ಜ. 31ರಿಂದ ನಡೆಯಲಿದೆ ಮರೋಡಿ ದೇವಸ್ಥಾನದ ಆಯನ, ಸಿರಿಗಳ ಜಾತ್ರೆ

ಮರೋಡಿ: ಕರಾವಳಿ ಭಾಗದ ಪ್ರಸಿದ್ಧ ಆಲಡೆ ಕ್ಷೇತ್ರ ಮರೋಡಿ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ ಜ. 31ರಿಂದ ಫೆ. 4ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ. ಫೆ. 3ರಂದು ದೇವಸ್ಥಾನದ ಅನ್ನಛತ್ರ ಉದ್ಘಾಟನೆ ಮತ್ತು ಗೋದಾನ ಕಾರ್ಯಕ್ರಮ ಜರುಗಲಿದೆ.

ಫೆ, 1ರಂದು ತೋರಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ, ಉತ್ಸವ ಬಲಿ, ವ್ಯಾಘ್ರ ಚಾಮುಂಡಿ ಸಹಿತ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಹಾಗೂ ಅತಿಥಿ ಕಲಾವಿದರಿಂದ ಎರೆನ್ ಎಂಜ ನಂಬುನಾ ನಾಟಕ ಪ್ರದರ್ಶನ ನಡೆಯಲಿದೆ.

ಫೆ. 2ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ದೇವಸ್ಥಾನದ ವಠಾರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸುವರು. ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಅತಿಥಿಯಾಗಿ ಭಾಗವಹಿಸುವರು. ಸಂಜೆ ಉತ್ಸವ ಬಲಿ, ಮಹಾಪೂಜೆ, ಕವಾಟ ಬಂಧನ ನಡೆಯಲಿದೆ. ಪಟ್ಟದ ಪಂಜುರ್ಲಿ, ಕಲ್ಕುಡ ದೈವಗಳ ಕೋಲ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.

ಫೆ. 3ರಂದು ಕವಾಟ ಉದ್ಘಾಟನೆ, ಕಲಶಾಭಿಷೇಕ, ಆಶ್ಲೇಷ ಬಲಿ, ತುಲಾಭಾರ ಸೇವೆ, ಚೂರ್ಣೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಯಾತ್ರ ಹೋಮ, ಉತ್ಸವ ಬಲಿ, ಕುಮಾರ ದರ್ಶನ, ಧ್ವಜಾವರೋಹಣ, ಮಹಾಪೂಜೆ, ಕೊಡಮಣಿತ್ತಾಯ ದೈವದ ಕೋಲ, ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದಿಂದ ಮಲ್ತಿನಾಯೆ ತಿನ್ಪೆನೇ ನಾಟಕ ಪ್ರದರ್ಶನವಿದೆ. 4ರಂದು ಸಂಪ್ರೋಕ್ಷಣೆ ನಡೆಯಲಿದೆ. ಈ ಪುಣ್ಯಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕಾರ್ಯದರ್ಶಿ ಜಯಂತ ಕೋಟ್ಯಾನ್ ತಿಳಿಸಿದ್ದಾರೆ.

15 ಲಕ್ಷ ವೆಚ್ಚದ ಅನ್ನಛತ್ರ ನಿರ್ಮಾಣ: ದಾನಿಗಳ ಮತ್ತು ಭಕ್ತರ ನೆರವಿನಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅನ್ನಛತ್ರವನ್ನು 3ರಂದು ಸಂಜೆ 7 ಗಂಟೆಗೆ ಲೋಕಾರ್ಪಣೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ವಿನೂತನವಾದ ಗೋದಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮರೋಡಿ, ಕೊಕ್ರಾಡಿ, ಸಾವ್ಯ ಮತ್ತು ಕುತ್ಲೂರು ಗ್ರಾಮದ ಬಡವರಿಗೆ ತಮ್ಮ ಜೀವನೋಪಾಯಕ್ಕಾಗಿ 5 ಗೋವುಗಳನ್ನು ದಾನವಾಗಿ ನೀಡಲಾಗುತ್ತದೆ. ಮೂಲತಃ ಮರೋಡಿ ಕುವೆಟ್ಟು ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಶ್ರೀಮತಿ ಗೀತಾ ಮತ್ತು ಸುರೇಶ್ ಹೆಗ್ಡೆ ದಂಪತಿ ಗೋದಾನದ ಸೇವಾಕರ್ತರಾಗಿದ್ದಾರೆ.

ಕಾಣಿಯೂರು ಮಠದ ಪೀಠಾಧಿಪತಿ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಉದ್ಯಮಿ ಸುರೇಶ್ ಹೆಗ್ಡೆ ಅನ್ನಛತ್ರವನ್ನು ಉದ್ಘಾಟಿಸುವರು. ಬೆಂಗಳೂರು ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್, ಬೆಂಗಳೂರು ಉದ್ಯಮಿ ದಿನೇಶ್ ಹೆಗ್ಡೆ, ಮುಂಬೈ ಹೆಗ್ಗಡೆ ಸೇವಾ ಸಂಘದ ಗೌರವ ಕಾರ್ಯಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಬೆಂಗಳೂರು ಕ್ರಿಸ್ಟಲ್ ಗ್ಲೋಬಲ್ ಸೆಲ್ಯೂಷನ್‍ನ ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ಶೆಟ್ಟಿ, ಕಾಶಿಪಟ್ಣ ಕೇಳ ಮಾಗಣೆ ಬಸದಿಯ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್, ಸರ್ಕಾರದ ನಿವೃತ್ತ ಅಧೀನ ಕಾರ್ಯದರ್ಶಿ ಕೆ.ಶಶಿಕಾಂತ ಆರಿಗ ಪಾಂಡಿಪ್ಪೆರಗುತ್ತು, ಬೆಂಗಳೂರಿನ ಉದ್ಯಮಿ ಸದಾಶಿವ ಹೆಗ್ಡೆ, ಮುಂಬೈ ಉದ್ಯಮಿ ಹರೀಶ್ ಡಿ. ಸಾಲ್ಯಾನ್, ಮುಂಬೈ ಉದ್ಯಮಿ ಮನೋಜ್ ಕುಮಾರ್ ಹೆಗ್ಡೆ, ಬೆಂಗಳೂರು ಟೊಯೊಟಾ ಕಿರ್ಲೊಸ್ಕರ್‍ನ ಮ್ಯಾನೇಜರ್ ದೀಪಕ್ ಶೆಟ್ಟಿ, ಕಾಶಿಪಟ್ಣ ಬರೆಂಜ ಸುರೇಶ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ದೇವಸ್ಥಾನದ ಹಿನ್ನೆಲೆ: ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹಸಿರು ಕಾನನಗಳ ಮಧ್ಯೆ ಕಂಗೊಳಿಸುತ್ತಿರುವ ಈ ಪುಣ್ಯಕ್ಷೇತ್ರ ಇದೀಗ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಅಜೀರ್ಣಾವಸ್ಥೆಯಲ್ಲಿ ಈ ದೇವಾಲಯವನ್ನು ನಾಲ್ಕು ವರ್ಷಗಳ ಹಿಂದೆ ಊರ– ಪರವೂರ ಭಕ್ತರ ಸಹಕಾರದಿಂದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಶಿಲಾಮಯವಾಗಿ ನವೀಕರಿಸಲಾಗಿದೆ. ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಪುರಾತನ ದೇವಾಲಯ ಕಾರಣಿಕದ ಕ್ಷೇತ್ರವೂ ಹೌದು. ಕ್ಷೇತ್ರದಲ್ಲಿ ಉಮಾಮಹೇಶ್ವರ ಪ್ರಧಾನ ದೇವರಾಗಿ, ಬ್ರಹ್ಮಲಿಂಗೇಶ್ವರ ಉಪದೇವರಾಗಿ ಸಾನ್ನಿಧ್ಯವಿದೆ. ಅಲ್ಲದೆ, ನಾಗಬ್ರಹ್ಮ, ರಕ್ತೇಶ್ವರಿ, ನಂದಿ, ಕ್ಷೇತ್ರಪಾಲರನ್ನು ಒಳಗೊಂಡ ಪಂಚಸಾನ್ನಿಧ್ಯವು ಇಲ್ಲಿದೆ. ಜತೆಗೆ ಸಿರಿಕುಮಾರ, ಅಬ್ಬಗ ದಾರಗ, ನಂದಿಗೋಣ ಮುಂತಾದ ಶಕ್ತಿಗಳು ಒಂದೇ ಕ್ಷೇತ್ರದಲ್ಲಿ ನೆಲೆಯಾಗಿರುವುದು ಮತ್ತೊಂದು ವಿಶೇಷ.

ಕ್ಷೇತ್ರದ ಮಹಿಮೆ: ನಾಡಿನ ಸಾವಿರಾರು ಕುಟುಂಬಗಳಿಗೆ ಆಲಡೆ ಕ್ಷೇತ್ರವಾಗಿರುವ ಈ ದೇಗುಲಕ್ಕೆ ಭಕ್ತರು ಹರಕೆ ಹೊತ್ತು ಬಂದರೆ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಸಿಗುತ್ತದೆ ಎಂಬ ಪ್ರತೀತಿಯಿದೆ. ಈಗಾಗಲೇ ನೂರಾರು ಭಕ್ತರು ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ವಿವಾಹ ಸಮಸ್ಯೆ ಮುಂತಾದ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಆಲಡೆಯ ಸಂಬಂಧ ಹೊಂದಿರುವ ಕುಟುಂಬಗಳು ಕ್ಷೇತ್ರಕ್ಕೆ ಬಂದು ಹುರುಳಿ ಹಾಗೂ ಇತರೆ ಧಾನ್ಯವನ್ನು ಹರಕೆಯ ರೂಪದಲ್ಲಿ ಸಲ್ಲಿಸಿ, ತಮ್ಮ ಕಷ್ಟ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇಲ್ಲಿ ನಡೆಯುವ ಸಿರಿಗಳ ಜಾತ್ರೆ, ಕುಮಾರದರ್ಶನಕ್ಕೆ ನೋಡಲು ದಕ್ಷಿಣ ಕನ್ನಡ, ಉಡುಪಿ, ಕೇರಳ ಮತ್ತಿತರ ಕಡೆಗಳಿಂದ ಬರುತ್ತಿರುವುದು ಕ್ಷೇತ್ರದ ಮಹಿಮೆಗೆ ಹಿಡಿದ ಕನ್ನಡಿಯಾಗಿದೆ.

ಕ್ಷೇತ್ರದ ಯೋಜನೆಗಳು: ತಾಲ್ಲೂಕು ಕೇಂದ್ರದಿಂದ ಬಹುದೂರದಲ್ಲಿರುವ ಮರೋಡಿ ಗ್ರಾಮವು ಅಭಿವೃದ್ಧಿಯಲ್ಲಿ ಹಿಂದುಳಿದ ಗ್ರಾಮವಾಗಿದ್ದು, ಇಲ್ಲಿರುವ ಶೇ 80ರಷ್ಟು ಮಂದಿ ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆಯೂ ದೇವಸ್ಥಾನದ ಎಲ್ಲ ಅಭಿವೃದ್ಧಿ ಕಾರ್ಯಕ್ಕೆ ಸಾಥ್‌ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಚಟುವಟಿಕೆ ಮಾಡಲು ಪರವೂರ ಭಕ್ತರ ದಾನಿಗಳ ನೆರವನ್ನು ನಿರೀಕ್ಷಿಸಲಾಗುತ್ತಿದೆ.

ಕ್ಷೇತ್ರಕ್ಕೆ ತುರ್ತಾಗಿ ಬೇಕಾಗಿದ್ದ ವಸಂತ ಮಂಟಪವನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮುಂಬೈ ವಿಭಾಗದ ಅಧ್ಯಕ್ಷ, ಮುಂಬೈನ ಉದ್ಯಮಿ ನಾರಾಯಣ ಸುವರ್ಣ ಕನರೊಟ್ಟು, ಮರೋಡಿ ಮತ್ತು ಕುಟುಂಬಸ್ಥರು ಕೊಡುಗೆಯಾಗಿ ನೀಡಿದ್ದರು.

ದೇವಸ್ಥಾನದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಭಕ್ತರ ಉಪಯೋಗಕ್ಕಾಗಿ ತುರ್ತಾಗಿ ಬೇಕಾಗಿದ್ದ ಅನ್ನಛತ್ರವನ್ನು ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಊರ– ಪರವೂರ ಭಕ್ತರ, ದಾನಿಗಳ ಸಹಕಾರದಲ್ಲಿ ನಿರ್ಮಿಸಲಾಗಿದೆ. ಫೆ. 3ರಂದು ಗಣ್ಯರ, ದಾನಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆ ನಡೆಯಲಿದೆ. ಸುಮಾರು ₹ 35 ಲಕ್ಷ ವೆಚ್ಚದಲ್ಲಿ 500 ಆಸನವುಳ್ಳ ಸಭಾಭವನವನ್ನು ನಿರ್ಮಿಸಲು ಆಡಳಿತ ಮಂಡಳಿ ಸಂಕಲ್ಪ ಮಾಡಿದ್ದು, ಈ ಬಾರಿ ಜಾತ್ರೆಯ ಬಳಿಕ ಅದರ ಕಾಮಗಾರಿಗೆ ಚಾಲನೆ ದೊರೆಯಲಿದೆ. ಈ ಎಲ್ಲ ಪುಣ್ಯ ಕಾರ್ಯಕ್ಕೆ ಊರ– ಪರವೂರಿನ ಭಕ್ತರ, ದಾನಿಗಳ ನೆರವನ್ನು ನಿರೀಕ್ಷಿಸಲಾಗಿದೆ.

ಮಾಹಿತಿಗಾಗಿ: ಆಡಳಿತ ಮಂಡಳಿ ಅಧ್ಯಕ್ಷ ದೇವೇಂದ್ರ ಹೆಗ್ಡೆ (99005 69039), ಕಾರ್ಯದರ್ಶಿ ಜಯಂತ ಕೋಟ್ಯಾನ್‌ (94493 33763), ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮುಂಬೈ ವಿಭಾಗದ ಅಧ್ಯಕ್ಷ ನಾರಾಯಣ ಸುವರ್ಣ ಮರೋಡಿ (098330 22234), ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್‌ (97319 21259) ಅವರನ್ನು ಸಂಪರ್ಕಿಸಬಹುದು.

ಬಾಂಕ್‌ ಖಾತೆ ವಿವರ: 

Name: Umamaheshwara Devasthana Marodi

A/C NO: 01712200075275

IFSC: SYNB0000171

Branch: Naravi

Leave a Reply

Your email address will not be published. Required fields are marked *