ಶುದ್ಧಿ – ಸಿನೆಮಾ ವಿಮರ್ಶೆ

ಇತ್ತೀಚಿನ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಗಳು ಮೂಡುತ್ತಿರುವ ವಿಷಯ ಎಲ್ಲರ ಗಮನಕ್ಕೂ ಬಂದಿರುತ್ತದೆ. ಒಂದೊಂದಾಗಿ ಅಪ್ಪಳಿಸುತ್ತಿರುವ ಅಲೆಗಳಲ್ಲಿ, ಇದೀಗ ನಮ್ಮನ್ನು ಮುಟ್ಟಿರುವ ಅಲೆ ‘ಶುದ್ಧಿ’. ಸಮಾಜವನ್ನು ಶುದ್ದೀಕರಿಸುವ ಪ್ರಯತ್ನದಲ್ಲಿ, ಸಮಾಜದ ಕಣ್ದೆರೆಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಪ್ರಸ್ತುತ ಜಗತ್ತಿನಲ್ಲಿನ ಮಹಿಳಾ ಶೋಷಣೆಯನ್ನು ಎತ್ತಿ ಹಿಡಿದು, ಅದರ ವಿರುದ್ಧ ಸಮಾಜವನ್ನು ಎತ್ತಿಕಟ್ಟುವುದು, ಸಮಾಜವನ್ನು ಹುರಿದುಂಬಿಸುವುದು ಸಿನೆಮಾದ ಒಂದು ಉದಾತ್ತ ಚಿಂತನೆಯಾಗಿರುತ್ತದೆ. ಹಾಗಾಗಿ, ಹೆಣ್ಣಿನ ಶೋಷಣೆಯೇ ಚಿತ್ರದ ಕಥಾವಸ್ತುವಾಗಿದೆ.

Shuddhi

ಪ್ರಾರಂಭದಿಂದ ಕೆಲ ಸಮಯದ ವರೆಗೂ ಮಾತಿಗಿಂತ ಹಿನ್ನೆಲೆ ಸಂಗೀತ (background score) ಕಥೆಯನ್ನು, ಕಥೆಯ ತೀವ್ರತೆಯನ್ನು ಗೊತ್ತು ಮಾಡಿಸುತ್ತದೆ. ನಂತರ, ಕಥೆಯ ಎಳೆ ಒಂದೊಂದಾಗಿ ಅನಾವರಣಗೊಳ್ಳುತ್ತದೆ. ಪ್ರಸ್ತುತ ಜಗತ್ತಿನಲ್ಲಿನ ಘಟನೆಗಳನ್ನು ಸುಂದರ ಸುಲಲಿತವಾಗಿ ಕಥೆಯೊಡನೆ ಮೇಳೈಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಸಧ್ಯ ಕೆಲ ವರ್ಷಗಳಲ್ಲಿ ನಡೆದ ಹಲವು ನೈಜ ಘಟನೆಗಳನ್ನು ಇಲ್ಲಿ ಉಪಯೋಗಿಸಿಕೊಂಡಿದ್ದಾರೆ. ಸಮಾಜದ ಧಾರುಣ ಸತ್ಯಗಳು, ಧಾರುಣ ಹತ್ಯೆಗಳನ್ನು ಚಿತ್ರದಲ್ಲಿ ಸಂಧಿಸಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ರೂಪ ಒಂದು ಕಡೆಯಿಂದ ತೋರಿಸಲ್ಪಟ್ಟರೆ, ಹೇಗೆ ಅದನ್ನು ಹಿಮ್ಮೆಟ್ಟಿ ನಡೆಯಲು ಮಹಿಳೆಯರು ಎದ್ದು ನಿಲ್ಲುತ್ತಿದ್ದಾರೆ ಎಂದು ಇನ್ನೊಂದೆಡೆ ಚಿತ್ರಿಸಿದ್ದಾರೆ.

ಹಲವು ದೃಶ್ಯಗಳು, ನೋಡುಗರನ್ನು ಮೈನವಿರೇಳಿಸುವಂತೆ ಮಾಡುವುದು. ಕೆಲವು ಸತ್ಯಗಳ ಪ್ರಸ್ತುತಿ ರೋಮ ರೋಮವನ್ನು ಬಡಿದೆಬ್ಬಿಸುತ್ತದೆ. ಬೀದಿ ನಾಟಕಗಳು, ಸಂಚಾರಿ ನಾಟಕಗಳ ಪರಿಣಾಮವನ್ನು ಒಂದು ಬಗೆಗೆ ತೋರಿಸಿದ್ದಾರೆ. ಸರಕಾರದ ಕಾಯಿದೆಗಳು, ರಾಜಕಾರಣಿಗಳು ತಲೆಕೆಡಿಸಿಕೊಳ್ಳದೆ ಒಬ್ಬರನ್ನೊಬ್ಬರು ದೂಷಿಸುವುದನ್ನು ತೋರಿಸುವುದರ ಜೊತೆ ಜೊತೆಯಲ್ಲಿ ಕ್ರೈಂ ಬ್ರಾಂಚುಗಳ ಕೆಲಸ, ಪ್ರಯತ್ನವನ್ನು ಪ್ರದರ್ಶಿಸಿದ್ದಾರೆ. ಕುರ್ಚಿಯ ಕರಾಮತ್ತು, ದುಡ್ಡಿನ ಮತ್ತು ತೋರಿಸಿದೆ ಚಿತ್ರ, ಕೊನೆಯ ಹಂತದಲ್ಲಿ ಯಾರಿಗೂ ಹೆದರದ ನಿಷ್ಠಾವಂತ ಪೋಲೀಸರನ್ನು ಕಾಣಿಸುತ್ತದೆ. ನೈಜ ಘಟನೆಗಳಿಂದ ಪ್ರಾರಂಭವಾದ ಚಿತ್ರ, ಕೊನೆಗೆ ಭಾವನಾ ಲೋಕದಲ್ಲಿ ಸಹೃದಯರನ್ನು ತೇಲಿಸಿಬಿಡುತ್ತದೆ. ಚಿತ್ರದ ಕೊನೆಯ ಹತ್ತು ನಿಮಿಷಗಳಲ್ಲಿ ಚಿತ್ರದ timeline ತಿಳಿಯುತ್ತದೆ. ಕೊನೆಯ ಹತ್ತು ನಿಮಿಷಗಳಲ್ಲಿ ಇಡೀಯ ಚಿತ್ರದ ರಚನೆ ಅರ್ಥವಾಗುತ್ತದೆ.

shuddhi+753687_1487840121

ಇನ್ನು ನಟನೆಯ ವಿಷಯಕ್ಕೆ ಬಂದರೆ, ಹಲವು ರಂಗ ಭೂಮಿಯ ನಟರನ್ನು ಇಲ್ಲಿ ಕಾಣಬಹುದಾಗಿದೆ. ಅದ್ಭುತ ನಟನೆಯ ಪ್ರದರ್ಶನ ಇದಾಗಿದೆ. ಪ್ರತಿಯೊಬ್ಬರ ನಟನೆ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಜಯಕಾರಿಯಾಗಿದೆ. ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರ ಪ್ರಯತ್ನ ಸಫಲವಾದಂತೆ ತೋರುತ್ತದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ನವೀನ ಪ್ರಯತ್ನವಾಗಿದ್ದು, ಯಶಸ್ವಿಯಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಚಿತ್ರ ಮುಗಿಯುವ ಹೊತ್ತಿಗೆ, ನೋಡುಗರನ್ನು, ಅವರ ಭಾವಗಳನ್ನು ಶುದ್ಧೀಕರಿಸುತ್ತದೆ ‘ಶುದ್ಧಿ’.

ಹಲವು ದೃಶ್ಯಗಳನ್ನು ಕರಾಳವಾಗಿ ಚಿತ್ರಿಸಿದ್ದಾರೆ, ಮನಸ್ಸಿಗೆ ನೋವುಂಟುಮಾಡುವ ಹಾಗೆ ಪ್ರದರ್ಶಿಸಿದ್ದಾರೆ, ಹಲವು ದೃಶ್ಯಗಳಲ್ಲಿನ ಧ್ವನಿ ಕಿವಿಗೆ ಅಪ್ಪಳಿಸಿ ಮನಸ್ಸಿಗೆ ಒಂದು ಬಗೆಯ ಕರಾಳ ಭಾವನೆಯನ್ನು ಉಂಟು ಮಾಡಿದೆ ಎಂದು ಕೆಲವು ಜನ ಅಭಿಪ್ರಾಯ ಪಟ್ಟಿದ್ದಾರೆ, ಆದರೆ ಅದು ಪ್ರಸ್ತುತ ಜಗತ್ತಿನ ನೈಜ ಚಿತ್ರಣವಾಗಿದೆ. ಓರ್ವ ಮಹಿಳೆ ಎಲ್ಲರ ಮೇಲೆ ದ್ವೇಷ ತೀರಿಸಿಕೊಂಡು ನ್ಯಾಯ ಒದಗಿಸಿಕೊಡುವ ಪರಿ ಅಷ್ಟು ಪ್ರಸ್ತುತ ಎನಿಸದಿದ್ದರೂ, ಸಹನೆಯ ಎಲ್ಲೆಯನ್ನು ಮೀರಿದರೆ ಅದರ ಪರಿಣಾಮ ಏನಿರಬಹುದು ಎಂದು ಒಂದು ಸಂದೇಶವನ್ನು ಗೌಪ್ಯವಾಗಿ ನೀಡಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಸಮಾಜದ ಸ್ಥಿತಿಯನ್ನು ತಿಳಿಯಲು, ಸಮಾಜವನ್ನು ಶುದ್ಧೀಕರಿಸಲು ಈ ಚಿತ್ರವನ್ನು ನೋಡಲೇಬೇಕಾಗಿದೆ. ಚಿತ್ರ ನೋಡಿದ ನಂತರ, ಪ್ರತಿಯೊಬ್ಬರೂ ಹೆಣ್ಣನ್ನು ಆದರಿಸುವ ಪರಿ ಕಲಿಯುವುದು ಖಂಡಿತ. ಪ್ರಾಯಪ್ರಬುದ್ಧರಾದ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು ಎನ್ನುವುದು ಕೊನೆಯ ಮಾತಾಗಿದೆ.

mm

Sachin L S

Sachin L S is a graduate in mechanical engineering and is passionate about riding. Writes blogs, poems and stays aware of the current events of national and international importance. Hailing from Honnesara, Sagara; he currently resides in Bengaluru. Sachin is open to suggestions, queries and requests.

Leave a Reply

Your email address will not be published. Required fields are marked *