ಗೆದ್ದೇ ಗೆಲ್ಲುತ್ತೇನೆ ಎಂದು ಹೊರಟವರನ್ನು ಅದಾವ ಶಕ್ತಿಯೂ ಸೋಲಿಸಲು ಸಾಧ್ಯವಿಲ್ಲ!

ಅದು 1996ರ ಅಟ್ಲಾಂಟಾ ಒಲಿಂಪಿಕ್ಸ್. ಅಮೆರಿಕಾ ತಂಡ ಜಿಮ್ನಾಸ್ಟಿಕ್ ವಿಭಾಗದಲ್ಲಿ ಫೈನಲ್ ಹಂತಕ್ಕೇರಿತ್ತು. ಉತ್ತಮ ಪ್ರದರ್ಶನ ನೀಡುತ್ತಾ ಚಿನ್ನದ ಪದಕಕ್ಕೆ ಮುತ್ತಿಡುವ ಪ್ರಯತ್ನದಲ್ಲಿ ಅಮೆರಿಕಾ ತಂಡ ದಾಪುಗಾಲಿಡುತ್ತಿತ್ತು. ಜಿಮ್ನಾಸ್ಟಿಕ್ ನೋಡಲು ತುಂಬಾ ಚಂದವೆನಿಸುವ ಕ್ರೀಡೆಯಾದರೂ, ಸ್ವಲ್ಪ ಏಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ವಾಲ್ಟ್ ನಡೆಸುವುದೆಂದರಂತೂ ಇನ್ನಷ್ಟು ಕಠಿಣ!

ಭಾರತದ ಹೆಮ್ಮೆಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ 2016 ರಿಯೋ ಒಲಿಂಪಿಕ್ಸ್ ನಲ್ಲಿ ಸ್ವಲ್ಪದರಲ್ಲೇ ಕಂಚಿನ ಪದಕ ಕಳೆದುಕೊಂಡರೂ, ಫೈನಲ್ ನಲ್ಲಿ ಭಾಗವಹಿಸಿದ ಮೊದಲ ಜಿಮ್ನಾಸ್ಟ್ ಎಂದು ದೇಶಕ್ಕೆ ಹೆಮ್ಮೆ ತಂದಿದ್ದರು. 1996 ಆ ದಿನ ಅಮೆರಿಕಾ ತಂಡದ ಪರ ಫೈನಲ್ ನಲ್ಲಿ ವಾಲ್ಟ್ ಪ್ರದರ್ಶಿಸಲು ಬಂದವರು 19 ವರ್ಷದ ಕೆರ್ರಿ ಆಲಿಸನ್ ಸ್ಟ್ರಗ್. ಆಕೆಯೇನಾದರೂ ತನ್ನ ಪೂರ್ಣ ಸಾಮರ್ಥ್ಯ ತೋರಿ ಯಶಸ್ವೀ ವಾಲ್ಟ್ ಗಳನ್ನು ನಿರ್ವಹಿಸಿದರೆ ಅಮೆರಿಕಾ ತಂಡದ ಕತ್ತಿಗೆ ಚಿನ್ನದ ಪದಕ ಬೀಳುತ್ತಿತ್ತು. ಅಮೆರಿಕಾ ಕ್ರೀಡಾಳುಗಳು, ಅಭಿಮಾನಿಗಳು, ಕೋಚ್ ಗಳ ಆಶಾವಾದಿ ಕಣ್ಣುಗಳು ಕೆರ್ರಿ ಪ್ರದರ್ಶನದ ಮೇಲಿದ್ದವು.

ದೂರದಿಂದ ಓಡಿಬಂದ ಕೆರ್ರಿ ಚಿಮ್ಮು ಹಲಗೆಯ ಮೇಲೆ ಕೈ ಇಟ್ಟು ಜಿಗಿದೇ ಬಿಟ್ಟರು. ಗಾಳಿಯಲ್ಲಿ ಎರಡು ಸುತ್ತು ತಿರುಗಿ ನೆಲಕ್ಕೆ ಕಾಲೂರುತ್ತಿದ್ದಂತೆ ಬಿದ್ದಂತಾಗಿ, ಮತ್ತೆ ಮೇಲೆದ್ದು ತೀರ್ಪುಗಾರರಿಗೆ, ವೀಕ್ಷಕರಿಗೆ ಕೈ ಬೀಸಿ ನಡೆದರು. ಆದರೆ ಆ ಜಿಗಿತ ಮುಗಿಸಿ ಜಿಮ್ನಾಸ್ಟಿಕ್ ಫ್ಲೋರ್ ನಲ್ಲಿ ಕಾಲೂರುತ್ತಿದ್ದಂತೆ ಎಲ್ಲೋ ಚಳಕ್ ಎಂದ ಸದ್ದು ಕೆರ್ರಿ ಕಿವಿಗೆ ಬಿದ್ದಿತ್ತು. ಅದರೊಂದಿಗೇ ಸಹಿಸಲಸಾಧ್ಯವಾದ ಕಾಲು ನೋವೂ ಶುರುವಾಗಿತ್ತು!
ಆ ಜಿಗಿತದ ವೇಳೆ ಆಕೆಯ ಪಾದದ ಮೂಳೆ ಸಣ್ಣಗೆ ಮುರಿದಿತ್ತು! ಅಮೆರಿಕಾದ ಚಿನ್ನದ ಆಸೆ ಈಡೇರಲು ಕೆರ್ರಿ ಮುಂದಿನ ವಾಲ್ಟ್ ಪ್ರದರ್ಶಿಸಲೇಬೇಕಾದ ಅನಿವಾರ್ಯತೆ! ವೀಕ್ಷಕರು, ಆಕೆಯ ತಂಡದ ಸದಸ್ಯರು ನಿರಾಸೆಗೊಳಗಾಗಿದ್ದರು. ಇನ್ನೊಮ್ಮೆ ಜಿಗಿಯುವ ಸ್ಥಿತಿಯಲ್ಲಿ, ದೃಢವಾಗಿ ಜಿಗಿತ ಮುಗಿಸಿ ನಿಲ್ಲುವ ಸ್ಥಿತಿಯಲ್ಲಿ ಕೆಲ್ಲಿಯ ಎಡಗಾಲು ಇರಲೇ ಇಲ್ಲ. ಪದಕದ ಆಸೆ ಕೈಬಿಟ್ಟ ತಂಡದ ಸದಸ್ಯರು ಪೆಚ್ಚಗಾಗಿದ್ದರು.

ಊಹು. ಮೀನಗಂಟು ಮುರಿದಿದ್ದರೂ 19 ರ ಹುಡುಗಿ ಕೆರ್ರಿಯ ಛಲ ಮುರಿದಿರಲಿಲ್ಲ. ಒಲಿಂಪಿಕ್ಸ್ ಫೈನಲ್ ಗೇರುವುದೇ ಸಾಹಸ. ಅಂತಹದ್ದರಲ್ಲಿ ಏನಾದರಾಗಲಿ, ಪ್ರಯತ್ನ ಪಡುವುದರಿಂದ ಕಳೆದುಕೊಳ್ಳುವುದೇನು? ಎಂಬ ಯೋಚನೆ ಕೆರ್ರಿಯದು. ತಾನು ಜಿಗಿದೇ ಸಿದ್ಧ ಎಂದು ನೋವು ನಿವಾರಕ ಸ್ಪ್ರೇಗಳನ್ನು ಸುರಿದು ಆಕೆ ನಿಂತಾಯಿತು.

ಕಾಲು ನೋವನ್ನೂ ಮರೆತು ಓಡಿಯೇ ಓಡಿದ ಕೆರ್ರಿ, ಮತ್ತೊಮ್ಮೆ ಚಿಮ್ಮು ಹಲಗೆಯನ್ನು ಸಮೀಪಿಸಿದರು. ಕಾಲ ಮೇಲೆ ಭಾರ ಬಿಟ್ಟು ಗಾಳಿಯಲ್ಲಿ ಚಿಮ್ಮಿ, 2 ಸುತ್ತು ತಿರುಗಿ‌, ವೀಕ್ಷಕರು ಬೆರಗಾಗಿ ನೋಡುತ್ತಿದ್ದಂತೆಯೇ ದೃಢವಾಗಿ ನಿಂತಿದ್ದರು ಕೆರ್ರಿ! ಸಹಿಸಲಸಾಧ್ಯ ನೋವು, ಮೂಳೆ ಇನ್ನಷ್ಟು ಮುರಿದಿತ್ತು. ಎಡಗಾಲು ಊರಲಾಗದೆ ಬಲಗಾಲ ಮೇಲೆ ನಿಂತು,‌ ನೆಲಕ್ಕುರುಳಿದರು. ಪರ್ಫೆಕ್ಟ್ ವಾಲ್ಟ್! ಅಮೆರಿಕಾ ತಂಡ ಚಿನ್ನ ಗೆದ್ದಿತ್ತು. ಕೆರ್ರಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂದು ಕಾಲಲ್ಲಿ ನಿಂತು ಆಕೆ ಕತ್ತಿಗೆ ಚಿನ್ನದ ಪದಕ‌ ಧರಿಸಿಕೊಂಡಾಗ ನೆರೆದವರ ಕಣ್ಣಂಚಲ್ಲಿ ನೀರಿತ್ತು.

ಆಟವಿರಲಿ, ಜೀವನವಿರಲಿ. ಗೆದ್ದೇ ಗೆಲ್ಲುತ್ತೇನೆ ಎಂದು ಹೊರಟವರನ್ನು ಅದಾವ ಶಕ್ತಿಯೂ ಸೋಲಿಸಲು ಸಾಧ್ಯವಿಲ್ಲ. ಗೆಲ್ಲುವ ಮನಸ್ಸುಗಳಿಗೆ, ಹೋರಾಟದ ಕಸುವಿಗೆ ಕೆರ್ರಿ ಒಂದು ಉದಾಹರಣೆ.

mm

Shreeharsha

Shreeharsha is a correspondent of News Nirantara, residing currently in Mysuru. He likes to play and watch cricket, to read, ride and drive. He is a regular contributor to the Nirantara Blog. He is interested in current affairs, sports and literature and photography.

2 thoughts on “ಗೆದ್ದೇ ಗೆಲ್ಲುತ್ತೇನೆ ಎಂದು ಹೊರಟವರನ್ನು ಅದಾವ ಶಕ್ತಿಯೂ ಸೋಲಿಸಲು ಸಾಧ್ಯವಿಲ್ಲ!

Leave a Reply

Your email address will not be published. Required fields are marked *