ವ್ಯಕ್ತಿ ವಿಶೇಷ : ವಿಶೇಷ ಪ್ರತಿಭೆಯುಳ್ಳ ಅಂಧ ಛಲಗಾರ ಬಸವರಾಜ್..

alva

ಮೂಡಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯು ಹಲವು ಮಹನೀಯರ, ಅಗಾಧ ಪ್ರತಿಭಾವಂತರ ಪ್ರತಿಭಾ ಪ್ರದರ್ಶನಕ್ಕೂ ಕೂಡಾ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ. ಅಂತಹ ಸಾಧಕರನ್ನು ಅರಸುತ್ತಾ ನುಡಿಸಿರಿ ಆವರಣದತ್ತ ಹೊರಟಾಗ ಸಿಕ್ಕವರು ರಾಷ್ಟ್ರಪ್ರಶಸ್ತಿ ವಿಜೇತ ಬಸವರಾಜ ಶಂಕರ ಉಮರಾಣಿ. ಇವರ ಜೀವನ ಚಿತ್ರಣವನ್ನು ತೆರೆಯುತ್ತಾ ಹೋದಂತೆ ಯಶೋಗಾಥೆಯೇ ತೆರೆದುಕೊಳ್ಳುತ್ತದೆ. ಹುಟ್ಟು ಕುರುಡರಾದರೂ ಕೂಡ ಛಲದಿಂದ, ಅದಮ್ಯ ಉತ್ಸಾಹದಿಂದ ಜೀವನ ನಡೆಸಬೇಕೆಂಬ ತುಡಿತ ಹೊಂದಿರುವಂತಹವರು. ಯಾರದೇ ಹುಟ್ಟಿದ ದಿನ ಹೇಳುವುದರಲ್ಲಿ, ಗಡಿಯಾರದ ಆವಶ್ಯಕತೆ ಇಲ್ಲದೆಯೇ ಗಂಟೆ ಹೇಳುವ, ಎಷ್ಟೇ ಕಠಿನ ಲೆಕ್ಕವಿದ್ದರೂ ಸಲೀಸಾಗಿ ಬಿಡಿಸುವಂತಹ ವಿಶಿಷ್ಟ, ವಿಶೇಷ ಚೇತನ ಬಸವರಾಜ್.

ಈಗ ಎಲ್ಲೆಡೆ ನೋಟಿನದ್ದೇ ಸುದ್ದಿ. ಬಸವರಾಜ್ ಅವರಲ್ಲಿ ನೀವು ಯಾವುದೇ ನೋಟು ಕೊಟ್ಟರೂ ಅದನ್ನು ಮುಟ್ಟಿ ಯಾವ ಮುಖಬೆಲೆಯ ನೋಟು ಎಂದು ನಿಖರವಾಗಿ ಹೇಳುವುದರಲ್ಲಿ ನಿಸ್ಸೀಮರು. 1990ರಿಂದ ಇದುವರೆಗೆ ಹುಟ್ಟಿದ ವರ್ಷ, ತಿಂಗಳು, ದಿನಾಂಕ ಹೇಳಿದರೆ, ನೀವು ಹುಟ್ಟಿದ್ದು ಯಾವ ದಿನ ಎಂದು ನಿಖರವಾಗಿ ಹೇಳಿ ಅಚ್ಚರಿ ಹುಟ್ಟಿಸುವಂತಹ ಪ್ರತಿಭೆ ಇವರದು. ಅಲಲ್ದೆ ಕೋಟ್ಯಾನುಕೋಟಿ ಲೆಕ್ಕವನ್ನು ಕೊಟ್ಟರೂ ಕ್ಷಣಾರ್ಧಾದಲ್ಲೀ ಬಿಡಿಸಿಕೊಡುತ್ತಾರೆ. ಎಂದೋ ಹೇಳಿದ ದೂರವಾಣಿ ಸಂಖ್ಯೆ. ಯಾವತ್ತೋ ಭೇಟಿಯಾದ ನೆನಪುಗಳೆಲ್ಲವನ್ನು ದಿನ ಸಹಿತ ಹೇಳುತ್ತಾರೆ ಬಸವರಾಜ್. ಇನ್ನು ಕ್ರಿಕೆಟ್‍ನಲ್ಲಿಯೂ ಆಸಕ್ತಿ ಬೆಳೆಸಿಕೊಂಡೊರುವ ಇವರು, ಎಲ್ಲ ರಾಷ್ಟ್ರದ ನಾಯಕರ ಹೆಸರು, ಅವರ ದಾಖಲೆಗಳನ್ನು ವಿವರವಾಗಿ ಹೇಳಿ ಅಚ್ಚರಿಮೂಡಿಸುತ್ತಾರೆ. ಹಿಂದಿ ಹಾಗೂ ಇಂಗ್ಲೀಷ್‍ನಲ್ಲಿಯೂ ಕಾಮೆಂಟ್ರಿ ಕೂಡ ಹೇಳುತ್ತಾರೆ.

ಅವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಕೂಡ ಅರಸಿಕೊಂಡು ಬಂದಿವೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಸದಿಲ್ಲಿಯಲ್ಲಿ ಸಂಸದ ಪ್ರಭಾಕರ ಕೋರೆ ಅವರ ನೆರವಿನೊಂದಿಗೆ ಭೇಟಿಯಾಗಿದ್ದರು. 22 ವರ್ಷದ ಇವರು ಸದ್ಯ ಬಿಎಡ್ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ನಡೆದಾಡುವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿರುವ ಶಕುಂತಲಾ ದೇವಿ ಅವರಿಂದ ಪ್ರೇರಣೆ ಪಡೆದ ಬಸವರಾಜ್ ಅವರು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲವನ್ನು ಅವರು ಇದೇ ವೇಳೆ ವ್ಯಕ್ತಪಡಿಸುತ್ತಾರೆ.

ವಿಶೇಷ ವರದಿ : ಚೈತನ್ಯ ಕುಡಿನಲ್ಲಿ

Leave a comment

Search

Back to Top