ಅಲಹಾಬಾದ್‍ನಲ್ಲಿ ಮೂರು ತಿಂಗಳ ಕಾಲ ಮದುವೆಗೆ ನಿರ್ಬಂಧ!

National, News No Comments on ಅಲಹಾಬಾದ್‍ನಲ್ಲಿ ಮೂರು ತಿಂಗಳ ಕಾಲ ಮದುವೆಗೆ ನಿರ್ಬಂಧ! 6

ಲಕ್ನೋ: ಕುಂಭಮೇಳದ ಹಿನ್ನೆಲೆಯಲ್ಲಿ ಅಲಹಾಬಾದ್‍ನಲ್ಲಿ 3 ತಿಂಗಳ ಕಾಲ ಕಲ್ಯಾಣ ಮಂಟಪದಲ್ಲಿ ಮದುವೆಯನ್ನು ನಿರ್ಬಂಧಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದ ಅಲಹಬಾದ್‍ನಲ್ಲಿ 2019ರ ಜನವರಿ 15ರಿಂದ ಮಾರ್ಚ್ 4ರವರೆಗೆ ಕುಂಭಮೇಳ ನಡೆಯಲಿದೆ. ಈ ನಿಟ್ಟಿನಲ್ಲಿ ಭಕ್ತರಿಗೆ ವಸತಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಲ್ಯಾಣ ಮಂಟಪ, ಸಭಾಭವನ ಹಾಗೂ ಛತ್ರಗಳಲ್ಲಿ ಯಾವುದೇ ಕಾರ್ಯಕ್ರಮ, ಮದುವೆ ನಡೆಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.

ಕುಂಭಮೇಳದ ವೇಳೆ ಕಲ್ಯಾಣ ಮಂಟಪಗಳಲ್ಲಿ ಯಾವುದೇ ವಿವಾಹ ಹಾಗೂ ಕಾರ್ಯಕ್ರಮ ನಡೆಸಲು ಅವಕಾಶ ನೀಡಿಲ್ಲ. ಈಗಾಗಲೇ ಮದುವೆ ನಿಶ್ಚಯವಾಗಿದ್ದರೆ ದಿನಾಂಕವನ್ನು ಮುಂದೂಡಬೇಕು. ಇಲ್ಲವೇ ಬೇರೆ ಪ್ರದೇಶದಲ್ಲಿ ವಿವಾಹವಾಗಬಹುದು ಎಂದು ತಿಳಿಸಲಾಗಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ಅಂದಾಜು 300 ವಿವಾಹಗಳಿಗೆ ತಡೆ ಬೀಳಲಿದೆ. ಅಲಹಾಬಾದ್‍ನಲ್ಲಿ 106 ಗೆಸ್ಟ್ ಹೌಸ್, ಕಲ್ಯಾಣ ಮಂಟಪ, ಸಭಾಭವನಗಳಿದ್ದು ಎಲ್ಲವನ್ನೂ ಸರ್ಕಾರ ಕಾಯ್ದಿರಿಸಿಕೊಂಡಿದೆ. ಹೀಗಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದವರು ಪರದಾಡುವಂತಾಗಿದೆ.

ನಮಗೆ ಯಾವುದೇ ಆಯ್ಕೆಯನ್ನು ಸರ್ಕಾರ ನೀಡಿಲ್ಲ. ಈಗಾಗಲೇ ಕಾಯ್ದಿರಿಸಿದ್ದ ಕಲ್ಯಾಣ ಮಂಟಪವನ್ನು ರದ್ದು ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಸಾಮಾನ್ಯವಾಗಿ ವಿವಾಹ ನಡೆಯುವ ತಿಂಗಳಿನಲ್ಲಿಯೇ ಕುಂಭಮೇಳ ನಡೆಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ನಾವು ಬೇರೆ ಕಡೆಗೆ ಹೋಗಿ ಮದುವೆ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಕಲ್ಯಾಣ ಮಂಟಪ ಕಾಯ್ದಿರಿಸಿದ್ದ ರವಿಕುಮಾರ್ ಕೆಸರ್ವಾನಿ ಎಂಬವರು ತಿಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.