ಹತ್ತೂರು ಮೀರಿಸುವ ಸುತ್ತೂರು ಜಾತ್ರೆ

ಸುಂದರ ಪ್ರಕೃತಿಯ ಮಡಿಲಲ್ಲಿ ಜುಳುಜುಳನೆ ಹರಿಯುವ ಕಪಿಲಾ ನದಿಯ ತೀರದ ತಟದಲ್ಲಿ ಸ್ಥಾಪಿತವಾಗಿರುವ ಶ್ರೀಕ್ಷೇತ್ರ ಸುತ್ತೂರು ತನ್ನದೇ ಆದ ಭವ್ಯ ಧಾರ್ಮಿಕ,ಸಾಂಸ್ಕøತಿಕ,ಸಾಮಾಜಿಕ,ನಾಡ ಪರಂಪರೆಯನ್ನು ಹೊಂದಿದೆ,ಕರ್ನಾಟಕದಲ್ಲಿ ಅನೇಕ ಜಾತ್ರೆಗಳು ನಡೆಯುತ್ತವೆ, ಆದರೆ ಸುತ್ತೂರು ಜಾತ್ರೆ ಅವೆಲ್ಲಕ್ಕಿಂತ ವಿಭಿನ್ನ,ಮತ್ತು ವಿಶಿಷ್ಟವಾದ ಜಾತ್ರೆ ಎಂದು ಕರ್ನಾಟಕದಲ್ಲೇ ಪ್ರಸಿದ್ದಿ ಪಡೆದಿದೆ.

ಶ್ರೀ ಸುತ್ತೂರು ವೀರಸಿಂಹಾಸನ ಮಠ

ಸುತ್ತೂರು ವೀರಸಿಂಹಾಸನ ಮಠವು,ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿಗೆ ಸೇರಿದ ಒಂದು ಸುಂದರ,ಸ್ವಚ್ಛಂದ,ಮಾದರಿ ಗ್ರಾಮ, ಈ ಗ್ರಾಮವು ಕ್ರಿ,ಶ.10-11 ನೇ ಶತಮಾನದಲ್ಲಿ ರಾಜಮಹಾರಾಜರ ಅಭಿಮಾನಕ್ಕೆ ಪಾತ್ರವಾಗಿದ್ದ ಕ್ಷೇತ್ರ,ವಿದ್ವಾಂಸರು,ಮತ್ತು ತಪೋಧನರು ಸೇವೆಗೈದ ಕ್ಷೇತ್ರ.. ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಸಂಸ್ಥಾಪಿಸಿದ ಶ್ರೀಜಗದ್ಗುರು ವೀರಸಿಂಹಾಸನ ಮಹಾಸಂಸ್ಥನ ಮಠವು ಇಂದು ಬೃಹತ್ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆ ಮೂಲೆಗು ತನ್ನ ಕಂಪು ಸೂಸುತಿದೆ.

ತ್ರಿವಿಧ ದಾಸೋಹಕ್ಕೆ ಮಾದರಿ

ಸುತ್ತೂರು ಶ್ರೀಮಠ ಕೇವಲ ಧಾರ್ಮಿಕ,ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಲ್ಲ, ಸಮಾಜದ ಒಳಿತಿಗಾಗಿ ಅಕ್ಷರ ದಾಸೋಹ,ಅನ್ನ ದಾಸೋಹ,ಅನುಭಾವ ದಾಸೋಹದ ಕೈಂಕರ್ಯಗಳನ್ನು ಕೈಗೊಂಡಿದೆ,ಶಿಕ್ಷಣ ಕ್ಷೇತ್ರಕ್ಕೆ ಸುತ್ತೂರು ಮಠದ ಕೊಡುಗೆ ಅಪಾರ,ಇಂದು ಜತ್ತಿನಾದ್ಯಂತ ಸುತ್ತೂರು ಮಠದ ಶಿಷ್ಯಕೋಟಿಯ ಪರಂಪರೆ ವ್ಯಾಪಿಸುತಿದೆ,ಶೈಕ್ಷಣಿಕ ಶಿಸ್ತಿಗೆ ಇನ್ನೊಂದು ಹೆಸರೇ ಸುತ್ತೂರು ಮಠ ಎಂಬಂತಿದೆ,ಇಂತಹ ತ್ರಿವಿಧ ದಾಸೋಹಕ್ಕೆ ಭದ್ರ ಬುನಾದಿ ಹಾಕಿದವರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು, ಅದಕ್ಕೆ ನೀರೆರದು ಹೆಮ್ಮರವಾಗಿ ಬೆಳಿಸಿದವರು ಇಂದಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು.

ಸುತ್ತೂರು ಜಾತ್ರೆಯ ವಿಶೇಷ

ಹತ್ತೂರು ಮೀರಿಸುವ ಸುತ್ತೂರು ಜಾತ್ರೆ ಎಂಬ ಮಾತೊಂದಿದೆ, ಹೌದು ಆ ಜಾತ್ರೆಯ ವೈಶಿಷ್ಟ್ಯವನ್ನು ವರ್ಣಿಸಲು ಅಸಾಧ್ಯ, ಕೇವಲ ಧಾರ್ಮಿಕ ಕಾರ್ಯಗಳ ಜಾತ್ರೆ ಇದಲ್ಲ. ಕಲೆ ಸಂಸ್ಕøತಿ,ಕೃಷಿ,ಕ್ರೀಡೆ,ಆರೋಗ್ಯ,ವೈಜ್ಞಾನಿಕ, ಹೀಗೆ ಅನೇಕ ಬಗೆಯ ನೆಲೆಗಟ್ಟಿಗೆ ಹೆಸರುವಾಸಿಯಾಗಿದೆ.

ಕೃಷಿ ಮೇಳ

ಭಾರತ ಕೃಷಿ ಪ್ರಧಾನ ರಾಷ್ಟ್ರ ,ರೈತರೇ ದೇಶದ ಬೆನ್ನೆಲಬು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಸುತ್ತೂರಿನ ಕೃಷಿಮೇಳ ಧಾರ್ಮಿಕ ಕ್ಷೇತ್ರದಿಂದ ಕೃಷಿ ಕ್ಷೇತ್ರಕ್ಕೆ ನೀರರೆಯುವ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ, ರೈತರಿಗೆ ಕ್ಷೇತ್ರ ಪ್ರಾತ್ಯಿಕ್ಷಿಕೆಗಳ ಮೂಲಕ ಬೆಳೆ ಅಭಿವೃದ್ದಿ,ಬಿತ್ತನೆ ವಿಧಾನ,ಕೃಷಿ ಹೊಂಡ,ಬೀಜ ವಿತರಣೆ,ಸಾವಯವ ಕೃಷಿ,ಕೃಷಿ ಯಂತ್ರೋಪಕರಣಗಳು,ಕೃಷಿ ಸಂಕೀರಣ ಪ್ರಗತಿಪರ ರೈತರಿಗ ಸನ್ಮಾನ ,ಮುಂತಾದವುಗಳ ಬಗ್ಗೆ ರೈತರಲ್ಲಿ ಕೃಷಿ ಬಗ್ಗೆ ಒಲವು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ,

ದನಗಳ ಜಾತ್ರೆ

ಈ ಬಾರಿಯ ಸುತ್ತೂರಿನ ದನಗಳ ಜಾತ್ರೆ 50ನೇ ವರ್ಷಕ್ಕೆ ಕಾಲಿಟ್ಟಿದ್ದು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ,ಪಶು ಸಂಗೋಪನೆ,ಕೃಷಿಯ ಎತ್ತುಗಳು,ಹೋರಿಗಳು,ಕುರಿ ಸಾಕಾಣಿಕೆ,ಕೋಳಿ ಸಾಕಾಣಿಕೆ,ರೈತರಿಗೆ ಅನುಕೂಲವಾಗಲೆಂದು ದೇಶಿ ತಳಿಗಳ ಪ್ರದರ್ಶನವನ್ನು ಪ್ರತಿವರ್ಷ ದನಗಳ ಜಾತ್ರೆಯನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ.

ದೇಸಿ ಕ್ರೀಡೆಗಳದ್ದೇ ಗಮ್ಮತ್ತು

ಪಾಶ್ಚಿಮಾತ್ಯ ಕ್ರಿಕೆಟ್,ಪುಟ್ಬಾಲ್,ಕ್ರೀಡೆಗಳ ಮಧ್ಯ ನಶಿಸಿ ಹೋಗುತ್ತಿರುವ ದೇಸಿ ಕ್ರೀಡೆಗಳನ್ನು ನೀವು ಆಡಬೇಕಾದರೆ,ನೋಡಬೇಕಾದರೆ,ಸುತ್ತೂರು ಜಾತ್ರೆಗೆ ಬರಲೇಬೇಕು.ದೇಸಿ ಕ್ರೀಡೆಗಳಲ್ಲಿ ಒಂದು ರೋಚಕತೆಯಿದೆ,ಅದರ ಗತ್ತು ಗಮ್ಮತ್ತೇ ಬೇರೆ, ಜಗಜಟ್ಟಿಗಳ ಕಾಳಗವಾದ ಕುಸ್ತಿ ಪಂದ್ಯಾವಳಿ,ಕೆಸರುಗದ್ದೆ ಓಟ,ಹಗ್ಗ ಜಗ್ಗಾಟ,ಹಳಗುಣಿಮಣಿ ಆಟ,ಗೋಲಿ ಆಟ,ಬುಗುರಿ,ಚದುರಂಗ,ಕುಂಟೋ ಬಿಲ್ಲೆ,ಗುಂಡು ಎತ್ತುವ ಸ್ಪರ್ಧೆ,ಮೂಟೆ ಹೊತ್ತು ಓಡುವ ಸ್ಪರ್ಧೆ,ಗಾಳಿಪಟ ಸ್ಪರ್ಧೆ,ಮುಂತಾದ ಸ್ಪರ್ಧೆಗಳ ಕರಾಮತ್ತು ಇಲ್ಲಿ ಕಂಡುಬರುತ್ತದೆ,ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ “ಸುತ್ತೂರು ಕುಮಾರ” “ಸುತ್ತೂರು ಕೇಸರಿ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ವಸ್ತು ಪ್ರದರ್ಶನ

ಶೈಕ್ಷಣಿಕ ಮತ್ತು ವೈಜ್ಞಾನಿಕ,ಕರಕುಶಲ ಉತ್ಪನ್ನಗಳು,ಗುಡಿ ಕೈಗಾರಿಕಾ ಉತ್ಪನ್ನಗಳ ವಸ್ತುಪ್ರದರ್ಶನ ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆ.ವಿದ್ಯಾರ್ಥಿಗಳು ತಯಾರಿಸಿದ ಶೈಕ್ಷಣಿಕ ಮಾದರಿಗಳ ಪ್ರದರ್ಶನ ಮಾಡಲಾಗುತ್ತದೆ,ವಿವಿಧ ಸಹಕಾರ ಸಂಘಗಳು,ಸ್ತ್ರೀ ಶಕ್ತಿ ಗುಂಪುಗಳಿಗೆ ಇದೊಂದು ಉತ್ತಮ ವೇದಿಕೆಯಾಗಲಿದೆ.

ಸಾಂಸ್ಕ್ರತಿಕ ಕಲಾ ತಂಡಗಳ ವೈಭವ

ಕನ್ನಡ ನಾಡಿನ ಶ್ರೀಮಂತ ಸಂಸ್ಕ್ರತಿಯ ಪ್ರತಿಬಿಂಬ ನಾಡಿನ ಪ್ರಮುಖ ಕಲಾ ತಂಡಗಳ ವೈಭವನ್ನು ಸುತ್ತೂರು ಜಾತ್ರೆಯಲ್ಲಿ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು,ವೀರಗಾಸೆ,ನಂದಿಕೋಲು ಕುಣಿತ,ಕಂಸಾಳೆ,ಡೊಳ್ಳು ಕುಣಿತ,ಜಗ್ಗಲಿಗೆ ಮೇಳ,ನವಿಲು ಕುಣಿತ,ಡೋಲು,ಚಂಡೆ ವಾದ್ಯ,ಗೊಂಬೆ ಮತ್ತು ಕುದುರೆ ಕುಣಿತ.ನಾಟಕಗಳ ಪ್ರದರ್ಶನ,ಭಜನಾ ಸ್ಪರ್ಧೆ,ಸೋಬಾನೆ ಪದಗಳ ಸ್ಪರ್ಧೆ, ಮೊದಲಾದವುಗಳನ್ನು ಏರ್ಪಡಿಸಲಾಗಿರುತ್ತದೆ.

ದೋಣಿ ವಿಹಾರ

ಶ್ರೀಕ್ಷೇತ್ರದ ತಟದಲ್ಲಿ ಹರಿಯುವ ಕಪಿಲೆಯ ಮಡಿಲಲ್ಲಿ ಬರುವ ಭಕ್ತರಿಗೆ ಪ್ರವಾಸಿಗರಿಗೆ ಅಹ್ಲಾದಕರವಾಗಿ ವಿರಮಿಸಲು ದೋಣಿ ವಿಹಾರವನ್ನು ಜಾತ್ರೆಯ ಪ್ರಯುಕ್ತ ಆರಂಭಿಸಲಾಗಿರುತ್ತದೆ.

ಆರೋಗ್ಯ ಮತ್ತು ವೈದ್ಯಕೀಯ ಪ್ರದರ್ಶನ

ಜೆಎಸ್‍ಎಸ್ ಆಸ್ಪತ್ರೆ.ವೈದ್ಯಕೀಯ ಕಾಲೇಜು,ಆರ್ಯುವೇದ ಅಸ್ಪತ್ರೆಗಳ ಸಹಯೋಗದಲ್ಲಿ ನುರಿತ ವೈದ್ಯರು ಮತ್ತು ವಿದ್ಯಾರ್ಥಿಗಳಿಂದ ಅರೋಗ್ಯದ ಕುರಿತು ಮಾಹಿತಿಯನ್ನು ಸುತ್ತೂರು ಜಾತ್ರೆಯಲ್ಲಿ ಪಡೆಯಬಹುದು.

ಸಾಮೂಹಿಕ ವಿವಾಹ

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ,ಬಡಬಗ್ಗರಿಗೆ ಅನುಕೂಲವಾಗಲೆಂದೇ ಯಾವುದೇ ಜಾತಿ,ಮತಗಳ,ಅಂತರವಿಲ್ಲದೆ ನೂರಾರು ಜೋಡಿಗಳ ಸಾಮೂಹಿಕ ವಿವಾಹವನ್ನು ಉಚಿತವಾಗಿ ನಡೆಸಿಕೊಂಡು ಬರುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯ ಸುತ್ತೂರು ಜಾತ್ರೆ ಅತೀ ವಿಜೃಂಭಣೆಯಿಂದ ನಡೆಯಲಿದೆ,ಇದೇ ದಿನಾಂಕ 13 ಜನವರಿಯಿಂದ ಆರಂಭಗೊಂಡು, ಮಹಾರಥೋತ್ಸವ,ಲಕ್ಷದೀಪೋತ್ಸವ,ತೆಪ್ಪೋತ್ಸವ, ಬಾಣ ಬಿರುಸಗಳ ಮೂಲಕ ದಿನಾಂಕ 18 ಜನವರಿಯಂದು ಅರ್ಥಗರ್ಭಿತ ತೆರೆ ಬೀಳಲಿದೆ.

ಕುಮಾರಸ್ವಾಮಿ ವಿರಕ್ತಮಠ
ಪತ್ರಿಕೋದ್ಯಮ ವಿಭಾಗ
ಮಾನಸ ಗಂಗೋತ್ರಿ ,ಮೈಸೂರು ವಿಶ್ವವಿದ್ಯಾಲಯ

Leave a Reply

Your email address will not be published. Required fields are marked *