ಕ್ಷಾತ್ರಗುಣವೇ ವಂಶ ನೀತಿ; ಸಮರ ವಸ್ತ್ರವೇ ಪುತ್ರ ಪ್ರೀತಿ

೨೦೧೩ರ ಸೆಪ್ಟಂಬರ್ ೨೬ರ ಮುಂಜಾನೆ. ಬೆಂಗಳೂರಿನ ಕೋರಮಂಗಲದಲ್ಲಿ ವಾಕಿಂಗ್ ಮುಗಿಸಿ ಮರಳಿದ ನಿವೃತ್ತ ಕರ್ನಲ್ ಮಂಡೇಟಿರ ರವಿ ಕಾಫಿ ಹೀರುತ್ತಾ ಟಿವಿ ಹಾಕಿದರು. ಇಂಗ್ಲಿಷ್ ನ್ಯೂಸ್ ಚಾನೆಲೊಂದು ಎಂದಿಗಿಂತ ಜೋರಾಗಿ ಕಿರುಚುತ್ತಿತ್ತು. ಜಮ್ಮುವಿನ ಸಾಂಬಾ ಸೈನಿಕ ನೆಲೆಯ ಮೇಲೆ ಉಗ್ರರ ಧಾಳಿ, ಇಬ್ಬರು ಸೇನಾಧಿಕಾರಿಗಳ ಬಲಿದಾನ ಎಂಬ ಬ್ರೇಕಿಂಗ್ ನ್ಯೂಸ್ ಅದರಲ್ಲಿ ಬಿತ್ತರವಾಗುತ್ತಿತ್ತು. ಆ ಸದ್ದಿಗೆ ಅಡಿಗೆ ಮನೆಯಿಂದ ಓಡೋಡಿ ಬಂದ ಕರ್ನಲ್ ಪತ್ನಿ ಆ ಸುದ್ಧಿಯನ್ನು ನೋಡಿ ಸ್ಮೃತಿ ತಪ್ಪಿಬಿದ್ದರು. ಕಾಫಿ ಕಪ್ಪನ್ನು ಹಿಡಿದಿದ್ದ ಕರ್ನಲ್ ರವಿ ಆಘಾತಗೊಂಡು ಕುಳಿತಿದ್ದರು. ಬಿದ್ದ ಹೆಂಡತಿಯನ್ನೂ ಮರೆತರು. ಕಾರಣ ಉಗ್ರರು ಧಾಳಿ ಮಾಡಿದ ಸಾಂಬಾದಲ್ಲಿದ್ದದ್ದು ೧೬ನೇ ಕ್ಯಾವಲ್ರಿಯ ನೆಲೆ. ಅದರ ಕಮಾಂಡಿಂಗ್ ಆಫಿಸರ್ ರವಿಯವರ ಮಗ ಕ. ಅವಿನ್ ಉತ್ತಯ್ಯ. ಟಿವಿ ಅವಿನ್ ಉತ್ತಯ್ಯರ ಸಹಾಯಕ ಅಧಿಕಾರಿ ಲೆ.ಕ.ಬಿಕ್ರಮ್‌ಜಿತ್ ಸಿಂಗರ ಮೃತದೇಹವನ್ನು ತೋರಿಸುತ್ತಿತ್ತು. ಜೊತೆಗೆ ಅವಿನ್ ಉತ್ತಯ್ಯ ಕೂಡ ವೀರಮರಣವನ್ನಿಪ್ಪಿದ್ದಾರೆ ಎನ್ನುತ್ತಿತ್ತು. ಕ.ರವಿ ಪಂಜಾಬಿಗೆ ವಿಮಾನ ಏರಿದರು. ಚಂಡೀಗಢದಲ್ಲಿ ವಿಮಾನ ಇಳಿಯುತ್ತಿದ್ದಂತೆ ರವಿಯವರಿಗೆ ಮಗನಲ್ಲಿ ಇನ್ನೂ ಕುಟುಕು ಜೀವವಿದೆ ಎಂಬ ಮಾಹಿತಿಯನ್ನು ಸೈನ್ಯ ತಿಳಿಸಿತ್ತು.

ತೀವ್ರ ಗಾಯಗೊಂಡಿದ್ದ ಅವಿನ್ ಉತ್ತಯ್ಯರನ್ನು ಸಾಂಬಾದಿಂದ ಪಟಾನ್‌ಕೋಟಿಗೆ ತರಲಾಗಿತ್ತು. ದೇಹದಲ್ಲಿ ಐದು ಗುಂಡುಗಳು ಹೊಕ್ಕಿದ್ದವು. ಎಡಗೈ ನೇತಾಡುತ್ತಿತ್ತು. ಮತ್ತೊಂದು ಗುಂಡು ಎದೆಯ ಎಡಭಾಗದಿಂದ ನುಗ್ಗಿ ಪಕ್ಕೆಲುಬುಗಳನ್ನು ಕತ್ತರಿಸುತ್ತಾ ಬಲಭಾಗದಿಂದ ಹೊರಬಂದಿತ್ತು. ಸೂಕ್ಷ್ಮ ಶಸ್ತ್ರಚಿಕಿತ್ಸೆಗಾಗಿ ಅವಿನ್‌ರನ್ನು ಪಟಾನ್‌ಕೋಟಿನಿಂದ ಚಂಡೀಗಢಕ್ಕೆ ತರಲಾಯಿತು. ಕರ್ನಲ್ ರವಿ ಐಸಿಯು ಕೊಠಡಿಯ ಹೊರಗಿನಿಂದ ನಿಸ್ತೇಜವಾಗಿದ್ದ ಮಗನ ದೇಹವನ್ನೊಮ್ಮೆ ನೋಡಿದರು. ಕಣ್ಣಲ್ಲಿ ನೀರು ಇನ್ನೇನು ಉದುರಬೇಕು ಎಂಬಂತೆ ಕಂಡರೂ ನೀರುದುತ್ತಿಲ್ಲ. ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ಆಸ್ಪತ್ರೆಯ ಹೊರನಡೆದರು ಕ.ರವಿ. ಇದ್ದವನು ಏಕೈಕ ಪುತ್ರ. ೭೧ರ ಯುದ್ಧದಲ್ಲಿ ಹೀಗೆಯೇ ಗಾಯಗೊಂಡ ವೀರಚಕ್ರ ಪುರಷ್ಕೃತ ಕ.ರವಿಯವರನ್ನು ಮಾಧ್ಯಮಗಳು ಮಾತಿಗೆಳೆದವು. ಅಂದು ಮಾಧ್ಯಮಗಳ ಮುಂದೆ ಕರ್ನಲ್ ರವಿ ಹೇಳಿದ್ದು ಒಂದೇ ವಾಕ್ಯ. ‘ಕರ್ನಲ್ ಅವಿನ್ ನನ್ನ ಮಗ ಎನ್ನಲು ಇಂದು ಅತೀವ ಹೆಮ್ಮೆಯೆನಿಸುತ್ತಿದೆ’. ಡಾಕ್ಟ್ರುಗಳೇ ಬದುಕುವ ಭರವಸೆಯನ್ನು ಕೊಡಲು ಹಿಂಜರಿಯುತ್ತಿದ್ದಾಗಲೂ ಅಪ್ಪತನ್ನ ಯೋಧತನವನ್ನು ಮರೆಯಲಿಲ್ಲ. ಕ.ರವಿಯವರ ಹೇಳಿಕೆ ದೇಶದಲ್ಲಿ ಸಂಚಲನ ಮೂಡಿಸಿತು. ದೇಶಾದ್ಯಂತ ಅವಿನ್ ಉತ್ತಯ್ಯ ಗುಣಮುಖರಾಗಲೆಂದು ಪ್ರಾರ್ಥನೆಗಳು ನಡೆದವು. ಪ್ರಾರ್ಥನೆ ಫಲಿಸಿತು. ಕ. ಅವಿನ್ ಉತ್ತಯ್ಯ ಪರಾಕ್ರಮಕ್ಕೆ ಸರ್ಕಾರ ಸೇನಾಮೆಡಲನ್ನೂ ನೀಡಿ ಗೌರವಿಸಿತು.

ಬಹು ಹಿಂದೆ ಪಾಕಿಸ್ಥಾನದ ಒರ್ವ ಜನರಲ್, ಮಗನ ಮೇಲೆ ಪ್ರೀತಿಯಿರುವ ಯಾವ ಸೈನ್ಯಾಧಿಕಾರಿಯೂ ಆತ ಸೇನೆಗೆ ಸೇರುವುದನ್ನು ಸಹಿಸಲಾರ ಎಂದು ಹೇಳಿಕೆ ನೀಡಿದ್ದ! ಆ ಹೇಳಿಕೆ ಕ.ರವಿಯವರ ಕಾಲ ಕೆಳೆಗೆ ಬಿದ್ದಿತ್ತು. ಪಾಕಿಸ್ಥಾನದ ಮಟ್ಟಿಗೆ ಅದು ನಿಜವಿರಬಹುದು. ಆದರೆ ಭಾರತಕ್ಕಲ್ಲ. ಭಾರತದ ರಾಜಕಾರಣದಲ್ಲಿ ವಂಶಪಾರಂಪರ್ಯ ಎಷ್ಟು ಗಾಢವಾಗಿದೆಯೋ ಸೈನದಲ್ಲೂ ವಂಶಪಾರಂಪರ್ಯ ಅಷ್ಟೇ ಗಾಢವಾಗಿದೆ. ಬಲಿದಾನಿ ಅಪ್ಪತನ್ನ ಮಗನೂ ಸೈನ್ಯಕ್ಕೆ ಸೇರಲಿ ಎಂದು ಬಯಸುವ ಆದರ್ಶವಾದಿ. ರಾಜಕಾರಣದಲ್ಲಿ ವಂಶಪಾರಂಪರ್ಯ ಗುಣ ಸ್ವಾರ್ಥಕ್ಕೆ ಬಳಕೆಯಾದರೆ ಸೈನ್ಯದಲ್ಲಿ ಅದು ದೇಶಕ್ಕೆ ಬಳಕೆಯಾಗಿದೆ. ದೇಶಕ್ಕೆ ಶಕ್ತಿ ತುಂಬಿದೆ. ಸಚಿವನಾದ ಯಾವನೇ ವ್ಯಕ್ತಿ, ಯಾವುದೇ ಪಕ್ಷದಲ್ಲಿದ್ದರೂ ಸಾಯುವುದರೊಳಗೆ ತಮ್ಮ ಮಕ್ಕಳು ಶಾಸಕರಾಗಲಿ ಎಂದು ಬಯಸಿದರೆ ಮಾಜಿ ಯೋಧ ತನ್ನ ಮಗನನ್ನು ಸಮವಸ್ತ್ರದಲ್ಲಿ ನೋಡಲು ಆಸೆಪಡುತ್ತಾನೆ.

ಕೆಲವು ವಂಶಗಳು ದೇಶಕ್ಕೆ ಕೊಟ್ಟ ಅಮೂಲ್ಯ ರತ್ನಗಳ ಕೆಲವು ಸ್ಯಾಂಪಲ್‌ಗಳನ್ನು ನೋಡಿದರೂ ಅದರ ಅರಿವಾಗುತ್ತದೆ.

ಇತ್ತೀಚೆಗೆ ನಿಧನರಾದ ಮಾರ್ಷಲ್ ಆಫ್ ಏರ್ ಫೋರ್ಸ್ ಅರ್ಜನ್ ಸಿಂಗರ ಮುತ್ತಾತ ಸುಲ್ತಾನ್ ಸಿಂಗ್ ಬ್ರಿಟಿಷ್ ಸೈನ್ಯದಲ್ಲಿ ಯೋಧರಾಗಿದ್ದವರು ಮತ್ತು ಅಫಘಾನ್ ಯುದ್ಧದಲ್ಲಿ ಬಲಿದಾನಿಯಾದವರು. ಸುಲ್ತಾನ್ ಸಿಂಗರ ಮಗ, ಅಂದರೆ ಅರ್ಜನ್ ಸಿಂಗ್ ತಾತ ಹುಕುಂ ಸಿಂಗ್ ಕೂಡಾ ಬ್ರಿಟಿಷ್ ಕಾಲಾಳುಪಡೆಯಲ್ಲಿ ಯೋಧರಾಗಿ ಸೇವೆಯಲ್ಲಿದ್ದವರು. ಅರ್ಜನ್ ಸಿಂಗ್ ತಂದೆ ಕೂಡಾ ಬ್ರಿಟಿಷ್ ಅಶ್ವಾಹೋಹಿ ಪಡೆಯಲ್ಲಿ ಯೋಧರಾಗಿದ್ದವರು. ತಮ್ಮ ಕುಟುಂಬದ ಪರಂಪರೆ ಮುಂದುವರಿಯಬೇಕು ಎನ್ನುವ ಆ ತುಡಿತಕ್ಕೆ ಕಾರಣವೇನು? ಆ ಎಲ್ಲಾ ಮಾಜಿಗಳಲ್ಲಿದ್ದ ಸಂನ್ಯಸ್ಥ ಭಾವಕ್ಕೆ ಅರ್ಥ ಹುಡುಕಹೋದರೆ ಅಂತಿಮವಾಗಿಕಾಣುವುದು ಏನೋ ಒಂದು ಆದರ್ಶ ಮಾತ್ರ. ಈಗಿನ ಏರ್ ಚೀಫ್ ಮಾರ್ಷಲ್ ಭೀರೇಂದರ್ ಸಿಂಗ್ ದನೋಅ ಅವರ ಅಜ್ಜ ಕ್ಯಾ. ಸಂತ್ ಸಿಂಗ್ ಎರಡನೆ ಮಹಾಯುದ್ಧದಲ್ಲಿ ಭಾಗವಹಿಸಿದ್ದ ರ ಯೋಧ. ೧೩ನೇ ಏರ್ ಚೀಫ್ ಮಾರ್ಷಲ್ ಡೆನಿಸ್ ಅಂತೋನಿ. ಲಾ. ಫೊಂಟೈನ್ ಅವರ ತಂದೆ ಜೆ.ಲಾ.ಫೋಂಟೈನ್ ಆರ್ಮಿ ಮೆಡಿಕಲ್ ಕಾರ್ಪ್‌ನಲ್ಲಿ ಮೇಜರ್ ಆಗಿದ್ದರು ಮತ್ತು ಡೆನಿಸ್ ಅವರ ಇಬ್ಬರು ತಾಂತಂದಿರೂ ಮಿಲಿಟರಿ ಅಧಿಕಾರಿಗಳು! ೨೩ನೇ ಏರ್ ಚೀಫ್ ಮಾರ್ಷಲ್ ನೋರ್ಮನ್ ಅನಿಲ್ ಕುಮಾರ್ ಬ್ರೌನೆಯವರ ಮಗ ಒಮರ್ ಈಗಲೂ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್. ಫಿಲ್ಡ್ ಮಾರ್ಷಲ್ ಕಾರ್ಯಪ್ಪನವರ ಪುತ್ರ ಕೆ.ಸಿ ಕಾರ್ಯಪ್ಪ ಏರ್ ಮಾರ್ಷಲ್ ಆಗಿದ್ದವರು ಮತ್ತು ಪಾಕ್‌ನಲ್ಲಿ ಯುದ್ಧ ಖೈದಿಯಾಗಿದ್ದವರು. ತಿಮ್ಮಯ್ಯನವರ ಇಬ್ಬರೂ ತಮ್ಮಂದಿರು ಪೊನ್ನಪ್ಪ ಮತ್ತು ಸೋಮಯ್ಯ ಕೂಡಾ ಸೇನೆಯಲ್ಲಿದ್ದವರು. ವಿಚಿತ್ರವೆಂದರೆ ಸೋಮಯ್ಯನವರು ನೇತಾಜಿಯವರ ಐಎನ್‌ಎನಲ್ಲಿ ಮೇಜರ್ ಆಗಿದ್ದರು. ಇಂಪಾಲ್ ಕಾರ್ಯಾಚರಣೆಯಲ್ಲಿ ತಿಮ್ಮಯ್ಯ ಮತ್ತು ಸೋಮಯ್ಯ ಮುಖಾಮುಖಿಯಾಗಿದ್ದರು! ಸೇನೆಯ ೫ನೇ ಕಮಾಂಡರ್ ಇನ್ ಚೀಫ್ ಜೆ.ಎನ್.ಚೌಧರಿಯವರ ಸೋದರ ಸಂಬಂಧ ಕ್ಯಾ.ಎಂ.ಎನ್ ಚೌಧರಿ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ೮ನೇ ಜನರಲ್ ಗೋಪಾಲ್ ಗುರುನಾಥ ಬೇವೂರರ ಚಿಕ್ಕಪ್ಪಮತ್ತು ತಂದೆ ಗುರುನಾಥ್ ವೆಂಕಟೇಶ್ ಬೇವೂರ್ ಎರಡನೆ ಮಹಾಯುದ್ಧದಲ್ಲಿ ಬಲಿದಾನಿಯಾದ ವೀರ ಯೋಧ. ೧೪ನೇ ಜನರಲ್ ವಿಶ್ವನಾಥ್ ಶರ್ಮಾ ಅವರ ಸೋದರ ಮೇ. ಸೋಮನಾಥ ಶರ್ಮಾ ಮರಣೋತ್ತರ ಪರಮರ ಚಕ್ರ ಪುರಷ್ಕೃತರು. ಮತ್ತೊಬ್ಬ ಸೋದರ ಲೆ.ಜ. ಸುರೇಂದ್ರನಾಥ್ ಶರ್ಮಾ ಭಾರತೀಯ ಸೈನ್ಯದಲ್ಲಿ ಎಂಜಿನಿಯರ್ ಆಗಿದ್ದವರು. ಅಂದರೆ ಮನೆಗೆ ಮನೆಯೇ ಸಮವಸ್ತ್ರಧಾರಿಗಳ ಅಡ್ಡೆ. ೨೧ನೇ ಜನರಲ್ ಜೆ.ಜೆ ಸಿಂಗ್ ಅವರು ತಮ್ಮ ಕುಟುಂಬದ ಮೂರನೇ ಸೈನಿಕ ಕುಡಿ.

ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸೆಡ್ಡು ಹೊಡೆದು ದಾಖಲೆ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸಿದ ಕೇಂದ್ರ ಸಚಿವ ವಿಕೆ ಸಿಂಗ್ ಬದುಕಲ್ಲಿ ಕೂಡಾ ವಂಶಪಾರಂಪರ್ಯದ ಛಾಯೆಯಿದೆ! ವಿ.ಕೆ. ಸಿಂಗ್ ಅವರ ಅಜ್ಜ ಬ್ರಿಟಿಷ್ ಸೈನ್ಯದಲ್ಲಿ ಜೂ.ಕಮಿಶನ್ಡ್ ಆಫಿಸರಾಗಿದ್ದವರು. ಸಿಂಗ್ ತಂದೆ ಕೂಡಾ ಕರ್ನಲ್ ಆಗಿದ್ದವರು. ಭೂತಪೂರ್ವ ಜನರಲ್ ಜ. ದಲ್ಬೀರ್ ಸಿಂಗ್ ಸುಹಾಗ್ ಕೂಡಾ ತಮ್ಮ ಕುಟುಂಬದ ಮೂರನೇ ಪೀಳಿಗೆಯ ಸೈನಿಕ ಕುಡಿ. ಅವರ ತಂದೆ ರಾಂಪಾಲ್ ಸಿಂಗ್ ೧೮ ಕ್ಯಾವಲ್ರಿ ರೆಜಿಮೆಂಟಿನಲ್ಲಿ ಸು.ಮೇಜರ್ ಆಗಿದ್ದವರು. ಈಗಿನ ಜನರಲ್ ಬಿಪಿನ್ ರಾವತ್ ಅವರ ವಂಶವೃಕ್ಷವಿಡೀ ಮಿಲಿಟರಿ ಸಮವಸ್ತ್ರ ಧರಿಸಿದ್ದವರಿಂದಲೇ ತುಂಬಿಹೋಗಿದೆ. ಅವರ ಅಜ್ಜ ಮತ್ತು ಅಪ್ಪಇಬ್ಬರೂ ಯೋಧರು. ನೌಕಾಪಡೆಯ ೧೪ನೇ ಅಡ್ಮಿರಲ್ ಆಗಿದ್ದ ವಿಎಸ್ ಶೆಖಾವತ್ ಅವರ ಮಗ ಈಗಲೂ ನೌಕಾಪಡೆಯಲ್ಲಿ ಕ್ಯಾಪ್ಟನ್! ನಿ.ಏರ್ ಚೀಫ್ ಮಾರ್ಷಲ್ ನಾಯಕ್ ಮಗ ಇತ್ತೀಚೆಗೆ ನಿವೃತ್ತರಾದ ಫೈಲೆಟ್. ಫಿ.ಮಾ. ಮಾಣಿಕ್ ಶಾ ಅವರ ತಮ್ಮ ಏರ್ ವೈಸ್ ಮಾರ್ಷಲ್ (ಮೆಡಿಕಲ್)ಮತ್ತು ಅಪ್ಪ ಮೊದಲ ಮಹಾಯುದ್ಧದಲ್ಲಿ ಕ್ಯಾಪ್ಟನ್ (ಮೆಡಿಕಲ್) ಆಗಿದ್ದವರು. ಕಾರ್ಗಿಲ್ ಯುದ್ಧದಲ್ಲಿ ಮೊದಲ ಆಪರೇಷನ್ ನಡೆಸಿದ ಮೇಜರ್ ಗುಪ್ತಾ ಅವರ ತಂದೆ ಲೆ.ಕ.ಗುಪ್ತಾ ೭೧ರ ಯುದ್ಧದಲ್ಲಿ ಗಾಯಗೊಂಡಿದ್ದವರು. ೬೨ರ ಯುದ್ಧ ಗಾಯಾಳು ಕ. ಥಾಪರ್ ಮಗ ಕ್ಯಾ. ಥಾಪರ್ ಹುತಾತ್ಮ ಯೋಧ. ಇಂದೂ ಕ. ಥಾಪರ್ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡು ಗೋರಖ್‌ಪುರದಲ್ಲಿ ನೆಲೆಸಿದ್ದಾರೆ. ಅವರ ಆದರ್ಶಕ್ಕೆ ಯಾವ ಬೆಲೆ ಕಟ್ಟೋಣ? ಅಷ್ಟೇ ಏಕೆ ಬೆಂಗಳೂರು ನಿವಾಸಿ ಲೆ. ಜನರಲ್ ಎಂ.ಎನ್ ನಂಜಪ್ಪನವರ ಪುತ್ರ ಇಂದಿಗೂ ರಾಜಾಸ್ಥಾನದಲ್ಲಿ ಕ್ಯಾವಲ್ರಿ ಪಡೆಯ ಅಧಿಕಾರಿ. ವಿ.ಕ ಸಿ.ಸಿ ಅಪ್ಪಣ್ಣ ಎಂಬವರ ಅಣ್ಣ ರಣರಂಗದಲ್ಲಿ ಬಲಿದಾನಿಯಾದರೂ ಫೈಲೆಟ್ ಆಗುವ ಹುಚ್ಚಿನಿಂದ ಅವರಿಗೆ ಹೊರಬರಲಾಗಲಿಲ್ಲ. ಅಪ್ಪಣ್ಣ ಮತ್ತು ಬೋಪಣ್ಣ ಎಂಬ ಇಬ್ಬರು ಮಕ್ಕಳನ್ನು ದೇಶಕ್ಕೆ ಕೊಟ್ಟ ಅವರ ಅಪ್ಪ ವಾರಂಟ್ ಆಫಿಸರ್ ಬಿದ್ದಯ್ಯ. ವಾಯುಪಡೆಯಲ್ಲಿಂದು ಸೇವೆಯಲ್ಲಿರುವ ಶೇ.೪೦ರಷ್ಟು ಮಹಿಳಾ ಯೋಧರು ಮಾಜಿ ಯೋಧರ ಮಕ್ಕಳು ಎನ್ನುವುದು ವಿಶೇಷ.

ಅವೆಲ್ಲಾ ಬಿಡಿ ಮಹಾಪರಾಕ್ರಮಕ್ಕೆ ನೀಡಲಾಗುವ ಪರಮವೀರಚಕ್ರ ಪುರಷ್ಕೃತರ ಪಟ್ಟಿಯನ್ನು ನೋಡಿದರೂ ಅಲ್ಲಿ ವಂಶಪಾರಂಪರ್ಯ ಎದ್ದು ಕಾಣುತ್ತದೆ. ಸೈತಾನ್ ಸಿಂಗ್ ಅಪ್ಪ ಹೇಮ್ ಸಿಂಗ್ ಬಾಟಿ ಲೆ.ಕರ್ನಲ್. ಅರ್ದೀಶಿರ್ ತಾರಾಪುರೆಯವರ ಕುಟುಂಬ ಶಿವಾಜಿ ಕಾಲದಿಂದಲೇ ಸೈನ್ಯಕ್ಕೆ ಸಮರ್ಪಿತವಾದ ಕುಟುಂಬ. ನಿರ್ಮಲ್ ಜಿತ್ ಸಿಂಗ್ ಶೆಖೋನ್ ಅವರ ಮಗ ತಾರ್ಲೋಕ್ ಸಿಂಗ್ ಶೆಖೋನ್ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್, ಅರುಣ್ ಖೇತ್ರಪಾಲ್ ತಂದೆ ಬ್ರಿ. ಎಂ.ಎಲ್ ಖೇತ್ರಪಾಲ್, ಬಾನಾ ಸಿಂಗರ ಸೋದರ ಮಾವಂದಿರೆಲ್ಲರೂ ಮಿಲಿಟರಿ ಮನುಷ್ಯರು. ಯೋಗೇಂದರ್ ಸಿಂಗ್ ಯಾದವ್ ಅವರ ತಂದೆ ಎರಡೆರಡು ಯುದ್ಧಗಳಲ್ಲಿ ಭಾಗವಹಿಸಿದ್ದ ಕುಮಾವೂನ್ ರೆಜಿಮೆಂಟ್ ಯೋಧ.

ವಂಶಪಾರಂಪರ್ಯ ಅಲ್ಲೂ ಇದೆ. ಇಲ್ಲೂ ಇದೆ. ಆದರೆ ಎಷ್ಟೊಂದು ಅರ್ಥ ವ್ಯತ್ಯಾಸ! ಸ್ವಾರ್ಥಕ್ಕೂ ಸಂನ್ಯಸ್ಥಕ್ಕೂ ಎಷ್ಟೊಂದು ಅಜಗಜಾಂತರ!

mm

Santhosh Thammaiah

ಊರು ದಕ್ಷಿಣ ಕೊಡಗಿನ ಪೊನ್ನಂಪೇಟೆ. ಉದ್ಯೋಗ ಮಂಗಳೂರಿನಲ್ಲಿ. ರಾಷ್ಟ್ರೀಯ ವಿಚಾರಗಳ ಮಾಸಿಕ “ಅಸೀಮಾ”ದಲ್ಲಿ ಕಾರ್ಯನಿರ್ವಾಹಕ ಸಂಪಾದಕ. “ಹೊಸದಿಗಂತ” ಪತ್ರಿಕೆಯಲ್ಲಿ “ಹಾದು ಹೋಗುವ ಹಾಳೆಗಳು” ಅಂಕಣ ಬರೆಯುತ್ತಿರುವೆ. ಲೇಖನ ಬರೆದು ಲೋಕದ ಡೊಂಕು ತಿದ್ದಿಹಾಕಿಬಿಡುವೆ ಎಂಬ ಭ್ರಮೆ ಇಟ್ಟುಕೊಂಡಿಲ್ಲ. ನಾಲ್ಕು ಜನಕ್ಕೆ ಸತ್ಯವನ್ನು ಮುಟ್ಟಿಸಬೇಕೆಂದು ಬರೆಯುತ್ತಿದ್ದೇನೆ. ಹಾಗಾಗಿ ಇದ್ದುದನ್ನು ಇದ್ದಂತೆ ಹೇಳಲು ಭಯವೇನಿಲ್ಲ. ಸತ್ಯ ಹೇಳಿದರೆ ಯಾರಾದರೂ ಬೇಸರ ಪಟ್ಟುಕೊಂಡರೆ ಗತಿಯೇನೂ ಎಂದು ಬೇಸರವೇ ಆಗುವುದಿಲ್ಲ. ಹೆದರಿಸಿದರೆ ಮತ್ತಷ್ಟು ಹೆದರಿಸಬಲ್ಲೆ. ಕೇವಲ ಪೇಪರ್ ಹುಲಿಯಾಗಲು ಇಷ್ಟವಿಲ್ಲ.

One thought on “ಕ್ಷಾತ್ರಗುಣವೇ ವಂಶ ನೀತಿ; ಸಮರ ವಸ್ತ್ರವೇ ಪುತ್ರ ಪ್ರೀತಿ

  • October 6, 2017 at 5:56 pm
    Permalink

    Sir, I have no words to describe my feelings because those sacrifices are filled my heart with tear and patriotism.

    Reply

Leave a Reply

Your email address will not be published. Required fields are marked *