ರಾಜ್ಯ ರಾಜಕಾರಣಿಗಳ ದಿಢೀರ್ ಉತ್ತರ ಕರ್ನಾಟಕ ಕಾಳಜಿ: ಆರಂಭವಾಯ್ತು ಚುನಾವಣಾ ಹೈ’ಡ್ರಾಮ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳ ಹೈಡ್ರಾಮ ಜೋರಾಗಿದೆ. ಒಂದೆಡೆ ಖಾಸಗಿ ವಾಹಿನಿಗಳಲ್ಲಿ ಚರ್ಚೆಗೆ ಕುಳಿತ ಆಯಾ ನಾಯಕರು ನಾಚಿಕೆ ಇಲ್ಲದೇ ಜಾತಿ ಲೆಕ್ಕಾಚಾರ ಹಾಕುತ್ತಾ ಬೊಬ್ಬೆ ಹೊಡೆಯುತ್ತಿರುವುದು ಭರದಿಂದ ಸಾಗಿದೆ. ಇನ್ನೊಂದೆಡೆ ದೇಶದ ಭಾವೈಕ್ಯತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡುವ ಹೊಣೆ ಹೊತ್ತ ಆಡಳಿತ ಸರ್ಕಾರದ ಪ್ರಮುಖ ನಾಯಕರು ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಹಿಂದೂ ಧರ್ಮದ ಹರಣವನ್ನು ಮಾಡಹೊರಟಿದ್ದಾರೆ. ಮಗದೊಂದೆಡೆ ಪ್ರಚೋದನಾಕಾರಿ ಭಾಷಣ ಮಾಡುತ್ತಾ ಶಾಂತವಾಗಿದ್ದ ಪ್ರದೇಶದಲ್ಲಿ ಕೋಮು ದಳ್ಳುರಿಯನ್ನು ಎಬ್ಬಿಸಿ ಅದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಉತ್ತಮ ಆಡಳಿತವನ್ನು ನಿರೀಕ್ಷಿಸುವುದಾದರು ಹೇಗೆ..?

ರಾಜ್ಯದ ಇತಿಹಾಸವನ್ನೊಮ್ಮೆ ಮೆಲುಕು ಹಾಕಿದರೆ ಅದರ ಕಲ್ಪನೆಯೇ ಬೇರೆ. ಸಮೃದ್ಧ ರಾಷ್ಟ್ರದ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರು ಆಳಿದ ಇತಿಹಾಸವಿದೆ ಇಲ್ಲಿ. ಆದರೇ ಇಂದಿನ ರಾಜಕಾರಣಿಗಳ ಗದ್ದುಗೆಯ ದಾಹ ಎಲ್ಲೆ ಮೀರಿದೆ. ಸಾವಲ್ಲೂ ಸಾಂತ್ವನ ಹೇಳದೇ ರಾಜಕೀಯ ಮಾಡುವಷ್ಟು ಹದಗೆಟ್ಟಿದೆ. ಅದರಲ್ಲೂ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಮಾನವೀಯತೆಯನ್ನು ಮರೆತು ವರ್ತಿಸುತ್ತವೆ. ಜಾತಿ, ಧರ್ಮÀದ ಲೆಕ್ಕಾಚಾರದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಒಗ್ಗಟ್ಟಿನ ಮಂತ್ರ ಜಪಿಸುವುದನ್ನು ಬಿಟ್ಟು ಒಡೆದು ಆಳುವ ನೀತಿಯಂತೆ ಒಂದೇ ಧರ್ಮದಲ್ಲಿ ಇಬ್ಬಾಗ ಮಾಡಹೊರತಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತೆ ಸಲಹೆ ನೀಡಬೇಕಾದ ನಾಯಕರೇ ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ವಿರಸ ತಂದಿಟ್ಟು ಕೋಮು ಘರ್ಷಣೆಗೆ ಕಾರಣರಾಗುತ್ತಿದ್ದಾರೆ. ಈ ಮೂಲಕ ಸಮಾಜದ ಜನಸಾಮಾನ್ಯರ ನೆಮ್ಮದಿಯನ್ನು ಹಾಳುಗೆಡವುತ್ತಿರುವುದು ವಿಪರ್ಯಾಸವೇ ಸರಿ.

ಇನ್ನೂ ದಿಢೀರನೇ ರಾಜ್ಯದ ಎಲ್ಲಾ ರಾಜಕೀಯ ನಾಯಕರು ಉತ್ತರ ಕರ್ನಾಟಕದ ಕಾಳಜಿ ಮಾಡಲಾರಂಭಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಸಹಾಯದೊಂದಿಗೆ ಮಹದಾಯಿ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಮನಸ್ಸು ಮಾಡಿರುವ ಬೆನ್ನಲ್ಲೇ, ಇನ್ನುಳಿದ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಅದೇ ಮಾರ್ಗವನ್ನು ಅನುಸರಿಸಲು ಯತ್ನಿಸುತ್ತಿದ್ದಾರೆ. ಈ ರೀತಿಯಾಗಿ ಉತ್ತರ ಕರ್ನಾಟಕದ ಜನರ ಮತಗಳ ಮೇಲೆ ಕಣ್ಣು ಹಾಕಿದ ಅಷ್ಟೂ ಪಕ್ಷಗಳಿಗೆ ಅಲ್ಲಿನ ಮತದಾರರು ಅದಾವ ರೀತಿಯಲ್ಲಿ ಉತ್ತರಿಸುತ್ತಾರೋ ಕಾದು ನೋಡಬೇಕಿದೆ. ಆದರೇ ಒಂದಂತೂ ಸತ್ಯ ಇದೇ ಮಹದಾಯಿ ನೀರಿನ ಹೋರಾಟದಲ್ಲಿ ಪೋಲಿಸರು ಮನೆಮನೆಗೆ ನುಗ್ಗಿ ಮಹಿಳೆಯರು ಮಕ್ಕಳೆನ್ನದೇ ಹಿಂಸೆ ಮಾಡಿದ್ದರೂ ಯಾವೊಬ್ಬ ನಾಯಕನು ಸಹಾಯ ಹಸ್ತ ಚಾಚದೆ ಇದ್ದ ಆ ದಿನಗಳನ್ನು ಅಷ್ಟು ಸುಲಭವಾಗಿ ಇಲ್ಲಿನ ಜನ ಮರೆಯಲಾರರು ಎಂಬುದನ್ನ ಯಾರೂ ಕಡೆಗಣಿಸುವಂತಿಲ್ಲ.

ಒಟ್ಟಾರೆಯಾಗಿ ಎಲ್ಲಾ ರಾಜಕೀಯ ಪಕ್ಷಗಳ ವರ್ತನೆಯನ್ನು ಗಮನಿಸಿದರೆ ಅಧಿಕಾರದ ಗದ್ದುಗೆಯನ್ನೇಏರಬೇಕೆಂಬ ಹಂಬಲವಿದಿಯೇ ಹೊರತು ಸಾರ್ವನಿಕರ ಅಭಿವೃದ್ಧಿ ಹಾಗೂ ಶ್ರೇಯಸ್ಸನ್ನು ಬಯಸುತ್ತಿಲ್ಲ ಎಂಬುತಂತೂ ಸ್ಪಷ್ಟವಾಗಿದೆ. ಇದಕ್ಕೆಲ್ಲ ಮತದಾರ ಪ್ರಭುಗಳು ತಕ್ಕ ಉತ್ತರವನ್ನು ನೀಡಿ ಹೊಸದೊಂದು ಇತಿಹಾಸವನ್ನ ಬರೆಯುವಂತಾಗಲಿ ಎಂಬುದಷ್ಟೇ ನಮ್ಮ ಆಶಯ.

-ವಿಜಯಲಕ್ಷ್ಮೀ ಮೆಟಗಾರ

mm

Vijayalaxmi Metagar

ನಾನು ಉತ್ತರ ಕರ್ನಾಟಕದ ಹುಡುಗಿ, ಊರು ವಿಜಯಪುರ. ಹೆಸರು ವಿಜಯಲಕ್ಷ್ಮೀ ಮೆಟಗಾರ. ಪತ್ರಕರ್ತೆಯಾಗುವ ಕನಸನ್ನು ಹೊತ್ತು ಮೈಸೂರ ಮಡಿಲ ಸೇರಿರುವೆ. ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಇಷ್ಟ, ಸಾಹಿತ್ಯದ ಅರಿವಿಲ್ಲ. ತಿಳಿದಿರುವ ವಾಸ್ತವವನ್ನು ಬರೆಯುವ ಹವ್ಯಾಸವಿದೆ. ನನ್ನ ಒಡನಾಡಿಗಳು ಮಾತಿನ ಮಲ್ಲಿ ಎನ್ನುತ್ತಾರೆ, ನನಗೂ ಮಾತೆ ಆಸ್ತಿ. ಟಿವಿ ನಿರೂಪಕಿಯಾಗುವುದು ಬದುಕಿನ ಭಾವಿ ಕನಸು. ಆಧುನಿಕ ಸಮೂಹ ಮಾಧ್ಯಮಗಳ ಬಳಕೆಯಲ್ಲಿ ತೊಡಗುವುದು ರೂಢಿಸಿಕೊಂಡಿದ್ದೇನೆ. ಪ್ರಸ್ತುತ ಪತ್ರಿಕೋದ್ಯಮದಲ್ಲಿ ಎಂ ಎ ವ್ಯಾಸಂಗ ಮಾಡುತ್ತಿರುವೆ.

One thought on “ರಾಜ್ಯ ರಾಜಕಾರಣಿಗಳ ದಿಢೀರ್ ಉತ್ತರ ಕರ್ನಾಟಕ ಕಾಳಜಿ: ಆರಂಭವಾಯ್ತು ಚುನಾವಣಾ ಹೈ’ಡ್ರಾಮ

  • December 29, 2017 at 9:30 am
    Permalink

    Good one….all the best.

    Reply

Leave a Reply

Your email address will not be published. Required fields are marked *