಯಪಟ್ಟರು. ಇನ್ನೂ ಹೆಚ್ಚಿನ ಜನರನ್ನು ಗುರುಕುಲ ಪದ್ಧತಿಯ ಶಿಕ್ಷಣದತ್ತ ಸೆಳೆಯಲು ಈ ವೆಬ್‌‌‌ಸೈಟ್ ಸಹಕಾರಿಯಾಗಲಿ ಎಂದು ಅವರು ಆಶಿಸಿದರು.

ಶೃಂಗೇರಿ ಸಮೀಪದ ಹರಿಹರಪುರದ ತುಂಗಾ ತೀರದಲ್ಲಿರುವ ಪ್ರಬೋಧಿನೀ ಗುರುಕುಲವು ಕಳೆದ ಎರಡು ದಶಕಗಳಿಂದ ಭಾರತೀಯ ಗುರುಕುಲ ಪರಂಪರೆಯ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡುತ್ತಾ ಬಂದಿದೆ. ಇಲ್ಲಿನ ವಿಶೇಷವೆಂದರೆ – ಶಿಕ್ಷಣ, ಊಟ ಮತ್ತು ವಸತಿಗಳೆಲ್ಲವೂ ಸಂಪೂರ್ಣ ಉಚಿತ. ಹಾಗೂ ಯಾವುದೇ ಜಾತಿಭೇದವಿಲ್ಲದೇ ಎಲ್ಲರಿಗೂ ಇಲ್ಲಿ ವೇದಶಿಕ್ಷಣ ದೊರೆಯುತ್ತದೆ. ವೇದ, ಯೋಗ, ವಿಜ್ಞಾನ, ಕಲಾಕೌಶಲ ಮತ್ತು ಕೃಷಿ ವಿಷಯಗಳನ್ನೊಳಗೊಂಡ ‘ಪಂಚಮುಖಿ’ ಶಿಕ್ಷಣ ಇಲ್ಲಿನ ಮಕ್ಕಳಿಗೆ ಸಿಗುತ್ತಿದೆ. ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತದ ಕಾರ್ಯವಾಹ ಡಾ. ಜಯಪ್ರಕಾಶ್‌, ಪ್ರಾಂತ ಪ್ರಚಾರ ಪ್ರಮುಖ್ ಪ್ರದೀಪ್‌ ಮೈಸೂರು, ಗುರುಕುಲದ ವ್ಯವಸ್ಥಾಪಕ ಉಮೇಶ್‌ ರಾವ್ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.