ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು: ಎ ಎಸ್ ಪಾಟೀಲ (ನಡಹಳ್ಳಿ)

ಉದ್ಯಮಿಯಾಗಿ ನಂತರದ ದಿನಗಳಲ್ಲಿ ಯುವ ಸಂಘಟನೆಯ ಮೂಲಕ ಸಾರ್ವಜನಿಕ ವಲಯಕ್ಕೆ ಪರಿಚಿತರಾದ ಎ. ಎಸ್ ಪಾಟೀಲ (ನಡಹಳ್ಳಿ) ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದನ್ನು ಖಂಡಿಸಿ, ಸದನದಲ್ಲಿ ಹಲವು ಬಾರಿ ಗುಡುಗಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸದೇ ಇದ್ದಾಗ ಉತ್ತರ ಕರ್ನಾಟಕ ಭಾಗವನ್ನ ಪ್ರತ್ಯೇಕ ರಾಜ್ಯವನ್ನಾಗಿಸುವಂತೆ ಸದನದಲ್ಲಿ ಆಗ್ರಹಿಸಿದ್ದರು. ಕಾಂಗ್ರೇಸ್ ಪಕ್ಷದಲ್ಲಿದ್ದುಕೊಂಡು 8 ವರ್ಷಗಳ ಅಧಿಕಾರವನ್ನು ಪೂರೈಸಿರುವ ಪಾಟೀಲ ತಮ್ಮ ಪಕ್ಷದ ನಾಯಕರ ಮಲತಾಯಿ ಧೋರಣೆಯನ್ನು ಖಂಡಿಸಿ ಇತ್ತೀಚಿಗೆ ಸಾರ್ವಜನಿಕವಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಪದಾರ್ಪಣೆ ಮಾಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಕುರಿತು ಶಾಸಕರು ನ್ಯೂಸ್ ನಿರಂತರದೊಂದಿಗೆ ಹೇಳಿದ ಮಾತುಗಳು ಹೀಗಿವೆ.

1) ಸತತ ಎರಡು ಬಾರಿ ದೇವರ ಹಿಪ್ಪರಗಿ ಮತ ಕ್ಷೇತ್ರದಿಂದ ಆಯ್ಕೆ ಆಗಿದ್ದೀರಿ, ಜನರ ಸ್ಪಂದನೆ ಹೇಗಿದೆ ಸರ್?

ಎರಡು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೀನಿ, ನಾನು ಕೆಲಸ ಮಾಡಿರುವ ಕುರಿತು ತೃಪ್ತಿ ಇದೆ, ಆದರೇ ಸಂಪೂರ್ಣ ಸಮಾಧಾನ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು, ಅಂದರೆ ಹಿಂದೆ ಬಿಜೆಪಿ ಇವತ್ತು ಕಾಂಗ್ರೇಸ್ ಎರಡೂ ಪಕ್ಷಗಳು ನಮ್ಮ ಅಭಿವೃದ್ದಿ ವಿಚಾರಗಳಿಗೆ ಸ್ಪಂದಿಸಲಿಲ್ಲ. ಈ ಸಂಬಂಧ ನಾನು ಹೋರಾಟ ಮಾಡಿಕೊಂಡೇ ಬಂದಿದ್ದೇನೆ, ಬಹುಷಃ ಮುಂದಿನ ದಿನಗಳಲ್ಲಿ ವೇಗವಾಗಿ ಕಾರ್ಯ ನಿರ್ವಹಿಸುವಲ್ಲಿ ಇನ್ನಷ್ಟು ಶ್ರಮಿಸುತ್ತೇನೆ.

2) ತಾವು ಯುವ ಸಂಘಟನೆಯ ನಾಯಕರಾಗಿದ್ದವರು. ಈಗ ಶಾಸಕರಾಗಿದ್ದೀರಿ ಜನ ನಿಮ್ಮನ್ನು ಕಾಣುವ ಪರಿ ಏನಾದರು ಬದಲಾಗಿದೆಯಾ?
ಮೊದಲಿಗಿಂತ ಶಾಸಕನಾದ ಮೇಲೆ ಜನರ ಸ್ಪಂದನೆ ಹೆಚ್ಚಾಗಿದೆ. ನಾನೊಬ್ಬ ಉದ್ಯಮಿಯಾಗಿದ್ದಾಗಲೂ ಸಮಾಜಕ್ಕೆ ನನ್ನದೆ ಆದ ಕೊಡುಗೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಎರಡು ಬಾರಿ ಅಧಿಕಾರ ನೀಡಿದ್ದಾರೆ. ಇನ್ನಷ್ಟು ಕೆಲಸಗಳು ಬಾಕಿ ಇದೆ. ಮುಂದಿನ ಚುನಾವಣೆಯಲ್ಲಿ ಮೊದಲಿಗಿಂತ ಹೆಚ್ಚಿನ ಮತಗಳಿಂದ ಜನ ನನ್ನನ್ನು ಆಯ್ಕೆ ಮಾಡುತ್ತಾರೆಂಬ ನಂಬಿಕೆ ಇದೆ. ಆ ಎಲ್ಲ ಕಾರ್ಯಗಳನ್ನ ಪೂರ್ಣಗೋಳಿಸಲು ಅವಕಾಶ ಸಿಗುವ ಭರವಸೆ ಇದೆ.

3) ನಿಮ್ಮ ಪ್ರಕಾರ ಪ್ರಜಾಪ್ರಭುತ್ವ ಎಂದರೆ?
ಸಮಾಜದ ಕಟ್ಟ ಕಡೆಯ ಮನುಷ್ಯನು ನೆಮ್ಮದಿಯಿಂದ ಬದುಕಲು ಬೇಕಾದ ಸರ್ಕಾರದ ಸೌಲಭ್ಯಗಳ ಯಾವಾಗ ದೊರೆಯುತ್ತದೆ, ಅವತ್ತು ಪ್ರಜಾಪ್ರಭುತ್ವ ಸ್ಥಾಪಿತವಾಗುತ್ತದೆ. ಇದುವರೆಗೂ ಸಂಪೂರ್ಣ ಪ್ರಜಾಪ್ರಭುತ್ವ ನೆಲೆಯೂರಿಲ್ಲ ಎಂದೆನಿಸುತ್ತದೆ. ಇವತ್ತಿಗೂ ಜಾತಿ ಹಾಗೂ ಅಂತಸ್ತಿನ ಸಮಸ್ಯೆಗಳಿರುವುದು ಇದಕ್ಕೆ ಕಾರಣವಾಗಿದೆ.

4) ಕಾಂಗ್ರೆಸ್ ಪಕ್ಷ ನಿಮ್ಮ ಯೊಜನೆಗಳಿಗೆ, ಚಿಂತನೆಗಳಿಗೆ ಕೈ ಜೋಡಿಸಿತೇ?
ಖಂಡಿತಾ ಇಲ್ಲ. ಪಕ್ಷದ ನಾಯಕರು ಅಧಿಕಾರಕ್ಕೆ ಬಂದಮೇಲೊಂತರಾ ಆಡ್ತಾರೆ, ಬರೋಕಿಂತ ಮೊದಲು ಬೇರೆ ಇರ್ತಾರೆ. ಈ ಒಳಗೊಂದು ಹೊರಗೊಂದು ಇರೋ ವ್ಯವಸ್ತೆಯನ್ನು ನಾನು ಪ್ರತಿಭಟಿಸಿದೆ ಅನ್ನೋ ಕಾರಣಕ್ಕೆ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಹಾಗೂ ಷಡ್ಯಂತ್ರಗಳು ನಡೆದವು. ಅದಕ್ಕೆ ನಮ್ಮ ಕಾರ್ಯಕರ್ತರು ಸರಿಯಾದ ಉತ್ತರ ನೀಡಿದ್ದಾರೆ.

5) ಸದನದಲ್ಲಿ ಪ್ರತ್ಯೇಕ ರಾಜ್ಯದ ಕೂಗನ್ನು ಹಾಕಿದ್ದೀರಿ ತಾವು. ಈ ಬಗ್ಗೆ ಏನು ಹೇಳುತ್ತೀರಿ?
ಪ್ರತ್ಯೇಕ ರಾಜ್ಯದ ಮಾತು ಬರಲು ಕಾರಣ ಉತ್ತರ ಕರ್ನಾಟಕ ಭಾಗ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು. ರಾಜ್ಯದ ಅಭಿವೃದ್ದಿಯಲ್ಲಿ ಅಖಂಡ ಕರ್ನಾಟಕದ ಪಾತ್ರವಿದೆ. ಪ್ರತಿಯೊಂದಕ್ಕೂ ನಮ್ಮ ಜನ ಬೆಂಗಳೂರು ವiಹಾನಗರವನ್ನೇ ಅವಲಂಬಿಸುವಂತಾದರೆ ಹೇಗೆ? ಈ ತಾರತಮ್ಯ ಹೋಗಬೇಕು. ಕಂಡಕ್ಟರ್, ಪ್ಯೂನ್ ನಂತಹ ಸಣ್ಣ ಕೆಲಸದ ಸಂದರ್ಶನಕ್ಕೂ ನಮ್ಮ ಜನ ಪರದಾಡುವುದು ಬೇಡ ಅನ್ನುವುದಷ್ಟೇ ನನ್ನ ನಿಲುವು.

6) ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್‍ಗೆ ಸೇರಿದ್ದೀರಿ. ನಿಮ್ಮ ಮುಂದಿನ ಆಲೋಚನೆ?
ಹಲವಾರು ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳ ಮುಂದಿಡುವ ಸಮಸ್ಯಗಳಿಗೆ ಸ್ಪಂದನೆ ಸಿಗದಿರುವುದನ್ನೆ ಹೆಚ್ಚಾಗಿ ಕಂಡಿದ್ದೀವಿ. ಕಾವೇರಿ ಹಾಗೂ ಮಹದಾಯಿ ನದಿ ನೀರಿನ ಕುರಿತು ಈ ಪಕ್ಷಗಳ ನಿಲುವು ಬೇಸರವನ್ನುಂಟು ಮಾಡಿದೆ. ಜೊತೆಗೆ ಮಹದಾಯಿ ಹೋರಾಟಗಾರರ ಮೇಲಾದ ಹಲ್ಲೆಗೆ ರೈತರನ್ನೇ ಅಪರಾಧಿಗಳನ್ನಾಗಿ ಮಾಡಿದ ಎರಡೂ ರಾಷ್ಟ್ರೀಯ ಪಕ್ಷಗಳನ್ನ ಗಡಿಪಾರು ಮಾಡುವಲ್ಲಿ ಶ್ರಮಿಸಬೇಕಿದೆ.

7) ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಜೆಡಿಎಸ್ ಗೆ ಕಾಲಿಟ್ಟಿದ್ದೀರಿ. ನಿಮ್ಮ ಮತ ಕ್ಷೇತ್ರದ ಜನ ಇದನ್ನ ಒಪ್ಪುತ್ತಾರಾ?
ನನಗೆ ತಿಳಿದಂತೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಆಗ್ತಾನೆ. ಜೊತೆಗೆ ಜನ ಹಿತ ತುಂಬಾನೆ ಮುಖ್ಯ ಅನ್ನೋದು ನನ್ನ ಅಭಿಪ್ರಾಯ.
ನನ್ನ ಈ ನಿಲುವನ್ನ ಜನಾ ಒಪ್ಪಿ ಬೆಂಬಲಿಸಿದ್ದಾರೆ.

8) ರಾಜಕೀಯವನ್ನು ಹೊರತು ಪಡಿಸಿ ರಾಜ್ಯದ ಅಭಿವೃದ್ದಿ ಸಾಧ್ಯವೇ?
ಅಭಿವೃದ್ಧಿಯೇ ಬೇರೆ, ರಾಜಕೀಯವೇ ಬೇರೆ. ಚುನಾವಣೆ ಮುಗಿದ ತಕ್ಷಣವೇ ರಾಜಕೀಯವನ್ನು ಬದಿಗಿಡಬೇಕು. ಒಟ್ಟಾರೆ ಗ್ರಾಮದ ಹಿತದೃಷ್ಟಿಯಿಂದ ಕ್ರೀಯಾಶೀಲರಾಗಿ ಕೆಲಸ ಮಾಡಿದರೆ ಅಭಿವೃದ್ದಿ ಸಿದ್ಧಿಸುತ್ತದೆ.

9) ಕೇಂದ್ರ ಸರ್ಕಾರದ ನೋಟು ಅಪಮೌಲ್ಯೀಕರಣದ ಕುರಿತು ನಿಮ್ಮ ನಿಲುವು?
ಮೊದಲು ನಾನು ಅದನ್ನು ಸ್ವೀಕರಿಸಿದ್ದೆ. ಆದರೆ, ಯೋಜನೆಗಳ ಪರಿಣಾಮ ಮಾತ್ರ ಸಾಮಾನ್ಯ ಜನರನ್ನು ಸಮಸ್ಯೆಗೆ ಸಿಲುಕಿಸಿದೆ. ವಾಣಿಜ್ಯೋದ್ಯಮಿಗಳಿಗೆ ಇದು ಸಹಾಯಕವೇ ಹೊರತು ಸಾಮಾನ್ಯರಿಗಲ್ಲ. ಈ ಮೂಲಕ ಜನರ ಆರ್ಥಿಕ ಹಕ್ಕನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿದೆ. ಒಂದು ರೀತಿ ಸರ್ವಾಧಿಕಾರಿ ಧೋರಣೆ ಇದು.

10) ನಿಮ್ಮ ಪ್ರಕಾರ ಉತ್ತರ ಕರ್ನಾಟಕದ ಅಭಿವೃದ್ದಿ ಯಾವ ನಿಟ್ಟಿನಲ್ಲಿ ಆಗಬೇಕು?
ಎಲ್ಲಾ ನಿಟ್ಟಿನಲ್ಲಿ ಆಗಬೇಕು. ಶೈಕ್ಷಣಿಕವಾಗಿ, ಆರೋಗ್ಯ ದೃಷ್ಟಿಯಿಂದ, ಮೂಲಭೂತ ಸೌಕರ್ಯಗಳಿಂದ, ನೀರಾವರಿಯಲ್ಲಿ, ಕೈಗಾರಿಕೆಯಲ್ಲಿ, ಎಲ್ಲಾ ಹಂತದಲ್ಲಿಯೂ ಸುಧಾರಣೆ ಆಗಬೇಕು.

mm

Vijayalaxmi Metagar

ನಾನು ಉತ್ತರ ಕರ್ನಾಟಕದ ಹುಡುಗಿ, ಊರು ವಿಜಯಪುರ. ಹೆಸರು ವಿಜಯಲಕ್ಷ್ಮೀ ಮೆಟಗಾರ. ಪತ್ರಕರ್ತೆಯಾಗುವ ಕನಸನ್ನು ಹೊತ್ತು ಮೈಸೂರ ಮಡಿಲ ಸೇರಿರುವೆ. ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಇಷ್ಟ, ಸಾಹಿತ್ಯದ ಅರಿವಿಲ್ಲ. ತಿಳಿದಿರುವ ವಾಸ್ತವವನ್ನು ಬರೆಯುವ ಹವ್ಯಾಸವಿದೆ. ನನ್ನ ಒಡನಾಡಿಗಳು ಮಾತಿನ ಮಲ್ಲಿ ಎನ್ನುತ್ತಾರೆ, ನನಗೂ ಮಾತೆ ಆಸ್ತಿ. ಟಿವಿ ನಿರೂಪಕಿಯಾಗುವುದು ಬದುಕಿನ ಭಾವಿ ಕನಸು. ಆಧುನಿಕ ಸಮೂಹ ಮಾಧ್ಯಮಗಳ ಬಳಕೆಯಲ್ಲಿ ತೊಡಗುವುದು ರೂಢಿಸಿಕೊಂಡಿದ್ದೇನೆ. ಪ್ರಸ್ತುತ ಪತ್ರಿಕೋದ್ಯಮದಲ್ಲಿ ಎಂ ಎ ವ್ಯಾಸಂಗ ಮಾಡುತ್ತಿರುವೆ.

One thought on “ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು: ಎ ಎಸ್ ಪಾಟೀಲ (ನಡಹಳ್ಳಿ)

Leave a Reply

Your email address will not be published. Required fields are marked *