ಕೆಜಿಗಟ್ಟಲೆ ಮನರಂಜನೆ ನೀಡುವ ಕಾಲ್ ಕೆಜಿ ಪ್ರೀತಿ!

ಗುರು ತನ್ನ ಕಾಲೇಜಿನ ಹುಡುಗಿ ಶ್ರೀಯನ್ನು ಆರು ತಿಂಗಳಿಂದ ಪ್ರೀತಿಸುತ್ತಾ, ಅವಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ದಾರಿ ತಿಳಿಯದೆ ಪರದಾಡುತ್ತಿರುತ್ತಾನೆ. ಎಲ್ಲೋ ಏನೋ ಅದ್ಭುತ ಘಟಿಸಿ‌ ಅವಳು ತನಗೆ ಸಿಗುವ ಸಂದರ್ಭ ಒದಗಬಹುದು, ತನ್ನ ಪ್ರೀತಿ ಗೆಲ್ಲಬಹುದು ಎಂಬ ಆಸೆಯಲ್ಲಿ ಗುರು ಇರುತ್ತಾನೆ. ಅಂತಹ ಒಂದು‌ ಸಂದರ್ಭವೂ ಬರುತ್ತದೆ! ನಾಯಕಿ ಶ್ರೀ ಹಾಗೂ ನಾಯಕ ಗುರು ಒಂದೇ ಕಾರಿನಲ್ಲಿ ಊರಿಗೆ ಹೋಗುವ ಮೂಲಕ ಕಾಲು ಕೆಜಿ ಪ್ರೀತಿ ಸಿನಿಮಾ ಕತೆ ತೆರೆದುಕೊಳ್ಳುತ್ತದೆ.

ಕನ್ನಡ ಸಿನಿಮಾಗಳಲ್ಲಿ ಇಂತಹ ಒಂದು ಪ್ರಯಾಣದ ಕಥಾನಕ ಅಪರೂಪವೇ. ಕನ್ನಡದ ಯುವ ಪ್ರೇಕ್ಷಕ ವರ್ಗ ಇಷ್ಟಪಡುವಂತಹ ಹೊಸ, ಸೊಗಸಾದ ಯುವಕರ ಕತೆ ಕಾಲು ಕೆಜಿ ಪ್ರೀತಿ ಸಿನಿಮಾದಲ್ಲಿದೆ. ಗುಟ್ಟಾಗಿ ಪ್ರೀತಿಸುವ, ಕಾತರಿಸುವ ಪಾತ್ರದಲ್ಲಿ ವಿಹಾನ್ ಗೌಡ ಹಾಗೂ ಆತನ ಮುಗ್ಧತೆಯನ್ನು ಪರೀಕ್ಷಿಸಿ, ಆತನನ್ನು ಪ್ರೀತಿಸುವ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ಮಿಂಚಿದ್ದಾರೆ.

ನೋಡುತ್ತಿದ್ದಂತೆ ಪ್ರೀತಿ ಆಗಿಬಿಡುತ್ತದೆ ಎಂಬಂತಹ ಸಿನಿಮಾಗಳ ಮಧ್ಯೆ, ತಿಂಗಳುಗಟ್ಟಲೆ ಪ್ರೀತಿಸಿ, ಹೇಳಿಕೊಳ್ಳಲಾಗದೆ ತಹತಹಿಸುವ ಕತೆ ಬಹುತೇಕ ವಾಸ್ತವಕ್ಕೆ ಹತ್ತಿರವಿದೆ. ದಾರಿಯುದ್ದಕ್ಕೂ ಪರಸ್ಪರರ ಕಾಲೆಳೆಯುವ, ಸಿಡುಕುವ, ಕಿತ್ತಾಡುವ ನಾಯಕ – ನಾಯಕಿ, ಪಶ್ಚಿಮ ಘಟ್ಟಗಳ ಸೌಂದರ್ಯದ ನಡುವೆ ಚಿತ್ರೀಕರಿಸಿದ ದೃಶ್ಯಗಳು, ಚೇತನ್ ಸಾಸ್ಕಾ ಸಂಗೀತ ಚಿತ್ರವನ್ನು ಇನ್ನಷ್ಟು ಸೊಗಸಾಗಿಸಿವೆ.

ಕೇವಲ ಎರಡು ಪಾತ್ರಗಳು ಚಿತ್ರದುದ್ದಕ್ಕೂ ಆವರಿಸಿದ್ದು, ಅಪ್ಪಟ ಕನ್ನಡದ ಯುವಪ್ರತಿಭೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನಗುತ್ತಾ, ಕಿತ್ತಾಡುತ್ತಾ, ಸುಂದರ ಪ್ರಕೃತಿಯ ಮಡಿಲಲ್ಲಿ ಸಾಗುವಾಗ ನೋಡುಗನೂ ಅವರೊಡನೆ ಸಾಗುವುದು ಸುಳ್ಳಲ್ಲ.

ಮೊದಲ ಇಪ್ಪತ್ತು ನಿಮಿಷ ನಿಧಾನಗತಿಯಲ್ಲಿ ಸಾಗಿ ಬೋರಾಗುವ ಚಿತ್ರ, ಮುಂದಿನ ಅಷ್ಟೂ ಹೊತ್ತು ಸಂಪೂರ್ಣ ಮನರಂಜನೆಯೊಂದಿಗೆ, ಒಂದಷ್ಟು ಭಾವನೆಗಳನ್ನು ಕೆಣಕುತ್ತದೆ. ಒಂದು ರುಚಿಕಟ್ಟಾದ ಸಿನಿಮಾವನ್ನು ಉಣಬಡಿಸುವ ಪ್ರಯತ್ನದಲ್ಲಿ ನಿರ್ದೇಶಕ ಸತ್ಯ ಶೌರ್ಯ ಸಾಗರ್ ಯಶಸ್ವಿಯಾಗಿದ್ದಾರೆ. ಆದರೆ ಬಿಗ್ ಬಜೆಟ್ ಸಿನಿಮಾಗಳ ನಡುವೆ ಥಿಯೇಟರ್ ಪಡೆಯುವಲ್ಲಿ ಕಾಲ್ ಕೆಜಿ ಸಾಕಷ್ಟು ಪರದಾಡಿದೆ. ಒಂದು ಸೊಗಸಾದ ಪ್ರಯತ್ನದೊಂದಿಗೆ ಬಂದಿರುವ ಈ ಹೊಸಬರ ತಂಡಕ್ಕೆ ಪ್ರೋತ್ಸಾಹ ನೀಡಿ ಗೆಲ್ಲಿಸಿದರೆ ಕನ್ನಡ ಚಿತ್ರರಂಗಕ್ಕೆ ಸ್ವಮೇಕ್ ಚಿತ್ರಗಳು ಹೆಚ್ಚಾಗಿ ಮೂಡಿಬರಬಹುದೇನೋ.

mm

shrithi joyappa

Shrithi is a fun loving girl who lives every moment of life. She loves to dance, roam, read and most importantly, eat. Shrithi is a regular contributor of news and write ups for the News Nirantara organisation.

Leave a Reply

Your email address will not be published. Required fields are marked *