ರಾಹುಲ್ ದ್ರಾವಿಡ್ ಗೋಡೆಯಲ್ಲ; ಭಾರತೀಯ ಕ್ರಿಕೆಟ್ ನ ಭದ್ರಕೋಟೆ

ಮಹಾ ಭಾರತವನ್ನೋದುವಾಗ ಎಂದಿಗೂ ಮನಸುಗಳು ಅಲ್ಲಿನ ಘಟನೆಗಳನ್ನು, ಪಾತ್ರಗಳನ್ನು ಚಿತ್ರಿಸಿಕೊಳ್ಳಲು ತೊಡಗುತ್ತವೆ. ಭೀಮನ ಆವೇಶ, ಅರ್ಜುನನ ಹೆಚ್ಚುಗಾರಿಕೆ, ಕೃಷ್ಣನ ತಂತ್ರ, ದುರ್ಯೋಧನನ ಛಲ, ಇವೆಲ್ಲವುಗಳ ಮಧ್ಯೆ ಕರ್ಣನ ನಿಷ್ಠೆ, ತ್ಯಾಗ, ದಾನ ಹೆಚ್ಚು ಕಾಡುತ್ತದೆ ಎಲ್ಲರಿಗಿಂತಲೂ ಸಾಧಾರಣ ಮನುಷ್ಯನಾದ ಕರ್ಣ ಆಪ್ತನೆನಿಸುತ್ತಾನೆ! ಅದೇರೀತಿ ಘಟಾನುಘಟಿಗಳಿಂದ ತುಂಬಿದ್ದ ಭಾರತೀಯ ಕ್ರಿಕೆಟ್ ತಂಡದಲ್ಲಿ ಸರಳ – ಸಹಜವಾಗಿ ಆಪ್ತರಾದವರು ರಾಹುಲ್ ದ್ರಾವಿಡ್!

ನಾವು ಭಾರತೀಯರು ಕ್ರಿಕೆಟ್ ಆರಾಧಕರು. ತಲೆಮಾರುಗಳು ಬದಲಾದರೂ ದೇಶದಲ್ಲಿ ಕ್ರಿಕೆಟ್ ಹವಾ ಕಡಿಮಯಾಗುವುದಿಲ್ಲ. ಸಚಿನ್ ತೆಂಡೂಲ್ಕರ್ ಎಂಬ ಜೀನಿಯಸ್, ಸೆಹ್ವಾಗ್ ಎಂಬ ಅಬ್ಬರ, ಗಂಗೂಲಿ ಎಂಬ ಅಗ್ರೆಷನ್, ಲಕ್ಷ್ಮಣ್ ಎಂಬ ಕ್ಲಾಸ್ ಮಧ್ಯೆ ಸದಾ ಆಪತ್ಬಾಂಧವನಾಗಿ ನೆನಪಿನಲ್ಲುಳಿಯುದು ತಂಡಕ್ಕಾಗಿ ತನ್ನದೆಲ್ಲವನ್ನೂ ಅರ್ಪಿಸಿದ ರಾಹುಲ್ ದ್ರಾವಿಡ್.

ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ 4 ವರ್ಷಗಳೇ ಕಳಿದವು. ಆದರೂ ದ್ರಾವಿಡ್ ಆಟದ ನೆನಪುಗಳಿನ್ನೂ ಅಭಿಮಾನಿಗಳ ಮನದಲ್ಲಿ ಹಾಗೇ ಉಳಿದಿದೆ. ಅದು ದೇಶಿ ಪಿಚ್ ಇರಬಹುದು, ಇಂಗ್ಲೆಂಡ್ – ಆಸ್ಟ್ರೇಲಿಯಾಗಳ ವೇಗದ ವಿಕೆಟ್ ಇರಬಹುದು, ಕ್ರೀಸ್ ಕಚ್ಚಿಕೊಂಡನೆಂದರೆ ದ್ರಾವಿಡ್ ರದು ಉಡದ ಹಿಡಿತ. ಅದಕ್ಕೇ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ ತನ್ನ ಬೌಲರ್ ಗಳಿಗೆ ಸಾಧ್ಯವಾದರೆ ಮೊದಲ 15 ನಿಮಿಷಗಳಲ್ಲಿ ರಾಹುಲ್ ವಿಕೆಟ್ ಪಡೆಯಿರಿ. ಸಾಧ್ಯವಾಗದಿದ್ದರೆ ಇನ್ನುಳಿದ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿ, ಈತ ವಿಕೆಟ್ ಕೊಡುವುದಿಲ್ಲ! ಎಂದಿದ್ದ.

ಬೇರೆ ಕ್ರಿಕೆಟರ್ ಗಳಿಗೆ ಹೋಲಿಸಿದರೆ ದ್ರಾವಿಡ್ ತನ್ನ ವಿಕೆಟ್ ಗೆ ಅತಿ ಹೆಚ್ಚು ಬೆಲೆ ನೀಡುತ್ತದ್ದರು. ಸ್ವಿಂಗ್, ಯಾರ್ಕರ್, ಶಾರ್ಟ್ ಬಾಲ್, ಸ್ಪಿನ್, ಉಹು! ಯಾವ ಬಾಲ್ ಗೂ ಆಡುವುದು ಕಷ್ಟವೆಂಬ ವೀಕ್ನೆಸ್ ದ್ರಾವಿಡ್ ಬಳಿ ಸುಳಿಯಲೇ ಇಲ್ಲ. 1996ರ ಲಾರ್ಡ್ಸ್ ಅಂಗಳದ ಕ್ರಿಕೆಟ್ ಪದಾರ್ಪಣೆಯ ಬಳಿಕ, 2012ರ ನಿವೃತ್ತಯ ತನಕವೂ ತಂಡಕ್ಕೆ ಕಷ್ಟವೆನಿಸಿದಾಗಲೆಲ್ಲಾ ಅಕ್ಷರಷಃ ಭದ್ರಗೋಡೆಯಂತೆಯೇ ಕಾದವರು ದ್ರಾವಿಡ್. ಅದೆಷ್ಟೋ ಸೋಲುಗಳನ್ನು ತಪ್ಪಿಸಿ, ಅವುಗಳನ್ನು ಗೆಲುವಾಗಿ ಮಾರ್ಪಡಿಸಿದ ಹಿರಿಮೆಯೂ ದ್ರಾವಿಡ್ ದು.

ಅಡಿಲೇಡ್ ನ ಉತ್ಕರ್ಷ, ರಾವಲ್ಪಿಂಡಿಯ ರಣೋತ್ಸಾಹ, ಲಾರ್ಡ್ಸ್ ಅಂಗಳದ ಐತಿಹಾಸಿಕ ಶತಕ, ಲಕ್ಷ್ಮಣ್ ಜೊತೆ ಈಡನ್ ಗಾರ್ಡನ್ಸ್ ನ ಹೋರಾಟ, 1999ರ ವಿಶ್ವಕಪ್ ನ ಅತೀ ಹೆಚ್ಚು ರನ್, ಹೆಲ್ಸಿಂಕಿಯಲ್ಲಿನ ಉನ್ಮಾದಗಳ ನೆನಪು ಎಂದಿಗೂ ಹಸಿರು. 2007 ರ ಬಳಿಕ ಏಕದಿನ ತಂಡದಿಂದ ಮೂಲೆಗುಂಪಾದರೂ ಯಾರನ್ನೂ ಒಂದು ಮಾತು ರಾಹುಲ್ ದೂರಲಿಲ್ಲ. ಟೀಕೆಗಳಿಗೆ ಯಾಕೆ ಉತ್ತರಿಸುವುದಿಲ್ಲ ಎಂದು ಕೇಳಿದವರ ಬಳಿ ‘ಅದು ನನ್ನ ಬ್ಯಾಟ್ ಉತ್ತರಿಸುತ್ತದೆ’ ಎಂಬ ಒಂದೇ ಉತ್ತರ! ವಿದೇಶಗಳ ಬೌನ್ಸಿ ಟ್ರ್ಯಾಕ್ ಗಳಲ್ಲಿ ಏಕದಿನ ಪಂದ್ಯಗಳಲ್ಲಿ ಯುವಪಡೆ ಎಡವುತ್ತದೆಂದಾಗಲೆಲ್ಲಾ ಏಕದಿನ ತಂಡಕ್ಕೆ ಮರಳಿ ಕರೆ, ಹೊಸ ಅಸೈನ್ಮೆಂಟ್ ಎಂಬಷ್ಟೇ ಶ್ರದ್ಧೆಯಿಂದ ಅದನ್ನೂ ನಿರ್ವಹಿಸಿ, ಫಾರ್ಮ್ ನ ಉತ್ತುಂಗದಲ್ಲಿದ್ದಾಗಲೇ ರಾಹುಲ್ ನಿವೃತ್ತಿ ಘೋಷಿಸಿಯೂ ಆಗಿತ್ತು!

ಇವನಿನ್ನೂ ಯಾಕೆ ಆಡುತ್ತಿದ್ದಾನೆ ಎಂಬ ಮಾತಿಗಿಂತಲೂ, ಇವನಿನ್ನೂ ಆಡುತ್ತಿರಲಪ್ಪಾ ಎಂಬ ಮಾತುಗಳು ಬರುತ್ತಿರುವಾಗಲೇ ನಿವೃತ್ತಿ ಘೋಷಿಸಬೇಕೆಂಬ ಸತ್ಯ ದ್ರಾವಿಡ್ ಗೆ ಅರಿವಾಗಿತ್ತು. ದುರದೃಷ್ಟವಶಾತ್ ಸಾರ್ವಕಾಲಿಕ ಶ್ರೇಷ್ಠರಲ್ಲೊಬ್ಬನಾದರೂ, ತನ್ನ ಕೆರಿಯರ್ ಉದ್ದಕ್ಕೂ ತೆಂಡೂಲ್ಕರ್ ನೆರಳು ಬಿದ್ದಿತ್ತು. ತೆಂಡೂಲ್ಕರ್ ಆಡುವಾಗಿನ ಉತ್ಸಾಹ, ಸೆಹ್ವಾಗ್ ಬೌಂಡರಿ ಹೊಡೆಯುವಾಗಿನ ಹುಚ್ಚು ಉನ್ಮಾದಗಳು ದ್ರಾವಿಡ್ ಆಡುವಾಗ ಜನರಲ್ಲಿರುತ್ತಿರಲಿಲ್ಲ. ‘ದ್ರಾವಿಡ್ ಬಂದಾಯ್ತು, ಇನ್ನು ಮ್ಯಾಚ್ ಸೇಫ್ ಗುರು’ ಎಂದು ನಿರಾಳವಾಗುತ್ತಿದ್ದವರೇ ಹೆಚ್ಚು. ಯಾವುದೇ ಹುಚ್ಚಾಟಗಳಿಗೆ ಪ್ರಯತ್ನಿಸದೆ, ಟೆಕ್ಸ್ಟ್ ಬುಕ್ ಸ್ಟ್ರೋಕ್ ಗಳಿಂದಲೇ ಪರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದು ದ್ರಾವಿಡ್ ಹೆಚ್ಚುಗಾರಿಕೆ. ಒಳಜಗಳ, ಗುಂಪುಗಾರಿಕೆ, ಇವೆಲ್ಲವುಗಳಿಂದಲೂ ಮಾರುದೂರವಿದ್ದು, ತನ್ನತನವನ್ನು ದ್ರಾವಿಡ್ ಕಾಪಾಡಿಕೊಂಡಿದ್ದರು.

ನಿವೃತ್ತಿಯ ಬಳಿಕವೂ ಭಾರತ ತಂಡದ ಕೋಚ್ ಆಗುವಂತೆ ಆಫರ್ ಗಳು ಬಂದಾಗಲೂ ತಾನು ‘ಎ’ ತಂಡ ಹಾಗೂ ಅಂಡರ್ 19 ತಂಡಕ್ಕೆ ಕೋಚ್ ಆಗುತ್ತೇನೆಂದು ಆ ತಂಡಗಳನ್ನು ಪ್ರಚಂಡವಾಗಿ ಬೆಳೆಸಿದ್ದು ಇದೇ ದ್ರಾವಿಡ್! ದ್ರಾವಿಡ್ ಗರಡಿಯ ಪ್ರತಿಭೆಗಳು ಅಜಿಂಕ್ಯ ರಹಾನೆ, ಕರುಣ್ ನಾಯರ್, ರಿಷಬ್ ಪಂತ್ ಮುಂತಾದವರು ಅಮೋಘ ಪ್ರದರ್ಶನ ತೋರುತ್ತಿದ್ದು, ಭಾರತೀಯ ಕ್ರಿಕೆಟ್ ನ ಭವಿಷ್ಯ ಭದ್ರವಾಗಿದೆ ಎಂದು ಸಾಬೀತುಪಡಿಸುತ್ತಿದ್ದಾರೆ. ಲಿಮಿಟೆಡ್ ಓವರ್ ಪಂದ್ಯಗಳಲ್ಲಿ ದ್ರಾವಿಡ್ ಸಾಮರ್ಥ್ಯ ಪ್ರಶ್ನಿಸಿದವರಿಗೆ ಐಪಿಎಲ್ ಯಶಸ್ಸಿನ ಮೂಲಕವೇ ರಾಹುಲ್ ಉತ್ತರಿಸಿದ್ದಾರೆ.

ರಾಹುಲ್ ರಂತಹಾ ಟೀಮ್ ಮ್ಯಾನ್ ಅನ್ನು ಹೊಂದುವುದು ಎಂತಹ ತಂಡಕ್ಕೂ ಅದೃಷ್ಟದ ಮಾತು. ಭಾರತದ ಬದಲು ಬೇರಾವುದೇ ತಂಡದಲ್ಲಿದ್ದರೆ ದ್ರಾವಿಡ್ ರನ್ನು ಪೂಜಿಸುತ್ತಿದ್ದರು ಎಂದ ಕ್ಯಾಲಿಸ್ ಮಾತು ಅತಿಶಯೋಕ್ತಿಯೇನಲ್ಲ. ‘ಗಾಜಿನ ಮೇಲೆ ನಡೆ ಎನ್ನಿ, ಆತ ಎಷ್ಟು ದೂರ ಎಂದು ಕೇಳುತ್ತಾನೆ’ ಎಂದಿದ್ದರು ಹರ್ಷ ಭೋಗ್ಲೆ! ಕಠಿಣ ಪರಿಶ್ರಮ, ಅಮೋಘ ಪ್ರತಿಭೆ, ಹಾಗೂ ಅಪಾರ ತಾಳ್ಮೆ ದ್ರಾವಿಡ್ ವಿಶೇಷತೆ. ದ್ರಾವಿಡ್ ಖಂಡಿತಾ ಬರಿಯ ಗೋಡೆಯಲ್ಲ, ಭಾರತೀಯ ಕ್ರಿಕೆಟ್ ನ ಭದ್ರ ಕೋಟೆ! ಹ್ಯಾಪಿ ಬರ್ತ್ ಡೇ ದ್ರಾವಿಡ್!

mm

Shreeharsha

Shreeharsha is a correspondent of News Nirantara, residing currently in Mysuru. He likes to play and watch cricket, to read, ride and drive. He is a regular contributor to the Nirantara Blog. He is interested in current affairs, sports and literature and photography.

One thought on “ರಾಹುಲ್ ದ್ರಾವಿಡ್ ಗೋಡೆಯಲ್ಲ; ಭಾರತೀಯ ಕ್ರಿಕೆಟ್ ನ ಭದ್ರಕೋಟೆ

 • January 11, 2017 at 6:50 pm
  Permalink

  ನನ್ನ ಪ್ರಕಾರ ದ್ರಾವಿಡ್ ಒಂದು ಕಟ್ಟಡವಷ್ಟೆ.

  ಒಂದು ಕಾಲಕ್ಕೆ ಗೋಡೆಯಾಗಿದ್ದ ಅದು ಈಗ ಸೇತುವೆಯಾಗಿದೆ.

  ಹಿಂದೆ ಅದರ ನೆರವಿನಿಂದ ಭದ್ರವಾಗಿ ನಿಂತಿದ್ದ ತಂಡ, ಇಂದು ಅದರ ಮೇಲೆ ಯಶಸ್ಸಿನ ಹೆಜ್ಜೆ ಇಟ್ಟಿಗೆ.

  Reply

Leave a Reply

Your email address will not be published. Required fields are marked *