ಯಶಸ್ಸಿನ ಹಾದಿಯಲ್ಲಿರುವ ಹೋಟೆಲ್ ಮಾಲೀಕನ ಸೋಲು, ಗೆಲುವಿನ ಇನ್‍ಸೈಡ್ ಸ್ಟೋರಿ..!

ನಮ್ಮ ದೇಶದಲ್ಲಿ ಒಂದಲ್ಲ ಒಂದು ಕಾರಣದಿಂದ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಆದರೆ ಇಲ್ಲೊಬ್ಬ ಯುವಕ ಯಾರ ಕೈಕೆಳಗೂ ಕೆಲಸ ಮಾಡಲು ಇಚ್ಚಿಸದೆ, ಸ್ವತಃ ಹೊಸ ಪ್ರಯತ್ನಗಳನ್ನು ಮಾಡಿ ಅದರಲ್ಲಿ ಸೋತು, ಸೋಲಿನಿಂದ ಪಾಠ ಕಲಿತು, ಪಾಠದಿಂದ ಅನುಭವ ಪಡೆದು ಇಂದು ಒಂದು ಹಂತಕ್ಕೆ ಬಂದು ನಿಂತಿದ್ದಾರೆ.

ಅವರ ಹೆಸರು ಗುರುಪ್ರಸಾದ್ ವೈಡಿ. ಊರು ರಾಮನಗರ. ಓದಿದ್ದು ಕ್ರಿಮಿನಾಲಜಿ, ಸೈಕಾಲಜಿ. ಆದರೆ ಮಾಡ್ತಿರೋ ಕೆಲ್ಸ ಹೋಟೆಲ್ ಮ್ಯಾನೇಜ್ಮೆಂಟ್. ಮೈಸೂರಿನಲ್ಲಿ ದೋಸಾ ಪ್ಯಾಲೆಸ್ ಎಂಬ ಹೊಟೆಲ್ ತೆರೆದು ಅದರಲ್ಲಿ ಯಶಸ್ವಿಯಾಗಿ, ಇದೀಗ ವ್ಯಾಪಾರವನ್ನು ವಿಸ್ತರಿಸಲು ಹೆಜ್ಜೆಯನ್ನಿಡುತ್ತಿದ್ದಾರೆ. ಇವರ ಈ ದೋಸಾ ಪ್ಯಾಲೆಸ್‍ನಲ್ಲಿ 80 ರೀತಿಯ ದೋಸಾ ವಿಧಗಳು ಪ್ರತಿದಿನ ಆಹಾರ ಪ್ರಿಯರಿಗೆ ದೊರಕುತ್ತಿದೆ. ಈ ಯಶಸ್ಸಿನ ಹಾದಿ ಮೈನವಿರೇಳಿಸುತ್ತದೆ. ಆ ಯಶಸ್ಸಿನ ಗುಟ್ಟಿನ ಹಿಂದಿರುವ ಸೋಲು, ಗೆಲುವಿನ ಹಾದಿ ನಿಮ್ಮ ಮುಂದೆ.

ಗುರುಪ್ರಸಾದ್ ಮೂಲತಃ ರಾಮನಗರದವರು. 15 ವರ್ಷದ ಹಿಂದೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದದ್ದು. ನಗರದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾದ ಮಹಾರಾಜ ಕಾಲೇಜಿನಲ್ಲಿ ಕ್ರಿಮಿನಾಲಜಿ ಮತ್ತು ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಡಿಗ್ರಿ ಮುಗಿದ ಮೇಲೆ ಓದು ಮುಂದುವರೆಸೋ ಆಸಕ್ತಿ ಇರಲಿಲ್ಲ. ಎಂಬಿಎ ಕೋರ್ಸ್ ಸೇರಿಕೊಂಡರು. ಇದರ ಜೊತೆ ಜೊತೆಗೆ ಸಣ್ಣದಾಗಿ ವ್ಯಾಪಾರ ಕೂಡ ಆರಂಭಿಸಿದರು. ಆದರೆ…

ಮೊದಲ ಹೆಜ್ಜೆಯಲ್ಲೇ ಬೀಳು

ಇವರ ಮನೆಯಲ್ಲಿ ಬಡತನ. ತಂದೆಯ ಕೆಲಸ ವ್ಯವಸಾಯ. ಅದರಿಂದ ಏನೂ ಗೀಟಲ್ಲ ಎಂದು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದದ್ದು. ಓದು ಮುಗೀತು. ಸರ್ಕಾರಿ ಕೆಲಸದ ಮೇಲೆ ಆಸಕ್ತಿ ಇರಲಿಲ್ಲ ಆದರೆ ಬೇರೆ ಎಲ್ಲಾದರು ಕೆಲಸಕ್ಕೆ ಹೋಗಬೇಕೆಂದರೆ ಕೊಡುವ ಸಂಬಳ ಸಾಲುವುದಿಲ್ಲ. ಸಂಬಳ ಸಾಲದಿದ್ದರಿಂದ ಏನಾದರು ಹೊಸತನ್ನು ಆರಂಭಿಸುವ ಹಂಬಲ. ಡಿಗ್ರಿಯಲ್ಲಿ ಅಂತಿಮ ಸೆಮಿಸ್ಟರ್‍ನಲ್ಲಿದ್ದಾಗ ಒಂದು ಚಾಟ್ಸ್ ಅಂಡ್ ಜ್ಯೂಸ್ ಸೆಂಟರ್ ಆರಂಭಿಸಿದ್ದರು. ಲೇಬರ್ ಸಮಸ್ಯೆ, ವ್ಯಾಪಾರವಿಲ್ಲದೇ 15 ದಿನದಲ್ಲೇ ಆ ಸ್ಟಾಲ್ ಮುಚ್ಚಿಹೋಯಿತು. ಇದಾದ ನಂತರ 3 ವರ್ಷ ಒಂದು ಚಿಕ್ಕ ರೂಮಿನಲ್ಲಿ ಕಳೆದರು. ಈ ವೇಳೆ ಇವರ ಜೊತೆಗಿದ್ದದ್ದು ಒಂದು ಕಂಪ್ಯೂಟರ್. ಅದರಲ್ಲೇ ಹೊಸ ಭವಿಷ್ಯದ ಯೋಜನೆಗಳನ್ನು ತಯಾರು ಮಾಡಿ ಶೇಖರಿಸಿಟ್ಟರು.

ಇವರ ತಂದೆ ವ್ಯವಸಾಯ ಮಾಡೋದರ ಜೊತೆಗೆ ಮಾವಿನ ವ್ಯಾಪಾರ ಸಹ ಮಾಡುತ್ತಿದ್ದರು. ಇವರದ್ದೇ ಒಂದು ತೋಟವಿತ್ತು. 2012 ರಲ್ಲಿ ಇವರ ಡಿಗ್ರಿ ಮುಗಿದಿತ್ತು. ಓದುವಾಗಲೇ ಮ್ಯಾಂಗೋ ಬ್ಯುಸಿನೆಸ್ ಮಾಡಬೇಕೆಂದುಕೊಂಡಿದ್ದ ಇವರು 2012, 13, 14 ರಲ್ಲಿ ಮಾವು ಮೇಳಗಳಲ್ಲಿ ಭಾಗವಹಿಸಿದರು. ಮುಂದೆ ತಮ್ಮದೇ ಆದಂತಹ ಮ್ಯಾಂಗೋ ವೆಬ್‍ಸೈಟ್ (WWW.Formfresh.com) ತೆರೆದು, ಅದರಲ್ಲಿ ಮ್ಯಾಂಗೋ ಆನಲೈನ್ ಸೇಲ್ಸ್ ಮಾಡಲು ಯೋಜನೆ ಹಾಕಿಕೊಂಡರು. 2016ರಲ್ಲಿ ಜೆ.ಪಿ ಫ್ರೂಟ್ಸ್ ಇಂಡಿಯಾ ಎಂಬ ಒಂದು ಕಂಫನಿ ಮಾಡಿ ಅದಕ್ಕೆ ಒಂದು ವೆಬ್ಸೈಟ್ ಮಾಡಿಸಿದರು. ಅಂತಿಮವಾಗಿ ಅದು ಬ್ರ್ಯಾಂಡ್ ಆಗಿ ಹೊರಬಂತು. ಅಲ್ಲದೆ 2016ರ ಜೂನ್ ತಿಂಗಳಲ್ಲಿ ಲಾಲ್‍ಬಾಗ್‍ನಲ್ಲಿ ಮಾವು ಮೇಳ ನಡೆಯುತ್ತಿತ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಈ ಬೆಬ್‍ಸೈಟ್ ಉದ್ಘಾಟನೆ ಸಹ ಮಾಡಿಸಿದರು. ತಂದೆಯ ವ್ಯವಸಾಯದ ಜೊತೆ ಮಾವು ವ್ಯಾಪಾರ ಮಾಡುತ್ತಿದ್ದರೂ ಅದರಿಂದ ಲಾಭ ಬರುತ್ತಿರಲಿಲ್ಲ. ಹೀಗಾಗಿ ನೇರ ಮಾರಾಟ ಲಾಭ ಗಳಿಸುವ ಉದ್ದೇಶದಿಂದ ಹೊಸ ಯೋಜನೆಯ ಐಡಿಯಾ ಗುರುಪ್ರಸಾದ್ ಅವರಿಗೆ ಹೊಳೆದಿತ್ತು. ಅಂದುಕೊಂಡ ಹಾಗೆ ಯೋಜನೆ ಆರಂಭವೂ ಆಯ್ತು. ಬೇರೆ ರೈತರಿಂದ ಮಾವು ಖರೀದಿಸಿ ಅದನ್ನು ಮಾಗಿಸಿ ಮಾರಾಟ ಮಾಡತೊಡಗಿದರು. ಡೋರ್ ಡೆಲಿವರಿ ಕೂಡ ಆರಂಭಿಸಿದರು. ಆದರೆ ಈ ಯೋಜನೆ ಹೆಚ್ಚೇನು ಫಲಪ್ರದವಾಗಲಿಲ್ಲ.. ಕೊನೆಗೆ ಭೀಕರ ಬರದಿಂದಾಗಿ ಉತ್ತಮ ಪಸಲು ಬರಲಿಲ್ಲ, ಹೀಗಾಗಿ ಯೇಜನೆ ಕುಂಠಿತಗೊಂಡಿತು.

ಆದರೆ ಪಟ್ಟು ಬಿಡದ ಇವರು ಬೇರೆ ಏನಾದರು ಮಾಡಬೇಕೆಂದುಕೊಂಡಾಗ ಎಗ್ ಬ್ರೇಕ್ ಎಂಬ ಕಾನ್ಸೆಪ್ಟ್ ಬಂತು. ಕೆ.ಎಫ್.ಸಿ ರೀತಿಯಲ್ಲಿ 30-35 ತರಹದ ಎಗ್ ಸ್ಯಾಂಡ್‍ವಿಚ್ ಮಾಡುವ ಯೋಜನೆ ಅದು. ಇದಕ್ಕಾಗಿ ಬೇಕಾದ ತಯಾರಿ ಮಾಡಿಕೊಂಡು ಮೂರ್ನಾಲ್ಕು ತಿಂಗಳು ಜಾಗ ಹುಡುಕಾಡಿದರೂ ಒಂದೂ ಮಳಿಗೆ ಸಿಗಲಿಲ್ಲ. ಕೊನೆಗೂ ಆ ಯೋಜನೆ ಅನುಷ್ಠಾನವಾಗಲೇ ಇಲ್ಲ.. ನಂತರ ನಗರದ ಒಂಟಿಕೊಪ್ಪಲಿನ ವಾಲ್ಮೀಕಿ ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದ ಹಿಂಬಾಗದಲ್ಲಿ ಜಾಗ ಸಿಕ್ಕಿತು. ಜಾಗವೇನೋ ಸಿಕ್ಕಿತು ಆದರೆ ಏನು ಮಾಡುವುದು ಎಂಬ ಪ್ರಶ್ನೆ ಇವರಿಗೆ ಶುರುವಾಯಿತು. ಸಸ್ಯಾಹಾರಿ ಹೊಟೆಲ್ ಆರಂಭಿಸೋಣ ಅಂದ್ರೆ ಈಗಾಗಲೇ ಬಹಳಷ್ಟು ಪೈಪೆÇೀಟಿ ನೀಡಲು ನೂರಾರು ಹೋಟೆಲ್‍ಗಳಿದ್ದವು. ಅಲ್ಲದೆ ಮೈಸೂರಲ್ಲಿ ಜನಸಂಖ್ಯೆಯೂ ಕಡಿಮೆ. ಒಂದೆರಡು ದಿನ ಯೋಚಿಸಿದಾಗ ದೋಸಾ ಪ್ಯಾಲೆಸ್ ಐಡಿಯಾ ಹೊಳೆಯಿತು. ರಾಮನಗರದಲ್ಲಿ ಇವರ ಚಿಕ್ಕಪ್ಪ ಒಂದು ಸಸ್ಯಾಹಾರಿ ಹೋಟೆಲ್ ನಡೆಸುತ್ತಿದ್ದರು. ಅಲ್ಲಿಯ ಓಡಾಟ ನೋಡಿ ನಾನೂ ಟ್ರೈ ಮಾಡಬೇಕೆಂದುಕೊಂಡರು ಗುರುಪ್ರಸಾದ್. ಅದರಂತೆಯೇ ಗುರುದರ್ಶಿನಿ ದೋಸಾ ಪ್ಯಾಲೆಸ್ ಎಂಬ ಬ್ರ್ಯಾಂಡ್ ಮಾಡಿ, ಮಾರ್ಚ್ 21 ರಂದು ಉದ್ಘಾಟನೆಯೂ ಸಹ ನೆರವೇರಿತು. ಮೊದಲ ದಿನವೇ ಸೂಪರ್ ಹಿಟ್ ಆಗಿಬಿಟ್ಟಿತು. ಅಂದು ಅವರಿಗೆ ದೊರೆತ ಯಶಸ್ಸು ಇಂದಿಗೆ 7 ತಿಂಗಳು ಕಳೆದರು ಅದೇ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿದೆ.

ದೋಸಾ ಪ್ಯಾಲೆಸ್ ಹೆಸರು ಬಂದ ಕಥೆ

ಒಂದು ಅರಮನೆಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿರುತ್ತದೆ. ಅದೇ ರೀತಿ ಒಂದೇ ಕಡೆ 80 ರೀತಿಯ ದೋಸಾ ವೆರೈಟಿಗಳು ದೊರೆಯುತ್ತದೆ. ಪ್ರತಿದಿನ ಈ ಎಲ್ಲಾ ದೋಸಾ ವೆರೈಟಿಗಳು ಸಿಗುತ್ತದೆ. ಅಲ್ಲದೆ ಪ್ಯಾಲೆಸ್ ಎಂಬ ಹೆಸರು ಬರಲು ಮೈಸೂರಿಗರಿಗೆ ಯಾವಾಗಲೂ ಮೊದಲು ನೆನಪಾಗುವುದು ಅರಮನೆ. ಈಗಾಗಿ ಈ ಹೆಸರು ನೆನಪಿನಲ್ಲಿ ಉಳಿಯಬೇಕೆಂದು, ಸಿಂಪಲ್ ಆಗಿ ದೋಸಾ ಪ್ಯಾಲೆಸ್ ಎಂದು ಹೆಸರಿಡಲಾಗಿದೆ.

ಗುರುಪ್ರಸಾದ್ ಅವರ ದೋಸಾ ಪ್ಯಾಲೆಸ್ ದಿನಚರಿ

ಗುರುಪ್ರಸಾದ್ ಅವರು ಪ್ರತಿದಿನ ಮುಂಜಾನೆ 5ಗಂಟೆಗೆ ಎದ್ದು ಮಾರುಕಟ್ಟೆಗೆ ಹೋಗಿ ತಾಜಾ ತರಕಾರಿಗಳನ್ನು ತಂದು ಅಡುಗೆ ತಯಾರಿಗೆ ನೀಡುತ್ತಾರೆ. ಆನಂತರ 8 ರಿಂದ 9 ಗಂಟೆಯೊಳಗೆ ಬೇಕಾದ ತಯಾರಿ ನಡೆಸಿ, ತಯಾರಾದ ಅಡುಗೆ ಪರೀಕ್ಷಿಸುತ್ತಾರೆ. ಆ ನಂತರವಷ್ಟೆ ಸಾರ್ವಜನಿಕರಿಗೆ ಸೇವೆ ನೀಡುವುದು. ಗುರುಪ್ರಸಾದ್ ಅವರ ಈ ಎಲ್ಲಾ ಕೆಲಸಗಳಿಗೆ ತಮ್ಮ ಜಯಂತ್ ಗೌಡ ಸಹ ಸಹಾಯ ಮಾಡುತ್ತಿದ್ದಾರೆ.

ದೋಸಾ ಪ್ಯಾಲೆಸ್ ಸಮಯ

ಬೆಳಗ್ಗೆ 7 ರಿಂದ 12 ಹಾಗೂ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೆ.

ಇಲ್ಲಿನ ವಿಶೇಷ: 80ತರಹದ ದೋಸಾ ಲಭ್ಯತೆ.

 1. Dosa
 2. Butter & Ghee Dosa
 3. Rawa Dosa
 4. Cheese Dosa
 5. Beggies Dosa
 6. Green Leaf Dosa

ಇದರ ಜೊತೆಗೆ ರವಾ ಇಡ್ಲಿ, ರೈಸ್ ಬಾತ್, ಶಾವಿಗೆ ಬಾತ್ ಹಾಗೂ ಕಾಫಿ ಟೀ ಸಹ ದೊರೆಯುತ್ತದೆ.

ಗುರುಪ್ರಸಾದ್ ಅವರ ಮಾತು

“ಪ್ರತಿಯೊಬ್ಬರಿಗೂ ಹಸಿವಿದ್ದೇ ಇರುತ್ತದೆ, ಕೆಲವೊಮ್ಮೆ ಹಣವಿದ್ದರೂ ಆಹಾರ ಸಿಗುವುದಿಲ್ಲ. ಈ ರೀತಿಯ ಅದೆಷ್ಟೋ ಸಂದರ್ಭಗಳನ್ನು ನಾನು ಎದುರಿಸಿದ್ದೇನೆ. ಓದು ಮುಗಿದ ನಂತರ ಮನೇಲಿ ಹಣ ಕೇಳಲು ಮನಸ್ಸಾಗುತ್ತಿರಲಿಲ್ಲ. ಅಲ್ಲಲ್ಲಿ ಅಲೆದಾಡಿಕೊಂಡು, ಹೊಸದೇನಾದರೂ ಮಾಡಬೇಕೆಂಬ ಹಂಬಲ. ಅದರಲ್ಲಿ ಸೋತು, ಪಾಠ ಕಲಿತು, ಅನುಭವ ಪಡೆದು. ಕೊನೆಗೆ ಆ ಎಲ್ಲಾ ಅನುಭವದಿಂದಾಗಿ ಇಂದು ದೋಸಾ ಪ್ಯಾಲೆಸ್ ಆರಂಭಿಸಿದ್ದೇನೆ. ಅಂದು ಸಾಧಿಸಬೇಕೆಂಬ ತುಡಿತ ಇತ್ತು. ಜನಕ್ಕೆ ಅನ್ನ ನೀಡಬೇಕೆಂದು ಈ ಹೋಟೆಲನ್ನು ಆರಂಭಿಸಿದ್ದೇನೆ. ನನ್ನ ಸ್ನೇಹಿತ ಕೂಡ ಧನ ಸಹಾಯ ಮಾಡಿದ್ದು ನನ್ನ ಏಳಿಗೆಗೆ ಕಾರಣವಾಗಿದೆ. ಮುಂದೆ ಇದನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಬೇಕೆಂದುಕೊಂಡಿದ್ದೇನೆ.”

One thought on “ಯಶಸ್ಸಿನ ಹಾದಿಯಲ್ಲಿರುವ ಹೋಟೆಲ್ ಮಾಲೀಕನ ಸೋಲು, ಗೆಲುವಿನ ಇನ್‍ಸೈಡ್ ಸ್ಟೋರಿ..!

 • January 2, 2018 at 12:25 pm
  Permalink

  Such a nice and motivational story !

  Reply

Leave a Reply

Your email address will not be published. Required fields are marked *