ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು ಚಾಚಾ ನೆಹರೂ

ಮಕ್ಕಳ ದಿನಾಚರಣೆ ಆರಂಭದ ಬಗ್ಗೆ ನೋಡಿದರೆ, ಸುಮಾರು ವರ್ಷಗಳ ಹಿಂದೆ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಕುಲಕರ್ಣಿಯವರು ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.

ಪಂಡಿತ್ ನೆಹರೂ ಇದಕ್ಕೆ ಒಪ್ಪಿಯಾರೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು.

ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು. ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್‌ ನ್ಯಾಷನಲ್‌ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು, ತಮ್ಮ ಮಕ್ಕಳಪ್ರೇಮಿ ರಾಷ್ಟ್ರನಾಯಕರೊಬ್ಬರ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ ರೂಪದಲ್ಲಿ ಆಚರಿಸುತ್ತಿವೆ.

ಜವಾಹರ್ ಲಾಲ್ ನೆಹರೂ ಹುಟ್ಟಿದ್ದು 1889 ನವೆಂಬರ 14. ಜವಾಹರರಿಗೆ ಅವರ ಚಿಕ್ಕಮ್ಮ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು.

ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು, ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು. ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.

ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗ ಬಾರದೆಂಬುದೇ ಅವರ ಉದ್ದೇಶ.  1964ರ ಮೇ 27 ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಸಾರಿದರು. ಅಪೂರ್ವ ದೇಶಭಕ್ತರು. ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.

ಶ್ವೇತಾ. ಜಿ

ಪತ್ರಿಕೋದ್ಯಮ ವಿದ್ಯಾರ್ಥಿ ಮಾನಸಗಂಗೋತ್ರಿ

Leave a Reply

Your email address will not be published. Required fields are marked *