‘ಅನಾಮಿಕ’ನಾಗಿ ಬಂದು ‘ಅನುಭವ’ಸ್ಥನಾಗಿ ‘ಚೌಕ’ಬಾರಾದೊಂದಿಗೆ ಆಟ ಮುಗಿಸಿದ ‘ಸುರಸುಂದರಾಂಗ’

ಕಾಶೀನಾಥ್ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ. ತಮ್ಮ ವಿಭಿನ್ನ ಶೈಲಿಯ ಚಿತ್ರಗಳಿಂದಲೇ ಹೆಸರಾದ ಅವರ ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿವೆ. ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕಾಶೀನಾಥ್ ಅವರು ಜನಿಸಿದರು.

ಚಿತ್ರರಂಗದಲ್ಲಿ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣ ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮ ನೈಪುಣ್ಯತೆ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿವೆ. ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಉಪೇಂದ್ರ, ಮನೋಹರ್, ಸುನೀಲ್‍ಕುಮಾರ್ ದೇಸಾಯಿ ಮುಂತಾದ ಹೆಸರಾಂತರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದು.

ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಅಸೀಮಾ ಎಂಬ ಚಿತ್ರತಂಡವನ್ನು ಸೇರಿಕೊಂಡ ಕಾಶಿನಾಥ್ ಅವರು ಸುರೇಶ್ ಹೆಬ್ಳೀಕರ್ ಅವರ ಗರಡಿಯಲ್ಲಿ ಪಳಗಿದರು.

1975 ರಲ್ಲಿ ಅಪರೂಪದ ಅತಿಥಿ ಚಿತ್ರವನ್ನು ನಿರ್ದೇಶಿಸಿ ಹೊಸತನವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟರು. 1978 ರಲ್ಲಿ ಕಾಶಿನಾಥ್ ನಿರ್ದೇಶಿಸಿದ್ದ ಸಸ್ಪೆನ್ಸ್ ಥ್ರಿಲ್ಲರ್ ‘ಅಪರಿಚಿತ’ ಚಿತ್ರ ಭರ್ಜರಿ ಯಶಸ್ಸು ಗಳಿಸಿದ್ದು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿತ್ತು. 1984 ರಲ್ಲಿ ಕಾಶಿನಾಥ್ ಅವರು ನಾಯಕನಾಗಿ ನಟಿಸಿದ್ದ ಮೊದಲ ಚಿತ್ರ ‘ಅನುಭವ’ ಭರ್ಜರಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಉಮಾಶ್ರೀ ಮತ್ತು ಅಭಿನನಯ ಅವರು ನಾಯಕಿಯರಾಗಿ ನಟಿಸಿದ್ದರು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು.

1988 ರಲ್ಲಿ ಬಿಡುಗಡೆಯಾಗಿದ್ದ ‘ಅವಳೇ ನನ್ನ ಹೆಂಡ್ತಿ’ ಚಿತ್ರ ಹಿಂದಿಗೂ ರಿಮೇಕ್ ಆಗಿತ್ತು. ಹಿಂದಿಯಲ್ಲಿ ಅಮೀರ್ ಖಾನ್ ಮತ್ತು ಫರಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಜಗಜಾಂತರ(1991) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (1997) ಎಂದು ರೀಮೇಕ್ ಮಾಡಲಾಗಿತ್ತು.

ಅಮರ ಮಧುರ ಪ್ರೇಮ, ಅನುಭವ, ಅನಾಮಿಕ, ಅವಳೇ ನನ್ನ ಹೆಂಡ್ತಿ, ಮಿಥಿಲೆಯ ಸೀತೆಯರು, ಅದೃಷ್ಟ ರೇಖೆ, ಲವ್ ಮಾಡಿ ನೋಡು, ಮೀಸೆ ಹೊತ್ತ ಗಂಡಸಿಗೆ ದಿಮ್ಯಾಂದಪೆಪೋ ಡಿಮ್ಯಾಂಡು ಸೇರಿದಂತೆ 43 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ನಟಿಸಿದ ಕೀರ್ತಿ ಇವರದು.

ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಚಿತ್ರಗಳನ್ನೂ ನಿರ್ಮಿಸಿ, ನಿರ್ದೇಶಿಸಿ, ಚಿತ್ರಕಥೆ ಬರೆದ ಹೆಗ್ಗಳಿಕೆ ಇವರದು. ತೆಲುಗಿ ಚಿತ್ರಗಳಲ್ಲಿ ನಟಿಸಿದ್ದಷ್ಟೇ ಅಲ್ಲದೆ, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಹಾಸ್ಯ, ಮೊನಚು, ಜೀವನಾನುಭವದ ಹೂರಣದೊಂದಿಗೆ ನಿರ್ದೇಶಿಸಿದ ಹಲವು ಚಲನಚಿತ್ರಗಳ ಮೂಲಕ ಜೀವನದ ನೂರಾರು ಮಜಲುಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾದ ಕಾಶಿನಾಥ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ನಷ್ಟವೇ ಸರಿ.

ಕಾಶಿನಾಥ್ ಅವರು ಚಾಮರಾಜಪೇಟೆಯಲ್ಲಿರುವ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಅವರನ್ನು 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಕಾಶಿನಾಥ್ ಅವರು ಪುತ್ರ ನಟ ಅಲೋಕ್ ಕಾಶಿನಾಥ್ ಮತ್ತು ಪುತ್ರಿ ಅಮೃತವರ್ಷಿಣಿ ಕಾಶಿನಾಥ್ ಅವರನ್ನು ಅಲಿದ್ದಾರೆ. ಕಾಶಿನಾಥ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *