ಅತಿವೃಷ್ಠಿ ಪೀಡಿತ ಕೊಡಗಿನ ಪ್ರದೇಶಗಳಿಗೆ ಆರ್.ವಿ. ದೇಶಪಾಂಡೆ ಭೇಟಿ

BREAKING NEWS, News, Regional, Top News No Comments on ಅತಿವೃಷ್ಠಿ ಪೀಡಿತ ಕೊಡಗಿನ ಪ್ರದೇಶಗಳಿಗೆ ಆರ್.ವಿ. ದೇಶಪಾಂಡೆ ಭೇಟಿ 41
ಮಡಿಕೇರಿ : ಕೊಡಗು ಜಿಲ್ಲೆಯ ಜೋಡುಪಾಲ ದುರಂತ ಪ್ರದೇಶಕ್ಕೆ ಹಾಗೂ ಸಂತ್ರಸ್ತರು ಆಶ್ರಯ ಪಡೆದಿರುವ ಸ್ಥಳಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಭಾನುವಾರ ಭೇಟಿ ನೀಡಿದರು.
ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮೊದಲು ಜೋಡುಪಾಲ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಘಟನಾ ಸ್ಥಳವನ್ನು ವೀಕ್ಷಿಸಿದರು. ಬಳಿಕ ಸಂತ್ರಸ್ತರು ಆಶ್ರಯ ಪಡೆದಿರುವ ಸಂಪಾಜೆ ಸರಕಾರಿ ಶಾಲೆ, ಕಲ್ಲುಗುಂಡಿ ಸರಕಾರಿ ಶಾಲೆ ಹಾಗೂ ಅರಂತೋಡು ತೆಕ್ಕಿಲ್ ಹಾಲ್‌ಗೆ ಭೇಟಿ ನೀಡಿದರು.
ಸಂತ್ರಸ್ತರು ತಂಗಿರುವ ಎಲ್ಲಾ ಕೊಠಡಿಗಳಿಗೂ ಭೇಟಿ ನೀಡಿದ ಸಚಿವ ದೇಶಪಾಂಡೆ, ಅವರ ಅಹವಾಲನ್ನು ಆಲಿಸಿದರು. ಸಂತ್ರಸ್ತರ ವೈದ್ಯಕೀಯ ವ್ಯವಸ್ಥೆ, ಆಹಾರ ತಯಾರಿಕಾ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಅರಂತೋಡಿನಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ದೇಶಪಾಂಡೆ, ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ. ಸಂತ್ರಸ್ತರನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ, ಅವರಲ್ಲಿ ನೆಮ್ಮದಿ ಮೂಡಿಸಲಾಗುವುದು. ಅವರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಪರಿಹಾರವನ್ನು ತ್ವರಿತವಾಗಿ ನೀಡಲಾಗುವುದು. ಮನೆ ಕಳೆದುಕೊಂಡವರಿಗೆ ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.
ಸಂತ್ರಸ್ತರಿಗೆ ಆಶ್ರಯತಾಣದಲ್ಲಿ ಉತ್ತಮ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ದೇಶಪಾಂಡೆ, ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ನೀಡುತ್ತಿದ್ದಾರೆ. ಆಹಾರ ಸಾಮಾಗ್ರಿಗಳು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಇದಕ್ಕಾಗಿ ಜನತೆಯನ್ನು ಅಭಿನಂದಿಸುವುದಾಗಿ ಸಚಿವರು ನುಡಿದರು.
ಪರಿಹಾರ ಕಾರ್ಯಗಳಿಗಾಗಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಗೆ 50 ಕೋಟಿ ರೂ. ಹಾಗೂ ಕೊಡಗು ಜಿಲ್ಲೆಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನದ ನೆರವು ನೀಡಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಐವನ್ ಡಿಸೋಜ, ಹರೀಶ್ ಕುಮಾರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಸುಳ್ಯ ತಹಶೀಲ್ದಾರ್ ಕುಂಞಿಮ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Related Articles

Leave a comment

Back to Top

© 2015 - 2017. All Rights Reserved.