ಮಾಧ್ಯಮಗಳ ಹರಕೆಗೆ ಸಂಪಾದಕರೇ ಬಲಿ?

ಕರ್ನಾಟಕದ ನಂಬರ್ 1 ದಿನಪತ್ರಿಕೆ ‘ವಿಜಯವಾಣಿ’ ಯಿಂದ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹೊರನಡೆದಿದ್ದಾರೆ. ಒಂದರ್ಥದಲ್ಲಿ ಅವರನ್ನು ಹೊರ ನಡೆಸಲಾಗಿದೆ. ಪತ್ರಿಕೆಯ ಆರಂಭದ ದಿನದಿಂದ, ನಂಬರ್‌ ಒನ್‌ ಪತ್ರಿಕೆಯಾಗಿ ಮುನ್ನಡೆಯುತ್ತಿದ್ದ ದಿನಗಳಲ್ಲೂ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಕೋಣೆಮನೆಯವರನ್ನು ಬದಿಗಿರಿಸಿದ್ದು ಪತ್ರಿಕೋದ್ಯಮ ಖಂಡಿತವಾಗಿಯೂ ಬರಿಯ ಉದ್ಯಮವೇ ಎಂಬುದನ್ನು ನಿರ್ವಿವಾದವಾಗಿ ಸಾಬೀತುಪಡಿಸಿದೆ.

ಪತ್ರಿಕೆಯ ನಿರ್ವಹಣೆಯಲ್ಲಿ ಏರುಪೇರು, ವೈಫಲ್ಯ ಎದುರಾಗಿದ್ದು, ಅದಕ್ಕೆ ಕಾರಣ ಸಂಪಾದಕರೆಂದು ಅವರನ್ನು ನಿಮ್ಮ ಸೇವೆ ಸಾಕು ಎಂದಿದ್ದರೆ ಅದು ಅಷ್ಟೊಂದು ಚರ್ಚೆಗೆ ಗ್ರಾಸವಾಗುವ ವಿಷಯವಾಗುತ್ತಿರಲಿಲ್ಲ. ಆದರೆ, ಲಿಂಗಾಯತ ಸ್ವಾಮೀಜಿಯೊಬ್ಬರು ಶಿವಲಿಂಗದ ಮೇಲೆ ಕಾಲಿರಿಸಿ ಪಾದ ಪೂಜೆ ಮಾಡಿಸಿಕೊಂಡದ್ದನ್ನು ಕೋಣೆಮನೆಯವರ ಸಂಪಾದಕತ್ವದ, ಲಿಂಗಾಯತ ಸಮುದಾಯದ ಉದ್ಯಮ ದೈತ್ಯ ವಿಜಯ ಸಂಕೇಶ್ವರ ಒಡೆತನದ ದಿಗ್ವಿಜಯ ಟಿವಿ ಪ್ರಸಾರ ಮಾಡಿದ ಕಾರಣಕ್ಕಾಗಿ ಸಂಪಾದಕರು ಹೊರನಡೆಯಬೇಕಾಗುತ್ತದೆ ಎಂದರೆ ವಿಪರ್ಯಾಸವೆನ್ನದೆ ಏನು ಮಾಡೋಣ? ಪತ್ರಿಕೆಗಳ ಬಗ್ಗೆ‌ ಮಾತು ಬಂದರೆ, ವರದಿಗಳ ಬಗ್ಗೆ ಸದನದಲ್ಲಿ ಚರ್ಚೆಯಾದರೆ ಪತ್ರಿಕಾ ಸ್ವಾತಂತ್ರ್ಯದ ಹರಣ ಎಂಬ‌ ಮಾತುಗಳನ್ನಾಡುವ ಪತ್ರಿಕೆಗಳಿಗೆ, ಪತ್ರಿಕಾ ಪ್ರತಿನಿಧಿಗಳಿಗೆ ನಿಜಕ್ಕೂ ಸ್ವಾತಂತ್ರ್ಯ ಇದೆಯೇ?!

ಯಾವ ಕಾರಣಕ್ಕಾಗಿ ಹರಿಪ್ರಕಾಶ್ ಕೋಣೆಮನೆ ಹೊರನಡೆಯಬೇಕಾಯಿತು, ಜಾತಿ ಲೆಕ್ಕಾಚಾರ ಇವೆಲ್ಲವನ್ನೂ ಬದಿಗೆಸೆಯೋಣ. ಆದರೆ ಈ ಘಟನೆ ಪತ್ರಿಕಾ ಮುಖ್ಯಸ್ಥರು ಸಂಪಾದಕರಾದಿಯಾಗಿ ಪತ್ರಕರ್ತರನ್ನು ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನವಷ್ಟೆ. ಪತ್ರಕರ್ತರಿರಲಿ, ಸಂಪಾದಕರಿರಲಿ, ಮಾಲೀಕರಿಗೆ ಅವರನ್ನು ಕಿತ್ತೊಗೆಯುವುದು ಮಾವಿನ ಗೊರಟು ಚೀಪಿ ಎಸೆದಷ್ಟೇ ಸಲೀಸು. ಇಂದಿನ ದಿನಮಾನದಲ್ಲಿ ಯಾವ ಉದ್ಯೋಗವೂ, ಎಂತಹ‌ ಹುದ್ದೆಯೂ ಶಾಶ್ವತವಲ್ಲ, ಬೆಲೆಯುಳ್ಳದ್ದೂ ಅಲ್ಲ. ಅದರಲ್ಲೂ ಪತ್ರಕರ್ತನಂತೂ ವಲಸಿಗನೇ ಸರಿ.

ಒಂದು ಪತ್ರಿಕೆಯನ್ನು ಕಟ್ಟಲು, ಬೆಳೆಸಲು ಕಟ್ಟಡ ಕಾರ್ಮಿಕನಂತೆಯೇ‌ ಪತ್ರಕರ್ತನೊಬ್ಬ ಬೆವರು ಬಸಿಯುತ್ತಾನೆ. ತನ್ನದೇ ಪತ್ರಿಕೆ ಎಂಬ‌ ಅಪರಿಮಿತ ಅಭಿಮಾನ, ಪ್ರೀತಿಯಿಂದ ಅವನು ಪತ್ರಿಕೆಗಾಗಿ‌ ದುಡಿಯುತ್ತಾನೆ. ಇಂದೇನಾದರೂ ವಿಶೇಷ ಘಟಿಸಿದರೆ ನಾಳೆ ಮಿಕ್ಕ ಪತ್ರಿಕೆಗಳಿಗಿಂತ ತನ್ನ ಪತ್ರಿಕೆ ವಿಭಿನ್ನವಾಗಿ, ಆಕರ್ಷಣೀಯವಾಗಿ ಬರಬೇಕೆಂದು ಬಯಸುತ್ತಾನೆ. ಸಾಮಾನ್ಯ ವರದಿಗಾರನಿಂದ ಸಂಪಾದಕನ‌ ತನಕ ಇದು ಪ್ರತಿಯೊಬ್ಬನ ಆಸ್ಥೆಯೂ ಹೌದು.

ಆದರೆ‌ ಇದಕ್ಕೆ ಪ್ರತಿಯಾಗಿ ಪತ್ರಿಕೆ ಪತ್ರಕರ್ತರನ್ನು ಹೇಗೆ ಗೌರವಿಸುತ್ತದೆ? ಪತ್ರಿಕಾ ಮುಖ್ಯಸ್ಥರ ಪಾಲಿಗೆ ಪತ್ರಕರ್ತನೊಬ್ಬ ಕಾರ್ಮಿಕ. ಸಂಬಳಕ್ಕಾಗಿ‌‌ ದುಡಿಯುವವ. ಇಂದು ಇವನಾದರೆ ನಾಳೆ‌ ಇನ್ನೊಬ್ಬ! ಪತ್ರಿಕೆಗಳೆಂಬ ಚಿನ್ನದ ಮೊಟ್ಟೆಯಿಡುವ ಕೋಳಿಗಳು ಬಂಡವಾಳಶಾಹಿಗಳ ಕೈವಶವಾದರೆ ಹೊಟ್ಟೆ ಸೀಳದೆ ಬಿಟ್ಟಾರೆಯೇ? ಕನ್ನಡ ಪತ್ರಿಕೋದ್ಯಮದಲ್ಲಿ ಇಂತಹ‌‌ ಉತ್ಕೃಷ್ಟ ಸಂಸ್ಕೃತಿಗೆ (!) ಮೊದಲ ಅಡಿಪಾಯ ಹಾಕಿದ್ದು ಸಂಸದ, ಪತ್ರಿಕಾ ಉದ್ಯಮಿ, ರಾಜೀವ್ ಚಂದ್ರಶೇಖರ್. ತನ್ನ ಒಡೆತನದ ಸುವರ್ಣ ನ್ಯೂಸ್ ನಲ್ಲಿ ಸಂಪಾದಕರಾಗಿದ್ದ ಅನಂತ ಚಿನಿವಾರ್ ಗೆ ಒಂದು ಮಾತೂ ಹೇಳದೆ, ನೇರವಾಗಿ ಸಂಪಾದಕರು ಬೇಕಾಗಿದ್ದಾರೆ ಎಂದು ಜಾಹೀರಾತು ಕೊಟ್ಟು ಅವಮಾನಿಸಿ ಕಳುಹಿಸಿಕೊಟ್ಟದ್ದೇ ಮೇಲ್ಪಂಕ್ತಿ. ಆಗಲೂ‌ ಪತ್ರಕರ್ತರು ಛೇ, ಇದೆಂತಹ ಅವಮಾನ‌ ಎಂದು‌ ವಾಟ್ಸಾಪ್ ಗ್ರೂಪ್ ಗಳಲ್ಲಿ, ಚಹಾ ಅಂಗಡಿಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು!

ಇಂದು ವಿಶ್ವವಾಣಿ ಪತ್ರಿಕೆಯ ಮುಖ್ಯಸ್ಥ, ಸಂಪಾದಕರಾಗಿರುವ ವಿಶ್ವೇಶ್ವರ ಭಟ್ ವಿಜಯ ಸಂಕೇಶ್ವರರು ಪತ್ರಿಕಾ ಸ್ವಾತಂತ್ರ್ಯಕ್ಕೆ, ಪತ್ರಕರ್ತರ ಸ್ವಾತಂತ್ರ್ಯಕ್ಕೆ ಅತ್ಯಂತ ಬೆಲೆ‌ ಕೊಡುವವರು ಎಂದು ಹೊಗಳುತ್ತಲೇ ಇದ್ದರು. ಉಹು. ಆ ನೀರ ಮೇಲಿನ ಗುಳ್ಳೆಯೂ ಇಂದು‌ ಒಡೆದಿದೆ! ಜಾತಿ, ರಾಜಕೀಯ, ಪತ್ರಿಕೋದ್ಯಮ, ವ್ಯಾಪಾರ ಇವೆಲ್ಲವೂ ಸಮಾನಾಂತರ ರೇಖೇಗಳಾಗಿರಬೇಕು. ದುರದೃಷ್ಟ ನೋಡಿ, ಎಲ್ಲವೂ ಸಂಧಿಸಿವೆ, ಗಬ್ಬೆದ್ದಿವೆ! ಸಂಪಾದಕರ ಸ್ವಾತಂತ್ರ್ಯ ಇಂದು ಮಾಲೀಕ ಹೇಳಿದ್ದನ್ನು ಶಿರಸಾವಹಿಸಿ‌ ಪಾಲಿಸುವುದಷ್ಟೇ ಎಂಬಂತಾಗಿದೆ. ಕನ್ನಡ ಪ್ರಭದಿಂದ ಸುಗತ ಶ್ರೀನಿವಾಸರಾಜು ಹೊರ ನಡೆಯುವ ಪರಿಸ್ಥಿತಿ ಬಂದಾಗಲೂ ಎಡ – ಬಲ ಗುಂಪುಗಳಾಗಿ ವಿಮರ್ಶೆಗಳಾದವು, ಸಂಪಾದಕನ‌ ಬೆಲೆ ಇಳಿದು ಮುಳುಗಿದ್ದನ್ನು ಯಾರೂ ಗಮನಿಸದಾದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕೆಲಸ ಮಾಡುವ ಪತ್ರಿಕೆಗಳ ಮಾಲಕರ ಜಾತಿ, ರಾಜಕೀಯ ಸಿದ್ಧಾಂತ, ಉದ್ಯಮ, ಕೈಯಾಡಿಸುವ ಮಠಾಧೀಶರು, ಇತ್ಯಾದಿಗಳ‌ ಕುರಿತೂ ಪಠ್ಯದಲ್ಲಿ ಅಳವಡಿಸಿದರೆ ಮುಂದೆ ಡೊಗ್ಗು ಸಲಾಮು ಹೊಡೆಯಲು ಅವರೂ‌‌ ಸಿದ್ಧರಾಗಬಹುದೇನೋ! ಇಂತಹ‌ ಉಸಿರು ಕಟ್ಟಿಸುವ ವಾತಾವರಣದಲ್ಲಿ ನಿಷ್ಠಾವಂತ ಪತ್ರಕರ್ತ ಹೇಗೆ ತಾನೇ ಕೆಲಸ ಮಾಡಿಯಾನು? ಅದೆಷ್ಟೇ ಲಕ್ಷ ಸಂಬಳ ಸುರಿದರೂ ಪತ್ರಿಕಾ ಧರ್ಮವನ್ನು ಮಾರಿ ಹೇಗೆ ಬದುಕಿಯಾನು? ಇಂತಹ‌‌ ದುರ್ಭರ ಸನ್ನಿವೇಶದಲ್ಲೂ ಪತ್ರಕರ್ತರು ಪ್ರತಿಭಟಿಸುವುದಿಲ್ಲ. ಮತ್ತದೇ ವಾಟ್ಸಾಪ್ ಗ್ರೂಪುಗಳಲ್ಲಿ, ಚಹಾ ಅಂಗಡಿಗಳಲ್ಲಿ ಛೇ ಪಾಪ, ಹೀಗಾಗಬಾರದಿತ್ತು! ಎಂದು ಮುಂದಿನ ಪಾಳಿಗೆ ಸಜ್ಜಾಗುತ್ತಾರೆ. ಪತ್ರಿಕೋದ್ಯಮದ ಚಕ್ರ ಹೀಗೇ ತಿರುಗುತ್ತಿರುತ್ತದೆ!

– ನ್ಯೂಸ್ ನಿರಂತರ 

2 thoughts on “ಮಾಧ್ಯಮಗಳ ಹರಕೆಗೆ ಸಂಪಾದಕರೇ ಬಲಿ?

 • November 16, 2017 at 11:55 am
  Permalink

  ಮಾರ್ಮಿಕವಾಗಿದೆ ಬರಹ!!

  Reply
 • November 17, 2017 at 2:45 pm
  Permalink

  ದುರ್ದೈವ. ಮಾಲೀಕರ ಮರ್ಜಿ ಕಾಯುವ ಕಾಯಕ ಸ್ವಾಭಿಮಾನಿ ಒಬ್ಬನಿಗೆ ಅಸಾಧ್ಯ. ಯೋಧನಂತೆ ಪತ್ರಿಕೆಗಾಗಿ ದುಡಿದವರನ್ನು ಹೀಗೆ ನಡೆಸಿಕೊಳ್ಳಬಾರದಿತ್ತು.

  Reply

Leave a Reply

Your email address will not be published. Required fields are marked *