ನಾನು ವಿಶೇಷನಲ್ಲವಾ, ಅದಕ್ಕೆ!

ನಾವು ಇದ್ದ ಕಾರು ಹಸಿರ ಒಳಗಿದ್ದ ಆ ಶ್ವೇತ ಕಟ್ಟಡದೆದುರು ಬಂದು ನಿಂತಿತು. ಬಾಗಿಲು ತೆರೆದ ಸದ್ದಿಗೆ ಬೇರೆ ಏನೋ ಯೋಚನೆಯಲ್ಲಿ ಮುಳುಗಿದ್ದವಳು, ಬಂದ ಕೆಲಸದ ನೆನಪಾಗಿ, ಅಯ್ಯೋ ದೇವರೆ! ಏನು ಮಾಡುವುದು ಅಂತ ಯೋಚನೆನೇ ಮಾಡಿಲ್ಲ, ಅದೂ ಅಲ್ಲದೇ ಮೊದಲ ಬಾರಿಗೆ ಈ ಮಕ್ಕಳನ್ನ ಭೇಟಿಯಾಗೋಕೆ ಹೋಗ್ತಾ ಇರೋದು, ಮುಂದೇನು ಮಾಡುವುದು ಅನ್ನೋ ಯೋಚನೆಯಲ್ಲೇ ಮೆಟ್ಟಿಲುಗಳನ್ನೇರಿ ಬಂದು ನಿಂತಿದ್ದೆ.

ಇನ್ನೇನು ಹೆಜ್ಜೆ ಮುಂದಿಡಬೇಕು ಅನ್ನೋವಷ್ಟರಲ್ಲಿ ಅಪರಿಚಿತ ಮುಖವೊಂದು ಆತ್ಮೀಯ ನಗುವಿಂದ ತಡೆದು ನಿಲ್ಲಿಸಿತು. “ಬನ್ನಿ ಇಲ್ಲೇ ಬಲಗಡೆ ಕಾಣಿಸ್ತಾ ಇದ್ಯಲ್ಲಾ ಅದೇ ಬಾಗಿಲು” ಎನ್ನುತ್ತಾ ಅತ್ತ ಕರೆದೊಯ್ದರು. ಒಳಹೊಕ್ಕಿದವಳಿಗೆ ಇದಿರಾದದ್ದು ನಮ್ಮನ್ನೇ ಕಾಯುತ್ತಾ ಇದ್ದಂತಿದ್ದ ಮೂವತ್ತಾರು ಕಣ್ಣುಗಳು. ಪರಿಚಯದ ಆರಂಭಕ್ಕಿರಲಿ ಅಂತ ಅವರತ್ತ ಒಂದು ಆತ್ಮೀಯ ನಗು ಬೀರಿದೆ.

ಇನ್ನೇನು ಮಾತಾಡೋಕೆ ಶುರು ಮಾಡ್ಬೇಕು ಅನ್ನೋವಷ್ಟ್ರಲ್ಲಿ , ಎದುರಿನ ಸಾಲಿನಲ್ಲೇ ಕುಳಿತಿದ್ದ ಎಳೆಗಲ್ಲದ ಹುಡುಗ. “ಅಕ್ಕ ನಮಗಿವತ್ತು ಆಟ ಆಡಿಸ್ತೀರಾ ತಾನೆ?” ಎಂದು ಕೇಳಿದ. ಹೌದೆಂಬಂತೆ ತಲೆಯಾಡಿಸಿ, ಅವರವರ ಪರಿಚಯ ಮಾಡ್ಕೊಳ್ಳಿ ಎಂದ ಕೂಡಲೇ ಪಟಪಟನೆ ಎದ್ದು ನಿಂತು ಚುರುಕಿಂದ ಪರಿಚಯಿಸಿಕೊಂಡ ಅವರ ರೀತಿಗೆ ಸೋಜಿಗ ಅನ್ನಿಸ್ತು. ಅಲ್ಲಿದ್ದ ಎಲ್ಲರೂ ಮರುಗಳಿಗೆನೇ ಸುಲಭವಾಗಿ ನಮ್ಮೊಂದಿಗೆ ಬೆರೆಯೋದಕ್ಕೆ ಆರಂಭ ಮಾಡಿದರು.

ಅಷ್ಟರಲ್ಲೇ ಯಾವ ಭಾವನೆಗಳನ್ನೂ ಗುರುತಿಸಲಾಗದ, ಲಕ್ಷಣವಾದ ಮುಖವೊಂದು ಒಳ ಬಂದು, “ವೈದ್ಯರು ಬಂದಾಗಿದೆ ಎಲ್ಲರೂ ಸಿದ್ಧವಾಗಿ, ಒಬ್ಬೊಬ್ಬರಾಗಿಯೇ ಬನ್ನಿ” ಎಂದಿತು. ಆ ಚಿಕ್ಕ ವಯಸ್ಸಿಗೆ ಸೂಜಿ,ಸಿರಿಂಜು ಮತ್ತು ಸಮಾಜಕ್ಕೆ ಒಗ್ಗಿ ಹೋಗಿದ್ದ ಆ ಮುಗ್ಧ ಮೊಗಗಳಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಅವರ ವಯಸ್ಸಲ್ಲಿ ವೈದ್ಯರ ಹೆಸರು ಕೇಳಿದರೆ ಮಾರು ದೂರ ಓಡುತ್ತಿದ್ದ ನನ್ನ ನೆನಪಾಯ್ತು. ನಿಟ್ಟುಸಿರಾದೆ.

ಮುಂದಿನ ಹತ್ತು-ಹದಿನೈದು ನಿಮಿಷದಲ್ಲಿ ನಮ್ಮ ಜೊತೆ ಇನ್ನೂ ಚೆನ್ನಾಗಿ ಹೊಂದಿಕೊಂಡರು. ಆಮೇಲೆ ಕೇಳ್ಬೇಕಾ ಒಬ್ಬರು ಕುಣಿದರೆ, ಇನ್ನೊಬ್ಬರು ಹಾಡಿದರು, ನಮ್ಮೊಂದಿಗೆ ಪದ ಕೂಡಿಸಿ ಆಡಿದರು. ಗೆದ್ದವರು ಚಾಕಲೇಟು ಪಡೆದು ಬೀಗಿದ್ರು. ಉಳಿದವರು ತಾವೂ ಗೆಲ್ಲೋ ಉತ್ಸಾಹದಲ್ಲಿ ಭಾಗವಹಿಸಿದರು. ಅದರ ಮಧ್ಯದಲ್ಲೇ ಒಬ್ಬೊಬ್ಬರೇ ಎದ್ದು ಓಡೋಡ್ತಾ ವೈದ್ಯರ ಬಳಿ ಹೋಗಿ ಬರ್ತಾ ಇದ್ರು. ಗಂಟೆಗಳು ಹೋಗಿದ್ದೇ ಗೊತ್ತಾಗಲಿಲ್ಲ. ಪ್ರತಿ ವರ್ಷವೂ ಇವರನ್ನ ಸೇರಿಸಿ ಆರೋಗ್ಯ ತಪಾಸಣೆ ಹಾಗೂ ಅವರಿಗೆ ಹೊಸ ಹೊಸ ವಿಚಾರಗಳನ್ನು ಕಲಿಸಲು ಮಾಡುತ್ತಿರುವ ಪ್ರಯತ್ನ ಖುಷಿಯೆನ್ನಿಸಿತು. ಪ್ರಚಾರದ ಸೋಗಿಂದ ಹೊರ ಬಂದು, ಈ ಮಕ್ಕಳ ಬಗ್ಗೆ ಕಾಳಜಿ ಮಾಡೋ ಸಂಸ್ಥೆಗಳ ಮೇಲೆ ಗೌರವ ಮೂಡಿತು.

ಈ ಎಲ್ಲದರ ಮಧ್ಯೆ ಸಮಯ ಓಡಿದ್ದೇ ತಿಳಿಲಿಲ್ಲ. “ಸರಿ ಮಕ್ಕಳೇ ನಾವೀಗ ಹೊರಡ್ತೀವಿ, ಮತ್ತೊಮ್ಮೆ ಖಂಡಿತ ಸಿಗೋಣ ಆಯ್ತಾ?” ಅಂತ ಅವರತ್ತ ಕೈಬೀಸಿ ಹೊರಟಿದ್ದೆ. ಮದ್ಯದ ಸಾಲಿನ ಕೊನೆಯಲ್ಲಿ ಕೂತಿದ್ದ ದುಂಡು ಕಣ್ಣಿನ ಹುಡುಗ ಹಿಂದೆಯೇ ಓಡಿ ಬಂದು,
“ಅಕ್ಕ ಖುಷಿಯಾಯ್ತು ನಿಮ್ಮ ಜೊತೆ, ಹೀಗೆ ಬರ್ತಾ ಇರಿ. ನಿಮಗೆ ಗೊತ್ತಾ ನಮ್ಮ ಮನೆಯವರೂ ನಮ್ಮ ಜೊತೆ ಬೆರೆಯೋಕೆ ಯೋಚನೆ ಮಾಡ್ತಾರೆ.” ಎಂದ. “ಯಾಕಪ್ಪಾ?” ಕೇಳಿದೆ. “ನಾನು ವಿಶೇಷನಲ್ಲವಾ ಅಕ್ಕ ಅದಕ್ಕೆ” ಉತ್ತರಿಸಿದ. ಆ ಮುಗ್ಧತೆಯ ಮರೆಮಾಡುತ್ತಿದ್ದ ನೋವಿನ ಗೆರೆಗಳು ಕಣ್ಣ ಪರದೆಯ ಮೇಲೆ ಹಾದು ಹೋದವು. ಏನು ಉತ್ತರಿಸುವುದು ಗೊತ್ತಾಗಲಿಲ್ಲ. ಸೋತು ಮೆಟ್ಟಿಲಿಳಿದೆ.

mm

Sushmitha Shetty

A normal human being who loves to love the world as it is.studying masters in school of communication Manipal university.⁠⁠⁠⁠

2 thoughts on “ನಾನು ವಿಶೇಷನಲ್ಲವಾ, ಅದಕ್ಕೆ!

 • September 9, 2016 at 10:39 pm
  Permalink

  Nice article, keep it up

  Reply
 • September 9, 2016 at 10:41 pm
  Permalink

  Good article writen by new writter in newsnirantara.in/blog. Keep growing madam.

  Reply

Leave a Reply

Your email address will not be published. Required fields are marked *