ಯಶಸ್ಸಿನ ಅಮಲು ನೆತ್ತಿಗೇರಿದರೆ ಕಪಿಲ್ ಕಾಮಿಡಿ ಟ್ರಾಜಿಡಿಯಾದೀತು!

ಹಲವು ವರ್ಷಗಳ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಂದು ಕವನ ಬರೆದಿದ್ದರು. ಅದರಲ್ಲಿ ತನ್ನನ್ನು ಬಹಳ ಎತ್ತರಕ್ಕೆ ಏರಿಸಬೇಡ, ಎತ್ತರದ ಬೆಟ್ಟಗಳಲ್ಲಿ, ಪರ್ವತಗಳಲ್ಲಿ ಬರಿಯ ಮಂಜು ತುಂಬಿರುತ್ತದೆಯೇ ಹೊರತು ಹಸಿರು ತಬ್ಬುವುದಿಲ್ಲ. ನನ್ನವರನ್ನು ತಬ್ಬಿಕೊಳ್ಳಲಾಗದಷ್ಟು ಎತ್ತರಕ್ಕೆ ನನ್ನನ್ನು ಏರಿಸಬೇಡ, ಎಂದು ಅವರು ದೇವರಲ್ಲಿ ವಿನಮ್ರವಾಗಿ ಪ್ರಾರ್ಥಿಸಿದ್ದರು. ಅಂತಹ ಮನೋಭಾವದಿಂದಲೇ ವಾಜಪೇಯಿ ಓರ್ವ ರಾಜಕಾರಣಿಯಾಗಲ್ಲದೆ ಓರ್ವ ಶ್ರೇಷ್ಠ ವ್ಯಕ್ತಿಯಾಗಿ ಅಜಾತಶತ್ರು ಎನಿಸಿಕೊಂಡರು.

ಯಶಸ್ಸು ಬಂದಾಗ ಅದು ವ್ಯಕ್ತಿಯನ್ನು ಇನ್ನಷ್ಟು ವಿನೀತನನ್ನಾಗಿ, ವಿನಮ್ರನನ್ನಾಗಿ ಮಾಡಬೇಕು. ಮುಂಜಾನೆ ಉದಯಿಸುವ ಸೂರ್ಯ ದೊಡ್ಡದಾಗಿ ಕಂಡರೂ, ನೆತ್ತಿಯ ಮೇಲೆ ಬರುವ ಸಮಯದಲ್ಲಿ ಸಾಕಷ್ಟು ಪ್ರಖರನಾಗಿ, ಚಿಕ್ಕವನಾಗಿ ಕಾಣಿಸುತ್ತಾನೆ. ಹಾಗೆಯೇ ಯಶಸ್ಸೂ ವ್ಯಕ್ತಿಯನ್ನು ಪ್ರಖರ ಹಾಗೂ ವಿನಮ್ರವಾಗಿಸಬೇಕು.

ಇತ್ತೀಚಿಗೆ ನಡೆದ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ನಡುವಿನ ಜಗಳ ಇದೆಲ್ಲಾ ನೆನಪು‌ ಮಾಡಿತು. ಕೆಲವು ವರ್ಷಗಳ ಹಿಂದೆ ಕಪಿಲ್ ಶರ್ಮಾ ಎಂಬ ವ್ಯಕ್ತಿ ಯಾರಿಗೂ ತಿಳಿಯದ, ಅಸಾಮಾನ್ಯ ಪ್ರತಿಭೆ ಹೊಂದಿದ್ದ ಎಲೆಮರೆಯ ಕಾಯಿ. ಕಾಮಿಡಿ ನೈಟ್ ಎಂಬ ರಿಯಾಲಿಟಿ ಶೋ ಆತನ ಪ್ರತಿಭೆಗೆ ಸೂಕ್ತ ವೇದಿಕೆಯಾಗಿ ಪರಿಣಮಿಸಿತು. ಅಲ್ಲಿಂದ ಮುಂದೆ ಕಪಿಲ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಾ ಸಾಗಿತು.

ಕಲರ್ಸ್ ವಾಹಿನಿಯಲ್ಲಿ ತನ್ನದೇ ಬಳಗದೊಂದಿಗೆ ಆರಂಭಿಸಿದ ಕಾಮಿಡಿ ನೈಟ್ಸ್ ವಿದ್ ಕಪಿಲ್ ಅಂತೂ ಟಿವಿ ಇತಿಹಾಸದಲ್ಲೇ ಟಿಆರ್ಪಿಯ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ಒಂದು ಕಾಲದಲ್ಲಿ ಕಪಿಲ್ ಎಂದರೆ ಯಾರೆಂದೇ ಗೊತ್ತಿರದ, ಬಳಿಕ ಓರ್ವ ಸಾಮಾನ್ಯ ಕಾಮಿಡಿಯನ್ ಎಂದು ಗುರುತಿಸಲ್ಪಟ್ಟ ಕಪಿಲ್ ಸ್ಟಾರ್ ಗಿರಿ ನಿಧಾನವಾಗಿ ಆರಂಭವಾಗಿತ್ತು. ಬಾಲಿವುಡ್‌ನ ಹೆಸರಾಂತ ನಟ-ನಟಿಯರು ತಮ್ಮ ಚಿತ್ರಗಳ ಪ್ರಚಾರಕ್ಕೆ ಕಾಮಿಡಿ ನೈಟ್ಸ್ ನ ಒಂದು ಸಂಚಿಕೆಗಾಗಿ‌‌ ಕಾದು ಕೂರುವಂತಾಯಿತು. ಸಾಮಾನ್ಯನೊಬ್ಬ ಸಾಧನೆ, ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಕಪಿಲ್ ತೋರಿಸಿದ್ದರು. ಅಷ್ಟರಲ್ಲಾಗಲೇ ಕಪಿಲ್ ತಂಡದ ಪ್ರಮುಖ ಸದಸ್ಯ ಕಾಮಿಡಿ ನೈಟ್ಸ್ ತೊರೆದು ತನ್ನ ಹೊಸ ಕಾರ್ಯಕ್ರಮ ಆರಂಭಿಸಲು ಹೊರಟು, ವಿಫಲನಾಗಿ, ಮರಳಿ ಕಪಿಲ್ ತಂಡಕ್ಕೆ ಸೇರಿಕೊಂಡಾಗಿತ್ತು.

ಅಷ್ಟರಲ್ಲಿ ಕಲರ್ಸ್ ವಾಹಿನಿಯೊಡನೆ ಮನಸ್ತಾಪ‌ ಉಂಟಾಗಿ ಕಾಮಿಡಿ ನೈಟ್ಸ್ ವಿದ್ ಕಪಿಲ್ ಕೊನೆಗೊಂಡಿತು. ಪ್ರತಿಭೆ ಉಳ್ಳವರಿಗೆ ಅವಕಾಶಕ್ಕೆ ಕೊರತೆಯೇ? ಹಾಗೆಯೇ ಸೋನಿ‌ ಟಿವಿಯಲ್ಲಿ ದ ಕಪಿಲ್ ಶರ್ಮಾ ಶೋ ಆರಂಭವಾಗಿ ಅದೂ ಅತೀ‌ ಹೆಚ್ಚು ಟಿಆರ್ಪಿ ಗಳಿಸಿಕೊಂಡಿತು. ಕಲರ್ಸ್ ಕಪಿಲ್ ಗೆ ತೊಂದರೆ ಕೊಡಲಾರಂಭಿಸಿದಾಗ ಜನ ಸಾಮಾಜಿಕ‌ ಜಾಲತಾಣಗಳಲ್ಲಿ ಕಪಿಲ್ ಗೆ ಅಪಾರ ಬೆಂಬಲ ಘೋಷಿಸಿದ್ದರು. ಅಷ್ಟರಲ್ಲಾಗಲೇ ಸಿನಿಮಾ ಒಂದರಲ್ಲಿ ನಟಿಸಿ, ಮತ್ತಷ್ಟು ಅವಕಾಶಗಳು ಕಪಿಲ್‌ರನ್ನು ಕಾಯುತ್ತಿದ್ದವು. ಬಹುಶಃ ಯಶಸ್ಸು ಕಪಿಲ್ ನೆತ್ತಿಗೇರತೊಡಗಿತೋ ಏನೋ! ಕಾರ್ಯಕ್ರಮಕ್ಕೆ ಬಂದ ನಟ – ನಟಿಯರು ಚಿತ್ರೀಕರಣಕ್ಕೆ ಮುನ್ನ ಗಂಟೆಗಟ್ಟಲೆ ಕಾದು, ಬೇಸರಗೊಂಡ ವರದಿಗಳೂ ಬರಲಾರಂಭಿಸಿದವು.

ಮಾತುಗಳಲ್ಲಿ ಇತರರನ್ನು ಆಡಿಕೊಳ್ಳುವುದು, ಅಪಹಾಸ್ಯಗಳೂ‌ ಆರಂಭವಾದವು. ಅದರ ಬೆನ್ನಲ್ಲೇ ಬಂದ ಇನ್ನೊಂದು ಸುದ್ದಿ ಸುನಿಲ್ ಗ್ರೋವರ್ ಜೊತೆಗಿನ‌ ಜಗಳ. ಹಿಂದೊಮ್ಮೆ ಸುನಿಲ್ ಕಪಿಲ್ ತಂಡವನ್ನು ಬಿಟ್ಟು ಹೋಗಿದ್ದರೂ, ಅವರ ಕೆಮಿಸ್ಟ್ರಿ ತುಂಬಾ ಚೆನ್ನಾಗಿತ್ತು. ಸುನಿಲ್ ನಿರ್ವಹಿಸುತ್ತಿದ್ದ ಡಾ| ಮಶೂರ್ ಗುಲಾಟಿ ಪಾತ್ರವಂತೂ ಕಪಿಲ್ ಗೂ‌ ಮೀರಿದ ಜನಪ್ರಿಯತೆ ಹೊಂದಿತ್ತು. ಆದರೆ ಕುಡಿದ ಅಮಲಿನಲ್ಲಿ ಕಪಿಲ್ ನಡೆದುಕೊಂಡ ರೀತಿ ಆತ ವರ್ಷಗಳ ಕಾಲ ಬೆಳೆಸಿಕೊಂಡ ಇಮೇಜ್ ಗೆ ದೊಡ್ಡ ಹೊಡೆತ ಕೊಟ್ಟಿದ್ದಂತೂ ಸುಳ್ಳಲ್ಲ.

ಯಶಸ್ಸನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಸಚಿನ್ ತೆಂಡೂಲ್ಕರ್ ಅವರನ್ನು ನೋಡಿ ತಿಳಿಯಬೇಕು. ಜಾಗತಿಕ ಕ್ರಿಕೆಟ್ ಅತೀ ಹೆಚ್ಚು ಆರಾಧಿಸಿದ ಕ್ರಿಕೆಟಿಗನಾದರೂ, ಸಚಿನ್ ಯಶಸ್ಸು‌ ತಲೆಗೇರಲು ಬಿಡಲಿಲ್ಲ. ಆತನ ಸ್ನೇಹಿತ, ಅಷ್ಟೇ ಪ್ರತಿಭಾನ್ವಿತ ವಿನೋದ್ ಕಾಂಬ್ಳಿ ತನ್ನ ವ್ಯಸನಗಳಿಂದ, ಅಸಡ್ಡೆಯಿಂದ ಕ್ರಿಕೆಟ್ ನಿಂದ ದೂರಾಗಿ ತನ್ನ ಭವಿಷ್ಯ ಹಾಳುಗೆಡವಿಕೊಂಡ.‌ ಕಪಿಲ್ ಹಾಗೂ ಸುನಿಲ್ ಒಬ್ಬರಿಗೊಬ್ಬರು ಅನಿವಾರ್ಯರೇ ಆಗಿದ್ದಾರೆ. ಅದನ್ನು ಅರ್ಥ ಮಾಡಿಕೊಂಡರೆ ಯಶಸ್ಸು, ಹೆಸರು ಕಪಿಲ್ ಗೆ ಉಳಿಯಬಹುದೇನೋ!

mm

Shreeharsha

Shreeharsha is a correspondent of News Nirantara, residing currently in Mysuru. He likes to play and watch cricket, to read, ride and drive. He is a regular contributor to the Nirantara Blog. He is interested in current affairs, sports and literature and photography.

Leave a Reply

Your email address will not be published. Required fields are marked *