ಬನದ ಹಣ್ಣಿನ ರುಚಿಯ…. ಭಾಗ – ೧

ಸುಮಾರು ಮೂರೂವರೆ ದಶಕಗಳ ಹಿಂದೆ ಮಳೆ ಸುರಿಯುತ್ತಿದ್ದ ಒಂದು ಮುಂಜಾನೆ. ಪಂಜ ಹೈಸ್ಕೂಲಿನ ಮುಖ್ಯೋಪಾಧ್ಯಾಯರ ಕಚೇರಿ ಎದುರಿನ ಬೆಂಚಿನಲ್ಲಿ ಕಾಯುತ್ತ ಕೂತಿದ್ದೆ. ಎಂಟನೇ ತರಗತಿಗೆ ಪ್ರವೇಶ ಪಡೆಯುವುದಕ್ಕಾಗಿ ಫೀಸಿನ ಹಣ ಕೊಡುತ್ತೇನೆಂದಿದ್ದ ಮಾವ ಇನ್ನೂ ಬಂದಿರಲಿಲ್ಲ. ಬೆಳಗು ಮಧ್ಯಾಹ್ನವಾಯಿತು. ಅವರ ಸುಳಿವಿಲ್ಲ. ನನ್ನ ಕಣ್ಣೆದುರೇ ಹಲವಾರು ಮಂದಿ ಸೇರ್ಪಡೆಗೊಂಡರು.ಅವರಿವರೆಲ್ಲ ನನ್ನನ್ನು ನೋಡುತ್ತ ಓಡಾಡುತ್ತಿದ್ದರು. ಆಗ ಮುಖ್ಯೋಪಾಧ್ಯಾಯರಾಗಿದ್ದ ಕುಂಞಪ್ಪ ಗೌಡರಿಗೆ ನನ್ನನ್ನು ನೋಡಿ ಕುತೂಹಲ ಮೂಡಿರಬೇಕು. ಕರೆದರು. ಹೆದರುತ್ತ ಅವರ ಬಳಿಗೆ ಹೋದೆ. “ಯಾರಪ್ಪ ನೀನು? ಯಾವ ಕ್ಲಾಸಿಗೆ?” ಕೇಳಿದರು. ಹೇಳಿದೆ. “ಯಾಕೆ ಕಾಯ್ತಾ ಇದ್ದೀಯ?” “ನನ್ನಲ್ಲಿ ಫೀಸಿಗೆ ದುಡ್ಡಿಲ್ಲ. ಮಾವನಿಗಾಗಿ ಕಾಯ್ತಾ ಇದ್ದೇನೆ” “ಎಷ್ಟು ಮಾರ್ಕು ನಿನಗೆ?” ಅದಕ್ಕೂ ಉತ್ತರಿಸಿದೆ. “ಹೌದ? ನೀನು ನಮಗೆ ಬೇಕೇ ಬೇಕು ಮಾರಾಯಾ. ನಿನ್ನನ್ನು ಸೇರಿಸುವ ಆಯ್ತಾ?” ಸರಿ, ಮತ್ತೆ ಕಾದು ಕೂತೆ. ಕೊನೆಗೂ ಎಂಟನೆಗೆ ಸೇರಿದೆನೆನ್ನಿ.

ಅಲ್ಲಿಂದ ಏರಿಳಿತದ ಬದುಕಿನೊಂದಿಗೆ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸವೂ ತೊಡಗಿತು. ಟಿಪ್ ಟಾಪ್ ಆಗಿ ಬರುತ್ತಿದ್ದ ತೋಟ ಮಾಸ್ಟ್ರ ಶಿಸ್ತು, ಕನ್ನಡ ಪಂಡಿತ ಮುಡೂರರ ಸಾಹಿತ್ಯದ ಒಲುಮೆ, ರುಕ್ಮ ಗೌಡರ ಇಂಗ್ಲಿಷ್, ದೇವಣ್ಣ ಹಾಗೂ ರುಕ್ಮಯರ ಆತ್ಮೀಯತೆ ಆಗಿನ ನೆನಪುಗಳಲ್ಲಿ ಸೇರಿಕೊಂಡಿವೆ. ನಿತ್ಯ ಆರೆಂಟು ಮೈಲು ನಡೆದು, ಮಧ್ಯಾಹ್ನ ಬುತ್ತಿಯೂಟ ಉಂಡು ಗೇಮ್ಸ್ ಪಿರಿಯಡ್ಡಿನಲ್ಲಿ ಗೆಳೆಯ ಧನಂಜಯ, ರಾಜೇಶರೊಡನೆ ಮರದ ನರಳಿನಲ್ಲಿ ಐಸ್ ಕ್ಯಾಂಡಿ ತಿಂದು, ಅಷ್ಟಿಷ್ಟು ಓದಿ….. ಹೀಗೆ ಸುಖದ ದಿನಗಳವು.

ನನ್ನ ಸಾಹಿತ್ಯಾಸಕ್ತಿಗೆ ಅಡಿಪಾಯ ದೊರೆತುದು ಎಂಟನೇ ಕ್ಲಾಸಿನಲ್ಲಿಯೇ. ಮುಡೂರು ಅವರ ಚಿತ್ತಾಕರ್ಷಕ ಪಾಠದಿಂದ. ‘ಪುತ್ತೂರಿನ ಒಬ್ಬರು ಮುಸ್ಲಿಂ ಲೇಖಕರ ಕಥೆ ತುಷಾರದಲ್ಲಿ ಬಂದಿದೆ. ಯಾರಾದರೂ ಓದಿದ್ದೀರ?” ಅವರ ಪ್ರಶ್ನೆಗೆ ‘ಬೊಳುವಾರು’ ಅಂತ ಉತ್ತರಿಸಿದವ ನಾನೊಬ್ಬನೇ. ‘ಶಬಾಸ್’ ಎಂದರು. ಅಲ್ಲಿಂದ ಮುಂದೆ ನನಗಾಗಿ ಅಲ್ಲದಿದ್ದರೂ ಅವರ ಮೆಚ್ಚುಗೆಗಾಗಿ ಓದುವ ಅಭ್ಯಾಸ ತೊಡಗಿತು. ಬೇಕಾದ್ದು, ಬೇಡದ್ದು ಎಲ್ಲ. ಪರಿಣಾಮವಾಗಿ ತಿಳಿವಿನ ಪರಿಧಿ ವಿಸ್ತರಿಸಿತು. ಕನ್ನಡ ಪಂಡಿತರ ಮೆಚ್ಚುಗೆಯೂ ಸಿಕ್ಕಿತು. ಓದಿನಿಂದ ದಕ್ಕಿದ ಅರಿವು ಶಾಲೆಯಲ್ಲಿ ನಡೆಯುತ್ತಿದ್ದ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ನನ್ನನ್ನು ಪ್ರಥಮ ಸ್ಥಾನದಲ್ಲಿ ನಿಲ್ಲಿಸಿತು. ಮುಡೂರು ಅವರಲ್ಲಿ ಒಂದು ವಿಶೇಷತೆಯಿತ್ತು. ವಿದ್ಯಾರ್ಥಿಗಳನ್ನು ಅವರು ಹೆಸರಿನಿಂದ ಕರೆಯುತ್ತಿರಲಿಲ್ಲ. ಎಲ್ಲರ ಮನೆ ಹೆಸರೂ ಗೊತ್ತಿದ್ದ ಅವರು ಅವುಗಳಿಂದಲೇ ಕರೆಯುತ್ತಿದ್ದರು. ಕೇನ್ಯ, ಕಂಬಳ, ಭೀಮಗುಳಿ, ಬಳ್ಳಕ್ಕ, ಕೆರೆಮೂಲೆ.. ಹೀಗೆ. ಈ ಆಕರ್ಷಣೆಯಿಂದಲೇ ಎಂ. ರಾಧಾಕೃಷ್ಣನಾಗಿದ್ದ ನಾನು ರಾಧಾಕೃಷ್ಣ ಕಲ್ಚಾರ್ ಆದೆ!

ನಾನು ಹೈಸ್ಕೂಲಲ್ಲಿದ್ದ ಕಾಲದಲ್ಲೇ ಪಂಬೆತ್ತಾಡಿ ಗ್ರಾಮದ ಮಕ್ಕಳ ಯಕ್ಷಗಾನ ತಂಡವೊಂದು ಸಿದ್ಧಗೊಂಡಿತ್ತು. ಪ್ರದರ್ಶನಗಳನ್ನು ನೀಡುತ್ತಿತ್ತು. ನನ್ನ ಸೋದರ ಮಾವ ಶಂಭಯ್ಯ (ಅವರು ಪಂಜದಲ್ಲಿ ಅಧ್ಯಾಪಕರಾಗಿದ್ದರು) ಅವರ ಮಕ್ಕಳೊಂದಿಗೆ ನನಗೂ ಕುಮ್ಮಕ್ಕು ನೀಡಿದ್ದರಿಂದ ನಾನೂ ಒಬ್ಬ ಬಾಲಕಲಾವಿದನಾಗಿ ಸೇರ್ಪಡೆಗೊಂಡಿದ್ದೆ. ಇದರಿಂದಾಗಿ ಶಾಲಾ ವಾರ್ಷಿಕೋತ್ಸವದಂದು ನಡೆಯುತ್ತಿದ್ದ ಹಳೆವಿದ್ಯಾರ್ಥಿಗಳ ಯಕ್ಷಗಾನದಲ್ಲಿ ನನಗೂ ವೇಷ. ಹೆಮ್ಮೆಯೋ ಹೆಮ್ಮೆ. ನಮಗೆ ಇಂಗ್ಲಿಷ್ ಕಲಿಸುತ್ತಿದ್ದ ರುಕ್ಮ ಗೌಡರ ನಿರ್ದೇಶನದ ಇಂಗ್ಲಿಷ್ ನಾಟಕವೊಂದರಲ್ಲಿ ‘ಬಾಗ್ದಾದಿನ ಖಲೀಫ’ ನಾಗಿ ಪಾರ್ಟು ಮಾಡಿದ ನೆನಪು.

ಪಿ.ಟಿ.ಕ್ಲಾಸ್ ಎಂದರೆ ನಾನು ಹೆದರಿ ಸಾಯುತ್ತಿದ್ದೆ. ಆಸಕ್ತಿಯೂ ಅಷ್ಟಕ್ಕಷ್ಟೇ. ನಮಗೆ ಪಿ.ಇ.ಟಿ ಆಗಿದ್ದವರು ಶಿವರಾಮ ನೋಂಡರು. ಆಲಸ್ಯ ಕಂಡರೆ ಅವರಿಗೆ ಸಿಟ್ಟು. ಬಿಗಿಲಿನ (ವ್ಹಿಸಿಲ್) ಹಗ್ಗೆದಿಂದ ರಪ್ ಅಂತ ಬಾರಿಸುತ್ತಿದ್ದರು. ಅಲ್ಲದೆ ಹಿಂದಿ ದೇಶಭಕ್ತಿ ಗೀತೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಎಷ್ಟೋ ಸಲ ಇದರಿಂದ ತಪ್ಪಿಸಿಕೊಂಡದ್ದೂ ಇದೆ. ಅವರ ಸರಳತೆಯನ್ನು ದುರುಪಯೋಗ ಮಾಡಿಕೊಂಡೆವೋ ಎಂದು ಈಗ ಅನಿಸುತ್ತದೆ. ಸೋಮಾರಿತನದ ಕಾರಣ ನಾನೆಂದೂ ಆಟೋಟಗಳಲ್ಲಿ ಪಾಲ್ಗೊಳ್ಳಲೇ ಇಲ್ಲ.

ಆಗ ಗ್ರಂಥಾಲಯ ಸಣ್ಣದಾಗಿದ್ದರೂ ನಮಗೆ ಓದಲು ಬೇಕಾದಷ್ಟು ಪುಸ್ತಕಗಳು ದೊರೆಯುತ್ತಿದ್ದವು. ಕೆಲವು ಸಾಹಿತಿಗಳ ಹೆಸರು ತಿಳಿದದ್ದೂ, ಕೃತಿಗಳನ್ನು ಓದಲು ಸಾಧ್ಯವಾದದ್ದೂ ಗ್ರಂಥ ಭಂಡಾರದಿಂದಲೇ.’ ಕಾನೂರು ಹೆಗ್ಗಡಿತಿ’ ಕಾದಂಬರಿಯನ್ನು ನಾನು ಆಗಲೇ ಓದಿ ಬಿಟ್ಟಿದ್ಧೆ. ಮಾತ್ರವಲ್ಲ ನಾನು ಓದಿದ ಪುಸ್ತಕ ಅಂತ ವಿಮರ್ಶೆಯನ್ನೂ ಬರೆದುಬಿಟ್ಟಿದ್ದೆ!
*********

ಮುಂದುವರಿಯುವುದು …….

-ರಾಧಾಕೃಷ್ಣ ಕಲ್ಚಾರ್

Radhakrishna Kalchar

Leave a Reply

Your email address will not be published. Required fields are marked *